ಕನ್ನಡ ಪಂಡಿತರ ಕನ್ನಡ ಸೇವೆ
ಅಂದು ಜುಲೈನ ಒಂದು ಗುರುವಾರದ ಮಧ್ಯಾಹ್ನ. ಹೊರಗೆ ಜಿಟಿಪಿಟಿ ಸುರಿಯುತ್ತಿದ್ದ ಮುಂಗಾರಿನ ಮಳೆ ಊಟಕ್ಕಾಗಿ ಮನೆಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳ ಆತಂಕವನ್ನು ಸಹಜವಾಗಿಯೇ ಹೆಚ್ಚು ಮಾಡಿತ್ತು. ಊಟದ ಅವಧಿಗಿಂತ ಮೊದಲಿನ ಅಂದರೆ ಬೆಳಗಿನ ಶಾಲಾ ಅವಧಿಯ ಕೊನೆಯ ಪೀರಿಯಡ್ ಪ್ರಾರಂಭವಾಗಿತ್ತು. ನಾವು ಒಂಬತ್ತನೇ ತರಗತಿಯ “ಎ” ವಿಭಾಗದ ವಿದ್ಯಾರ್ಥಿಗಳಿಗೆ ಅಂದು ವೇಳಾಪಟ್ಟಿಯ ಪ್ರಕಾರ ಕನ್ನಡ ತರಗತಿ ಇತ್ತು. ನಮಗೆ ಆ ವರ್ಷ ಶಾಲೆ ಆರಂಭವಾಗಿ ಸುಮಾರು ಒಂದೂವರೆ ತಿಂಗಳುಗಳು ಕಳೆದಿದ್ದರೂ ಕನ್ನಡ ತರಗತಿಗಳು ಪ್ರಾರಂಭವಾಗಿರಲಿಲ್ಲ. ಕಾರಣವೆಂದರೆ ಹೋದ ವರ್ಷ ಮಧ್ಯಭಾಗದಲ್ಲಿ ನಿವೃತ್ತಿ ಹೊಂದಿದ ಕನ್ನಡ ಪಂಡಿತರಾದ ವೈ. ಎಸ್. ಕೃಷ್ಣ ಮಾಚಾರ್ (YSK) ಅವರ ಸ್ಥಾನದಲ್ಲಿ ಹೊಸದಾಗಿ ಯಾವ ಕನ್ನಡ ಪಂಡಿತರ ನಿಯುಕ್ತಿಯೂ ಸರ್ಕಾರದ ವತಿಯಿಂದ ಆಗದೇ ಇರುವುದು. ಎಂಟನೇ ಇಯತ್ತಿನ ಕನ್ನಡಪಠ್ಯವನ್ನು ಪಾಠ ಮಾಡಲಿಕ್ಕಾಗಿ ನಮ್ಮ ಊರಿನವರೇ ಆದ ಶ್ರೀಯುತ ವಿಶ್ವಣ್ಣ ಎನ್ನುವವರು ತಾತ್ಕಾಲಿಕ ಸೇವೆಯ ಆಧಾರದ ಮೇಲೆ YSK ಯವರ ಸ್ಥಾನವನ್ನು ತುಂಬಿದರು. ವಿಶ್ವಣ್ಣ ಅದೇ ತಾನೇ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂ.ಎ ಮುಗಿಸಿಬಂದಿದ್ದರು. YSK ಅವರ ಸ್ಥಾನವನ್ನು ಬಹಳ ಸಮರ್ಥನೀಯವಾಗಿ ತುಂಬಿದ ವಿಶ್ವಣ್ಣ ಅವರು ಮಾಡುತ್ತಿದ್ದ ಕನ್ನಡ ಪಾಠಗಳನ್ನ ಕೇಳುವುದೇ ಒಂದು ಸೊಗಸು. YSK ಶಾಲೆಯನ್ನು ತೊರೆದಾಗ ಅತೀವ ಮಾನಸಿಕ ನೋವನ್ನು ಅನುಭವಿಸಿದ್ದ ವಿದ್ಯಾರ್ಥಿ ವೃಂದ YSK ಯವರನ್ನು ಮರೆಯುವ ಹಾಗೆ ಪಾಠ ಮಾಡುತ್ತಿದ್ದ ವಿಶ್ವಣ್ಣ ಅವರ ಪ್ರವಚನಗಳನ್ನು ಕೇಳಿ ತುಂಬಾ ಸಂತೋಷಗೊಂಡಿತ್ತು.
YSK ಸಾಮಾನ್ಯವಾದ ಕನ್ನಡ ಪಂಡಿತರಲ್ಲ. ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಪಾಠ ಮಾಡಿದ್ದ ಪಂಡಿತರು ತಮ್ಮ ಸೇವಾವಧಿಯ ಬಹುಭಾಗವನ್ನು ದಾವಣಗೆರೆ ಮತ್ತು ಸುತ್ತಮುತ್ತಲಿನ ಊರುಗಳ ಹೈಸ್ಕೂಲುಗಳಲ್ಲಿಯೇ ಕಳೆದವರು. ಇನ್ನೇನು ನಿವೃತ್ತಿ ಹತ್ತಿರ ಬಂತು ಎನ್ನುವಾಗ ಕೊನೆಯ ಮೂರು ವರ್ಷಗಳ ಮಟ್ಟಿಗೆ ತುರುವನೂರು ಪ್ರೌಢಶಾಲೆಗೆ ಶಿಕ್ಷಕರಾಗಿ ಒಲ್ಲದ ಮನಸ್ಸಿನಿಂದಲೇ ಬಂದಿದ್ದರು.
ಕಚ್ಛೆಪಂಚೆ, ಬಿಳಿ ಜುಬ್ಬಾವನ್ನ ತಮ್ಮ ಸರ್ವಋತುಮಾನದ ಉಡುಗೆಗಳನ್ನಾಗಿ ಮಾಡಿಕೊಂಡಿದ್ದ YSK ಯಾವಾಗಲೂ ಹಣೆಗೆ ಅಯ್ಯಂಗಾರಿ ನಾಮವನ್ನು ಧರಿಸುತ್ತಿದ್ದರು. ತುಂಬಾ ಸಣ್ಣ ಕೂದಲುಗಳಿದ್ದ ಮಂಡೆಯ ಮೇಲೆ ಕಂಡೂ ಕಾಣದಂತಹ ಒಂದು ಸಣ್ಣ ಜುಟ್ಟು ಇರುವುದು ತೀಕ್ಷ್ಣದೃಷ್ಟಿಯಿದ್ದವರಿಗೆ ಮಾತ್ರ ಗೋಚರಿಸುತ್ತಿತ್ತು. ಮುಖದ ಮೇಲೆ ಯಾವಾಗಲೂ ಇರುತ್ತಿದ್ದ ಸೋಡಾ ಗ್ಲಾಸಿನ ಕನ್ನಡಕ ಗಾಂಧಿ ಕೋಟೆಯ ಮೇಲಿನ ಗಾಂಧಿ ಪ್ರತಿಮೆಯ ಕನ್ನಡಕವನ್ನೇ ಹೋಲುತ್ತಿದ್ದದ್ದು ಆಶ್ಚರ್ಯಕರವಾದರೂ ಸತ್ಯಸಂಗತಿ.ಅತಿ ಸಾಧಾರಣ ಮೈಕಟ್ಟಿನವರಾದ YSK “ಮಜ್ಜಿಗೆ ಮೇಷ್ಟ್ರು” ಅಂತಲೇ ಹೆಸರಾದವರು. ವಿದ್ಯಾರ್ಥಿಗಳ ಮಧ್ಯೆ ನಿಂತರೆ ಪಂಡಿತರನ್ನು ಹುಡುಕುವುದೇ ಕಷ್ಟಸಾಧ್ಯವಾಗಿತ್ತು. ಕುಟುಂಬ ದಾವಣಗೆರೆಯಲ್ಲಿ ಇರುತ್ತಿದ್ದುದರಿಂದ ವಾರಕ್ಕೆ ಒಮ್ಮೆ ಪಂಡಿತರು ದಾವಣಗೆರೆಗೆ ಹೋಗಿ ಬಂದು ಮಾಡುತ್ತಿದ್ದರು.
