ಡಾ.ಶಿವಕುಮಾರ್ ಕಂಪ್ಲಿ
ಪ್ರಾಧ್ಯಾಪಕರು.
ದಾವಣಗೆರೆ ವಿಶ್ವವಿದ್ಯಾಲಯ
ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು
ಕವಿ ಕಥನಗಳು ಅಂತರಂಗ ಮತ್ತು ಬಹಿರಂಗದ ಕಾಲ,ಸಮಾಜ,ಧರ್ಮ ಮತ್ತು ರಾಜಕಾರಣಗಳ ನಾನಾ ಮುಖಗಳನ್ನ ತಮ್ಮ ತಮ್ಮ ಆವರಣಗಳಿಂದ ಬಿಡಿಸಿ ಹೇಳುತ್ತವೆ. ಭಿನ್ನ ಭಾಷೆಯ ಕವಿ ಕಥನಗಳು ನಮ್ಮ ಪರಿಸರಕ್ಕಿಂತಲೂ ಭಿನ್ನ ಅನುಭವಲೋಕವನ್ನ ,ಸನ್ನಿವೇಶ, ಸಮುದಾಯಗಳ ಸಾಂಸ್ಕೃತಿಕ ನಡೆಗಳನ್ನ ಒಡೆದು ತೋರುತ್ತವೆ.ಈ ನೆಲೆಯಲ್ಲಿ ಭಿನ್ನ ಭಾಷಿಕ ಬರಹಗಳು ಜಡತ್ವವನ್ನ ನೀಗಿಸಬಲ್ಲವು.ನಮ್ಮ ಬರಹಗಳಿಗೆ ಬಹುಮುಖಿ ರೂಪಗಳನ್ನ ಕಾಣಿಸಬಲ್ಲವು. ತಮ್ಮ ತಾಜಾಸೊಗಡಿನಿಂದ ವಿಸ್ಮಯ ಮತ್ತು ಕುತೂಹಲ ಮೂಡಿಸಬಲ್ಲ ಇಂತಹ ಕಥನಗಳು ನಮ್ಮ ಲೇಖಕರಿಗೆ ಅಗತ್ಯವೂ ಹೌದು. ಈ ಕೆಲಸ ನಿರ್ವಹಿಸುವ ಬರಹಗಾರರ ಪಡೆಗೆಲ್ಲಾ ಕನ್ನಡ ಭಾಷೆ ಋಣಿಯಾಗಿರಬೇಕೆನಿಸುತ್ತದೆ.
ಪ್ರಸ್ತುತ ಸಾಹಿರ್ ಲೂಧಿಯಾನ್ವಿ ಅವರ ಬದುಕು ಮತ್ತು ಬರಹಗಳನ್ನ ಪರಿಚಯಿಸುವ ಹಸನ್ ನಯಿಂ ಸುರಕೋಡ ಅವರ ಪ್ರೇಮಲೋಕದ ಮಾಯಾವಿ ಹಲವು ಹೊಳೆಗಳಿಂದ ಕೂಡಿಕೊಂಡು ತುಂಬಿ ಹರಿವ ಸಮೃದ್ಧ ನದಿಯಂತೆ ಕಾಣುತ್ತದೆ. ನೋವುಂಡವನಿಗೆ ಮಾತ್ರ ನೋವಿನ ನಾಡಿ ಪರಿಚಯವಾದಂತೆ ಇಲ್ಲಿ ಬರಹ ತರಂಗಗಳ ತೆರೆಗಳಂತೆ ತುಂಬಿಕೊಂಡಿದೆ.
ಪ್ರೇಮ ವಿರಹವೆಂಬ ಪ್ರವಾಹಗಳ ಸೆಳವು ಹೊತ್ತ ಈ ನದಿಯ ಕಥನವು ಮೂರು ಪ್ರಧಾನ ಕವಲುಗಳ ಸಂಗಮದಂತಿದೆ. ಈ ಜೀವನ ಕಥನವು ಅಂದಿನ ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯದ ಕಥನವನ್ನ, ದೇಶವಿಭಜನೆಯ ಕೋಮು ಸಂಘರ್ಷದ ಸಮೂಹ ಸನ್ನಿಯ ದಳ್ಳುರಿಯ ಸ್ವರೂಪವನ್ನ ,ತಣ್ಣಗೆ ಕೊರೆವ ಪ್ರೇಮದ ಮಾಯಾವಿ ನಡೆಗಳನ್ನ ಹೊದ್ದು ಹೊರಟ ಯಾತ್ರೆಯಂತಿದೆ.
