ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ.
ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ, ಎಚ್ಚರ ತಪ್ಪಿ, ಅಸಂಬದ್ಧ ಮಾತಾಡಿ, ಒದೆ ತಿಂದು, ರಸ್ತೆ – ಚರಂಡಿಯಲ್ಲಿ ಬಿದ್ದು ಉರುಳಾಡಿ, ತನ್ನ – ಕುಟುಂಬದ ಮರ್ಯಾದೆಯ ಹರಾಜಿಗಿಕ್ಕುವನು! ಮತ್ತು ಬರಿಸುವ ಕುಡಿತ ಮೈ ಮರೆಸುವುದು. ದಿನದ ದೈಹಿಕ ಶ್ರಮ – ವೇದನೆ, ಮಾನಸಿಕ ದುಗುಡ ಮರೆಯಲು ಈ ಚಟದಾಸರಾಗುವುದುಂಟು!ಆದರೆ ಇದು ಪರಿಹಾರವಲ್ಲ. ಕುಡಿತ ಆರೋಗ್ಯ ನುಂಗುವುದು, ಮರ್ಯಾದೆ ಕಳೆಯುವುದು, ಸಂಪಾದನೆಯ ಕಸಿಯುವುದು, ಸಾಲಕೂಪಕ್ಕೆ ತಳ್ಳುವುದು, ಕುಟುಂಬ ಬಾಂಧವ್ಯ ಛಿದ್ರಗೊಳ್ಳುವುದು, ಗಂಡ ಹೆಂಡತಿ ಮಕ್ಕಳು ತಂದೆ ತಾಯಿ ಅಜ್ಜ ಅಜ್ಜಿಯರಲ್ಲಿ ಪರಸ್ಪರ ಹಲ್ಲೆ ದೌರ್ಜನ್ಯ ತಾಂಡವವಾಡುವುದು! ಹೆಂಡತಿ ಮಕ್ಕಳು ಉಪವಾಸಮಾತ್ರವಲ್ಲ, ಕೊಲೆಗಳೇ ನಡೆದು ಹೋಗುವವು! ಕಾರ್ಕಳ ಬಳಿಯ ಮದ್ಯವ್ಯಸನಿ ವಿಕ್ಟರ್ ಡಿಸೋಜಾ, ಕುಡಿದ ಮತ್ತಿನಲ್ಲಿ ಮಗನನ್ನೇ ಇರಿದು ಕೊಂದ! ದೈಹಿಕ ಶ್ರಮಕ್ಕೆ ವಿಶ್ರಾಂತಿ ಮದ್ದು, ಮಾನಸಿಕ ದುಗುಡಕ್ಕೆ ವಿಚಾರ ಧ್ಯಾನ ಓದು ಜಪ ತಪಾದಿ ಮದ್ದು! ಕುಡಿತವಲ್ಲ!
ಕುಡಿತವ ತೊರೆಯೋಣ, ನೆಮ್ಮದಿಯಿಂದ ಬಾಳೋಣ!!