ಕೊಲಂಬೊ,ಜು,೧೯: ಭಾರತ ಕ್ರಿಕೆಟ್ ತಂಡದ ನಾಯಕ ಶಿಖರ್ ಧವನ್ ಏಕದಿನ ಕ್ರಿಕಟ್‌ನಲ್ಲಿ ಆರಂಭಿಕನಾಗಿ ೧೦ ಸಾವಿರ ರನ್ ಬಾರಿಸುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ ೮೬ರನ್(೯೫ ಎಸೆತ, ೬ ಬೌಂಡರಿ, ೧ ಸಿಕ್ಸ್) ಸಿಡಿಸಿ ಮಿಂಚಿದ್ದರು. ಇದೇ ಪಂದ್ಯದಲ್ಲಿ ೧೦,೦೦೦ರನ್ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಬಳಿಕ ಆರಂಭಿಕನಾಗಿ ೧೦ ಸಾವಿರ ರನ್ ಸಿಡಿಸಿದ ಭಾರತದ ೫ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ ಧವನ್ ಶ್ರೀಲಂಕಾ ವಿರುದ್ಧ ೧೦೦೦ ರನ್ ಪೂರೈಸಿ ಸಂಭ್ರಮಪಟ್ಟರು. ಅದಾದ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ೬,೦೦೦ ರನ್ ಸಿಡಿಸಿದ ೧೦ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.
ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ಭಾರತ ತಂಡದ ಆಟಗಾರರರಾದ ಸಚಿನ್ ತೆಂಡೂಲ್ಕರ್ ೧೮,೪೨೬ರನ್, ವಿರಾಟ್ ಕೊಹ್ಲಿ ೧೨,೧೬೯ರನ್, ಸೌರವ್ ಗಂಗೂಲಿ ೧೧,೩೬೩ರನ್, ರಾಹುಲ್ ದ್ರಾವಿಡ್ ೧೦,೮೮೯ರನ್, ಎಂ.ಎಸ್ ಧೋನಿ ೧೦,೭೭೩ರನ್, ಮೊಹಮ್ಮದ್ ಅಜರುದ್ದೀನ್ ೯,೩೭೮ರನ್, ರೋಹಿತ್ ಶರ್ಮಾ ೯,೨೦೫ರನ್, ಯುವರಾಜ್ ಸಿಂಗ್ ೮,೭೦೧ ಮತ್ತು ವಿರೇಂದ್ರ ಸೆಹ್ವಾಗ್ ೮,೨೭೩ರನ್ ಇದೀಗ ಧವನ್ ೬,೦೬೩ ಸಿಡಿಸಿದ್ದಾರೆ. ಅದಲ್ಲದೆ ಅತೀ ವೇಗವಾಗಿ ೬,೦೦೦ರನ್ ಸಿಡಿಸಿದ ಎರಡನೇ ಆಟಗಾರನಾಗಿ ಧವನ್ ಗುರುತಿಸಿಕೊಂಡಿದ್ದಾರೆ.
ಧವನ್ ೧೪೦ ಇನ್ನಿಂಗ್ಸ್‌ಗಳಿಂದ ೬,೦೦೦ ರನ್ ಪೂರೈಸಿದರೆ, ವಿರಾಟ್ ಕೊಹ್ಲಿ ೧೩೬ ಇನ್ನಿಂಗ್ಸ್ ಗಳಿಂದ ೬,೦೦೦ರನ್ ಚಚ್ಚಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಮುಂದಿನ ಟಿ೨೦ ವಿಶ್ವಕಪ್‌ನಲ್ಲಿ ಭಾರತ ತಂಡದ ಆರಂಭಿಕ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ.