ನಿಡಗುಂದಿ,ಜು,೩೧:ಜನಸಾಮಾನ್ಯರ ಕಷ್ಟ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಮತ್ತದು ನನ್ನ ಪ್ರಥಮ ಆದ್ಯತೆಯೂ ಹೌದು, ಆ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ನಿರ್ದೇಶನ ನೀಡಿದ್ದೇನೆ ಎಂದು ವಿಜಯಪುರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ಹೇಳಿದರು.
ಕೊಲ್ಹಾರ, ನಿಡಗುಂದಿ, ಆಲಮಟ್ಟಿ, ಕೂಡಗಿ, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಒಳಗೊಂಡ ನಿಡಗುಂದಿ ಆರಕ್ಷಕ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿ ಉದ್ಘಾಟಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದಕ್ಕೆ ನನ್ನ ಆದ್ಯತೆ, ಕ್ರಿಮಿನಲ್ಸ್ ಗಳು, ಸಾರ್ವಜನಿಕ ಸ್ವಾಸ್ತ್ಥವನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಶೀಘ್ರದಲ್ಲಿಯೇ ರೌಡಿ ಶೀಟರ್ ಗಳ ಪರೇಡ್ ನಡೆಸಿ ಅವರಿಗೂ ಬುದ್ಧಿವಾದ ಹೇಳುತ್ತೇನೆ ಎಂದು ಅವರು ತಿಳಿಸಿದರು.
ಭೀಮಾ ಹಾಗೂ ಕೃಷ್ಣಾ ತೀರದಲ್ಲಿ ನಡೆಯುವ ಅಕ್ರಮ ಮರಳು ಸೇರಿದಂತೆ ಹಲ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರುತ್ತೇನೆ ಎಂದರು. ಜಿಲ್ಲೆಯ ಈ ಬಗ್ಗೆ ನುರಿತ ಅಧಿಕಾರಿಗಳ, ವ್ಯಕ್ತಿಗಳ ಜತೆ ಚರ್ಚಿಸಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಆಲಮಟ್ಟಿ ಹಾಗೂ ಕೂಡಗಿ ಪೊಲೀಸ್ ಠಾಣೆಗಳ ವ್ಯಾಪ್ತಿ ಚಿಕ್ಕದಾದರೂ ಅಲ್ಲಿನ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರ್ಯ ನಿರ್ವಹಿಸುತ್ತಿವೆ, ಆಲಮಟ್ಟಿಯಲ್ಲಿನ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.
ಆಲಮಟ್ಟಿ ಜಲಾಶಯದ ಭದ್ರತೆ ನಿರ್ವಹಿಸುತ್ತಿರುವ ಕೆಎಸ್ ಐಎಸ್ ಎಫ್ ಪೊಲೀಸರಿಗೂ ಪ್ರವಾಸಿಗರ ಜತೆ ಸೌಹಾರ್ದತೆಯಿಂದ ವರ್ತಿಸುವಂತೆ ಸೂಚಿಸುವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಡಿವೈಎಸ್ ಪಿ ಅರುಣಕುಮಾರ ಕೋಳೂರ, ಸಿಪಿಐ ಸೋಮೇಶೇಖರ ಜುಟ್ಟಲ, ಪಿಎಸ್ ಐಗಳಾದ ಚಂದ್ರಶೇಖರ ಹೆರಕಲ್ಲ, ರೇಣುಕಾ ಜಕನೂರ, ಶಿವಾನಂದ ಲಮಾಣಿ, ಸಿದ್ದಣ್ಣ ಯಡಹಳ್ಳಿ, ರಾಜು ಮಮದಾಪೂರ, ಪ್ರೊಬೇಷನರಿ ಪಿಎಸ್ ಐ ದೀಪಾ ಸೇರಿದಂತೆ ಇನ್ನೀತರರು ಇದ್ದರು.
ನಂತರ ಎಸ್.ಪಿ ಅವರು ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿಯ ಭದ್ರತೆಯನ್ನು ಪರಿಶೀಲಿಸಿದರು.