ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಎಲ್ಲರೊಳಗೊಂದಾಗು ಮಂಕುತಿಮ್ಮ.
ಡಿವಿಜಿ ಎಂದೇ ಖ್ಯಾತರಾದವರು ಡಿ. ವಿ. ಗುಂಡಪ್ಪ. ಇವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ! ಬಾಲ್ಯ ಯೌವನ, ರೋಗಿ ನಿರೋಗಿ, ಶಿಕ್ಷಿತ ಅಶಿಕ್ಷಿತ, ಬಡವ ಶ್ರೀಮಂತ, ಸ್ತ್ರೀ ಪುರುಷ, ಆ ಧರ್ಮ ಈ ಧರ್ಮ, ವೈವಿಧ್ಯದ ಪ್ರತಿ ವ್ಯಕ್ತಿಯ ಬದುಕು ತರ ತರ! ಸುಖಕ್ಕಿಂತ ದುಃಖ ಹೆಚ್ಚು! ಯಾವುದು ಸರಿ? ಯಾವುದು ತಪ್ಪು? ಎಂದು ನಿರ್ಧರಿಸಲಾಗದ ಗೊಂದಲದ ಗೂಡು! ಅದಕ್ಕಿಲ್ಲಿದೆ ಭರವಸೆಯ ಮಾರ್ಗದರ್ಶನ! ಕಲ್ಲುಮಯ ಬೆಟ್ಟದಲ್ಲಿ, ಬೆಟ್ಟದಡಿಯಲ್ಲಿ, ಕಲ್ಲಿನ ಸಂಧಿ ಗೊಂದಲದಲ್ಲಿ, ಹುಲ್ಲು ಹುಲುಸಾಗಿ ಬೆಳೆದು ನಳನಳಿಸುವುದು! ಸೌಂದರ್ಯ ಉಕ್ಕಿಪುದು! ಹಸಿದ ಪ್ರಾಣಿಗೆ ತಾ ಆಹಾರವಾಗುವುದು! ಈ ಹುಲ್ಲಿನಂತಿರಲಿ ನಿನ್ನ ಬದುಕು! ಗಾತ್ರ ಕಿರಿದಾದರೂ ಸುವಾಸಿತ ಮಲ್ಲಿಗೆ ಎಲ್ಲರಿಗೂ ಇಷ್ಟ! ಮಲ್ಲಿಗೆಯ ತೆರನಾಗು, ನೀನು ಮುಳ್ಳಾಗಬೇಡ! ಮಳೆ ಸುರಿಯಲಿ, ಚಳಿ ಕೊರೆಯಲಿ, ಬಿಸಿಲು ನೆತ್ತಿ ಸುಡುತಿರಲಿ, ಕಲ್ಲು ಏನಾಗದು, ಸುಭದ್ರ! ಕಷ್ಟ ಕಾರ್ಪಣ್ಯ ಎರಗಲು ನಿನ್ನ ಹೃದಯ ಗಟ್ಟಿಯಾಗಿರಲಿ ಹೀಗೆ! ಸಿಹಿ ಬೆಲ್ಲ ಸಕ್ಕರೆ ಎಲ್ಲರಿಗೆ ಅಕ್ಕರೆ! ಬೆಲ್ಲ ಸಕ್ಕರೆ ಜೇನಿನಂತೆ ನೀ ದೀನ ದುರ್ಬಲರಿಗೆ ಒಳಿತು ಮಾಡು, ತಲೆ ತುಳಿಯುವ ಕಟುಕನಾಗದಿರು! ಪ್ರತಿ ವ್ಯಕ್ತಿ ವಿಭಿನ್ನ. ತನ್ನಂತೆ ಬದಲಿಸುವುದು ಅಸಾಧ್ಯ! ಬಾಳು ಕ್ಷಣಿಕ! ದ್ವೇಷಿಸುವ ಬದಲು ಪ್ರೀತಿಸಿದರೆ ತಂಟೆ ತಕರಾರು ಇಲ್ಲ!