ಗುರುಶೋಧನೆ.
ಆಕಾಶವು ಹೇಗೆ ನಾಶವಾಗುವುದು? ಸಿದ್ಧಬಾಲಕನ ಈ ಪ್ರಶ್ನೆಗೆ ವೀರಭದ್ರ ಸ್ವಾಮಿಗಳು ಹೇಳಿದ್ದು:”ಯೋಗ್ಯ ಗುರುವಿಗೆ ಈ ಪ್ರಶ್ನೆಯನ್ನು ಕೇಳತಕ್ಕದ್ದು” ಎಂದು. ಯೋಗ್ಯ ಗುರುವನ್ನು ಹುಡುಕಬೇಕೆಂದು ಸಿದ್ಧನು ಅಂದೇ ಮನಸ್ಸಿನಲ್ಲಿ ನಿರ್ಧರಿಸಿದನು. ಮರುದಿನ ಬೆಳಿಗ್ಗೆ ಎದ್ದು, ಯಾರಿಗೂ ಹೇಳದೇ ಮನೆ ಬಿಟ್ಟು ಹೊರಟನು. ದಾರಿಯಲ್ಲಿ ಮಿತ್ರರಾದ ಸೋಮ ಭೀಮರು ಕಣ್ಣಿಗೆ ಬಿದ್ದರು. ಸಿದ್ಧನನ್ನು ಕಂಡೊಡನೆಯೇ “ಸಿದ್ಧ ಎಲ್ಲಿಗೆ ಹೊರಟಿರುವಿ? ” ಎಂದು ಕೇಳಿದರು. ಆಗ ಸಿದ್ಧ ಹೀಗೆ ಉತ್ತರಿಸಿದ :

God has come.
“ಈ ಪ್ರಪಂಚವೆಲ್ಲವೂ ನಶ್ವರ. ಬದಲಾಗುತ್ತಾ ಹೋಗುತ್ತದೆ. ನಮ್ಮೊಂದಿಗೆ ಯಾವಾಗಲೂ ಇರುವುದೆಂದು ಹೇಳಲಾಗದು. ಇದು ನಮ್ಮಿಂದ ಅಗಲುವುದು ಅಥವಾ ನಾವೇ ಅಗಲುವೆವು! ಹೀಗಿರುವಾಗ ನಾವು ಈ ಪ್ರಪಂಚವನ್ನು ವ್ಯಾಮೋಹಿಸಿ ಕುಳಿತರಾಗದು. ನಮ್ಮ ನಿಜ ಸ್ವರೂಪವೇನೆಂಬುದನ್ನು ಅರಿಯಬೇಕು.ಅದಕ್ಕಾಗಿ ಗುರುಶೋಧನೆಗೆ ಹೊರಟಿದ್ದೇನೆ” ಎಂದು.
ಆಗ ಅವರೆಂದರು:” ಇದೇನು ನೀನು ಹೀಗೆ ಹೇಳುತ್ತಿ? ನಾನು ಸೋಮ, ನಾನು ಭೀಮ, ಎಂಬುದಾಗಿ ಎಲ್ಲರಿಗೂ ಅವರವರ ಸ್ವರೂಪಜ್ಞಾನ ಇದ್ದೇ ಇದೆಯಲ್ಲ! ಇದಕ್ಕಾಗಿ ಗುರು ಏಕೆ ಬೇಕು? “ಎಂದು. ಆಗ ಸಿದ್ಧ ನುಡಿದ: ನಾನು ಸೋಮ, ನಾನು ಭೀಮ ಇತ್ಯಾದಿಯಾಗಿ ಹೇಳುತ್ತೇವೆ.ಆದರೆ ಯಾರಾದರೂ ನಮ್ಮನ್ನು” ಯಾವಾಗ ಹುಟ್ಟಿದಿ? “ಎಂದು ಕೇಳಿದರೆ, ತಾಯಿಯ ಉದರದಿಂದ ಹೊರಬಂದ ದಿನವನ್ನು ಹೇಳುತ್ತೇವೆ. ಆ ದಿನ ನಮಗೆ ಹೆಸರೇ ಇರುವುದಿಲ್ಲ. ಹಾಗಾದರೆ ನಾನು ಸೋಮ, ನಾನು ಭೀಮ, ನಾನು ಮಹಾದೇವಿ ಇತ್ಯಾದಿ ಆಗುವುದು ಹೇಗೆ? ತಾಯಿಯ ಉದರದಿಂದ ಹೊರಬಂದ ದಿನ ನಾನು ಹುಟ್ಟಿದ್ದು ಎಂದಾದರೆ, ತಾಯಿಯ ಉದರದಲ್ಲಿದ್ದು, ತಾಯಿ ಉಂಡ ಆಹಾರಾಂಶಗಳನ್ನು ಹೀರಿ ಬೆಳೆದವನು/ಳು ಯಾರು? ತಾಯಿಯ ಉದರದಲ್ಲಿರುವ ಆ ಮಗು ಅಲ್ಲಿ ಹುಟ್ಟಿದ ದಿನ ಯಾವುದು? ಇದ್ದಕ್ಕಿದ್ದಂತೆ ಹುಟ್ಟಿತೇ? ಎಲ್ಲಿಂದಲೋ ಬಂದು ಸೇರಿತೇ? ತಂದೆ ತಾಯಿಗಳ ವೀರ್ಯಾಣುಗಳ ಬೆಸುಗೆಯಿಂದ ಬ್ರೂಣ ಬೆಳೆಯಿತಲ್ಲವೇ? ಆ ವೀರ್ಯಾಣುಗಳ ಮೂಲವೇನು?
