ಬೆಂಗಳೂರು,ಜು,೨೦: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗುತ್ತಾರೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಂದಿದ್ದ ವಲಸಿಗರು ರಹಸ್ಯಸಭೆ ನಡೆಸಿದ್ದಾರೆ
ಸಚಿವರಾದ ಡಾ,ಕೆ,ಸುಧಾಕರ್,ಬೈರತಿ ಬಸವರಾಜ್,ಕೆ.ನಾರಾಯಣಗೌಡ,ಬಿ.ಸಿ.ಪಾಟೀಲ್ ಎಸ್.ಟಿ.ಸೋಮಶೇಖರ್ ಮೊದಲಾದವರು ಖಾಸಗಿ ಹೊಟೇಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿ ಮುಂದಿನ ನಡೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸರ್ಕಾರ ಹಾಗೂ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಗೊತ್ತಾಗಿದೆ. ಒಂದು ವೇಳೆ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಭವಿಷ್ಯದಲ್ಲಿ ತಮ್ಮ ಸ್ಥಾನಮಾನದ ಗತಿ ಏನು ಎಂದು ಕೆಲವು ಸಚಿವರು ಆತಂಕಗೊಂಡಿದ್ದರಿಂದ ಈ ಸಭೆಯನ್ನು ಕರೆಯಲಾಗಿತ್ತು ಎನ್ನಲಾಗಿದೆ.
ನಾವು ಯಡಿಯೂರಪ್ಪ ಅವರನ್ನು ನಂಬಿ ಕಾಂಗ್ರೆಸ್-ಜೆಡಿಎಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದೇವು. ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದೇವೆ. ಈಗ ಏಕಾಏಕಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮುಂದೆ ಬರುವವರು ನಮಗೆ ಸರ್ಕಾರ ಹಾಗೂ ಪಕ್ಷದಲ್ಲಿ ಯಾವ ಸ್ಥಾನಮಾನ ನೀಡಬಹುದು ಎಂದು ಸಚಿವರು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೆ ಇಡೀ ಸಂಪುಟವೇ ಬಿದ್ದು ಹೋಗಲಿದ್ದು, ಮತ್ತೆ ಹೊಸದಾಗಿ ಸಂಪುಟ ವಿಸ್ತರಣೆಯಾಗಬೇಕಾಗುತ್ತದೆ. ಆಗ ನಮ್ಮನ್ನು ತೆಗೆದುಕೊಳ್ಳುತ್ತಾರೋ ಇಲ್ಲವೆ ಪಕ್ಷ ಸಂಘಟನೆಗೆ ನಿಯೋಜನೆ ಮಾಡುತ್ತಾರೋ ಎಂಬ ಆತಂಕ ಮಿತ್ರಮಂಡಳಿಗೆ ಕಾಡಿದೆ.
ಯಡಿಯೂರಪ್ಪ ಅವರು ನಂಬಿದವರನ್ನು ಕೈಬಿಟ್ಟಿರಲಿಲ್ಲ. ಈಗ ಸಂಘ ಪರಿವಾರ ಇಲ್ಲವೇ ಆರೆಸ್‌ಎಸ್ ಹಿನ್ನೆಲೆಯಿಂದ ಬಂದವರು ಮುಖ್ಯಮಂತ್ರಿಯಾದರೆ ಸಹಜವಾಗಿ ಸಂಘ ಪರಿವಾರ ಆರೆಸ್‌ಎಸ್ ಹಿನ್ನೆಲೆ ಹಾಗೂ ಪಕ್ಷ ನಿಷ್ಠರಿಗೆ ಮಣೆ ಹಾಕಬಹುದು. ಇದರಿಂದ ತಮ್ಮ ಭವಿಷ್ಯಕ್ಕೆ ಎಲ್ಲಿ ಕಲ್ಲು ಬೀಳುತ್ತದೆಯೋ ಎಂಬ ಆತಂಕದಿಂದಲೇ ಚರ್ಚೆ ನಡೆಸಿದ್ದಾರೆ.
ಸಿಎಂ ಬದಲಾವಣೆ-ಬೆಜಿಪಿ ವಲಸಿಗಸಚಿವರ ರಹಸ್ಯಸಭೆ
Share