
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಸಂದಿರುವುದನ್ನ ಋಣ ಮಂಕುತಿಮ್ಮ.
ಅನ್ನ=ಭೋಗ. ಋಣ=ಸಂಬಂಧ. ಪಾರಣಿ/ಣೆ=ವ್ರತ ಉಪವಾಸದ ನಂತರದ ಊಟ. ಬದುಕು ಅನಿಶ್ಚಿತ. ಇವರು ಹೀಗಿರುವರೆಂದು ಹೇಳಲಾಗದು! ಏರಿಳಿವು ತಪ್ಪದು. ಬೆಳಿಗ್ಗೆ ಮದುವೆ, ಸಂಜೆ ಮರಣ! ನಿನ್ನೆ ಹುಟ್ಟು, ಇಂದು ಸಾವು, ನಾಳೆ ಸತ್ತವರ ತಿಥಿ! ಇಂದು ಮೃಷ್ಟಾನ್ನ ಭೋಜನ, ನಾಳೆ ಭಿಕ್ಷಾನ್ನ, ಅನ್ನಕ್ಕೆ ಪರದಾಟ! ಇಂದು ಉಪವಾಸ, ನಾಳೆ ಊಟ! ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ! ಧಾನ್ಯ ಧಾನ್ಯ ಮೇ ಲಿಖಾ ಹೈ ಖಾನೇವಾಲಾ ಕಾ ನಾಮ್! ಬೆಳೆದ ಮಗನ/ಮಗಳ ಪ್ರಾಣ ಇನ್ನಿಲ್ಲ! ಸಿಂಹಾಸನ ಏರಬೇಕಿದ್ದ ಶ್ರೀರಾಮ ಕಾಡಿಗೆ ನಡೆದ! ಮಹಾರಾಣಿ ಆಗಬೇಕಿದ್ದ ಸೀತೆ, ನಾರುಬಟ್ಟೆ ಉಟ್ಟು ರಾಮನೊಂದಿಗೆ ಹೆಜ್ಜೆ ಹಾಕಿದಳು!ಇಂದ್ರ ಸಿಂಹಾಸನ ಇಳಿದ! ಬಲಿಚಕ್ರವರ್ತಿ ಸಿಂಹಾಸನ ಏರಿದ! ಮುಖ್ಯಮಂತ್ರಿ ಆಗುವನು, ರಾಜೀನಾಮೆ ನೀಡುವನು!ಮನೆಯೊಡೆಯ ಬಾಡಿಗೆದಾರನಿಗೆ ಮನೆ ಮಾರಿ ತಾ ಅಲ್ಲಿ ಬಾಡಿಗೆದಾರ! ಸೇವಕ ಮಾಲೀಕ, ಮಾಲೀಕ ಸೇವಕ! ಯಾರು ಏನು ಅನುಭವಿಸಬೇಕಾಗಿದೆಯೋ ತಿಳಿಯದು, ಅನುಭವಿಸಲೇಬೇಕು. ನೀರ ಮೇಲಿನ ಬೆಂಡು ನೀರು ಹೊಯ್ದಾಡಿದಂತೆ, ಹೊಯ್ದಾಡಲೇಬೇಕು! ದೈವಲೀಲೆಯ ನಾವು ನೀವು ಜಗವೆಲ್ಲ, ದೈವವಶ! ಏನೇ ಬರಲಿ, ಯತ್ನ ನಮ್ಮದು, ಫಲ ದೈವದ್ದು, ತಲೆ ಬಾಗಿ ಸ್ವೀಕರಿಸುವ ತಯಾರಿ ನಮ್ಮದಾಗಿರಲಿ!!