ಹೀಗೆ ಶೋಧಿಸುತ್ತಾ ಹೋದಾಗ ಮಾತ್ರ ತನ್ನ ನಿಜ ಸ್ವರೂಪ ತಿಳಿಯಲು ಸಾಧ್ಯ. ವಾಸ್ತವ ಸ್ವರೂಪವನ್ನು ಅರಿತ ಸಮರ್ಥ ಸದ್ಗುರು ಮಾತ್ರ ತನ್ನ ನಿಜ ಸ್ವರೂಪವನ್ನು ತಿಳಿಸಿಕೊಡಬಲ್ಲ! ಅದಕ್ಕಾಗಿಯೇ ಅಂಥ ಸದ್ಗುರುವನ್ನು ಹುಡುಕಿಕೊಂಡು ಹೊರಟಿರುವೆ”ಎಂದು.
ಆಗ ಭೀಮ ಸೋಮರು “ಗುರು ಹಾಗೂ ಸದ್ಗುರುವಿನ ನಡುವಿನ ವ್ಯತ್ಯಾಸವೇನು?” ಎಂದು ಕೇಳಿದರು. ಆಗ ಸಿದ್ಧನು ಹೀಗೆ ಮುಂದುವರಿದ:
ನಮ್ಮೊಳಗಿನ ಅಜ್ಞಾನ ಕತ್ತಲೆಯನ್ನು ಕಳೆದು, ಸುಜ್ಞಾನ ದೀವಿಗೆಯನ್ನು ಬೆಳಗಿಸುವಾತನೇ ಸದ್ಗುರು. ಸರಿಯೋ ತಪ್ಪೋ, ಮಾರ್ಗದರ್ಶನ ಮಾಡುವ ಪ್ರತಿಯೊಬ್ಬನೂ ಗುರು ಎನಿಸಬಹುದು. ತಾಯಿ ಗುರು, ತಂದೆ ಗುರು, ಒಂದಕ್ಷರ ಕಲಿಸಿದಾತ ಗುರು,ಅರಿವು ಮೂಡಿಸುವ ಪ್ರಾಣಿ ಪಕ್ಷಿ ಗಿಡ ಮರ ಪ್ರಕೃತಿಯೂ ಗುರು! ಹೀಗೆ ಹೆಜ್ಜೆ ಹೆಜ್ಜೆಗೂ ಗುರುಗಳು! ಗುರುಗಳು ಆರು ವಿಧ. ವಶೀಕರಣಾದಿ ಕ್ಷುದ್ರ ವಿದ್ಯೆ ಕಲಿಸುವಾತ ನಿಷೇಧ ಗುರು. ಸ್ವರ್ಗಾದಿ ಸುಖ ಸಾಧಿಸುವಾತ ಕಾಮ್ಯ ಗುರು. ನ್ಯಾಯ ನೀತಿ ಹೇಳುವಾತ ಸೂಚಕ ಗುರು. ಹಲವು ಶಾಸ್ತ್ರಾರ್ಥಗಳ ವ್ಯಾಖ್ಯಾನ ಮಾಡಬಲ್ಲ ಪಾಂಡಿತ್ಯವುಳ್ಳವನು ವಾಚಕ ಗುರು. ಶಿವ ಜೀವ ಜಗದ ಅಭೇದ ಪ್ರತಿಪಾದಿಸುವ ವೇದಾಂತಿ ಕಾರಕ ಗುರು. ಅತ್ಯಂತ ದುಃಖವನ್ನು ಕಳೆದು ಪರಮಾನಂದ ಪ್ರಾಪ್ತಿರೂಪ ಮೋಕ್ಷವನ್ನು ದಯಪಾಲಿಸುವಾತ ವಿಹಿತ ಗುರು.ನಾನಾ ಪ್ರಕಾರದ ನೆಪಗಳನ್ನೊಡ್ಡಿ ಜನರ ಹಣ ಕೀಳುವ ಗುರುಗಳನಂತ! ಆದರೆ ಜನರ ಹೃದಯದ ತಾಪ ಕಳೆಯುವ ಗುರುಗಳು ಅತಿ ವಿರಳ! ಈ ಅತಿ ವಿರಳ ಗುರುವೇ ವಿಹಿತ ಗುರು, ಸದ್ಗುರು, ನಿಜಗುರು!
