ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಲೇಖನ.
ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ!
ಗುರು ದೊಡ್ಡವನು. ಗುರುತರ ಹೊಣೆಯುಳ್ಳವನು. ಜ್ಞಾನವುಳ್ಳವನು. ಅಜ್ಞಾನ ಕಳೆಯುವವನು. ಪ್ರಸಿದ್ಧ ಶ್ಲೋಕವೊಂದು ಹೀಗಿದೆ;
ಗುಕಾರಸ್ತ್ವಂಧಕಾರಸ್ತು ರುಕಾರಸ್ತೇಜ ಉಚ್ಯತೇ|
ಅಂಧಕಾರ ನಿರೋಧತ್ವಾತ್ ಗರುರಿತ್ಯಭಿಧೀಯತೇ||
ಗುಕಾರ ಕತ್ತಲೆಯ ಪ್ರತೀಕ. ರುಕಾರ ಬೆಳಕಿನ ಪ್ರತೀಕ. ಗೊತ್ತಿಲ್ಲದಿರುವುದು, ತಿಳಿಯದಿರುವುದು, ಅಜ್ಞಾನ. ಇದೇ ಕತ್ತಲೇ = ಅಂಧಕಾರ. ತಿಳಿವು =ಅರಿವು=ಜ್ಞಾನ=ವಿದ್ಯೆಯೇ ಬೆಳಕು! ನಮ್ಮೊಳಗಿನ ಅಜ್ಞಾನ ಕತ್ತಲೆಯನ್ನು ಜ್ಞಾನಬೆಳಕಿನಿಂದ ಹೊಡೆದೋಡಿಸುವುವವನೇ ಗುರು.
ಬದುಕಿನಲ್ಲಿ ಜ್ಞಾನದಂಥ ಶ್ರೇಷ್ಠ ಪವಿತ್ರ ವಸ್ತು ಇನ್ನಾವುದೂ ಇಲ್ಲ. “ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|| ಈ ಲೋಕದಲ್ಲಿ ಜ್ಞಾನಕ್ಕೆ ಸಮನಾದ ಪವಿತ್ರವಾದದ್ದು ಯಾವುದೂ ಇಲ್ಲ” ಎನ್ನುತ್ತದೆ ಶ್ರೀಮದ್ಭಗವದ್ಗೀತೆ[೪.೩೮].ಜ್ಞಾನದ ಲಾಭ, ಅಜ್ಞಾನದ ನಷ್ಟಗಳಿಗೆ ಇಲ್ಲಿವೆ ಕೆಲವು ನಿದರ್ಶನಗಳು :ವಾಹನ ಚಲಾವಣೆಯನ್ನು ತಿಳಿದಿವನು ಚೆನ್ನಾಗಿ ವಾಹನವನ್ನು ಚಲಾಯಿಸುವನು. ಶಿಲ್ಪಕಲೆ ಘ ಬಲ್ಲವನು ಶಿಲ್ಪ ನಿರ್ಮಿಸುವನು.ಗಾಯನ ಬಲ್ಲವನು ಹಾಡುವನು.ಓದು ಬರಹ ಬಲ್ಲವನು ಓದುವನು, ಬರೆಯುವನು. ಮಾತು ಬಲ್ಲವನು ವ್ಯಹರಿಸುವನು. ಅಮೃತವೆಂದು ತಿಳಿದವನು ಉಣ್ಣುವನು, ವಿಷವೆಂದು ತಿಳಿದವನು ಹಿಂಜರಿಯವನು. ಜ್ಞಾನವಿಲ್ಲದ ಬದುಕು ಗೋಳು- ಮೊಟಕು! ಬೆಂಕಿ ಸುಡುವುದೆಂದು ತಿಳಿಯದಿದ್ದರೆ,ಬೆಂಕಿಯಲ್ಲಿ ಕೈ ಇಟ್ಟರೆ ಸುಟ್ಟು ಹೋಗುವುದು! ಅರಿಯದೇ ಕೀಟನಾಶಕ ಕುಡಿದರೆ ಸಾವು! ನಮ್ಮೊಳಗಿನ ಚೈತನ್ಯ ಪರಮಾತ್ಮನನ್ನು ಅರಿತರೆ, ಎಲ್ಲರೊಳಗೆ, ಎಲ್ಲಕಡೆಗೆ, ಎಲ್ಲವುಗಳಲ್ಲಿ ಅವ್ಯಕ್ತವಾಗಿ ಹುದುಗಿರುವ ಪರಮಾತ್ಮ ತತ್ತ್ವವೇ ನಾನು. ‘ನಾನೇ ಎಲ್ಲಾ ’ ಎಂಬ ವಿಶ್ವರೂಪ ಜಗದಗಲ ಜ್ಞಾನೋದಯ!
ಅತಿ ಪವಿತ್ರ ಜ್ಞಾನ ನೀಡುವ ಗುರುವೂ ಅತಿ ಪವಿತ್ರ! ದೇವರು ಎಲ್ಲೆಡೆ ಅವ್ಯಕ್ತ ಹುದುಗಿಹನು. ಪ್ರತ್ಯಕ್ಷ ಕಾಣಲಾರ! ಗುರು ಪ್ರತ್ಯಕ್ಷ ದೇವರು. “ಭರ್ಗೋ ಸಾಕ್ಷಾತ್ ನರಾಕೃತಿಃ=ಸಾಕ್ಷಾತ್ ಪರಮಾತ್ಮನೇ ಗುರುರೂಪದಲ್ಲಿ ಮಾನವನಾಗಿ ಅವತರಿಸಿದ್ದಾನೆ” ಎಂದಿದೆ ಭಾಗವತ ಪುರಾಣ! ಗುರು ಗರಿಮೆ ಬೀರುವ ಗುರುಗೀತೆಯ ಈ ಕೆಳಕಂಡ ಶ್ಲೋಕ ಚಿರಪರಿಚಿತ,
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀಗುರವೇ ನಮಃ ||
ಗುರು ಬ್ರಹ್ಮನು.ಗುರು ವಿಷ್ಣುವು. ಗುರು ದೇವನಾದ ಮಹೇಶ್ವರ! ಗುರು ಜಗದ ಮೂಲ ಪರಬ್ರಹ್ಮ! ಅಂಥ ಗುರುವಿಗೆ ನಮಸ್ಕಾರ! ಗುರುವು ಅರಿವಿನ ಕಿಡಿ ಹೊತ್ತಿಸುವನು. ಶಿಷ್ಯನನ್ನು ಮಗನಂತೆ ಸಲಹುವನು.ಶಿಷ್ಯನ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸುವನು. ಸಮಸ್ಯೆಗಳಿಗೆ ಪರಿಹಾರ ನೀಡುವನು, ದೂರ ಸರಿಸುವನು. ಲೌಕಿಕ ಅಲೌಕಿಕ ಶಿಕ್ಷಣ ನೀಡಿ, ಬಾಳ ಬೆಳಗುವನು. ಆದ್ದರಿಂದ ಗುರು ದೇವರು. “ಆಚಾರ್ಯದೇವೋ ಭವ= ಆಚಾರ್ಯ=ಗುರು ದೇವರೆಂದು ತಿಳಿ” ಎನ್ನುವುದು ತೈತ್ತಿರೀಯ ಉಪನಿಷತ್. ಗುರು ದೇವರಷ್ಟೇ ಅಲ್ಲ, ದೇವರನ್ನು ತಿಳಿಸಿ ತೋರಿಸುವ ದೇವರ ದೇವ!
ನ ಗುರೋರಧಿಕಂ ತತ್ತ್ವಂ
ನ ಗುರೋರಧಿಕಂ ತಪಃ |
ನ ಗುರೋರಧಿಕಂ ಜ್ಞಾನಂ
ತಸ್ಮೈ ಶ್ರೀಗುರವೇ ನಮಃ||
ಗುರುವಿಗಿಂತ ಅಧಿಕವಾದ ತತ್ತ್ವ ಇನ್ನೊಂದಿಲ್ಲ. ಗುರಿವಿಗಿಂತ ಅಧಿಕವಾದ ತಪಸ್ಸು ಮತ್ತೊಂದಿಲ್ಲ. ಗುರುವಿಗಿಂತ ಅಧಿಕವಾದ ಜ್ಞಾನ ಯಾವುದೂ ಇಲ್ಲ. ಅಂಥ ಗುರುವಿಗೆ ನಮಸ್ಕಾರ -ಎನ್ನುವುದು ಗುರುಗೀತೆ.