ಬಹಳ ಸರಳ ಜೀವನವನ್ನು ನಡೆಸುತ್ತಿದ್ದ ಕನ್ನಡಮೇಷ್ಟ್ರು ಮಧ್ಯಾಹ್ನ ಮತ್ತು ರಾತ್ರಿ ವೇಳೆ ಕೇವಲ ಅನ್ನ ಮತ್ತು ಮಜ್ಜಿಗೆಯನ್ನ ಸೇವಿಸುತ್ತಿದ್ದರು. ಒಮ್ಮೆ ಮಧ್ಯಾಹ್ನ ಅನ್ನವನ್ನ ಸೀಮೆಎಣ್ಣೆಯ ಒಲೆಯ ಮೇಲೆ ಎರಡೂ ಹೊತ್ತಿಗಾಗುವಷ್ಟು ಮಾಡಿಕೊಳ್ಳುತ್ತಿದ್ದರು. ಆಗಿನ್ನೂ ಊರಿನಲ್ಲಿ ಹಾಲನ್ನು ಮಾರುತಿದ್ದರಾಗಲೀ, ಮಜ್ಜಿಗೆಯನ್ನ ಮಾರುವಂತಹ “ಪ್ರಗತಿ” ಆಗಿರಲಿಲ್ಲ. ಅಂದಿನ ಕೆನರಾಬ್ಯಾಂಕಿನ ಕಟ್ಟಡದ ಹಿಂಭಾಗ ಇದ್ದ ಒಂದು ಸಣ್ಣ ಕೋಣೆಯಲ್ಲಿ ಬಾಡಿಗೆಗಿದ್ದ ಪಂಡಿತರ ಮನೆಗೆ ಪಕ್ಕದಲ್ಲಿಯೇ ಇದ್ದ ಬಳ್ಳಾರಿಯವರ ಮನೆಯಿಂದ ಧಾರಾಳವಾಗಿ ಮಜ್ಜಿಗೆ ಸರಬರಾಜು ಆಗುತ್ತಿತ್ತು. YSK ಕೆಲವು ದಿನಗಳು ಕೇವಲ ಮಜ್ಜಿಗೆ ಕುಡಿದೇ ಇರುತ್ತಾರೆ ಎಂದು ಅವರ ಮನೆಯ ಸುತ್ತಮುತ್ತ ವಾಸವಾಗಿದ್ದ ಗೆಳೆಯರು ಹೇಳಿದ್ದ ನೆನಪು.
ಕನ್ನಡ ಪಂಡಿತರು ಊರಿನ ಯಾರ ಮನೆಗೆ ಹೋದರೂ ಮಜ್ಜಿಗೆ ಹೊರತಾಗಿ ಏನನ್ನೂ ಸೇವಿಸುತ್ತಿರಲಿಲ್ಲ. ನನ್ನ ತಂದೆ YSK ಸಹೋದ್ಯೋಗಿಗಳಾದ ಕಾರಣದಿಂದ ಅನೇಕ ಸಲ ನಮ್ಮ ಮನೆಗೆ ಬಂದು ಹೋಗುತ್ತಿದ್ದ ಪಂಡಿತರು ಯಾವತ್ತೂ ಕಾಫಿ ಅಥವಾ ಟೀ ಕುಡಿದವರಲ್ಲ. ಬೇಕಾದಷ್ಟು ಬಾರಿ ತಾವೇ ಕೇಳಿ ಒಂದು ಲೋಟ ಮಜ್ಜಿಗೆಯನ್ನು ಪಡೆದು ಗಟಗಟನೆ ಕುಡಿಯುತ್ತಿದ್ದ YSKಯವರ ಚಿತ್ರ ಈಗಲೂ ನನ್ನ ಕಣ್ಮುಂದೆ ಕಟ್ಟಿದೆ.
ಪಠ್ಯವನ್ನು ಮುಖದ ಬಹಳ ಹತ್ತಿರಕ್ಕೆ ಹಿಡಿದು ಓದುವುದು YSKಯವರ ರೂಢಿ. ಕಣ್ಣು ದೃಷ್ಠಿ ಸುಮಾರಾಗಿ ಇದ್ದುದರಿಂದ YSK ಹೀಗೆ ಮಾಡುತ್ತಿದ್ದರೇನೋ. ಸಹಜವಾಗಿಯೇ ಇದು ವಿಧ್ಯಾರ್ಥಿಗಳಿಗೆ ಕೀಟಲೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡುತ್ತಿತ್ತು. ಕನ್ನಡಮೇಷ್ಟ್ರು ಎಂದೂ ವಿದ್ಯಾರ್ಥಿಗಳ ಗಲಾಟೆಗೆ ತಲೆಕೆಡಿಸಿಕೊಂಡವರೇ ಅಲ್ಲ. ತರಗತಿಯಲ್ಲಿ ಹೆಚ್ಚು ತುಂಟತನ ಮಾಡುವ ಹುಡುಗರನ್ನು ಕ್ಲಿಷ್ಟಪ್ರಶ್ನೆಗಳನ್ನು ಕೇಳುವುದರ ಮೂಲಕ ಇಕ್ಕಟ್ಟಿಗೆ ಸಿಕ್ಕಿಸಿ ‘ಪಂಡಿತರ ಸಹವಾಸ ಮಾತ್ರ ಬೇಡಪ್ಪಾ’ ಎನ್ನುವಂತ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುತ್ತಿದ್ದರು. ಹಾಗಾಗಿ ಕನ್ನಡ ಪಂಡಿತರೆಂದರೆ ಹುಡುಗರಲ್ಲಿ ಭಯಮಿಶ್ರಿತ ಭಕ್ತಿ ಇದ್ದೇ ಇತ್ತು.
ಇನ್ನು YSK ಪಾಠ ಮಾಡುವುದರಲ್ಲಿ ಘಟಾಣಿಘಟಿಗಳು. ನಾಲ್ಕು ದಶಕಗಳ ಅನುಭವ ಅವರ ಪಾಠದಲ್ಲಿ ಹಾಸುಕೊಕ್ಕಾಗಿರುತ್ತಿತ್ತು. ತರಗತಿಯ ಅತ್ಯಂತ ದಡ್ಡ ವಿದ್ಯಾರ್ಥಿಗೂ ಅರ್ಥವಾಗುವಂತೆ ಪಾಠ ಮಾಡುವ ಅವರ ಕಲೆ ಅನುಕರಣಯೋಗ್ಯವಾದದ್ದು.
