
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
“ಇದು ನನ್ನ ಸಾಧನೆ, ಜನ ನೆನಪಿಟ್ಟುಕೊಳ್ಳಬೇಕು, ಹೊಗಳಬೇಕು, ಪತ್ರಿಕೆಯಲ್ಲಿ-ಕಲ್ಲಿನಲ್ಲಿ, ಅಲ್ಲಿಲ್ಲಿ ನನ್ನ ಹೆಸರಿರಬೇಕು” ಇದು ಬಹುತೇಕರ ಬಯಕೆ. ಇದಕ್ಕಾಗಿ ಏನೇನೋ ಕಸರತ್ತು! ಹೆಸರಿಲ್ಲದ್ದಕ್ಕಾಗಿ, ತನ್ನ ಸಂಪರ್ಕಿಸದಿದ್ದಕ್ಕಾಗಿ, ರಸ್ತೆ ಸೇತುವೆ ಕಟ್ಟಡ ಉದ್ಯಾನಾದಿಗಳ ನಿರ್ಮಾಣ, ಫಲಕ ಅಳವಡಿಕೆ, ಉದ್ಘಾಟನೆಗಳ ರದ್ದು! ಆದರೆ ನೆನಪಿರಲಿ :ಇದಾವುದೂ ಫಲಿಸದು. ವಿಶಾಲ ಜಗತ್ತಿನಲ್ಲಿ ನಾವು ಅದಾವ ಲೆಕ್ಕ? ಸಮುದ್ರದಲ್ಲಿ ಹನಿ ನೀರು ನಾನೆಂದರಾದೀತೇ? ಅಕ್ಕಿಯಲ್ಲಿ ಅನ್ನವನ್ನು ಮೊದಲು ಕಂಡವನ, ಪ್ರಪ್ರಥಮ ಅಕ್ಷರ ಲಿಪಿ ಕಂಡು ಹಿಡಿದವನ ಹೆಸರಿಂದು ಉಳಿದಿದೆಯೇ? ಇಂಥ ಅಸಂಖ್ಯಾತರ ಹೆಸರುಗಳಿಂದು ಅಳಿದಿವೆ. ಇನ್ನು ನಮ್ಮ ಹೆಸರು- ಕೀರ್ತಿ ಶಾಶ್ವತವಾಗುವುದೇ? ಹಳೆಯ ನೀರು ಹೋಗುತ್ತೆ, ಹೊಸ ನೀರು ಬರುತ್ತೆ! ನಿನ್ನೆ ಯಾರದ್ದೋ? ಇಂದು ನಮ್ಮದು. ನಾಳೆ ಇನ್ನಾರದ್ದೋ? ಹೆಸರಿನ ಗೀಳೇಕೆ? ವಿದ್ಯಾರ್ಥಿ ವಿಜ್ಞಾನಿ ಸಾಹಿತಿ ಕಲಾವಿದರ ಸಾಧನೆ,ಶಾಸಕ ಮಂತ್ರಿ ಮೊದಲಾದವರ ಆಯ್ಕೆ,ಸರ್ಕಾರ ಸಂಘ ಸಂಸ್ಥೆ ಮಠ ಮಂದಿರಾದಿಗಳ ರಸ್ತೆ ಕಟ್ಟಡಾದಿಗಳ ಅಭಿವೃದ್ಧಿ, ಮತ್ತಾವ ಸಾಧನೆಯೇ ಆಗಿರಲಿ, ಅದು ಯಾವೊಬ್ಬ ವ್ಯಕ್ತಿಯದೂ ಅಲ್ಲ. ಅನೇಕ ಜನರ ತ್ಯಾಗ ಬೆವರಿನ ಹನಿ ಅಲ್ಲಿ ಅಡಗಿದೆ! ಇದನ್ನು ಮನಗಂಡೇ, ವ್ಯಾಸ ವಾಲ್ಮೀಕಿ ಭಾಸ ಕಾಳಿದಾಸಾದಿ ಕವಿಗಳು ತಮ್ಮ ಕೃತಿಗಳಲ್ಲಿ ತಮ್ಮದೇನನ್ನೂ ಹೇಳಲಿಲ್ಲ! ಅದೆಲ್ಲಿ?, ಇಂದಿನ ಬ್ಯಾನರ್ ಸಂಸ್ಕೃತಿ ಎಲ್ಲಿ? ಹೆಸರು ಮಾಡಬಾರದು, ಉತ್ಸಾಹ ಕಳೆದುಕೊಳ್ಳಬೇಕು, ಎಂದಲ್ಲ! ಉತ್ತಮ ಕಾರ್ಯಗಳನ್ನು ಮಾಡುತ್ತಾ ನಡೆದರಾಯಿತು! ಹೆಸರು ಬಂದರೇನು? ಬಾರದಿದ್ದರೇನು? ಆತ್ಮ ಸಂತೋಷ ಸಾಲದೇ?