ಗುರುವಿಗೆ, ಗುರುಸ್ಥಾನ ಆಶ್ರಮ ಮಠ ಮಂದಿರ ವಿದ್ಯಾಕೇಂದ್ರಗಳಿಗೆ, ತಲೆಬಾಗಿ ಗೌರವಿಸುವವನು ಸುಂದರ ಬದುಕ ಕಟ್ಟಿಕೊಳ್ಳುವನು. ತದ್ವಿರುದ್ಧ ನಡೆಯುಳ್ಳವನು ಜಾಲಿಯ ಮರದಂತೆ ಕಂಟಕ! ಪ್ರತಿ ವ್ಯಕ್ತಿಯ ಮುನ್ನಡೆಯ ಹಿಂದೆ ಗುರುವಿನ ಮಾರ್ಗದರ್ಶನ ಅಡಗಿದೆ. ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ! ಗುರು ಗುರಿ ಇಲ್ಲದಿರೆ ಅಧೋಗತಿ! ಬುದ್ಧ ಬಸವ ಶಂಕರ ಸಿದ್ಧಾರೂಢ ವಿವೇಕಾನಂದ ಯಾವುದೇ ಮಹಾತ್ಮರಾಗಿರಲಿ, ಸಾಹಿತಿ ಕಲಾವಿದ ಪಂಡಿತ ಪುರೋಹಿತ ಅಧಿಕಾರಿ ರಾಜಕಾರಣಿ ಆಗಿರಲಿ, ಅವರ ಯಶಸ್ಸಿನ ಹಿಂದೆ ಗುರು ಇದ್ದಾನೆ. ಗುರುವು ವಿದ್ಯಾ ತಿಳುವಳಿಕೆಯುಳ್ಳವನಾದರೆ, ಪಾಠ-ಪ್ರವಚನ ಮಾಡುವವನಾದರೆ ಮಾತ್ರ ಸಾಲದು! ಗುರುವಿನ ನಡವಳಿಕೆ ಇತರರಿಗೆ, ಮಾದರಿ ಮಾರ್ಗದರ್ಶಕ ಪ್ರೇರಕವಾಗಿರಬೇಕು! ಗುರುವು ಜ್ಞಾನದಾತ! ಲಕ್ಷ್ಮೀದಾತನಲ್ಲ! ಆತ ಸರಸ್ವತೀ ಪುತ್ರ , ಲಕ್ಷ್ಮೀಪುತ್ರನಲ್ಲ! ಆರ್ಥಿಕ ದಾರಿದ್ರ್ಯಕ್ಕೆ ಕೊರಗುವವನು, ಸೊರಗುವವನು ಹಿಮ್ಮೆಟ್ಟುವವನು, ನಿಜ ಗುರು ಎನಿಸಲಾರ! ಜ್ಞಾನದಾತ ಗುರುವಿನ ಬಳಿ ಜನ-ಶಿಷ್ಯರು ಜ್ಞಾನ-ವಿದ್ಯೆ-ಸಂಸ್ಕಾರಗಳನ್ನು ಬಯಸಬೇಕೇ ಹೊರತು, ಹಣ-ಆಸ್ತಿ-ಹಾರ ತುರಾಯಿಗಳನ್ನಲ್ಲ! ಚಿನ್ನದ ಅಂಗಡಿಯಲ್ಲಿ ತರಕಾರಿ ಸಿಗುವುದೇ? ತರಕಾರಿ ಅಂಗಡಿಯಲ್ಲಿ ಚಿನ್ನ ಬಯಸುವುದೇ? ದೇವರ ತೀರ್ಥದ ಜಾಗದಲ್ಲಿ ಕುಡಿಯುವ ತೀರ್ಥ ಬಯಸಿದರೆಂತು?