YSK ಅವರ ಸಹೋದ್ಯೋಗಿಯ ಮಗನಾಗಿ ನಾನು ಪಂಡಿತರ ಕ್ಲಾಸಿನಲ್ಲಿ ತರಲೆ ಮಾಡುವ ಪ್ರಶ್ನೆಯೇ ಇರಲಿಲ್ಲ. ಆದರೆ ನಮ್ಮ ಸಹಪಾಠಿಯಾದ ಪೊಲೀಸ್ ಇನ್ಸ್ಪೆಕ್ಟರ್ ದಸ್ತಗಿರಿ ಸಾಹೇಬರ ಮಗಳಾದ ಸಜೀಲಾಬಾನು ಎಂಬಾಕೆಯ ಹೆಸರನ್ನು ಹಾಜರಿ ತೆಗೆದುಕೊಳ್ಳುವ ವೇಳೆ ಪಂಡಿತರು ಸಜೀಲಬೆನ್ನು ಎಂದು ಹೇಳುವಾಗೆಲ್ಲಾ ನನಗೆ ನಗೆಯನ್ನು ತಡೆದುಕೊಳ್ಳಲಾಗುತ್ತಿರಲಿಲ್ಲ. ಹೀಗೆ ಒಂದು ದಿನ ನಾನು ನಕ್ಕಿದ್ದನ್ನು ಕೇಳಿಸಿಕೊಂಡ ಪಂಡಿತರು ನನ್ನನ್ನು ಡೆಸ್ಕ್ ನಿಂದ ಮೇಲೆ ಏಳಲು ಅಣತಿ ಮಾಡಿದರು. ಮೇಲೆದ್ದ ನನಗೆ ನಕ್ಕಿದ್ದು ಏತಕ್ಕೆ ಎಂದು ಕೇಳದೇ ನಿನ್ನ ತಮ್ಮ ಯಾವ ತರಗತಿಯಲ್ಲಿದ್ದಾನೆ? ಎಂದು ಪ್ರಶ್ನಿಸಿದರು. ಆಗಿನ್ನೂ ಐದನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ತಮ್ಮನ ಬಗ್ಗೆ ಹೇಳಲಾಗಿ, “ಮನೆಗೆ ಹೋಗಿ ನಿನ್ನ ತಮ್ಮನಿಗೆ ಬುದ್ದಿ ಹೇಳು, ಸಮಯ ಕೇಳುವ ಹೊತ್ತು ತಾನು ನಿಂತಿರುವ ಸ್ಥಿತಿಯಲ್ಲಿಯೇ ನಿಂತೂ ಸಮಯ ಕೇಳಬಹುದು, ಅದಕ್ಕಾಗಿ ಸಮಯ ಹೇಳಲಿರುವ ವ್ಯಕ್ತಿಯ ಕಡೆ ತಿರುಗುವ ಅಗತ್ಯ ಇಲ್ಲ ಎಂದು ತಿಳಿಹೇಳು” ಎಂದರು. YSKಯವರ ಈ ಮಾತು ಮನೆಗೆ ಬರುವವರೆಗೆ ನನಗೆ ಒಗಟಾಗಿಯೇ ಉಳಿದಿತ್ತು. ಮನೆಗೆ ಬಂದವನು ತಮ್ಮನನ್ನು ಪ್ರಶ್ನಿಸಲಾಗಿ ವಿಷಯದ ಸಂಪೂರ್ಣ ಅರಿವಾಯಿತು. ಮಧ್ಯಾಹ್ನದ ಊಟ ಆದಮೇಲೆ ನನ್ನ ತಮ್ಮ ಅವನ ಶಾಲೆಗೆ ಹೋಗುವ ಹಾದಿಯಲ್ಲಿ ಮೂತ್ರವಿಸರ್ಜನೆಗೆ ನಿಂತಿದ್ದಾನೆ. ಅದೇ ಹಾದಿಯ ವಿರುದ್ಧ ದಿಕ್ಕಿನಲ್ಲಿ ತಮ್ಮ ಶಾಲೆಗೆ ಹೊರಟಿದ್ದ YSK ಅವರನ್ನು ನನ್ನ ತಮ್ಮ “ಎಷ್ಟು ಗಂಟೆ ಸರ್” ಎಂದು ಕೇಳಿದ್ದಾನೆ. ಒಂದು ಕ್ಷಣ ನಿಂತು ತಮ್ಮ ಜುಬ್ಬಾದ ತೋಳನ್ನು ಸ್ವಲ್ಪ ಮಡಚಿ ಸಮಯ ಹೇಳಹೊರಟ ಮಾಸ್ತರ ಕಡೆಗೆ ತಿರುಗಿದ ನನ್ನ ತಮ್ಮ ಮೂತ್ರವಿಸರ್ಜನೆಯನ್ನು ಮಾತ್ರ ನಿಲ್ಲಿಸಿರಲಿಲ್ಲ. ತಮ್ಮ ಪಂಚೆಯ ಮೇಲೆ ಸಿಡಿದ ಮೂತ್ರವನ್ನು ಕಂಡು YSK ತುಂಬಾ ಕೋಪಗೊಂಡವರಾಗಿ ಸಮಯವನ್ನು ಹೇಳದೇ ಹಾಗೆಯೇ ಹೊರಟುಹೋಗಿದ್ದರು. ‘ಅವರೇಕೆ ಹಾಗೆ ಮಾಡಿದರು?’ ಎನ್ನುವ ತಮ್ಮನ ಪ್ರಶ್ನೆಗೆ ಏನು ಹೇಳಬೇಕೆಂದು ನನಗೆ ಆ ಹೊತ್ತಿಗೆ ಗೊತ್ತಾಗಲಿಲ್ಲ.
