ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಜೀವನವಿಧಾನ.
ಹಿರಿಯರು ಹೇಳಿದ್ದು :ನೂರು ವರ್ಷದ ಆಯುಷ್ಯವನ್ನು ನಾಲ್ಕು ಸಮಭಾಗ ಮಾಡಿ. ಮೊದಲ ಭಾಗ ಶಿಕ್ಷಣ – ಸಂಸ್ಕಾರ ಕಲಿಕೆಗಿರಲಿ. ಎರಡನೆಯ ಭಾಗ ಸಂಸಾರಹೊಣೆ ಸಂಪಾದನೆಗಿರಲಿ. ಮೂರನೆಯ ಭಾಗ ಧ್ಯಾನ ಜಪ ತಪ ಸೇವೆ ಧರ್ಮ ಅಧ್ಯಾತ್ಮಕ್ಕಿರಲಿ. ನಾಲ್ಕನೆಯ ಭಾಗ ತ್ಯಾಗ – ಆನಂದಮಯ! ಹೀಗಿಲ್ಲದಿರೆ ಬಾಳು ಚಿಂತೆ ದುಃಖದ ಸಾಗರ!
ಪ್ರಥಮೇ ವಯಸಿ ನಾಧೀತಂ.
ದ್ವಿತೀಯೇ ನಾರ್ಜಿತಂ ಧನಂ.
ತೃತೀಯೇ ನ ತಪಸ್ತಪ್ತಂ.
ಚತುರ್ಥೇ ಕಿಂ ಕರಿಷ್ಯತಿ?.
ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಈ ಮೂರು ಆಶ್ರಮಗಳನ್ನು ಎಲ್ಲರೂ ಕ್ರಮವಾಗಿ ಒಂದೊಂದು ಆಯುಷ್ಯಭಾಗದಲ್ಲಿ ಪಾಲಿಸಿ, ಕೊನೆಗೆ ಸಂನ್ಯಾಸಿಗಳಾಗಬೇಕು! ಸಂನ್ಯಾಸದ ಗಂಧ ಗಾಳಿ ಅರಿಯದವರಿಗೆ ಇದು ದಿಗ್ಭ್ರಮೆ! ಕಾಲಾನುಗುಣ ಪರಿಷ್ಕಾರ ಒಪ್ಪಬೇಕು. ಇಂದು ಕಾಡಿಗೆ ಹೋಗಿ ವಾನಪ್ರಸ್ಥರಾಗುವುದು ದುಸ್ಸಾಧ್ಯ.ಐವತ್ತರ ನಂತರ, ದಂಪತಿ ಮನೆಯಲ್ಲೇ ಇದ್ದು, ಮಂಚದ ಸುಖ ಬಿಟ್ಟು, ಮಕ್ಕಳಿಗೆ ಸಂಸ್ಕಾರ ಹೊಣೆ ಹೊರಿಸಿ, ಮಾರ್ಗದರ್ಶನ ಧರ್ಮ ಅಧ್ಯಾತ್ಮದತ್ತ ಮುಖ ಮಾಡಿ! ಬಾಂಧವ್ಯ ತೊರೆದು, ಕಾವಿ ತೊಟ್ಟು, ಮಠ ಸೇರುವುದೇ ಸಂನ್ಯಾಸವಲ್ಲ! ಭಾವ ಅಂತರಂಗ ತ್ಯಾಗಮಯ ಸಂನ್ಯಾಸವಾಗಬೇಕು! ಸಾವಿನ ದವಡೆಯಲ್ಲೂ ಕಾಮಕಾಂಚನದ ಬಾಳು ಎಂಥದ್ದು?
ಶಿಸ್ತಲಿ ಬಾಳೋಣ, ಒಳ ಸಂನ್ಯಾಸಿಗಳಾಗೋಣ!!