ಟೋಕಿಯೋ,ಆ,07: ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ದೇಶಕ್ಕೆ ಚೊಚ್ಚಲ ಬಂಗಾರ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಜಾವೆಲಿನ್ ಥ್ರೋನಲ್ಲಿ ನೀರಜ್ ಬಂಗಾರದ ಪದಕ ಜಯಿಸಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಮೆರಗು ತಂದಿದ್ದಾರೆ.
ಶನಿವಾರ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಬಂಗಾರ ಎಸೆತದ ಸಾಧನೆ ತೋರಿದ್ದಾರೆ.
ಅಗ್ರ ಐದು ಸ್ಥಾನ ಪಡೆದುಕೊಂಡವರ ಪಟ್ಟಿ
ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (87.58 ಮೀಟರ್) ಪಡೆದುಕೊಂಡರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನು ಕಂಚಿನ ಪದಕ ಝೆಕ್ ರಿಪಬ್ಲಿಕ್‌ನವರೇ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿದೆ. ನಾಲ್ಕನೇ ಸ್ಥಾನ ಜರ್ಮನಿಯ ಜೂಲಿಯನ್ ವೆಬ್ಬರ್, ಐದನೇ ಸ್ಥಾನ ಪಾಕಿಸ್ತಾನದ ಅರ್ಷದ್ ನದೀಮ್ ಪಡೆದುಕೊಂಡಿದ್ದಾರೆ.
ಶನಿವಾರ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಗೆದ್ದ ಪದಕ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಸಿಕ್ಕ ಎರಡನೇ ಚಿನ್ನದ ಪದಕ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಿಕ್ಕ ಮೊದಲ ಬಂಗಾರದ ಪದಕ ಮತ್ತು ಟೋಕಿಯೋದಲ್ಲಿ ಸಿಕ್ಕ 7ನೇ ಪದಕ. ಇದಕ್ಕೂ ಮುನ್ನ ಭಾರತದಿಂದ ಶೂಟರ್ ಅಭಿನವ್ ಬಿಂದ್ರ (2008ರ ಬೀಜಿಂಗ್ ಒಲಿಂಪಿಕ್ಸ್) ಬಂಗಾರ ಗೆದ್ದಿದ್ದರು. ಅದು ಬಿಟ್ಟರೆ ವೈಯಕ್ತಿಕ ವಿಭಾಗದಲ್ಲಿ ಬಂಗಾರ ಗೆದ್ದಿದ್ದು ಚೋಪ್ರಾ ಮಾತ್ರ. ಇನ್ನುಳಿದ ಬಂಗಾರದ ಪದಕಗಳು ಹಾಕಿ ತಂಡದಿಂದ ಬಂದಿತ್ತು.