ವಿಜಯನಗರ ಕಾಲದ ನೌಕಾಪಡೆಯೂ, ಸಮುದ್ರ ವ್ಯಾಪಾರವೂ . . .
ಭಾರತೀಯರಿಗೂ ಸಮುದ್ರಕ್ಕೂ ಅವಿನಾಭಾವ ನಂಟಿದೆ. ಇದಕ್ಕೆ ಕಾರಣ ಭಾರತದ ಮೂರು ದಿಕ್ಕುಗಳಲ್ಲೂ ಹರಡಿರುವ ಸಮುದ್ರ. ಭಾರತದ ವಿದೇಶಿ ವ್ಯಾಪಾರ ಅದರಲ್ಲೂ ಸಮುದ್ರ ವ್ಯಾಪಾರದ ಪ್ರಾಚೀನತೆ ಸಿಂಧೂ ನಾಗರೀಕತೆಯವರೆಗೂ ಹೋಗುತ್ತದೆ. ಗುಜರಾತಿನ ಲೋಥಾಲ್ ಹಡಗುಕಟ್ಟೆಯು ಇದಕ್ಕೆ ಪ್ರಮುಖ ಆಧಾರವೆಂಬುದು ತಿಳಿದೇ ಇದೆ. ಸಿಂಧೂ ನಾಗರೀಕತೆಯ ಮುದ್ರಿಕೆ ಮತ್ತಿತರ ವಸ್ತುಗಳು ಪರ್ಶಿಯಾ, ಸುಮೇರಿಯ, ಈಜಿಪ್ಟ್ ಮೊದಲಾದ ನಾಗರೀಕತೆಗಳಲ್ಲಿ ಕಂಡುಬಂದಿರುವುದೂ ಮುಖ್ಯ. ಸಮುದ್ರದೊಂದಿಗಿನ ನಂಟು ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ ಎಲ್ಲ ಅರಸು ಮನೆತನಗಳಿಗೂ ಇತ್ತು. ನೌಕೆ, ನೌಕಾಯಾನ ಮತ್ತು ನೌಕಾಪಡೆಯು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದುದು ಪುರಾತತ್ವ ಹಾಗೂ ಸಾಹಿತ್ಯ ಆಕರಗಳಿಂದ ವ್ಯಕ್ತಗೊಳ್ಳುತ್ತದೆ. ಪ್ರಾಚೀನ ನೌಕಾಪರಂಪರೆಯ ಅಡಿಪಾಯದ ಮೇಲೆ ಸಂಗಂ ಯುಗವು ನಿಂತಿತ್ತು. ಮೌರ್ಯ ಚಕ್ರವರ್ತಿ ಅಶೋಕ ತಾನು ಅನುಸರಿಸಿದ ಬೌದ್ಧ ಧರ್ಮದ ಪ್ರಚಾರಕ್ಕಾಗಿ ತನ್ನ ಮಗ ಮಹೇಂದ್ರನನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟದ್ದುದನ್ನು ದೀಪವಂಶದಲ್ಲಿ ಕಾಣುತ್ತೇವೆ. ಪಲ್ಲವ ಮತ್ತು ಚೋಳರು ಕೂಡ ನೌಕಾಪಡೆಗಳ ಮೂಲಕ ಸಾಗರದಾಚೆಯ ದಿಗ್ವಿಜಯ ಸಾದಿsಸಿದ್ದುದನ್ನು ಸಂಗಮ್ ಸಾಹಿತ್ಯವು ವರ್ಣಿಸಿದೆ.