ಇನ್ನು ನಮ್ಮ ಗುರುವಾರ ಮಧ್ಯಾಹ್ನದ ಪೀರಿಯಡ್ ಗೆ ಬರೋಣ. ವರ್ಷದ ಆರಂಭದಲ್ಲಿಯೇ ಬಳ್ಳಾರಿಯಲ್ಲಿ ಖಾಯಂ ಉಪನ್ಯಾಸಕನ ಹುದ್ದೆ ದೊರೆತಿದ್ದುದರಿಂದ ವಿಶ್ವಣ್ಣ ಶಾಲೆಯನ್ನು ತೊರೆದಿದ್ದುದರಿಂದ ಕನ್ನಡ ವಿಷಯದಲ್ಲಿ ಗುರುಗಳಿಲ್ಲದೆ ನಾವು ಅನಾಥರಾದೆವು. ಇಷ್ಟರಲ್ಲಿಯೇ ಸರ್ಕಾರ ಹೊಸ ಕನ್ನಡಪಂಡಿತರನ್ನು ನೇಮಕಗೊಳಿಸುತ್ತದೆ ಎನ್ನುವ ಗುಸುಗುಸು ಮಾತುಗಳಿದ್ದರೂ ಇನ್ನೂ ಯಾವ ಮಾಸ್ತರರೂ ನಮ್ಮ ಶಾಲೆಗೆ ಬಂದಿರಲಿಲ್ಲ. ಕೇವಲ ಕನ್ನಡ ವಿಷಯಕ್ಕೆ ಅಷ್ಟೇ ನಾವು ಆ ಹೊತ್ತಿನಲ್ಲಿ ಬರವನ್ನು ಅನುಭವಿಸುತ್ತಿರಲಿಲ್ಲ, ಆಟದ ಮೇಷ್ಟ್ರು ಇಲ್ಲದ ಕೊರತೆಯೂ ನಮ್ಮನ್ನು ಕಾಡುತ್ತಿತ್ತು. ಅಲ್ಲಿಯವರೆಗೆ ಪಿಟಿ ಮಾಸ್ಟರ್ ಆಗಿದ್ದ ಕೆ. ಬಿ. ಹಿರೇಮಠ್ (KBH) ನಮ್ಮ ಶಾಲೆಯಿಂದ ವರ್ಗಾವಣೆ ಆಗಿ ಆರೇಳು ತಿಂಗಳುಗಳೇ ಆಗಿದ್ದರೂ ಇನ್ನೂ ಹೊಸ ಆಟದ ಮೇಷ್ಟ್ರು ನಿಯುಕ್ತಿಗೊಂಡಿರಲಿಲ್ಲ. ಕನ್ನಡ ಪಂಡಿತರಿಲ್ಲದೆ ಇಡೀ ಪೀರಿಯಡ್ ವಿದ್ಯಾರ್ಥಿಗಳು ನಾವಾಡಿದ್ದೇ ಆಟ ಎನ್ನುವಂತೆ ಆಗಿದ್ದುದರಿಂದ ನಮ್ಮ ಎಂದಿನ ಕಪಿಚೇಷ್ಟೆಯನ್ನು ಪ್ರಾರಂಭಿಸಿದೆವು.
ಪೀರಿಯಡ್ ಶುರುವಾಗಿ ಹತ್ತು ನಿಮಿಷ ಕಳೆದಿರಬೇಕು, ಆ ವೇಳೆಗಾಗಲೇ ನಮ್ಮ ಚೇಷ್ಟೆಗಳು ತಾರಕವನ್ನು ಮುಟ್ಟಿದ್ದವು. ಇದ್ದಕ್ಕಿದ್ದ ಹಾಗೆಯೇ ಶಾಲೆಯ ಕಾರಿಡಾರ್ ನಲ್ಲಿ ಕೇಳಿಬಂದ ಫಟ್ ಫಟ್ ಶಬ್ದ ನಮ್ಮ ಗಲಾಟೆಗೆ ಒಮ್ಮೆಗೇ ಬ್ರೇಕ್ ಹಾಕಿತ್ತು. ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಲೇ ನಡೆದ ಆ ಶಬ್ದದ ಮೂಲದ ಬಗ್ಗೆ ನಾವು ಸಹಜವಾಗಿಯೇ ಕುತೂಹಲಿಗಳಾಗಿದ್ದೆವು. ಎಂದೂ ಶಾಲೆಯಲ್ಲಿ ಕೇಳಿರದ ಈ ಲಯಬದ್ಧವಾದ ಶಬ್ದ ನಮ್ಮನ್ನು ಗಲಿಬಿಲಿಗೆ ತಳ್ಳುವ ಹೊತ್ತಿನಲ್ಲಿಯೇ ಶಬ್ದ ನಮ್ಮ ತರಗತಿಯ ಬಾಗಿಲಿಗೆ ಬಂದು ಸ್ತಬ್ಧವಾಯಿತು. ಹೌಹಾರಿ ಬಾಗಿಲತ್ತ ಗೋಣು ತಿರುಗಿಸಿದವರಿಗೆ ಬಾಗಿಲಿನಲ್ಲಿ ಪ್ರತ್ಯಕ್ಷವಾದ ಹೆಡ್ ಮಾಸ್ಟರ್ ಶ್ರೀ ಆರ್. ನೀಲಕಂಠಪ್ಪ (RN)ನವರು ಕಾಣಿಸಿದರು. RN ನೋಡಿದ ನಮಗೆ ಉಸಿರೇ ನಿಂತ ಹಾಗಾಯ್ತು. ಬಹಳ ಕಟ್ಟುನಿಟ್ಟಿನ ಮೇಷ್ಟ್ರೆಂದೇ ಪ್ರಖ್ಯಾತಿ ಪಡೆದ RN ಅವರ ಕೈ ಬೆರಳುಗಳ ಉಗುರಿನ ರುಚಿಯನ್ನು ಈ ಲೇಖನವನ್ನು ಓದುತ್ತಿರುವ ನನ್ನ ಆ ಕಾಲದ ಯಾವ ವಿದ್ಯಾರ್ಥಿ ಮಿತ್ರರಾದರೂ ಮತ್ತೊಮ್ಮೆ ಸವಿಯಬಲ್ಲರೆಂದುಕೊಂಡಿದ್ದೇ ನೆ. ನಮ್ಮ ಗಲಾಟೆಯನ್ನು ಕೇಳಿಸಿಕೊಂಡು ತರಗತಿ ಪ್ರವೇಶಿಸಿರುವ RN ಅವರಿಂದ ಏನು ಶಿಕ್ಷೆ ಕಾದಿದೆಯೋ ಎಂದು ನಾವು ಭಯಭೀತರಾದ ಹೊತ್ತು ಡಯಾಸ್ ಮೇಲೆ ಏರಿದ RN ಅವರನ್ನು ಹಿಂಬಾಲಿಸಿದ ವ್ಯಕ್ತಿಯೋರ್ವ ಧರಿಸಿದ್ದ ಬೂಟುಗಳ ಸದ್ದೇ ನಾವು ಇಲ್ಲಿಯವರೆಗೆ ಆಲಿಸಿದ ವಿಚಿತ್ರ ಸದ್ದಿನ ಮೂಲ ಎನ್ನುವುದು ಸ್ಪಷ್ಟವಾಯಿತು.
ಹೊಸದಾಗಿ ಬಂದಿರುವ ವ್ಯಕ್ತಿ ನಮ್ಮ ಹೊಸ ಕನ್ನಡ ಪಂಡಿತರೆಂದೂ ಮತ್ತು ಅವರ ಹೆಸರು ಸಿ. ವೀರಭದ್ರಾಚಾರ್ (CV) ಎಂದೂ ನಮಗೆ RN ತಿಳಿಸಿದರು. ನಿಮಗೆ ಇರುವ ಈ ಹೊತ್ತಿನ ಕನ್ನಡ ಪೀರಿಯಡ್ ನ್ನ ಶ್ರೀಯುತರು ತೆಗೆದುಕೊಳ್ಳುವುದಾಗಿ ಹೇಳಿ RN ತರಗತಿಯಿಂದ ನಿರ್ಗಮಿಸಿದಾಗ ವಿದ್ಯಾರ್ಥಿಗಳ ನಿಟ್ಟುಸಿರು ಕೇಳಿಸುವಷ್ಟು ಜೋರಾಗಿತ್ತು.
RN ಉಪಸ್ಥಿತಿಯಲ್ಲಿ ಮುಖಗಳನ್ನೂ ಎತ್ತಿ ನೋಡುವುದಕ್ಕೆ ಧೈರ್ಯವಿಲ್ಲದ ವಿದ್ಯಾರ್ಥಿಗಳು CVಯವರನ್ನು ಸರಿಯಾಗಿ ಗಮನಿಸತೊಡಗಿದೆವು. ಇದು CV ಅವರ ಮೊದಲನೇ ಪೋಸ್ಟಿಂಗ್ ಅಂತಾ ಕಾಣಿಸುತ್ತೆ. ಇನ್ನೂ ಇಪ್ಪತ್ತಾರು ಇಪ್ಪತ್ತೇಳು ವರ್ಷಗಳನ್ನು ಮೀರದ ಪ್ರಾಯ. ಆಜಾನುಬಾಹು ಎಂದೇ ಹೇಳಬಹುದಾದ ವ್ಯಕ್ತಿತ್ವ. ಹಣೆಯ ಮೇಲೆಲ್ಲಾ ರಾಚಿಗೊಂಡಂತಿರುವ ಉದ್ದನೆಯ ಕಡು ಕಪ್ಪು ಕೂದಲುಗಳು, ಆರೆಮಡಿಚಿದ ಶರ್ಟ್ ನ ತೋಳುಗಳು, ಅಂದಿನ ಫ್ಯಾಷನ್ ಗೆ ಹೋಲುವ ಬೆಲ್ ಬಾಟಮ್ ಪ್ಯಾಂಟ್ ಮತ್ತು ಚೂಪು ತುದಿಯಿದ್ದ ಫಳ ಫಳಹೊಳೆಯುವ ಕಪ್ಪು ಬೂಟುಗಳು. ನಾಲ್ಕು ಬೆರಳುಗಳ ಆಗಲವಿದ್ದ ಚರ್ಮದ ಬೆಲ್ಟ್. ತುಸು ಹೆಚ್ಚು ಅಗಲವಿದ್ದ ಬಾಯಿ, ದಪ್ಪವೂ ಅಲ್ಲ, ಸಣ್ಣವೂ ಅಲ್ಲ ಎನ್ನುವಂತಿದ್ದ ಮೀಸೆ, ಚೂಪಾದ ಮೂಗು, ತುಸುದಢೂತಿ ಎಂದೇ ಹೇಳಬಹುದಾದ ಶರೀರಾಕೃತಿ ಯಾಕೋ ಇವರು ಕನ್ನಡ ಪಂಡಿತರಾಗಲಿಕ್ಕೆ ಸಾಧ್ಯವಿಲ್ಲ ಎಂದು ನನ್ನ ಒಳಮನಸ್ಸು ನುಡಿಯುತ್ತಿತ್ತು. ಕನ್ನಡ ಪಂಡಿತರೆಂದರೆ ಹೇಗಿರಬೇಕು? ಎನ್ನುವ ಒಂದು ಚಿತ್ರಣವನ್ನು YSK ನನ್ನ ತಲೆಯಲ್ಲಿ ಬಿತ್ತಿದ್ದರು. ಆ ಚಿತ್ರಣಕ್ಕೂ, CVಯವರ ವ್ಯಕ್ತಿ ಚಿತ್ರಣಕ್ಕೂ ಎಲ್ಲಿಂದ ಎಲ್ಲಿಗೂ ತಾಳೆಯಾಗುತ್ತಿರಲಿಲ್ಲ. YSK ಮತ್ತು CVಯವರ ವ್ಯಕ್ತಿತ್ವದ ವ್ಯತ್ಯಾಸಗಳು ಆ ಹೊತ್ತು ನನ್ನ ಗ್ರಹಿಕೆಯಲ್ಲಿದ್ದ ಹೊಸಗನ್ನಡ ಮತ್ತು ಹಳೆಗನ್ನಡ ಮಧ್ಯದ ವ್ಯತ್ಯಾಸಗಳನ್ನೂ ಮೀರಿ ನಿಂತಿರುವಂತೆ ಭಾಸವಾಗಿತ್ತು. ಇಬ್ಬರೂ ಕನ್ನಡಪಂಡಿತರು ಹೌದೇ, ಈ ಅನುಮಾನ ನನ್ನಲ್ಲಿ ಮೂಡತೊಡಗಿತು.
ಈ ವೇಳೆಗಾಗಲೇ CV ವಿಧ್ಯಾರ್ಥಿಗಳ ಪರಿಚಯಕ್ಕೆ ಮುಂದಾಗಿದ್ದರು. ಒಬ್ಬಬ್ಬರನ್ನೇ ನಿಲ್ಲಿಸಿ ತಮ್ಮ ಹೆಸರುಗಳನ್ನು ಹೇಳಲಿಕ್ಕೆ ಆದೇಶಿಸಿದರು. ತರಗತಿಯ ಸುಮಾರು ನಲ್ವತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಮ್ಮ ಪರಿಚಯ ಮಾಡುತ್ತಾ ಹೋದರು. ಆ ವೇಳೆಗಾಗಲೇ ಅರ್ಧ ಪೀರಿಯಡ್ ಮುಗಿದಿತ್ತು ಅನ್ನಿಸುತ್ತದೆ. ವಿದ್ಯಾರ್ಥಿಗಳ ಪರಿಚಯದ ನಂತರ CV ತಮ್ಮ ಪರಿಚಯಕ್ಕೆ ಮೊದಲಾದರು. ಚಿತ್ರದುರ್ಗ ಸಮೀಪದ ಸಿರಿಗೆರೆಯ ಹಳ್ಳಿಯೊಂದರಿಂದ ಬಂದ CV ಸಾಕಷ್ಟು ಬಡತನದಿಂದಲೇ ಓದಿ ಪದವಿಯನ್ನ ಪೂರ್ಣಗೊಳಿಸಿದ್ದರು ಮತ್ತು ತಮ್ಮ ಕೆಲಸದ ಮೊದಲನೇ ಪೋಸ್ಟಿಂಗ್ ಆಗಿ ತುರುವನೂರು ಹೈಸ್ಕೂಲಿಗೆ ನೇಮಕವಾಗಿ ಬಂದಿದ್ದರು. ಮೊದಲನೇ ಪೀರಿಯಡ್ ಆಗಿದ್ದುದರಿಂದ ಅಂದು CV ವಿಶೇಷವಾದದ್ದೇನನ್ನೂ ಮಾಡದಿದ್ದ ನೆನಪು. ಆ ವೇಳೆಗಾಗಲೇ ಮಿಡಲ್ ಸ್ಕೂಲ್ ನಿಂದ ಹೈಸ್ಕೂಲಿಗೆ ಬಡ್ತಿ ಪಡೆದ ಜವಾನ್ ತಮ್ಮಣ್ಣ ಬಾರಿಸಿದ ಘಂಟೆಯ ಶಬ್ದಕ್ಕೆ ಊಟಕ್ಕಾಗಿ ಮನೆಗಳ ಕಡೆಗೆ ಸ್ವಲ್ಪ ನಿಂತತ್ತಾಗಿದ್ದ ಮಳೆಯಲ್ಲಿಯೇ ಕಾಲ್ಕಿತ್ತೆವು.