ನೋವಿನ ಎಳೆಗಳಿಂದಲೇ ಸಂಕಟದ ನೂಲುಗಳನ್ನ ಹಿಡಿ ಹಿಡಿದು ಹೊಸೆದ ಈ ಕಥನದ ಸ್ಥಾಯೀ ಭಾವವೇ ಶೋಕ ರಸವಾಗಿದೆ.ಶೃಂಗಾರ ಇಲ್ಲಿ ಸುಳಿದರೂ ಮೆರೆವುದು ವಿಷಾದದ ವಿಪ್ರಲಂಭ ಶೃಂಗಾರವೇ.ಕವಿಯ ಕಣ್ಣೀರಿನಲ್ಲೇ ಅದ್ದಿ ತೆಗೆದಂತಹ ಅನೇಕ ಸಾಲುಗಳು ಇಡೀ ಉರ್ದು ಮತ್ತು ಹಿಂದಿ ಸಾಹಿತ್ಯದ ಜನಪ್ರಿಯತೆಗೆ ಕಾರಣವಾಗಿರುವುದು ವಿಷಾದನೀಯ. ವ್ಯಕ್ತಿಯ ಆಳದ ನೋವು ಜಗದ ಕಣ್ಣಿಗೆ ತಾಗಿದಾಗಲೆಲ್ಲಾ ಅವು ಸಂಭ್ರಮದ ಪರಿಣಾಮ ಹೊತ್ತು ತರುವುದು ಇಂದಿಗೂ ಅಚ್ಚರಿಯ ವಿಚಾರವೇ.
ಉಸಿರುಗಟ್ಟಿ ಸಾಯುವುದು ಎಲ್ಲಿಯ ತನಕ
ಇಲ್ಲ ಪ್ರಿಯೆ
ನಾನಿನ್ನ ಬರೆಯಲಾರೆ ರೇಶ್ಮೆಯಂಥ
ನಾಜೂಕಿನ ಕವನಗಳನ್ನು
ಇನ್ನು ಜನ್ಮ ತಾಳಲಾರವು ನನ್ನ ಕಥನಗಳು
ಕೋಮಲ ಕಣ್ಣೀರಿನಲಿ.
ಎಂದು ಬರೆದ ಕವಿ ಸಾಹಿರ್ ಹುಟ್ಟಿದ್ದು ೧೯೨೧ ರ ಮಾರ್ಚ ೮ ರಂದು ಪಂಜಾಬ್ ನ ಸಟ್ಲೇಜ್ ನದಿ ತಟದಲ್ಲಿರುವ ಲೂಧಿಯಾನದಲ್ಲಿ.ದೆಹಲಿ ಸುಲ್ತಾನರ ಆಡಳಿತ ನೆನಪಿಗೆ ತರುವ ಈ ಪ್ರದೇಶವು ಹಿಂದು ಮುಸ್ಲಿಮರ, ಸಿಕ್ಕರ, ಸೂಫಿ ಸಂತರ ಸಾಂಸ್ಕೃತಿಕ ಬಹುತ್ವಗಳನ್ನ ಹೊದ್ದ ನಗರ.ಧರ್ಮದಂತೆಯೇ ಔದ್ಯೋಗಿಕ ನಗರವೂ ಆಗಿದೆ.