ಜಗದಲಿ ಯಾವುದೂ ಪುಕ್ಕಟೆ ಸಿಗದು. ಗುರುವಿನಿಂದ ವಿದ್ಯೆ-ಸಂಸ್ಕಾರ ಜ್ಞಾನಗಳೂ ಸುಮ್ಮ ಸುಮ್ಮನೇ ಬಿಟ್ಟಿಯಾಗಿ ಸಿಗಲಾರವು. ವಿದ್ಯೆಯನ್ನು ಪಡೆಯುವ ಬಗೆಯನ್ನು ಬಲ್ಲವರು ಹೀಗೆ ಹೇಳಿದ್ದಾರೆ;
ಗುರುಶುಶ್ರೂಷಯಾ ವಿದ್ಯಾ
ಪುಷ್ಕಲೇನ ಧನೇನ ವಾ|
ಅಥವಾ ವಿದ್ಯೆಯಾ ವಿದ್ಯಾ ಚತುರ್ಥೀ ನೋಪಲಭ್ಯತೇ||
ಪ್ರೀತಿ-ಗೌರವ-ಸದ್ಭಾವನೆಗಳಿಂದ ಗುರು-ಗುರುಸ್ಥಾನದ ಸೇವೆಗೈಯ್ಯಬೇಕು. ಹಣವಿಲ್ಲದೆಯೇ, ಸೇವೆಯಿಂದ ಖುಷಿಯಾಗುವ ಗುರುವು, ವಿದ್ಯೆಯನ್ನು ಧಾರೆ ಎರೆಯುವನು. ಯಥೇಷ್ಟ ಹಣ ನೀಡಿ ವಿದ್ಯೆ ಪಡೆಯುವುದು ಎರಡನೆಯ ಮಾರ್ಗ. ಇದೇ ಇಂದು ಚಲಾವಣೆಯಲ್ಲಿರುವುದು! ದುಡ್ಡು ಚೆಲ್ಲಿ ದುಡ್ಡುಗಳಿಸುವ ಸೂತ್ರ! ನಮ್ಮ ವಿದ್ಯೆಯನ್ನು ಅವರಿಗೆ ನೀಡಿ, ಅವರ ವಿದ್ಯೆಯನ್ನು ನಾವು ಪಡೆಯುವ ಮೂರನೆಯ ಮಾರ್ಗವೊಂದಿದೆ. ಇದು ಹಿರಿಯರ ವಿದ್ಯಾವಂತರ ನಿಗರ್ವಿಗಳ ಆದರ್ಶ ಶ್ರೇಯೋಮಾರ್ಗ! ಈ ಮೂರು ಮಾರ್ಗಗಳ ಹೊರತಾಗಿ ಸುಮ್ಮ ಸುಮ್ಮನೇ ವಿದ್ಯೆ ಬಾರದು! ಗುರುಗಳನ್ನು ಗೌರವಿಸುವುದರಿಂದ, ಅವರಿಗೆ ಕೈಲಾದ ನೆರವು ನೀಡುವುದರಿಂದ ಜನ-ಶಿಷ್ಯರಿಗೆ ಧನ್ಯತಾಭಾವ! ತನಗೆ-ತನ್ನವರಿಗೆ ಸಂಸ್ಕಾರಲಾಭ! ಗುರುಗಳ ಮನಸ್ಥೈರ್ಯವೃದ್ಧಿ! ಮತ್ತೆ ಮತ್ತೊಬ್ಬ ಗರು ಹುಟ್ಟಲು ನಾಂದಿ!
ಕಲಿಸುವವರೆಲ್ಲಾ ಗುರುಗಳೇ. ಅಕ್ಷರ-ವಿದ್ಯೆ ಕಲಿಸುವವನು ಅಕ್ಷರ-ವಿದ್ಯಾಗುರು= ಶಿಕ್ಷಕ. ನಡೆ-ನುಡಿ=ಸಂಸ್ಕಾರ ಅಕ್ಷರ ಕಲಿಸುವ ತಾಯಿ ಮೊದಲ ಗುರು. ಕಳ್ಳತನ ಕಲಿಸುವವ ಕಳ್ಳಗುರು. ಸುಳ್ಳು ಕಲಿಸುವವ ಸುಳ್ಳಗುರು! ನಿಜಗುಣ ಶಿವಯೋಗಿಗಳು ತಮ್ಮ ಕೈವಲ್ಯ ಪದ್ಧತಿಯ ಜ್ಞಾನಪ್ರತಿಪಾದನಸ್ಥಲದ ಮೊದಲ ಪದ್ಯದ ಪಲ್ಲವಿಯಲ್ಲಿ ಹೀಗೆ ಹೇಳಿರುವರು;
ಆರು ತೆರನಾದ ಭಾವಕರಿಗನುಗುಣವಾಗಿ|
