ಡಾ ಆರೂಢಭಾರತೀ ಸ್ವಾಮೀಜಿ
ಬೆಂಗಳೂರು, ಜು,20:ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿಯ ಶ್ರೀ ನಿಜಗುಣ ಶಿವಯೋಗಿ ಕ್ಷೇತ್ರದ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರು(88) ಇಂದು ಬೆಳಿಗ್ಗೆ 2 ಘಂಟೆಗೆ ಮೈಸೂರಿನಲ್ಲಿ ಲಿಂಗೈಕ್ಯರಾದರು. ಇಂದು ಮಧ್ಯಾಹ್ನ ಚಿಲಕವಾಡಿಯ ಶ್ರೀ ನಿಜಗುಣ ಕ್ಷೇತ್ರದಲ್ಲಿ ಹರ ಗುರು ಚರಮೂರ್ತಿಗಳ ಭಕ್ತಾದಿಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಸಮಾಧಿ ಮಾಡಲಾಗುವುದು. ಶ್ರೀಗಳು ವಯೋವೃದ್ಧ ಹಿರಿಯ ಸಂನ್ಯಾಸಿಗಳು. ಗೃಹಸ್ಥಾಶ್ರಮದಲ್ಲಿ ವಕೀಲರಾಗಿದ್ದವರು. ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾ ಸ್ವಾಮಿಗಳವರಿಂದ ಸಂನ್ಯಾಸ ದೀಕ್ಷೆ ಪಡೆದವರು. ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿಯಲ್ಲಿನ ಶ್ರೀ ನಿಜಗುಣ ಶಿವಯೋಗಿಗಳ ತಪೋ ಭೂಮಿಯನ್ನು ಅಭಿವೃದ್ಧಿಪಡಿಸಿದವರು. ನಿಜಗುಣ ಶಿವಯೋಗಿಗಳ ಮೂಲ ಗ್ರಂಥಗಳನ್ನು ಪ್ರಕಟಪಡಿಸಿ ಪ್ರಚುರಪಡಿಸಿದವರು. ಮಹಾ ವಿದ್ವಾಂಸರು. ಕನ್ನಡದ ಛಂದಶ್ಶಾಸ್ತ್ರದಲ್ಲಿ ಅವರಿಗಿದ್ದ ವಿದ್ವತ್ತು ಇನ್ನಾರಿಗೂ ಇರದು. ಶಿವಕುಮಾರ ಚರಿತೆ, ನಿಜಗುಣ ಮಹಾಕಾವ್ಯ, ಛಂದಶ್ಶಾಸ್ತ್ರದ ಮೇರು ಕೃತಿ ಅವರನ್ನು ಅಮರರನ್ನಾಗಿಸಿವೆ.ವಿದ್ವತ್ತಿಗೆ ಅವರು ತೋರುತ್ತಿದ್ದ ಗೌರವ, ಕಾವ್ಯ ಶಾಸ್ತ್ರ ವಿಷಯಕವಾದ ಅವರ ವಿಚಿಕಿತ್ಸಾ ಗುಣ ಅಸಾಧಾರಣ ಹಾಗೂ ಅನುಪಮ! ಕೆ. ಕೃಷ್ಣಮೂರ್ತಿಯಂಥ ಅನೇಕ ಹಿರಿಯ ವಿದ್ವಾಂಸರ ಜೊತೆಗೆ ಅವರು ನಿಕಟ ಸಂಪರ್ಕ ಹೊಂದಿದ್ದರು. ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳೊಂದಿಗೆ ಅವರದು ಮಧುರ ಬಾಂಧವ್ಯ.ನನ್ನನ್ನು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಪರಿಚಯಿಸಿದ್ದೇ ಅವರು. ನನ್ನನ್ನು ಅವರ ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳುವ ಅವರ ಬಯಕೆ ಈಡೇರಲಿಲ್ಲ.ಕೊನೆಗೆ ನಮ್ಮ ವಿದ್ಯಾರ್ಥಿಯೊಬ್ಬರನ್ನು (ಈಗ ಬಾಲ ಷಡಕ್ಷರಿ ಸ್ವಾಮೀಜಿ) ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳುವಲ್ಲಿ ಸಫಲರಾದರು. ಆದರೂ ನನ್ನ ಮೇಲೆ ಅವರಿಗೆ ಬಲು ಅಭಿಮಾನ. ನಾನಿರುವಲ್ಲಿಗೇ ಅವರು ಹಲವಾರು ಬಾರಿ ಹುಡುಕಿಕೊಂಡು ಬಂದುದುಂಟು.ಶತಕಗಳ ಹಿಂದೆಯೇ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಬದುಕುವ ಆಶೆಗೆ ಸಂನ್ಯಾಸಿ ಜೋತು ಬೀಳಬೇಕೇ? ಎಂದು ಪ್ರಶ್ನಿಸಿದ ಅವರು ನಯವಾಗಿ ಅದನ್ನು ತಳ್ಳಿ ಹಾಕಿದ ಮಹಾಮಹಿಮರು. ದೈವ ಶಕ್ತಿ ಅವರನ್ನು ಇಲ್ಲಿಯವರೆಗೂ ಬದುಕಿಸಿತು! ಕಳೆದ ಮೂರು ವರ್ಷಗಳ ಹಿಂದೆ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ವಿದ್ವತ್ತಿನ ಒಬ್ಬ ಹಿರಿಯ ಸಂನ್ಯಾಸಿಯ ಅಗಲಿಕೆಯಿಂದ ಸಮಾಜಕ್ಕೆ ಆಗುವ ನಷ್ಟವನ್ನು ಊಹಿಸಲಾಗದು! ಇಂಥ ಮಹಾತ್ಮರು ಮತ್ತೆ ಮತ್ತೆ ಹುಟ್ಟಿ ಬರಲೆಂದು ಪ್ರಾರ್ಥಿಸುತ್ತಾ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರ ಅಗಲಿದ ಚರಣ ಕಮಲಗಳಲ್ಲಿ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಿಸುತ್ತೇನೆ.