ಸಾಹಿರ್ ತಂದೆ ಫಜಲ್ ಮಹಮ್ಮದ್ ಒಬ್ಬ ದೊಡ್ಡ ಜಮೀನ್ದಾರ. ಗೇಣಿದಾರರನ್ನ ಬೆದರಿಸಿ ಹಣ ಸುಲಿಯುತಿದ್ದ ಆತನಿಗೆ ಪದೇ ಪದೇ ಮದುವೆಯಾಗುವ ಖಯಾಲಿಯೂ ಇತ್ತು. ಒಟ್ಟು ಹನ್ನೊಂದು ಮದುವೆಯಾಗಿದ್ದ ಫಜಲ್ ಮಹಮ್ಮದ್ ಗೆ ಸಾಹಿರ್ ಒಬ್ಬನೇ ಮಗನಾಗಿದ್ದ.ಸಾಹಿರ್ ನ ಮೂಲ ಹೆಸರು ಅಬ್ದುಲ್ ಹೈ .ಮಗ ಹುಟ್ಟುವ ವೇಳೆಯಲ್ಲಿ ಕುರಾನ್ ಫಠಿಸುತ್ತಿದ್ದ ಆತನಿಗೆ ಅಲ್ಲಿನ ಹೈ ಶಬ್ದ ಆಕರ್ಷಿಸಿತಂತೆ ಹೈ ಅಲ್ಲಾಹ್ ನ ಒಂದು ಹೆಸರು. ಅದರ ಅರ್ಥ ಚಿರಂಜೀವಿ.
ಸಾಹಿರ್ ಗೆ ಬಾಲ್ಯದಿಂದಲೂ ಅಪ್ಪನ ಪ್ರೀತಿಯೇ ಸಿಗಲಿಲ್ಲ.ಬದುಕೆಲ್ಲಾ ಜಗಳ,ಕೋರ್ಟು,ಮದುವೆ,ಹಣದ ವ್ಯಾಮೋಹದಲ್ಲೇ ಕಳೆದ ಆತನನ್ನ ಕಂಡರೆ ಸಾಹಿರ್ ಗೂ ಅಷ್ಟೇ ದ್ವೇಷ. ಅಮ್ಮ ಸರ್ದಾರ್ ಬೇಗಂ ಳ ಪ್ರೀತಿ ಅಕ್ಕರೆಯಲ್ಲೇ ಬೆಳೆದನಾತ.ಸಾಹಿರ್ ಗೆ ಹೋರಾಟದ ಮೊದಲ ಪಾಠದಂತೆ ಬದುಕಿದ ಸರ್ದಾರ್ ಬೇಗಂ ಗಂಡನ ವಿಲಾಸಿ ಜೀವನವನ್ನ ದಿಕ್ಕರಿಸಿ ಮನೆಯಿಂದ ಹೊರ ಬಿದ್ದು ಆ ಕಾಲಕ್ಕೇ ಆತನನ್ನ ಕೋರ್ಟನಲ್ಲಿ ಎದುರು ಗೊಂಡಳು.ಪಾಳೆಗಾರಿಕೆಯ ಕಠೋರ ನಡೆಯ ಫಜಲ್ ಆಸಿಗಾಗಿ ಮಗನನ್ನೇ ಅಪಹರಿಸಲು ಹೇಸದಾಗ ಹೆದರಿ ಬಿಟ್ಟಳು. ಸಾಹಿರ್ ಅವ್ವನ ಕಣ್ಣ ಕೋಟೆಯಲ್ಲೇ ಅರಳುತ್ತ ಮೆಟ್ರಿಕ್ ಪಾಸಾದ. ಕಾಲೇಜಿನಲ್ಲಿ ಸಹಜವಾಗೇ ಅಂದು ದೇಶದಲ್ಲಿ ಹೊಸ ಗಾಳಿ ಬೀಸುತ್ತಿದ್ದ ಪ್ರಗತಿ ಶೀಲರ ಆಕರ್ಷಣೆಗೆ ಒಳಗಾದ.ಮಾರ್ಕ್ಸವಾದವನ್ನ ಬೆನ್ನಿಗಂಟಿಸಿಕೊಂಡು ತನ್ನ ಉಸಿರಿನುದ್ದಕೂ ಬಡವರ ಹಸಿವು ಯಾತನೆಗಳನ್ನ ಅಕ್ಷರ ಮಾಡುತ್ತಲೇ ಹೊರಟ.