ರಾಜರಾಜ ಚೋಳನು ಲಕ್ಷದ್ವೀಪ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತೀತರ ಆಗ್ನೇಯ ಏಷ್ಯಾದ ದ್ವೀಪಗಳನ್ನು ಗೆದ್ದುದಾಗಿ ಶಾಸನಗಳು ತಿಳಿಸಿವೆ. ಕರ್ನಾಟಕದಲ್ಲಿ ಬಾದಾಮಿ ಚಾಳುಕ್ಯ ಅರಸರಾದ ಮಂಗಳೇಶ ಮತ್ತು ಇಮ್ಮಡಿ ಪುಲಿಕೇಶಿ ಅನೇಕ ದ್ವೀಪಗಳನ್ನು ನೌಕಾಸೈನ್ಯದ ಸಹಾಯದಿಂದ ಗೆದ್ದುದನ್ನು ಐಹೊಳೆ ಶಾಸನವು ಹೇಳಿದೆ. ಇಮ್ಮಡಿ ಪುಲಕೇಶಿಯು ನೂರು ನೌಕೆಗಳ ನೆರವಿನಿಂದ ಪುರಿಯ ಪ್ರಾಬಲ್ಯವನ್ನು ಅಡಗಿಸಿ, ರೇವತಿ ಮತ್ತಿತರ ದ್ವೀಪಗಳನ್ನು ವಶಪಡಿಸಿಕೊಂಡುದಾಗಿಯೂ ತಿಳಿಯುತ್ತದೆ. ಇದರಿಂದ ಪ್ರಾಚೀನ ಕಾಲದಿಂದಲೂ ನೌಕೆಗಳ ಬಳಕೆಯಿದ್ದು, ಕರ್ನಾಟಕದ ಅರಸರು ಸಮುದ್ರದಾಚೆಯ ಪ್ರದೇಶಗಳತ್ತ ಗಮನಹರಿಸಿದ್ದುದು ದೃಢಪಡುತ್ತದೆ.
ಅಂತೆಯೇ ವಿಜಯನಗರ ಕಾಲದ ಶಾಸನ, ಸಾಹಿತ್ಯ ಹಾಗೂ ಪ್ರವಾಸಿಗರ ವರದಿಗಳು ಸಮುದ್ರ ವ್ಯಾಪಾರ, ನೌಕಾಯುದ್ಧದ ಅನೇಕ ಚಿತ್ರಣಗಳನ್ನು ನೀಡುತ್ತವೆ. ಅಬ್ದುಲ್ ರಜಾಕ್ ವಿಜಯನಗರದ ಕುರಿತು, “ರಾಜ್ಯ(ವಿಜಯನಗರ) ಸೆರೆನ್ದಿಬ್(ಸಿಂಹಳ) ಗಡಿಯಿಂದ ಕಲ್ಬೆರ್ಗಾದ ಕೊಟ್ಟಕೊನೆಯವರೆಗೆ ಸಾವಿರ ಪರಸಾಂಗುಗಳಷ್ಟು ವಿಸ್ತರಿಸಿದೆ. . . . ಈ ದೇಶದಲ್ಲಿ ಮುನ್ನೂರು ಬಂದರುಗಳಿವೆ” ಎನ್ನುತ್ತಾನೆ. ಈ ಅಂಶಗಳು ವಿಜಯನಗರವು ಸಮುದ್ರ ವ್ಯಾಪಾರದಲ್ಲಿ ಸಾದಿsಸಿದ ಹಿಡಿತವನ್ನು ಸಮರ್ಥಿಸುತ್ತವೆ. ಗಂಗಾದೇವಿಯ ಮಧುರಾ ವಿಜಯಂ ಕೃತಿಯಲ್ಲೂ ಸಿಂಹಳವು ವಿಜಯನಗರದ ಅದಿsನ