ಮನೆಯಲ್ಲಿ ಊಟಕ್ಕೆ ಕುಳಿತವನಿಗೆ ಮತ್ತದೇ ಬೂಟುಗಳ ಫಟ್ ಫಟ್ ಸದ್ದು ಕೇಳಿಬಂತು. ಇದು CV ಯವರ ಬೂಟುಗಳ ಸದ್ದೇ ಎನ್ನುವುದು ಅರಿವಾಗಲಿಕ್ಕೆ ಹೆಚ್ಚು ಸಮಯಬೇಕಾಗಲಿಲ್ಲ. ವಾಡಿಕೆಯಂತೆ, ಹೊಸದಾಗಿ ಬಂದ ಸಹೋದ್ಯೋಗಿಯನ್ನು ನನ್ನ ತಂದೆ ಮಧ್ಯಾಹ್ನದ ಊಟಕ್ಕಾಗಿ ಮನೆಗೆ ಕರೆತಂದಿದ್ದರು. CV ಅಪ್ಪಟ ಶಾಖಾಹಾರಿ ಎಂದು ಆ ಹೊತ್ತಿನಲ್ಲಿ ನನಗೆ ತಿಳಿದು ಬಂದಿತು. ಮುಂದಿನ ವಾರವೇ ಪಿಟಿ ಮೇಷ್ಟ್ರು ಕೂಡ ನಮ್ಮ ಶಾಲೆಗೆ ಬಂದು ಸೇರಿಕೊಂಡರು. ಎ. ವಿ. ವೀರಭದ್ರಪ್ಪ (AVR) ಎನ್ನುವವರು ನಮ್ಮ ಹೊಸ ಆಟದ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಕೊಂಡರು. ಹೀಗಾಗಿ ಒಂದು ವಾರದ ಅಂತರದಲ್ಲಿಯೇ ಓದುವ ಕನ್ನಡಕ್ಕೆ ಮತ್ತು ಆಡುವ ಆಟಕ್ಕೆ ಶಿಕ್ಷಕರು ದೊರಕ್ಕಿದ್ದಲ್ಲದೇ ಒಂದೇ ಹೆಸರಿನ ಇಬ್ಬರು ಶಿಕ್ಷಕರೂ ನಮಗೆ ದೊರೆತಿದ್ದದ್ದು ವಿಶೇಷವೆನಿಸಿತು.
CVಯವರ ಮುಂದಿನ ಕನ್ನಡ ತರಗತಿಗಳು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯತೊಡಗಿದವು. ಅದೇ ತಾನೇ ಕಾಲೇಜಿನಿಂದ ಹೊರಬಂದಿದ್ದ CV ಅಂದಿನ ಕನ್ನಡಸಾಹಿತ್ಯದ ಬಗ್ಗೆ ಕರಾರುವಕ್ಕಾಗಿ ಮಾತಮಾಡಬಲ್ಲವರಾಗಿದ್ದರು, ಅಭಿಪ್ರಾಯ ಮಂಡಿಸಬಲ್ಲವರಾಗಿದ್ದರು. ಇದರಿಂದಾಗಿ ತುರುವನೂರಿನಂತ ರಾಜ್ಯದ ಯಾವುದೋ ಮೂಲೆಯಲ್ಲಿರುವ ಊರಿನ ನಮಗೆ ಆಧುನಿಕ ಕನ್ನಡ ಸಾಹಿತ್ಯದ ಬಹುದೊಡ್ಡ ಆಸರೆ ದೊರಕಿದಂತಾಯಿತು. CV ಸಹಜವಾಗಿಯೇ ನಮ್ಮ ಮತ್ತು ಅಂದಿನ ಕನ್ನಡದ ವಿದ್ವತ್ ಪ್ರಪಂಚದ ನಡುವಿನ ಸೇತುವೆಯಾದರು; ಕನ್ನಡವನ್ನ ಹೊಸನೆಲೆಗಳಿಂದ ಅರ್ಥೈಸಿಕೊಳ್ಳುವ ಅವಕಾಶದ ಆಕಾಶಕ್ಕೆ ಕಿಂಡಿಯಾದರು.
CV ಅವರ ಕ್ಲಾಸ್ ಗಳೆಂದರೆ ನಾವು ಎದುರು ನೋಡುತ್ತಿದ್ದೆವು. ಕನ್ನಡದ ಪದ್ಯಗಳನ್ನು ವಾಚಿಸುತ್ತಾ ಬೇರೊಂದು ರಮ್ಯಲೋಕವನ್ನೇ ಸೇರುತ್ತಿದ್ದ CV ನಮ್ಮನ್ನೂ ಒಟ್ಟಿಗೆ ಕರೆದೊಯ್ದು ಆ ರಮ್ಯಲೋಕದ ದರ್ಶನವನ್ನು ಮಾಡಿಸುತ್ತಿದ್ದರು. ಕನ್ನಡ ಅಭಿಮಾನವನ್ನು ಸಾರಿ ಹೇಳುವ ಪದ್ಯಗಳೆಂದರೆ CV ಗೆ ವಿಶೇಷ ಒಲವು. “ಕನ್ನಡ ಎನೆ ಕುಣಿದಾಡುವುದು ಎನ್ನೆದೆ” ಎನ್ನುವಾಗ ತರಗತಿಯ ಪ್ರತಿಯೊಬ್ಬರ ಹೃದಯಗಳೂ ಎದ್ದು ಕುಣಿದಾಡತೊಡಗುತ್ತಿದ್ದವು. “ನೀರೊಳ್ಗೆ ಬೆವರಿರ್ದನ್ ಉರುಗಪತಾಕಂ” ಎಂದು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ದುರ್ಯೋಧನನ ಸ್ಥಿತಿಯನ್ನು ವಿವರಿಸುವ ಪದ್ಯವನ್ನು CVಯವರು ವಾಚಿಸುತ್ತಿದ್ದ ಪರಿಯೇ ಒಂದು ಅದ್ಭುತ. ನೀರಿನಲ್ಲಿ ಇದ್ದು ಬೆವರಿದ ಸ್ಥಿತಿ ಕುರುರಾಜನದಾದರೆ, ತರಗತಿಯಲ್ಲಿಯೇ ಇದ್ದು CV ಅವರ ಆಂಗಿಕ ಅಭಿನಯವನ್ನ ನೋಡಿಯೇ ವಿದ್ಯಾರ್ಥಿಗಳಾದ ನಾವು ಅಕ್ಷರಶಃ ಬೆವರುತ್ತಿದ್ದೆವು. “ಪುರದ ಪುಣ್ಯ ಪುರುಷ ರೂಪಿಂದೆ ಪೋಗುತಿದೆ ನೋಡಾ” ಎಂದು ಶ್ರೀರಾಮಚಂದ್ರ ಅಯೋಧ್ಯೆಯನ್ನು