ಎನ್.ಸಿ. ಶಿವಪ್ರಕಾಶ್ಮಸ್ಕತ್, ಒಮಾನ್
ಗೆಳೆಯ ಬರುವುದು ತಡವಾಯಿತು..!
ಎದೆ ಹಗುರಾಗಬಯಸಿದೆ, ನೀನೆಲ್ಲಿರುವೆ ಗೆಳೆಯ?
ಮನಬಿಚ್ಚಿ ಹರಟಿ ವರುಷಗಳುರುಳಿವೆ, ತಿಳಿಯದೆ ನಿನ್ನ ನೆಲೆಯ
ಸುಡುಬಿಸಿಲಿಗೆ ಮೋಡವಾಗಿ ನೆರಳಬಿಚ್ಚಿದೆ
ದುಗುಡದ ಕಣ್ಣೀರನದಿಗೆ ಪಾತ್ರವಾಗಿ ನೀ ಮೆರೆದೆ
ಹಸಿದಾಗ ಆಹಾರವಿತ್ತೆ; ಬೇಡದೆ ಆಶ್ರಯವ ಕೊಟ್ಟೆ
ನಾ ನಕ್ಕಾಗ ಜೊತೆಗೊಡಲು ಹಲವರಿದ್ದರು; ಕಂಬನಿಗರೆಯಲು ನೀನೊಂದೇ ಹೆಗಲು
ಬಾಲ್ಯದಲಿ ನೋಟುಪುಸ್ತಕಗಳ ಹಂಚಿಕೊಂಡೆ; ಯೌವನದಲಿ ನೋಟುಗಳನೇ ಹಂಚಿಕೊಂಡೆ
ನನ್ನ ನೋಟಕೆ ನಿನ್ನ ಪ್ರೀತಿಯ ಬಲಿಕೊಟ್ಟೆ
ಗೆಳೆಯಾ, ಈ ಬಾರಿ ನಿನ್ನ ಹುಡುಕಿ ಬಂದಿದ್ದೆ
ನಿಜತಾವಿನಲಿ ನೀ ತಣ್ಣಗೆ ಮಲಗಿದ್ದೆ
ದವಾಖಾನೆಯಲಿ ನೀ ನನ್ನ ನೆನೆದು ಹಲುಬಿದ್ದೆ
ನನ್ನ ತೊಡೆಯ ಮೇಲೆ ಕ್ಷಣ ತಲೆಯೂರಿ ಮಲಗುವ ಕನಸ ಕಂಡಿದ್ದೆ
ನಾ ಬರುವುದು ತುಸು ತಡವಾಗಿ ಹೋಯಿತು ಗೆಳೆಯಾ
ಮುನಿದ ನೀನು ನನಗೆಂದೂ ಮುಖ ತೋರದ ಕಠಿಣ ವ್ರತವನೇಕೆ ಕೈಗೊಂಡೆ?
ಬಾಳಿಗೆ ಕೈಬೀಸಿ ಗೋರಿಯ ತಂಪನು ನೆಚ್ಚಿದೆ
ಜೀವದ ಗೆಳೆಯ ಬಂದಿರುವೆ
ಬಿಡೆನು, ಗೋರಿಯ ಅಗೆದು ನಿನ್ನ ಕನಸ ನನಸು ಮಾಡದೆ