ರಾಜ್ಯವಾಗಿದ್ದಿತ್ತೆಂದರೆ, ಫೆರಿಸ್ತಾ, ಮಲಬಾರ್, ಸಿಲೋನ್ ಮತ್ತು ಇತರ ದ್ವೀಪಗಳ ರಾಯರು ಅವನ(ಒಂದನೆಯ ಬುಕ್ಕ) ದರಬಾರಿನಲ್ಲಿ ರಾಯಭಾರಿಗಳನ್ನು ಇಟ್ಟಿದ್ದರು ಮತ್ತು ಪ್ರತಿವರ್ಷ ಕಾಣಿಕೆ ಸಲ್ಲಿಸುತ್ತಿದ್ದರು ಎಂದಿದ್ದಾನೆ. ಎರಡನೆಯ ಹರಿಹರನ ಕಾಲದಲ್ಲಿ ಯುವರಾಜನಾಗಿದ್ದ ವಿರೂಪಾಕ್ಷನು ತುಂಡೀರ, ಚಳ, ಪಾಂಡ್ಯ ರಾಜ್ಯಗಳ ದಿಗ್ವಿಜಯದ ನಂತರ ಶ್ರೀಲಂಕಾದ ಮೇಲೆ ದಂಡಯಾತ್ರೆ ಕೈಗೊಂಡನೆಂದೂ, ಇದರ ನೆನಪಿಗಾಗಿ ವಿಜಯಸ್ತಂಭವನ್ನು ನೆಟ್ಟನೆಂದು ೧೩೮೬ರ ಅರಿಯೂರು ತಾಮ್ರ ಶಾಸನವು ತಿಳಿಸುವುದು. ವಿರೂಪಾಕ್ಷನು ಶ್ರೀಲಂಕಾದ ಉತ್ತರ ಭಾಗ ಮತ್ತು ಜಾಪ್ನಾ ದ್ವೀಪವನ್ನು ವಶಪಡಿಸಿಕೊಂಡು, ಈ ದ್ವೀಪಗಳ ವಿಜಯದ ಸಂಕೇತವಾಗಿ ರಾಮೇಶ್ವರದ ರಾಮನಾಥನಿಗೆ ದಾನ ನೀಡಿದನೆಂಬುದನ್ನು ದೃಢಪಡಿಸಿರುವರು. ಇದು ವಿಜಯನಗರದ ಅಂದಿನ ನೌಕಾಸೇನೆಯ ಬಲಿಷ್ಟತೆಯನ್ನು ಪ್ರತಿನಿದಿsಸುತ್ತದೆ. ವಿರೂಪಾಕ್ಷನ ನಂತರ ಶ್ರೀಲಂಕಾದ ಮೇಲೆ ದಂಡಯಾತ್ರೆ ಕೈಗೊಂಡ ವಿಜಯನಗರ ಅರಸನೆಂದರೆ ಎರಡನೆಯ ದೇವರಾಯ.
ಕ್ರಿ.ಶ.೧೪೩೫ರಲ್ಲಿ ದೇವರಾಯ ತನ್ನ ದಂಡನಾಯಕ ಲಕ್ಕಣ್ಣ ದಂಡಶನನ್ನು ದಕ್ಷಿಣ ದಂಡಯಾತ್ರೆಗೆಂದು ಸೈನ್ಯ ಸಮೇತ ಕಳುಹಿಸಿದ್ದನು. ಲಕ್ಕಣ್ಣನು ದಕ್ಷಿಣ ದಂಡಯಾತ್ರೆಯಲ್ಲಿ ಯಶಸ್ಸನ್ನು ಸಾದಿsಸಿದ ಬಳಿಕ ಶ್ರೀಲಂಕಾದ ಮೇಲೆ ದಂಡೆತ್ತಿ ಹೋದನು. ಶ್ರೀಲಂಕಾದ ರಾಜ ಆರನೆಯ ಪರಾಕ್ರಮಬಾಹುವನ್ನು ಸೋಲಿಸಿ ಯಾಳಪಾಣಂ, ನಾಪಟಮಣಂ ಮತ್ತು ಈಳಂಗಳನ್ನು ಗೆದ್ದುಕೊಂಡಿದ್ದನು. ಈ ವಿಜಯದ ನೆನಪಿಗಾಗಿಯೇ ಲಕ್ಕಣ್ಣ ದಂಡೇಶನು ‘ದಕ್ಷಿಣ ಸಮುದ್ರಾದಿsಪತಿ’ ಎಂಬ ಗೌರವಕ್ಕೆ ಪಾತ್ರನಾಗಿದ್ದನು. ಶ್ರೀಲಂಕಾದ ಈ ದಿಗ್ವಿಜಯದ ಹಿನ್ನೆಲೆಯಲ್ಲಿ ಪ್ರೌಢದೇವರಾಯನು ‘ಈಳಂ ತಿರೈಕೊಂಡ’ ‘ದಕ್ಷಿಣ ಸಮುದ್ರಾದಿsಶ್ವರ’ನೆಂದು ಕರೆದುಕೊಂಡಿದ್ದನು. ಈಳಂ ತಿರೈಕೊಂಡ ಎಂದರೆ ಶ್ರೀಲಂಕಾವನ್ನು ಗೆದ್ದವನು ಎಂಬುದಾಗಿದೆ.
