ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ
ಬದುಕಿಗೆ ಬೇಕು ನೆಲ ಜಲ ಗಾಳಿ ಆಕಾಶ ಅಗ್ನಿ ಆಹಾರ! ಪರಮಾತ್ಮ ಸೃಜಿಸಿ ಸೃಜಿಸುತ್ತಲಿಹನು. ಎಲ್ಲವನು ತಾನು ತನ್ನವರೇ ನುಂಗುವ ದಾಹ ನರನಿಗೆ. ಹೊಟ್ಟೆ ತುಂಬುವಷ್ಟು ಉಣ್ಣುವ ತವಕ ತಪ್ಪಲ್ಲ! ತಾನು ತನ್ನವರೇ ಉಣುವ ಆಶೆ ಇಣುಕುವುದು ತಪ್ಪು! ಪಂಕ್ತಿಯಲಿ ಲಾಡು ಕೈಚೀಲ ಸೇರುವುದು! ಇತರ ಜೀವರಾಶಿಗೆ ಅಂದಂದಿನ ಆಹಾರ, ಸ್ವಲ್ಪ ಮೈ ಸುಖ ಸಿಕ್ಕರೆ ಸಾಕು, ಜೀವನ ಸಂತೃಪ್ತ! ಮಾನವನಿಗೆ ತಾ ಸತ್ತರೂ ತನ್ನ ಮುಂದಿನವರೂ ತಿನ್ನುವಷ್ಟು ಕೂಡಿಹಾಕುವ ದಾಹ! ಅದಕ್ಕಿಂತ ಮೈತುಂಬಾ ಚಿನ್ನ ವೈವಿಧ್ಯ ವಸ್ತ್ರ ಮನಬಂದಂತೆ ಧರಿಸುವ ಆಶೆ ಅನಗತ್ಯ ಅತಿ ತೀಕ್ಷ್ಣ! ಕು. ಜಯಲಲಿತಾ ಅವರ ನಿಧನಾನಂತರ ಅವರ ಬಟ್ಟೆ ಆಭರಣ ಚಪ್ಪಲಿರಾಶಿ ಕಂಡವರು ಕಂಗಾಲು! ಇದಕ್ಕಿಂತ ನರನ ಮೈಸುಖದ ಚಪಲ ಆಘಾತಕಾರಿ! ಎಳೆಹಸುಳೆ ಮಲಮಗತಾಯಿ ಯಾರೂ ಸಾಲರು ಕಾಮಕ್ಕೆ! ಹೆಸರಿನ ಗೀಳು ಇವೆಲ್ಲಕ್ಕೂ ತೀಕ್ಷ್ಣ! ಇಷ್ಟು ದಾಹದ ನರ ಏನೆಲ್ಲ ಪಡೆದರೂ ತೃಪ್ತನಾಗಿಹನೇ? ನಿಶ್ಚಿಂತನಿಹನೇ? ಇಲ್ಲ! ಅತಿ ದಾಹ ಮತ್ತಷ್ಟು ದಾಹಕ್ಕೆ ಮೂಲ! ದಾಹ ಈಡೇರಿಕೆಗೆ ಅಡ್ಡದಾರಿ ತುಳಿತ! ಆಗಬಾರದ್ದೆಲ್ಲ ಆಗುವುದು! ಆಹುತಿ ಪಡೆಯಲು ಹೋಗಿ, ಆಹುತಿ ಆದವರು ಉಂಟು! ಕರೀಂಲಾಲ್ ತೆಲಗಿಯಂಥವರು ಜೈಲಿನಲ್ಲಿಯೇ ಅಂತ್ಯ ಕಂಡದ್ದು ಉಂಟು! ಅದಕ್ಕೇ ಡಿವಿಜಿ ಹೇಳಿದ್ದು, “ತೀಕ್ಷ್ಣತಮ ದಾಹ ತನ್ನನ್ನೇ ತಿನ್ನುವುದು “ಎಂದು. ದಾಹವಿರಲಿ, ಅತಿ ದಾಹ ಬೇಡ. ಅಲ್ಪತೃಪ್ತಿಯೇ ನಮ್ಮ ನೆಮ್ಮದಿಯ ಬೀಜ!