ಬಿಟ್ಟು ಹೊರಡುವಾಗ ರೋಧಿಸುತ್ತಾ ಪುರದ ಮುಖ್ಯದ್ವಾರಕ್ಕೆ ಬಂದು ಬೀಳ್ಕೊಟ್ಟ ಆಯೋಧ್ಯಾವಾಸಿಗಳಲ್ಲಿ ತರಗತಿಯ ನಾವು ಸುಮಾರು ನಲ್ವತ್ತರಷ್ಟು ವಿದ್ಯಾರ್ಥಿಗಳೂ ಸೇರಿರುತ್ತಿದ್ದೆವು. “ಕರುಣಾಳು ಬಾ ಬೆಳಕೇ” ಎನ್ನುವ ಪದ್ಯವನ್ನು CVಯವರ ಬಾಯಲ್ಲಿ ಕೇಳುವುದೇ ಒಂದು ರಸಾನುಭವ ಮತ್ತು ರಸಾನುಭಾವ. ಈ ಪದ್ಯಕ್ಕೆ ಪ್ರೇರಣೆಯಾದ ಮೂಲ ಇಂಗ್ಲೀಷ್ ಪದ್ಯವನ್ನೂ ಓದಿ ಹೇಗೆ ಕನ್ನಡದ ಈ ತರ್ಜುಮೆ ತನ್ನ ಭಾವಸೂಕ್ತಿಯಲ್ಲಿ ಮೂಲಪದ್ಯವನ್ನು ಮೀರಿಸುತ್ತದೆ ಎನ್ನುವುದನ್ನು ಅವರು ವಿವರಿಸುತ್ತಿದ್ದರೆ ಬಾಯಿ ಬಿಟ್ಟು ಕೇಳುವ ಸರದಿ ನಮ್ಮದಾಗುತ್ತಿತ್ತು. ನಿಜಗಲ್ ರಾಣಿಯ ಅಸಾಧಾರಣ ತ್ಯಾಗ CV ಅವರ ಬಾಯಲ್ಲಿ ಮಹೋನ್ನತ ತ್ಯಾಗದ ಮತ್ತೊಂದು ಮಜಲನ್ನು ತಲುಪುತ್ತಿತ್ತು. ಶರಣಸಾಹಿತ್ಯ, ದಾಸಸಾಹಿತ್ಯಗಳ ಗಾಢವಾದ ಅಧ್ಯಯನದಿಂದ ಮುಪ್ಪುರಿಗೊಂಡ ಮಾಸ್ತರ ಸುಂದರ ಕನ್ನಡ ಮನಸ್ಸು ನನ್ನಂತಹ ಹದಿಹರೆಯದ ಮನಸ್ಸಿನ ಮೇಲೆ ಬೀರಿದ ಪರಿಣಾಮ ವರ್ಣನೆಗೆ ನಿಲುಕದ್ದು. ಶಬ್ದಗಳಲ್ಲಿ ಕಟ್ಟಿಕೊಡಲಾಗದ್ದು. ಕನ್ನಡದ ಪಾಠಗಳು, ಪದ್ಯಗಳು ಕೂಡಾ ಇಷ್ಟು ರಸವತ್ತಾಗಿರಬಹುದೇ ಎಂದು ನಾವು ಪ್ರತಿ ಕನ್ನಡದ ತರಗತಿಯ ಅವಧಿಯಲ್ಲಿ ಯೋಚಿಸುತ್ತಿದ್ದೆವು. CV ನಮಗೆ ಕನ್ನಡದ ಬೋಧಕರಿಲ್ಲದ ಕೊರತೆಯನ್ನಷ್ಟೇ ತುಂಬಲಿಲ್ಲ, ಕನ್ನಡ ಸಾಹಿತ್ಯದ ಅತ್ಯಂತ ರಮ್ಯ ಮತ್ತು ಶ್ರೇಷ್ಠ ಘಳಿಗೆಗಳನ್ನು ಮೊಗೆ ಮೊಗೆದು ತುಂಬಿದರು.
ನವ್ಯಕಾವ್ಯ ಪದ್ಧತಿಗೆ CVಯವರ ವಿರೋಧವಿತ್ತು. ಕನ್ನಡದಲ್ಲಿ ಆ ಕಾಲಕ್ಕೆ ಗಟ್ಟಿಯಾದ ಸಾಹಿತ್ಯಸೃಷ್ಟಿಯಾಗುತ್ತಿಲ್ಲ ಎನ್ನುವ ಕೊರಗೂ ಅವರನ್ನು ಕಾಡುತ್ತಿತ್ತು. ತರಗತಿಯಲ್ಲಿ ಅನೇಕ ಬಾರಿ “ಆಗೋ ನೋಡು ಚಂದ್ರಬಿಂಬ; ಇಗೋ ನೋಡು ಲೈಟು ಕಂಬ” ಅನ್ನುವ ಒಬ್ಬ ನವ್ಯ ಕವಿಯೊಬ್ಬರ ಸಾಲುಗಳನ್ನು ಉದ್ಗರಿಸುವುದರ ಮೂಲಕ ಕನ್ನಡದ ಆ ಹೊತ್ತಿನ ಪೊಳ್ಳು ಸಾಹಿತ್ಯದ ಬಗ್ಗೆ ಗೇಲಿಮಾಡುತ್ತಿದ್ದರು. ಒಟ್ಟಾರೆ ನಮ್ಮಲ್ಲಿನ ಕನ್ನಡತನವನ್ನು ಹೊಡೆದೆಬ್ಬಿಸುವ ಮೂಲಕ ಜಾಗೃತಿಯ ಹರಿಕಾರರಾದರು. ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಶೈಲಿಯಲ್ಲಿಯೇ ಉತ್ತರ ಬರೆಯುವಂತೆ ಪ್ರೇರೇಪಿಸಿದ CV ಕನ್ನಡ ಒಂದೇ ಭಾಷೆಯಾದರೂ ಕೂಡ ಹೇಗೆ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿ ಅಭಿವ್ಯಕ್ತಿಗೊಳ್ಳುತ್ತದೆ, ಒಂದು ಪರಿಪೂರ್ಣ ಭಾಷೆಯಾಗಿ ಕಂಗೊಳಿಸುತ್ತಿದೆ ಎನ್ನುವುದನ್ನು ಪ್ರಾತ್ಯಕ್ಷಿಕೆಗಳ ಮುಖೇನ ಹೇಳಿಕೊಟ್ಟರು. ವಿಶೇಷವಾಗಿ ಹನುಮಂತಪ್ಪ,ಚಿದಾನಂದ, ಉಷಾ, ಯತಿರಾಜ್, ಸತ್ಯಾನಂದ, ಹೇಮಣ್ಣ ಮತ್ತು ನನ್ನ ಶೈಲಿಯನ್ನು ಹೊಗಳಿ ಕೊಂಡಾಡುತ್ತಿದ್ದ CV ಯಾವುದೇ ಸನ್ನಿವೇಶದಲ್ಲಿ ನಮ್ಮ ನಮ್ಮ ಶೈಲಿಯ ಕನ್ನಡಕ್ಕೆ ತಿಲಾಂಜಲಿ ನೀಡದಂತೆ ಕಳಕಳಿಯ ವಿನಂತಿ ಮಾಡಿಕೊಂಡಿದ್ದರು.