ಈ ಸದ್ಗುರು ದುರ್ಲಭನಾದದ್ದರಿಂದ ಹುಡುಕಲೇಬೇಕಿದೆ. ಸದ್ಗುರು ಸಿಕ್ಕಬಳಿಕವೂ ಆ ಸದ್ಗುರುವಿನ ಅನುಗ್ರಹವಾಗುವುದು ಸುಲಭದ ಮಾತಲ್ಲ! ಸದ್ಗುರುವಿನ ಬಳಿಯಲ್ಲಿದ್ದು ಅನೇಕ ರೀತಿಯ ಅವರ ಸೇವಾದಿಗಳನ್ನು ಮಾಡಿ ಅವರ ಮನವೊಲಿಸಿಕೊಳ್ಳಬೇಕು.
ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಸುಜ್ಞಾನೀ
ನಿರ್ವೇದಮಾಯಾನ್ನಾಸ್ತ್ಯಕೃತಃ ಕೃತೇನ|
ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್
ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಂ||
(ಮುಂಡಕೋಪನಿಷತ್. 1.12.)
ಕರ್ಮಮಯವಾದ ಈ ಲೋಕದ ಎಲ್ಲ ವ್ಯವಹಾರಗಳನ್ನು ಪರೀಕ್ಷಿಸಿದ ಸುಜ್ಞಾನಿಯು, “ಅನಿತ್ಯದಿಂದ ನಿತ್ಯವಾಗಲಾರದು, ಅನಿತ್ಯವಾದ ಕರ್ಮಸಂಕುಲದಿಂದ ನಿತ್ಯವಾದ ಜ್ಞಾನಮಯ ಮೋಕ್ಷದ ಪ್ರಾಪ್ತಿಯಾಗಲಾರದು” ಎಂದು ವೈರಾಗ್ಯ ತಾಳುತ್ತಾನೆ. ಅನಿತ್ಯವಾದ ಪ್ರಾಪಂಚಿಕ ವಿಷಯಾದಿಗಳ ಬೆನ್ನ ಹತ್ತಿ ಓಡುವುದನ್ನು ನಿಲ್ಲಿಸುತ್ತಾನೆ. ಅಂಥವನು ತನ್ನ ನಿಜ ಸ್ವರೂಪವನ್ನು, ಜಗದ ಆಂತರ್ಯವನ್ನು, ಪರಮಾರ್ಥ-ಪರಮಾತ್ಮ ಸ್ವರೂಪವನ್ನು ತಿಳಿದುಕೊಳ್ಳಲು ಗುರುವಿನ ಬಳಿಗೆ ತೆರಳಬೇಕು. ಗುರುವು ವೇದೋಪನಿಷತ್ತುಗಳನ್ನು ಚೆನ್ನಾಗಿ ಬಲ್ಲವನೂ, ತನ್ನ ನಿಜ ಸ್ವರೂಪವಾದ ಪರಬ್ರಹ್ಮದಲ್ಲಿ ನೆಲೆ ನಿಂತವನೂ ಆಗಿರಬೇಕು. ಗುರುವಿನ ಬಳಿಗೆ ಬರಿಗೈಯಲ್ಲಿ ಹೋಗಬಾರದು. ಗುರುವಿಗೆ ಅಗತ್ಯವಾದುದೇನನ್ನಾದರೂ ಕೊಂಡೊಯ್ಯಬೇಕು. ವೇದಕಾಲದ ಗುರುಗಳಾದ ಋಷಿಗಳು ನಿತ್ಯ ಹೋಮಗಳನ್ನು ನಡೆಸುವವರಾಗಿದ್ದರಿಂದ, ಹೋಮಕ್ಕೆ ಇಂಧನವಾಗಿ ಬಳಸುತ್ತಿದ್ದ ಸಮಿತ್ತನ್ನು ಕೈಯಲ್ಲಿ ಹಿಡಿದುಕೊಂಡು ಗುರುಗಳ ಬಳಿಗೆ ಸಾಗಬೇಕು – ಎನ್ನುವುದು ಮುಂಡಕೋಪನಿಷತ್.
ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ|
ಉಪದೇಕ್ಷಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ||
(ಭಗವದ್ಗೀತೆ – 4.34)
ಗುರುಗಳ ಮೂಲಕ ನೀನು ಜ್ಞಾನವನ್ನು ಪಡೆಯಬೇಕಿದ್ದರೆ, ಅವರಿಗೆ ಮತ್ತೆ ಮತ್ತೆ ನಮಸ್ಕರಿಸು. ಬಗೆ ಬಗೆಯಾಗಿ ಸೇವೆ ಮಾಡು. ಆಗ ಕರಗಿದ ಹೃದಯದವರಾದ, ನಿಜ ತತ್ತ್ವವನ್ನು ತಿಳಿದ ಆ ಜ್ಞಾನಿಗಳು ಅವಶ್ಯವಾಗಿ ನಿನಗೆ ಜ್ಞಾನೋಪದೇಶವನ್ನು ಮಾಡುತ್ತಾರೆ – ಎನ್ನುತ್ತದೆ ಶ್ರೀಮದ್ಭಗವದ್ಗೀತೆ.
ಗುರುಗಳಿಂದ ವಿದ್ಯೆಯನ್ನು ಪಡೆಯಲು ಇರುವ ವಿಧಾನಗಳು ಕೇವಲ ಮೂರು. ಅವುಗಳೆಂದರೆ:
ಗುರುಶುಶ್ರೂಷಯಾ ವಿದ್ಯಾ ಪುಷ್ಕಲೇನ ಧನೇನ ವಾ|
ಅಥವಾ ವಿದ್ಯಯಾ ವಿದ್ಯಾ ಚತುರ್ಥೀ ನೋಪಲಭ್ಯತೇ||
ಗುರುಸೇವೆಯಿಂದ ವಿದ್ಯೆಯನ್ನು ಪಡೆಯಬಹುದು. ಇದು ಮೊದಲ ವಿಧಾನ. ಸರ್ವ ಸಾಮಾನ್ಯರಿಗೂ ಅನುಕೂಲ. ಅದಾಗದಿದ್ದರೆ ಯಥೇಷ್ಟ ಹಣ ನೀಡಿ ವಿದ್ಯೆಯನ್ನು ಪಡೆಯಬಹುದು. ಇದು ಎರಡನೆಯ ವಿಧಾನ. ಹಣವಂತರಿಗೆ ಎಟಕುವಂಥದ್ದು. ಬಹುತೇಕ ಇಂದು ನಡೆಯುತ್ತಿರುವುದು, ಹಣ ಚೆಲ್ಲಿ ಹಣ ಮಾಡುವ ಈ ವಿಧಾನವೇ. ನಮ್ಮ ವಿದ್ಯೆಯನ್ನು ಅವರಿಗೆ ಹೇಳಿಕೊಟ್ಟು, ಅವರ ವಿದ್ಯೆಯನ್ನು ನಾವು ಪಡೆಯುವುದು ಮೂರನೆಯ ವಿಧಾನ. ಇದು ಹಿರಿಯರಿಗೆ ಹಾಗೂ ವಿದ್ಯಾವಂತರಿಗೆ ಸಂಬಂಧಿಸಿದ್ದು. ಈ ಮೂರನ್ನು ಹೊರತುಪಡಿಸಿ, ವಿದ್ಯೆಯನ್ನು ಗಳಿಸುವ ಮತ್ತೊಂದು ವಿಧಾನವಿಲ್ಲ.
ಮನೆಯಲ್ಲಿದ್ದು ಯೋಗ್ಯ ಗುರುಗಳನ್ನು ಮನೆಗೆ ಕರೆಸಿಕೊಂಡು, ಅವರ ಸೇವೆಯನ್ನು ಮಾಡುತ್ತಾ ವಿದ್ಯೆಯನ್ನು – ಆತ್ಮಸ್ವರೂಪಜ್ಞಾನವನ್ನು ಪಡೆಯುವುದು ಅಸಾಧ್ಯದ ಮಾತು. ಆದ್ದರಿಂದ ಮನೆಯನ್ನು ತೊರೆದು ಗುರುಶೋಧನೆಗೆ ಹೊರಟಿರುವೆ” ಎಂದು.