ತೋರುವ ಗುರುಕುಲದಿರವನು ಹೇಳುವೆನಿಂತೊಲಿದು||
ಸ್ತ್ರೀ-ಪುರುಷವಶ,ಶತ್ರುನಾಶ ಮೊದಲಾದವುಗಳನ್ನು ಮಾಡುವ, ಮಾಡಿಸುವ ಗುರು ನಿಷೇಧಗುರು. ಈ ಲೋಕ ಪರಲೋಕಸುಖ ಒದಗಿಸುವವನು, ಪುರೋಹಿತ ಮೊದಲಾದವನು ಕಾವ್ಯಗುರು. ಭೇದ ಅಳಿಸಿ ಸಮಾನತೆ ಬಿತ್ತಿ, ಕಳಬೇಡ ಕೊಲಬೇಡ ಎಂಬಿತ್ಯಾದಿ ಸಾಧನಾಮಾರ್ಗವನ್ನು ಹಿಡಿಸುವವನು ಸೂಚಕಗುರು. ವೇದ ಶಾಸ್ತ್ರಾದಿಗಳ ತತ್ತ್ವಾರ್ಥವನ್ನು ಚೆನ್ನಾಗಿ ಪ್ರತಿಪಾದಿಸುವ ಸಮರ್ಥವಿದ್ಯಾವಂತನು ವಾಚಕಗುರು. ಜೀವಾತ್ಮನೇ ಪರಮಾತ್ಮ, ಪರಮಾತ್ಮನೇ ಜೀವಾತ್ಮ. ಜಗವೆಲ್ಲ ಪರಮಾತ್ಮಮಯ-ಎಂದು ಅಭೇದ ಅದ್ವೈತ ತತ್ತ್ವವನ್ನು ಪ್ರತಿಪಾದಿಸುವವನು ಕಾರಕಗುರು. ಅಭೇದಭಾವವನ್ನು ಹೋಗಲಾಡಿಸಿ,ಪರಮಾತ್ಮಭಾವದಲ್ಲಿ ಮುಳುಗಿಸುವ ಮೂಲಕ, ಅತ್ಯಂತದುಃಖ ನಿವೃತ್ತಿ-ಪರಮಾನಂದ ಪ್ರಾಪ್ತಿಸ್ವರೂಪಮೋಕ್ಷಸ್ವರೂಪದಲ್ಲಿ ನೆಲೆನಿಲ್ಲಿಸುವಾತ ವಿಹಿತಗುರು.
ಏನ್‌ಗುರು? ಮೊಬೈಲ್ ಗುರು- ಎನ್ನುವ ಮಾತುಗಳು ಒಂದರ್ಥದಲ್ಲಿ ಇಂದು ಎಲ್ಲರೂ ಗುರುಗಳೇ ಆಗಿದ್ದಾರೆಂದು ಸಾರುವವು. ಹೆಜ್ಜೆ-ಹೆಜ್ಜೆಗೂ ಗುರುಗಳು! ಹಣ ಮಾಡುವ ದಂಧೆಯ ಗುರುಗಳಸಂಖ್ಯ!
ಗುರವೋ ಬಹವಃ ಸಂತಿ, ಶಿಷ್ಯವಿತ್ತಾಪಹಾರಕಾಃ|
ತಮೇಕಂ ದುರ್ಲಭಂ ಮನ್ಯೇ ಶಿಷ್ಯಹೃತ್ತಾಪಹಾರಕಮ್||’
ಆ ಈ ನೆಪದಲ್ಲಿ ಜನ-ಶಿಷ್ಯರ ಹಣ ಕೀಳುವ ಗುರುಗಳು ಬಹಳ. ಶಿಷ್ಯ-ಜನರ ಮನದ ತಾಪವನ್ನು, ಅಜ್ಞಾನಕತ್ತಲೆಯನ್ನು ಕಳೆಯುವ ಗುರು ಅತ್ಯಂತ ದುರ್ಲಭ-ಎನ್ನುವುದು ಗುರುಗೀತೆ. ಎಂಥ ಗುರುವನ್ನು ಆಶ್ರಯಿಸಬೇಕೆಂಬುದನ್ನು ನಾವು ಚೆನ್ನಾಗಿ ಮನಗಾಣಬೇಕು. ಸ್ವಾಮಿ ವಿವೇಕಾನಂದರು ತಮ್ಮ ಗುರು ಶ್ರೀರಾಮಕೃಷ್ಣರ ಹಾಸಿಗೆಯ ಕೆಳಗೆ ನಾಣ್ಯವನ್ನು ಬಚ್ಚಿಟ್ಟು, ಅವರ ಕಾಮಕಾಂಚನ ತ್ಯಾಗಗಳನ್ನು ಪರೀಕ್ಷಿಸಿದರಂತೆ! ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಗಳು ಆಂಧ್ರಪ್ರದೇಶದ ಮಂಗಲಗಿರಿಯನ್ನು ದಾಟಿ, ಮುಂದಕ್ಕೆ ಸಂಚರಿಸುವಾಗ ಒಂದು ಗುಹೆಯೊಳಗೆ ಸೋಮೇಶ್ವರನೆಂಬ ಬ್ರಾಹ್ಮಣನು ವಶೀಕರಣ ಮೊದಲಾದ ಕ್ಷುದ್ರಸಿದ್ಧಿಸಾಧನೆಯಲ್ಲಿಮುಳುಗಿದ್ದನು. ಅದನ್ನು ಕಂಡು ಸಿದ್ಧಾರೂಢರು ಆತನಿಗೆ ” ಈ ಕ್ಷುದ್ರ ಸಿದ್ಧಿಗಳು ತಾತ್ಕಾಲಿಕ ಸುಖ ನೀಡುವವಲ್ಲದೇ, ತಿರುವು ಮುರುವಾದರೆ ಪ್ರಾಣವನ್ನೇ ನುಂಗುವವು!” ಎಂದು ಎಚ್ಚರಿಸಿದರು. ಆಗ ಆತ “ನನಗೆ ಈ ವಿದ್ಯೆಯನ್ನು ಹೇಳಿಕೊಟ್ಟ ಗುರುವು, ಈ ಅಪಾಯವನ್ನು ತಿಳಿಸಲೇ ಇಲ್ಲ!” ಎಂದನು. ಆಗ ಸಿದ್ಧಾರೂಢರು “ಗುರುವನ್ನು ಪರೀಕ್ಷಿಸದೇ ಶರಣು ಹೊಕ್ಕಿದ್ದು ನಿನ್ನ ತಪ್ಪು” ಎಂದರಂತೆ. ನಮಗೇನುಬೇಕು? ಅದನ್ನು ಕೊಡಬಲ್ಲವರಾರು? ಎಂಬುದನ್ನು ಚೆನ್ನಾಗಿ ಅರಿಯಬೇಕು.
ವಾಹನ ಚಲಿಸಿದ ಮೇಲೆ ಪಡೆದ ಆ ವಾಹನದ ಟಿಕೆಟ್ ನಿಷ್ಫಲ. ಹಾಗೆಯೇ ಆಯುಷ್ಯ ಮುಗಿದ ಬಳಿಕ ಇಳಿವಯಸ್ಸಿನಲ್ಲಿ ಪಡೆಯುವ ಜ್ಞಾನದ ಫಲ ಕಡಿಮೆ. ಶಾಲಾ ಕಾಲೇಜುಗಳ ಅಧ್ಯಯನ ಬಾಲ್ಯ-ಯೌವನದಲ್ಲಿ ಶೋಭಿಸುವುದು, ಇಳಿವಯಸ್ಸಿನಲ್ಲಲ್ಲ. ಹಾಗೆಯೇ ಆಧ್ಯಾತ್ಮ ದೇವರು ಜಪ-ತಪ ಧ್ಯಾನ ಇದೆಲ್ಲಾ ಮುಪ್ಪಿನಲ್ಲಿ ಎಂಬ ಕಲ್ಪನೆ ತಪ್ಪು! ಆದ್ಯಾತ್ಮ ಜಪ ತಪ ಆದಿ ಸಾಧನೆಗಳೆಲ್ಲ ಬಾಲ್ಯ- ಯೌವನದಲ್ಲಿಯೇ ಸರಿ! ಇವು ಬದುಕ ಬುನಾದಿ! ತಳಪಾಯ ಸುಭದ್ರವಾಗಿದ್ದರೆ, ಅದರ ಮೇಲೆ ಅತಿಭವ್ಯ ಕಟ್ಟಡ ಕಟ್ಟಬಹುದು! ಇವು ಬದುಕ ಕಟ್ಟುವವು, ಬಾಳ ರೂಪಿಸುವವು. ಕೆಡದಂತೆ ರಕ್ಷಿಸುವವು. ಶ್ರೀರಾಮಕೃಷ್ಣ ಪರಮಹಂಸರು ನೀಡಿದ ಈ ಉದಾಹರಣೆ ನೋಡಿ:
ಹಾಲನ್ನು ನೀರಿಗೆ ಹಾಕಿದರೆ ಅದು ತನ್ನತನವನ್ನು ಕಳೆದುಕೊಳ್ಳುವುದು!