ಸಮುದ್ರಕ್ಕೆ ಸಂಬಂಧಿಸಿದ ಬಿರುದುಗಳನ್ನು ಅವಲೋಕಿಸಿದರೆ ವಿಜಯನಗರದ ಆರಂಭದ ಅರಸರಲ್ಲಿ ಹರಿಹರನು ‘ಪೂವ೯ಪಶ್ಚಿಮ ಸಮುದ್ರಾದಿsಪತಿ’ಯೆಂದು, ಬುಕ್ಕರಾಯನು ‘ಚತುಸಮುದ್ರಾದಿsಪತಿ’ಯೆಂದೂ ಕರೆದುಕೊಂಡಿದ್ದಾರೆ. ಒಂದನೆಯ ದೇವರಾಯ ‘ಪೂವ೯ಪಶ್ಚಿಮ ದಕ್ಷಿಣೋತ್ತರ ಚತುಸಮುದ್ರಾದಿsಪತಿ’ ಎಂಬ ಬಿರುದನ್ನು ಧರಿಸಿದ್ದುದು ಶಾಸನದಿಂದ ತಿಳಿದುಬರುವುದು. ಈ ಬಿರುದುಗಳು ವಿಜಯನಗರ ಆರಂಭದ ಅರಸರು ಸಮುದ್ರದ ಮೇಲೆ ಸಾದಿsಸಿದ ಹಿಡಿತ ಸಂಕೇತಗಳೇ. ಲಕ್ಕಣ್ಣ ದಂಡೇಶನು ಶ್ರೀಲಂಕಾದ ಮೇಲೆ ದಂಡಯಾತ್ರೆಯನ್ನು ಕೈಗೊಂಡದ್ದು ಕ್ರಿ.ಶ.೧೪೩೫ಯೆಂದು ಹೇಳುತ್ತವೆ. ನ್ಯೂನಿಜ್, ಎರಡೆನೆಯ ದೇವರಾಯನಿಗೆ “ಕೌಲ್ಲಾವ್(ಕೈಲಾನ್), ಸಿಲೋನ್, ಪೆಲಿಕಾಟಿ(ಪುಲಿಕಾಟ್), ಪೆಗು, ತನಸರಿ(ತೆನ್ನಾಸರಿ) ಮತ್ತು ಇತರ ರಾಜರುಗಳು ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದರು”ಎಂದು ಹೇಳಿದ್ದಾನೆ. ಇದು ವಿಜಯನಗರ ಅರಸರು ಶ್ರೀಲಂಕಾವನ್ನಲ್ಲದೆ ಸಮುದ್ರದಾಚೆಯ ಹಲವು ದ್ವೀಪಗಳನ್ನು ನೌಕಾಪಡೆಯ ಮೂಲಕ ಯಶಸ್ಸು ಸಾದಿsಸಿದ್ದುದರ ಸಮರ್ಥನೆಯಾಗಿದೆ.