ಹತ್ತನೇ ಇಯತ್ತೆಯನ್ನು ಮುಗಿಸಿ ಕಾಲೇಜಿನ ಪಯಣವನ್ನು ಸಾಗಿಸಿದ ನನ್ನ ಮನಸ್ಸಿನಲ್ಲೂ CV ಅನೇಕ ಬಾರಿ ಕಾಡಿದ್ದಿದೆ. ಕೆಲವೊಂದು ಕನ್ನಡ ಕಾಲೇಜು ಪ್ರಾಧ್ಯಾಪಕರ ನೀರಸ ಪ್ರವಚನವನ್ನು ಕೇಳಿಸಿಕೊಂಡ ಹೊತ್ತು CV ತುಸು ಹೆಚ್ಚಾಗಿಯೇ ನನ್ನನ್ನು ಕಾಡಿದ್ದಿದೆ. ಆದರೆ ಕಾರಣಾಂತರಗಳಿಂದಾಗಿ ನನ್ನ ಇಂಜಿನೀಯರಿಂಗ್ ಅಭ್ಯಾಸದ ದಿನಗಳಲ್ಲಿ CVಯವರನ್ನು ಭೇಟಿಯಾಗಲಾಗಲಿಲ್ಲ. ಎಂಜಿನಿಯರ್ ಮುಗಿಸಿದ ಅನಿತರಲ್ಲಿಯೇ ಒಮ್ಮೆ ಭೇಟಿಯಾಗಿದ್ದ CV ನಾನು ಇಂಜಿನೀಯರಿಂಗ್ ಮಾಡಿದ ಬಗ್ಗೆ ಅಷ್ಟು ಖುಷಿಯಾದವರಂತೆ ತೋರಲಿಲ್ಲ. ಏನನ್ನೋ ಹೇಳಹೊರಟು ಮತ್ತೆ ಮೌನಕ್ಕೆ ಶರಣಾದ ಮೇಷ್ಟ್ರ ಒಳದ್ವನಿ ಮಾತ್ರ ಅವರ ಮೊದಲ ದಿನದ ಬೂಟಿನ ಸದ್ದಿಗಿಂತಲೂ ಜೋರಾಗಿಯೇ ನನಗೆ ಕೇಳಿಸಿತ್ತು.
ಈಗ್ಗೆ ಎಂಟು ಹತ್ತು ವರ್ಷಗಳ ಹಿಂದೆ ನನ್ನ ನೆಚ್ಚಿನ ಕನ್ನಡ ಮೇಷ್ಟ್ರನ್ನ ಮತ್ತೆ ದಾವಣಗೆರೆಯಲ್ಲಿ ಭೇಟಿಯಾದೆ. ಆ ಹೊತ್ತಿಗೆ ಅವರ ಮಗ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ನೆನಪು. ಉದ್ಯೋಗದಿಂದ ನಿವೃತ್ತಿ ಹೊಂದಿದ CV ಆರೋಗ್ಯ ಸಮಸ್ಯೆಯಿದ್ದ ಮಗನ ಜೊತೆಗೇ ದಾವಣಗೆರೆಯಲ್ಲಿ ತಾತ್ಕಾಲಿಕವಾಗಿ ವಾಸ ಮಾಡುತ್ತಿದ್ದರು. ಕಾಲ ತನ್ನ ಮಹಿಮೆಯ ಛಾಪನ್ನು ಕನ್ನಡ ಪಂಡಿತರ ಶರೀರದ ಮೇಲೂ ಒತ್ತಿತ್ತು. ಅಷ್ಟೇನೂ ಆರೋಗ್ಯದಿಂದ ಕೂಡಿಲ್ಲದಂತೆ ಕಂಡುಬಂದ CVಯವರ ಮುಖದಲ್ಲಿ ವೃದ್ದಾಪ್ಯ ಮನೆಮಾಡಿತ್ತು. ವೈಶಂಪಾಯನ ಸರೋವರದ ನನ್ನ ಭೀಮಸೇನನನ್ನು ಮುಪ್ಪು ಆವರಿಸಿತ್ತು. ಕನ್ನಡ ತರಗತಿಗಳ ಅನಭಿಷಿಕ್ತ ರಾಜಕುಮಾರನಂತಿದ್ದ CV, ನಾನು ನನ್ನ ಹೈಸ್ಕೂಲಿನ ದಿನಗಳಲ್ಲಿ ಕಂಡ, ನಮ್ಮಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿಸಿದ ಕನ್ನಡ ಮೇಷ್ಟ್ರ ನೆರಳು ಮಾತ್ರವಾಗಿ ಕಂಡರು. ಆ ರಾತ್ರಿಯ ಬಹುಭಾಗವನ್ನು CVಯವರ ನೆನಪಿನಲ್ಲಿಯೇ ಕಳೆದಿದ್ದು ಈಗ ನೆನಪಾಗುತ್ತಿದೆ. CVಯವರು ದುರ್ಯೋಧನನ್ನು ಹೀಗಳಿಸಿ ನಿಂದಿಸುತ್ತಿದ್ದ ಭೀಮನ ಶೈಲಿಯಲ್ಲಿಯೇ ನಾನು ಕಾಲನನ್ನು ಮನಸಾರೆ ನಿಂದಿಸಿದೆ.
ಹೋದ ತಿಂಗಳು ಮೊದಲನೇ ವಾರದಲ್ಲಿ CV ಕೋವಿಡ್ ಕಾರಣದಿಂದಾಗಿ ಶಿವಮೊಗ್ಗೆಯಲ್ಲಿ ನಿಧನರಾದರು ಎಂದು ತಿಳಿದು ನಿಂತ ಭೂಮಿ ಕುಸಿದ ಹಾಗಾಯ್ತು. CVಯವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು CVಯವರು ಸುಮಾರು ಹದಿನೈದು ವರ್ಷಗಳ ಕಾಲ ನನ್ನೂರಿನಲ್ಲಿ ಹೊತ್ತಿಸಿದ ಅಸಂಖ್ಯಾತ ಕನ್ನಡ ದೀಪಗಳ ಪರವಾಗಿ ಪ್ರಾರ್ಥಿಸುತ್ತೇನೆ. ಕನ್ನಡದ ಬಹುಮುಖ್ಯ ಮಾರ್ಗವೊಂದನ್ನು ಗ್ರಾಮೀಣ ಯುವಕರ ಮನೆಯ ಬಾಗಿಲುಗಳಿಗೆ ತಲುಪಿಸಿದ CVಯವರ ಕನ್ನಡಸೇವೆ ಅವರು ಹೊಂದಿದ್ದ ಕನ್ನಡಪಂಡಿತರ ಹುದ್ದೆಗಿಂತಲೂ ಬಹಳ ಮಿಗಿಲಾಗಿದ್ದು ಎಂದು ನಾನು ಪರಿಭಾವಿಸಿದ್ದೇನೆ. ತನ್ಮೂಲಕ ತಮ್ಮ ಕಾರ್ಯವ್ಯಾಪ್ತಿಗಿಂತಲೂ ಬಹು ಹಿರಿದಾದ ಕ್ಯಾನ್ವಾಸ್ ಒಂದನ್ನು CVಯವರು ತಮ್ಮನ್ನು ಆರಾಧಿಸುವವರಿಗಾಗಿ ಬಿಟ್ಟು ಹೋಗಿದ್ದಾರೆ ಎನಿಸುತ್ತದೆ.