ಅದನ್ನೇ ಸಂಸ್ಕರಿಸಿ ಬೆಣ್ಣೆಮಾಡಿ ಹಾಕಿದರೆ, ತನ್ನತನ ಕಳೆದುಕೊಳ್ಳದು! ಆಧ್ಯಾತ್ಮ ಸಾಧಿಸುತ್ತಾ, ಸಂಸಾರ ನಡೆಸಿ ನೋಡಿ ಅದರ ಸೊಗಸ!
ಶಂಕರಾಚಾರ್ಯರ ಈ ಮಾತು ಇಲ್ಲಿ ಸ್ಮರಣೀಯ :
ಬಾಲಸ್ತಾವತ್‌ಕ್ರೀಡಾಸಕ್ತಃ ತರುಣಸ್ತಾವತ್ ತರುಣೀರಕ್ತಃ|
ವೃದ್ಧಸ್ತಾವತ್ ಚಿಂತಾಸಕ್ತಃ
ಪರೇ ಬ್ರಹ್ಮಣಿ ಕೋಪಿ ನ ಸಕ್ತಃ||
ಹುಡುಗ-ಹುಡುಗಿ ಆಟದಲ್ಲಿ ತಲ್ಲೀನ. ಯವಕ -ಯುವತಿ ಸರಸದಲ್ಲಿ, ಮುದುಕ-ಮುದುಕಿ ಚಿಂತೆಯಲ್ಲಿ ಮಗ್ನ! ಹೀಗಾದಲ್ಲಿ ಪರಬ್ರಹ್ಮದಲ್ಲಿ ಯಾರೂ ಮುಳುಗರು! ಆದ್ದರಿಂದ ಆಧ್ಯಾತ್ಮವನ್ನು ಮುಪ್ಪಾವಸ್ಥೆಗೆಂದು ತಳ್ಳಕೊಡದು. ಬಸವಣ್ಣನವರ ಈ ವಚನ ಇಲ್ಲಿ ಮನನೀಯ;
ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲ ಮೇಲೆ ಕೈಯನೂರಿ, ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,ಮೃತ್ಯು ಮುಟ್ಟದ ಮುನ್ನ,
ಪೂಜಿಸು ನಮ್ಮ ಕೂಡಲಸಂಗಮದೇವನ.
ಸದ್ಗುರು ಶ್ರೀಸಿದ್ಧಾರೂಡರು ಏಳು ವರ್ಷದವನಿರುವಾಗಲೇ ಮನೆ ತೊರೆದು ಗುರುಶೋಧನೆಗೆ ಹೊರಟರು.ಕಾಡು-ಮೇಡುಗಳನ್ನು ತುಳಿದು, ಹಸಿವು-ಬಿಸಿಲು-ಮಳೆ-ಚಳಿಗಳನ್ನು ಸಹಿಸಿ, ಅಮರಗುಂಡದ ಗಜದಂಡಶಿವಯೋಗಿಗಳ ಬಳಿ ಬಂದರು. ಹನ್ನೆರಡು ವರ್ಷಗಳ ಕಾಲ, ಗುರುಗಳ, ಅವರ ಶಿಷ್ಯರ ಸೇವೆ, ಪಾತ್ರೆ ತೊಳೆಯುವ, ಕಟ್ಟಿಗೆ ಒಡೆಯುವ, ನೀರು ತರುವ, ಕುದುರೆ ಸಾಕುವ ಇತ್ಯಾದಿ ಸೇವೆ ಮಾಡುತ್ತಾ ಆಧ್ಯಾತ್ಮದ ಅಧ್ಯಯನಗೈದರು! ಗುರುಮುಟ್ಟಿ ಮಹಾಗುರುವಾದ ಸದ್ಗುರುಶ್ರೀ ಸಿದ್ಧಾರೂಢರ ಅನುಗ್ರಹ ಸರ್ವರಿಗಿರಲಿ!