ಪ್ರವಾಸಿ ವಾರ್ಥೆಮಾ ಕ್ರಿ.ಶ.೧೫೦೩ ರಿಂದ ೧೫೦೭ರ ಅವದಿsಯ ವಿಜಯನಗರವನ್ನು ಕುರಿತು ಹೇಳುವಾಗ, ಈ ಸಾಮ್ರಾಜ್ಯವು ಶ್ರೀಲಂಕಾದವರೆಗೂ ವಿಸ್ತರಿಸಿದ್ದಿತೆನ್ನುತ್ತಾನೆ. ಇದರಿಂದ ಎರಡನೆಯ ದೇವರಾಯನ ಆಳ್ವಿಕೆಯಲ್ಲಿ ಶ್ರೀಲಂಕಾವು ಅದಿsನದಲ್ಲಿದ್ದ ಕಾರಣ ಕಪ್ಪಕಾಣಿಕೆಗಳನ್ನು ನೀಡುವುದನ್ನು ಶ್ರೀಲಂಕಾದ ರಾಜರು ಮುಂದುವರಿಸಿದ್ದುದನ್ನು ಕಾಣಬಹುದು. ಇದು ಕ್ರಿ.ಶ.೧೫೨೨ರವರೆಗೂ ಮುಂದುವರಿಯಿತೆನ್ನಬಹುದು. ಆದರೆ ಕ್ರಿ.ಶ.೧೫೨೨ರಲ್ಲಿ ಕೃಷ್ಣದೇವರಾಯನು ಶ್ರೀಲಂಕದಲ್ಲಾದ ಗಲಭೆಯನ್ನು ಹತ್ತಿಕ್ಕಿದ್ದುದು ಪಿರಾನ್ಮಲೈ ಶಾಸನದಿಂದ ತಿಳಿದುಬರುತ್ತದೆ. ಕೊಪ್ಪಳ ತಾಲ್ಲೂಕಿನ ಕಿಡಿದಾಳು ಗ್ರಾಮದ ಶಾಸನದಲ್ಲಿ ಕೃಷ್ಣದೇವರಾಯ ಅಂಗ, ವಂಗ, ಕಳಿಂಗ, ಗೂರ್ಜರ, ಮಗಧ, ಲಾಟ, ಕರ್ನಾಟ, ಗೌಳ, ಮಾಳವ, ರೇವಣ, ಕೊಂಕಣ, ಬಡಗಣ, ಮೂಡಣ, ಪಾಂಚಾಳ, ಕೇರಳ, ಹಮ್ಮೀರ ದೇಶಗಳಲ್ಲದೇ, ಸಿಂಹಳವನ್ನು ಗೆದ್ದುದಾಗಿಯೂ ಹೇಳಲಾಗಿದೆ. ಶಾಸನದಲ್ಲಿ ಸಿಂಹಳವನ್ನು ಶಿಂಹಲಾಳ ಎಂದು ಕರೆದಿದೆ. ಕೃಷ್ಣದೇವರಾಯನ ಕಾಲದಲ್ಲಿ ಇಬ್ಬರು ನಾವಿಕ ಮುಖಂಡರಿದ್ದುದನ್ನು ಬಾರ್ಬೊಸಾ ಹೇಳುತ್ತಾನೆ: “ಈ ರಾಜ್ಯದ ಅದಿsಪತಿಯ(ಕೃಷ್ಣದೇವರಾಯ) ಆಶ್ರಯದಲ್ಲಿ ಇಬ್ಬರು ಕಡಲುಗಳ್ಳ ನಾಯಕರಿದ್ದರು. ಒಬ್ಬನ ಹೆಸರು ತಿಮ್ಯೊಜ(ತಿಮ್ಮೋಜ); ಮತ್ತೊಬ್ಬನ ಹೆಸರು ರಾವ್ಜಿ (ಮಾಧವರಾವ್). ಪ್ರತಿಯೊಬ್ಬರ ಬಳಿಯಲ್ಲಿ ಸುಸಜ್ಜಿತವಾದ ಐದಾರು ಹಡಗುಗಳಿರುತ್ತಿದ್ದವು. ಇವರು ಸಮುದ್ರದ ಮೇಲೆ ಹೋಗಿ ಮಲಬಾರೀ ಹಡಗುಗಳನ್ನು ಬಿಟ್ಟು ಉಳಿದೆಲ್ಲ ಹಡಗುಗಳನ್ನು ಕೊಳ್ಳೆ ಹೊಡೆಯುತ್ತಿದ್ದರು.” ಇದರಲ್ಲಿ ತಿಮ್ಮೋಜ ಮತ್ತು ರಾವ್ಜಿಯನ್ನು ಕಡಲುಗಳ್ಳರ ನಾಯಕರೆಂದು ಹೇಳಿದ್ದರೂ, ಇಲ್ಲಿ ವ್ಯಕ್ತಗೊಳ್ಳುವ ಸುಸಜ್ಜಿತ ಹಡಗು ಪಡೆಗಳಿದ್ದುದನ್ನು ಗಮನಿಸಬೇಕು. ಇದು ವಿಜಯನಗರ ಕಾಲದಲ್ಲಿ ಸಮುದ್ರದಾಚೆಯ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಬೇಕಾದ ಸೇನೆಯನ್ನು ಕೊಂಡೊಯ್ಯಲು ಸಾಕಷ್ಟು ಹಡಗುಗಳನ್ನು ಬಳಸಿಕೊಂಡಿದ್ದರೆಂದು ಹೇಳಬಹುದು. ಅಚ್ಯುತರಾಯ ಮತ್ತು ಸದಾಶಿವರಾಯರ ಕಾಲದಲ್ಲೂ ವಿಜಯನಗರದ ಸೇನೆ ಶ್ರೀಲಂಕಾದ ಮೇಲೆ ದಂಡೆತ್ತಿ ಹೋಗಿದ್ದುದು ತಿಳಿದುಬರುತ್ತದೆ. ಕ್ರಿ.ಶ.೧೫೩೯ರಲ್ಲಿ ಅಚ್ಯುತರಾಯನು ಈಳಂ(ಶ್ರೀಲಂಕಾ) ಮೇಲೆ ಜಯ ಸಾದಿsಸಿದುದಾಗಿ ತಂಜಾವೂರಿನ ರಾಜಗೋಪಾಲ ಪೆರುಮಾಳ್ ದೇವಾಲಯದ ಶಾಸನವು ತಿಳಿಸುತ್ತದೆ. ವಿಜಯನಗರವು ಶ್ರೀಲಂಕಾದೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಅದರಲ್ಲೂ ಸೈನ್ಯವ್ಯವಸ್ಥೆಯ ಪ್ರಮುಖ ಭಾಗವಾದ ಗಜದಳಕ್ಕೆ ಹೆಚ್ಚಾಗಿ ಆನೆಗಳನ್ನು ಶ್ರೀಲಂಕಾದಿಂದ ಆಮದು ಮಾಡಿಕೊಳ್ಳುತ್ತಿದ್ದದು ವಿಶೇಷ.
ಒಟ್ಟಿನಲ್ಲಿ ವಿಜಯನಗರವು ಆರಂಭದ ಅರಸರಿಂದ ಹಿಡಿದು ಸದಾಶಿವರಾಯನವರೆಗೆ ಶ್ರೀಲಂಕಾ ಮತ್ತಿತರ ದ್ವೀಪಗಳ ಮೇಲೆ ಹಡಗುಗಳ ಮೂಲಕ ಸೇನೆಯನ್ನು ಕೊಂಡೊಯ್ದು ಯುದ್ಧಗಳನ್ನು ಕೈಗೊಂಡಿದ್ದರು; ಹಾಗೂ ಅವರು ಕೈಗೊಂಡ ಯುದ್ಧಗಳಲ್ಲಿ ಜಯಗಳಿಸಿ ಕೊನೆಯವರೆಗೂ ದ್ವೀಪಗಳ ಮೇಲೆ ತಮ್ಮ ಹಿಡಿತ ಸಾದಿsಸುವುದರ ಜೊತೆಗೆ ವ್ಯಾಪಾರ ಸಂಬಂಧವನ್ನು ಗಟ್ಟಿಗೊಳಿಸಿದ್ದುದು ಸ್ಪಷ್ಟವಾಗುತ್ತದೆ.