ಸತ್ತ ರಾಜ ರಾಣಿಯರ ಗೋರಿಗಳ ಕಂಡು ಗರಿಗೆದರುವವಳೇ
ಕತ್ತಲೆ ಕವಿದ ನಮ್ಮ ಗುಡಿಸಲುಗಳತ್ತ ದೃಷ್ಟಿ ಹರಿಸಬಾರದೇ
ಎಂದು ತಾಜ್ ಮಹಲ್ ಕುರಿತು ಬರೆದ ಸಾಹಿರ್ ಧರ್ಮವನ್ನ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ಬಗ್ಗೆ ಸದಾ ಜಾಗರೂಕರಾಗಿರಬೇಕೆಂದು ಎಚ್ಚರಿಸುತ್ತಿದ್ದ. ಎಡಪಂಥೀಯ ಧೋರಣೆಯಿಂದ ಕಾಫಿರ್ ಎಂದು ಸಂಪ್ರದಾಯವಾದಿಗಳಿಂದ ಕರೆಸಿಕೊಂಡ. ತಾಜ್ ಮಹಲ್, ನೂರಜಹಂಳಗೋರಿ ಬಳಿ ಎಂಬ ಕವಿತೆಗಳನ್ನ ಬರೆದು ಮುಸ್ಲಿಂ ಬಾದಶಾಹರನ್ನು ಅವಮಾನಿಸುವವ ಎಂದೇ ಕೆಂಡ ಕಾರಿಸಿಕೊಂಡ.ಮಾನವೀಯತೆಗಾಗಿ ಮಿಡಿದ ಆತ ಡಿಗ್ರಿಯನ್ನ ಪಡೆಯಲಾಗದೆ ಹೋದರೂ ಮುಂದೆ ಕೈ ಬಿಟ್ಟ ಕಾಲೇಜಿನಿಂದಲೇ ಚಿನ್ನದ ಪದಕ ಪಡೆದ.ಪತ್ರಿಕೆಗಳ ಉಪಸಂಪಾದಕ,ಸಂಪಾದಕರಾಗಿ ಹೆಸರು ಮಾಡಿದ. ಕೋಮುದ್ವೇಷದಿಂದ ಮಲಿನಗೊಂಡ ಜಾಗಗಳನ್ನ ತೊರೆಯುತ್ತ ತೊರೆಯುತ್ತ ಹೊಸ ಹೊಸ ಸವಾಲುಗಳ ಜೀವನದ ಹಾದಿಗಳನ್ನ ಹಿಡಿಯುತ್ತಾ ಹೋದ.
ಚಾರ್ವಾಕ ನಂತಿದ್ದ ಜಿನ್ನಾ ರಾತ್ರೋ ರಾತ್ರಿ ಧರ್ಮ ನಿಷ್ಠ ಮುಸಲ್ಮಾನನಾದದ್ದು ಧರ್ಮಪರವಾಗೇ ನಿಂತಿದ್ದ ಗಾಂಧಿ ಸ್ವತಂತ್ರಕ್ಕಿಂತ ಮುಕ್ತಿ ಮುಖ್ಯವೆಂದದ್ದು.ಹೊಟ್ಟೆ ಹೊರೆವ ಬಡಜನಕ್ಕೆ ದೊಡ್ಡ ಹೊಡೆತ ನೀಡಿತು.ಮುಂಬೈಗೆ ಅನ್ನ ಅರಸಿ ಬಂದಿದ್ದ ಸಾಹಿರ್ ಗೆ ದೇಶ ವಿಭಜನೆಯ ಆ ರಾತ್ರಿ ಕರುಳಲ್ಲ್ಲಿ ಕತ್ತರಿಯಾಡಿಸಿದಂತಾಯ್ತು. ಪ್ರಾಣ ಪಣಕಿಟ್ಟು ದೆಹಲಿಗೆ ಬಂದರೂ ಅಲ್ಲಿ ಮಾನವೀಯತೆಯೇ ಕಗ್ಗೊಲೆಯಾಗಿತ್ತು.ಕೋಮು ದಳ್ಳುರಿಯಿಂದ ಅಪ್ಪ ಅಮ್ಮ ಅಣ್ಣ ತಂಗಿ ಜೀವದ ಗೆಳೆಯರೆಲ್ಲಾ ತುಂಡಾದ ನೆಲಗಳಲ್ಲಿ ಬೇರೆ ಬೇರೆಯಾದರು. ಒಂದೆಡೆ ಒದ್ದೋಡಿಸುವವರು ಇನ್ನೊಂದೆಡೆ ಕಣ್ಣೀರು ಸುರಿಸುತ್ತ ಬೀಳ್ಕೊಡುವವರು.ಒಂದೆಡೆ ಆಶ್ರಯ ನೀಡುವವರು ಇನ್ನೊಂದೆಡೆ ಸುಟ್ಟು ಬೂದಿ ಮಾಡಿ ಗಹ ಗಹಿಸುವವರು.ಅಲ್ಲಿ ಹತ್ತು ಲಕ್ಷ ಅಮಾಯಕರ ಕಗ್ಗೊಲೆಯಾಯ್ತು. ಹತ್ತು ಕೋಟಿ ಜನ ಮನೆ ಮಾರು ಕಳೆದುಕೊಂಡು ನಿರಾಶ್ರಿತರಾದರು. ಸರ್ವಜನಾಂಗದ ಕನಸಂತೆ ಕಾಣುತಿದ್ದ ಪ್ರೀತನಗರ ಹಾಳು ಹಂಪೆಯಂತಾಯ್ತು.ದೇಶ ವಿಭಜನೆಯ ಸಂಭ್ರಮದ ನೆರಳ ಅಡಿ ಅಸಂಖ್ಯಾತ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಯಿತು.ಇಡೀ ಮೂರು ತಿಂಗಳು ಜನ ಧರ್ಮಗಳ ಸಮೂಹ ಸನ್ನಿಗೆ ಒಳಗಾಗಿ ನೆಲದುದ್ದಕೂ ರಕ್ತ ಕಲೆ ಮೂಡಿಸಿದರು.ಜಗತ್ತಿಗೆ ಸಾಹಿರ್ ಪರಿಚಿತನಾಗಿದ್ದೇ ತನ್ನ ಪ್ರೇಮದ ನುಡಿಗಳಿಂದ.
ಮುಜುಕೇ ಪೆಹಲೇ ಕಿತನೇ ಶಾಹಿರ್ ಆಯೇ ಔರ್ ಆಕರ್ ಚಲೇ ಗಯೇ
ಕುಚ್ ಆನ್ಹೈನ್ ಭರ್‌ಕರ್ ಲೌಟ್ ಗಯೇ ಕುಚ್ ನಗಮೆ ಗಾ ಕರ್ ಚಲೇ ಗಯೇ
ವೋ ಭೀ ಎಕ್ ಫಲ ಕಾ ಕಿಸ್ಸಾ ಥೇ ಮೈ ಭೀ ಎಕ್ ಫಲ್ ಕಾ ಕಿಸ್ಸಾ ಹೂ
ಕಲ್ ತುಮ್ಸೇ ಜುದಾ ಹೊ ಜಾವುಂಗಾ ಜೋ ಆಜ್ ತುಮಾರಾ ಹಿಸ್ಸಾ ಹೂ
ಮೈ ಫಲ್ ದೋ ಫಲ್ ಕಾ ಶಾಯರ್ ಹೂ…
ಸಾಹಿರ್ ಎಂಬ ಕಾವ್ಯ ನಾಮದ ಅರ್ಥ ಜಾದೂಗಾರ ಆತ ಶಬ್ದಗಳ ಜಾದೂಗಾರ,ಹೃದಯಗಳ ಚೋರ.ಕಭೀ ಕಭೀ ಮೇರೆ ದಿಲ್ ಮೇ ಖಯಾಲ್ ಆತಾ ಹೈ .. ಎಂದು ಹಾಡುತ್ತ ಜನಪ್ರಿಯತೆಯ ಉತ್ತುಂಗಕ್ಕೇರಿದ.
ಉರ್ದು ಕವಿಗಳ ಕಾವ್ಯ ನಾಮಗಳೇ ವಿಶಿಷ್ಟ. ಜಿಗರ್(ಹೃದಯ),ಅತಿಷ್(ಬೆಂಕಿ),ದರ್ದ( ನೋವು) ದಾಗ್( ಕಲೆ) ಹೀಗೆ ಕಾವ್ಯನಾಮಗಳ ಅಚ್ಚರಿಯ ಲೋಕವದು. ಕವಿತೆಯ ನಿಶೆ ಹಚ್ಚಿಕೊಂಡ ಸಾಹಿರ್ ಡಾ.ಇಕ್ಬಾಲ್ ರ ದಾಗ್ ಕವಿತೆಯಲ್ಲಿನ ಸಾಹಿರ್ ಎಂಬ ಪದವನ್ನೇ ತನ್ನ ಕಾವ್ಯ ನಾಮವಾಗಿಸಿಕೊಂಡರು. ಸಾಹಿರ್ ಎಂದರೆ ಹಾಡುವ ಬುಲ್ ಬುಲ್ ಹಕ್ಕಿ ಇದು ತನ್ನ ಹಾಡಿನಿಂದಲೇ ಹೂದೋಟದ ಮೊಗ್ಗನ್ನ ಅರಳಿಸುತ್ತದೆ. ಹಾಡುವ ಹಕ್ಕಿಯನ್ನ ಬೇಟೆಗಾರ ಬಲೆಗೆ ಬೀಳಿಸುವ ಹೊಂಚು ಹಾಕುತ್ತಾನೆ.ಬುಲ್ ಬುಲ್ ಹಾಡುತ್ತ ಬೇಟೆಗೆ ಬಿದ್ದರೂ ಅಮಾಯಕ ಮೊಗ್ಗು ಅರಳುವುದನ್ನ ನಿಲ್ಲಿಸಲಾರದು. ಭಾರತವೆಂಬ ಹೂ ಬನದಲ್ಲಿ ದಾಗ್ ಒಂದು ಬುಲ್ ಬುಲ್.ಯಾವತ್ತೂ ತನ್ನ ನಾಡು ಇಂಥ ನೂರಾರು ಸಾವಿರಾರು ಬುಲ್ ಬುಲ್ಗಳ ಬೀಡಾಗಿರಲಿ ಎಂಬುದು ಕವಿ ಇಕ್ಬಾಲರ ಆಶಯವಾಗಿತ್ತು.ಅವರು ಬುಲ್ ಬುಲ್ ಹಕ್ಕಿಯನ್ನು ಸಾಹಿರ್ ಎಂದು ಬಣ್ಣಿಸಿದ್ದರು. ಸಾಹಿರ್ ಎಂದರೆ ಮಾಯಾವಿ(ಜಾದೂಗಾರ) ಅಬ್ದುಲ್ ಹೈ ಸಹ ಕವಿಯಾಗಿ ಸಾಹಿರ್ ಕಾವ್ಯನಾಮದೊಂದಿಗೆ ಅಸಂಖ್ಯಾತ ಕಾವ್ಯ ಪ್ರೇಮಿಗಳ ಮೇಲೆ ಮೋಡಿ ಹಾಕಿದರು.
ಇಷ್ಕ ಇನ್ ಸಾನ್ ಕೋ ಇನ್ ಸಾನ್ ಬನಾದೇತಾ ಹೈ.. ಎಂದು ಪ್ರೇಮ ಕವಿತೆಗಳನ್ನ ಬರೆಯುತ್ತಾ ನೂರಾರು ಜನರ ಆಟೋಗ್ರಾಪ್ ಪಡೆಯುತ್ತಿದ್ದ ಕಿವಿ ಗಡಚಿಕ್ಕುವ ಚಪ್ಪಾಳೆಗಳಿಂದ ಸತ್ಕರಿಸಲ್ಪಡುತ್ತಿದ್ದ ಕವಿ ಸಾಹಿರ್ ನನ್ನ ಆಕರ್ಷಿಸಿದ್ದು ಒಂದು ನೋಟ್ ಬುಕ್ ಇಲ್ಲದೆ ಕೈಮೇಲೆಯೇ ಆಟೋಗ್ರಾಪ್ ಆಕಿ ಎಂದ ಬೆಳದಿಂಗಳ ಚಲುವೆ ಅಮೃತಾ ಪ್ರೀತಂ.ಅಂದು ತಮ್ಮ ಜೇಬಿನಿಂದ ಪೆನ್ನು ತೆಗೆದು ಎಡಗೈ ಹೆಬ್ಬರಳಿಗೆ ಮಸಿ ಹಚ್ಚಿಕೊಂಡು ಆ ಯುವತಿಯ ಕೋಮಲ ಕೈಯನ್ನ ತಮ್ಮ ಕೈಯಲ್ಲಿ ತೆಗೆದುಕೊಂಡು ಆಕೆಯ ಅಂಗೈ ಮೇಲೆ ಹೆಬ್ಬೆರಳನ್ನೊತ್ತಿದರು.ಅಂದಿನಿಂದಲೇ ಶುರುವಾಯ್ತು ಅಲ್ಲೊಂದು ಧರ್ಮಾಂತರದ ಹೊಸ ಪ್ರೇಮಕಥನ.
ತೂ ಹಿಂದೂ ಬನೇಗಾ ನ ಮುಸಲ್ಮಾನ್ ಬನೇಗಾ
ಇನ್ಸಾನಕೀ ಔಲಾದ ಹೈ ಇನಸಾನ್ ಬನೇಗಾ
( ನೀ ಹಿಂದೂ ಆಗದಿರು ನೀನಾಗದಿರು ಮುಸಲ್ಮಾನ್ ಮಾನವ ಸಂತಾನ ನೀನು ಮಾನವನಾಗು)
ಸುಂದರನಲ್ಲನೆಂಬ ಕೀಳಿರಿಮೆ ಸಾಹಿರನನ್ನ ಅಮೃತಾರ ಕಡೆ ಸೆಳೆಯದಾಯಿತು. ಸಾಹಿರ್ ಅಮೃತಾರಿಗೆ ಹುಚ್ಚು ಪ್ರೀತಿಯ ಹೆಸರಾಯ್ತು. ಆಕೆಗೆ ಆತನೊಂದಿಗೆ ಸಹಜೀವನವೆಂಬುದು ಕನಸಾದರೂ ಅವನ ನೆನಪು ಆಕೆಯನ್ನ ಕವಿಯಾಗಿಸಿತು.ಜ್ಞಾನ ಪೀಠದ ತನಕ ಕೊಂಡೊಯ್ದಿತು.ಸಾಹಿರ್ ನೆನಪುಗಳ ಸಂದೇಶಗಳ ಸಂಕಲನ ಸುನೆಹೆಡೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು. ತನ್ನ ಜೀವನದುದ್ದಕ್ಕೂ ಆಕೆ ಸಾಹಿರ್ ಹೆಸರನ್ನೇ ಉಸಿರಾಗಿಸಿಕೊಂಡಳು. ಕೊನೆಗೆ ಅಂತಹ ಮಗನಾದರೂ ಸಿಗಲೆಂದು ಆತನ ಪೋಟೋ ಕೋಣೆತುಂಬಿಸಿಕೊಂಡಳು.ಆತ ಮಾತ್ರ ಒಂಟಿಯಾಗಿ ನಿಂತು ಗುನು ಗುನಿಸುವ ಹಾಡುಗಳ ಸಾಲುಗಳಲ್ಲೇ ನಿಶ್ಯಬ್ದವಾಗಿಬಿಟ್ಟ.
ನನಗೆ ನನ್ನದೇ ನೆರಳು ಎಷ್ಟೋ ಸಲ ಬೇಜಾರುಮಾಡಿದೆ
ಇದನ್ನೇ ಜೀವನ ಎನ್ನುವುದಾದರೆ ಹೀಗೇ ಬದುಕುವೆ
ಉಸ್ ಎನ್ನದೆ ತುಟಿ ಹೊಲಿದುಕೊಳ್ಳದೆ ಕಣ್ಣೀರ ಕುಡಿಯುವೆ
ನೋವಿಗೆ ಇನ್ನು ಹೆದರುವುದೇಕೆ ನೋವು ನೂರು ಸಲ ಸಿಕ್ಕಿದೆ