ಬೆಂಗಳೂರು, ಆ, 07: ಹಿರಿಯ ನಟಿ ಲೀಲಾವತಿ ಅವರು ಬಚ್ಚಲ ಮನೆಯಲ್ಲಿ ಕಾಲು ಜಾರಿಬಿದ್ದು ಕಾಲು ಮತ್ತು ಸೊಂಟಕ್ಕೆ ಪೆಟ್ಟುಬಿದ್ದಿದೆ.
ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡದಿದ್ದು ತಕ್ಷಣ ಅವರನ್ನು ಸಮೀಪದ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರು ಒಂದು ತಿಂಗಳು ವಿಶ್ರಾಂತಿ ತಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ.
ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ ಸುಮಾರು ಒಂದು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿದ್ದಾರೆ. ಜೋರಾಗಿ ಕೂಗಿ ಯಾರನ್ನಾದರೂ ಕರೆಯಲೂ ಸಾಧ್ಯವಾಗಿಲ್ಲ. ಬಚ್ಚಲ ಮನೆಯಲ್ಲೇ ನೆರಳಾಗಿದ್ದಾರೆ.
ಬಳಿಕ ನಿಧಾನವಾಗಿ ಬಾಗಿಲು ತೆಗೆದು ಹೊರಬಂದಿದ್ದಾರೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ನಟಿ ಲೀಲಾವತಿ ಅವರಿಗೆ 83 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದಾರೆ. ನಟಿ ಲೀಲಾವತಿ ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಲೀಲಾವತಿ ಸದ್ಯ ಬಣ್ಣ ಹಚ್ಚದೆ ವರ್ಷವೇ ಆಗಿದೆ. 2009ರಲ್ಲಿ ಲೀಲಾವತಿ ಕೊನೆಯದಾಗಿ ಯಾರದು ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಪುತ್ರ ವಿನೋದ್ ರಾಜ್ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಮತ್ತೆ ತೆರೆಮೇಲೆ ಬಂದಿಲ್ಲ. ನಟನೆಯ ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
ಇನ್ನು ಇತ್ತೀಚಿಗಷ್ಟೆ ನಟ ವಿನೋದ್ ರಾಜ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದರು. ಹಿರಿಯ ಕಲಾವಿದೆ ಲೀಲಾವತಿ ಮತ್ತು ವಿನೋದ್ ರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡುತ್ತಿರುವವರ ವಿರುದ್ಧ ವಿನೋದ್ ರಾಜ್ ಪೋಲೀಸರ ಮೊರೆ ಹೋಗಿದ್ದರು. ಸದ್ಯ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಬಂಧಿತ ವ್ಯಕ್ತಿ ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸ್ ವಶದಲ್ಲಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ.