
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಗಾಳಿ ಬಿಟ್ಟಾಗ ತೂರಿಕೋ.
ರೈತ ಕಣದಲಿ ರಾತ್ರಿ ಹಂತಿ ಹೊಡೆದು ಹಗಲು ರಾಶಿ ತೂರುವನು. ಗಾಳಿಗಾಗಿ ಕಾಯುವನು. ಗಾಳಿ ಬಿಟ್ಟಾಗ ಖುಷಿಪಟ್ಟು, ಊಟ ಬಿಟ್ಟು ತೂರುವನು! ಗಾಳಿ ನಮ್ಮದಲ್ಲ. ಕಳೆದ ಗಾಳಿ ಮತ್ತೆ ಸಿಗದು! ನಮ್ಮ ಅಧೀನವಲ್ಲದ ಅವಕಾಶಕ್ಕೆ ಕಾಯಬೇಕು, ಒದಗಿದಾಗ ಬಿಡದೇ ಬಳಸಬೇಕು. ಬಸ್ಸು ರೈಲು ವಿಮಾನ ಪರೀಕ್ಷೆ ಸಂದರ್ಶನ ನೇಮಕಾತಿ ವಿವಾಹ ಮುಹೂರ್ತಗಳು ನಿರ್ದಿಷ್ಟ ವ್ಯಕ್ತಿಗೆ ಕಾಯವು! ಕಾಯ್ದು ಬಳಸಿಕೊಳ್ಳದಿದ್ದರೆ ಅವಕಾಶ ವಂಚನೆ! ತಪ್ಪಿದರೆ ಮತ್ತೆ ಸಿಗದು! ಮಗುವಾಗಿದ್ದಾಗ ಆಡಬೇಕು. ವಿದ್ಯಾರ್ಥಿಯಾಗಿದ್ದಾಗ ಓದಬೇಕು. ಶಕ್ತಿ ಅಧಿಕಾರ ಇದ್ದಾಗ ದುಡಿಯಬೇಕು, ಗುರು ಹಿರಿಯರ, ದೀನ ದುರ್ಬಲರ ಸೇವೆ, ದಾನ ಧರ್ಮ ಮಾಡಬೇಕು. ತಾನಾರೆಂದು ತಿಳಿದು ಧನ್ಯನಾಗಬೇಕು!ಸಂಸಾರ ಹೊರೆ ಹೊತ್ತ ಮೇಲೆ ಎಂಥ ಆಟ! ಗುರು ಹಿರಿಯರು, ದೀನ ದುರ್ಬಲರು ಅಳಿದ ಬಳಿಕ ಎಲ್ಲಿ ಅವರ ಸೇವೆ? ಅಧಿಕಾರ ಹೋದ ಬಳಿಕ ಆದೇಶ ಸೇವೆ ಎಲ್ಲಿ? ಅರಿವಿನ ಜನ್ಮ ಕಳೆದ ಮೇಲೆ ದಾನ ಧರ್ಮ ಎಲ್ಲಿ? ತಾನಾರೆಂಬ ಅರಿವೆಲ್ಲಿ?
ಎಚ್ಚರಿರೋಣ, ಸಮಯದಿ ಸಾಧನೆಗೈಯ್ಯೋಣ!!