ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು
ನೀರನ್ನ ಮುಗಿಲಿಗೇರಿಸಿ ದೈವೀಕರಿಸಿ ಪ್ರಾರ್ಥಿಸುವ,ನೀರನ್ನ ನೆಲದಲ್ಲೇ ಕಂಡು ಸಂಭ್ರಮದಿಂದ ಹಾಡುವ ಇಬ್ಬಗೆಯ ಸಂಸ್ಕೃತಿಗಳು ನಮ್ಮೊಳಗಿವೆ.ನೀರನ್ನ ಪಂಚಭೂತಗಳಲ್ಲಿ ಒಂದೆಂದು ಅದು ಪಶು,ಪಕ್ಷಿ,ಮೊದಲಾದ ಕೋಟ್ಯಾಂತರ ಜೀವರಾಶಿಗೂ ಸಸ್ಯ ಸಂಕುಲಕ್ಕೂ ಅಗತ್ಯವೆಂಬಂತೆಯೇ ನೀರಿನಿಂದಲೇ ಇವುಗಳೆಲ್ಲದವರ ನಾಶ ಎಂಬ ಇಬ್ಬಗೆಯ ಸತ್ಯಗಳೂ ಇವೆ. ಒಂದಕ್ಕೆ ಮನೋಹರ ರೂಪ ಅಂಟಿಕೊಂಡರೆ ಮತ್ತೊಂದಕ್ಕೆ ಭೀಕರ ಸ್ವರೂಪವಿದೆ.
” ಮಳೆಯಿಂದ ಅನ್ನ,ಯಜ್ಞದಿಂದ ಮಳೆ “ಎಂದು ಭಗದ್ಗೀತೆ ಹೇಳಿದರೆ,”ಬಿಸಿಲು ಕುಣಿದು ಬೆವತಾದ ಈಗ ಬಂದಾದ ಮಳಿಯ ಹದಕ” ಎಂದು ಬೇಂದ್ರೆಯವರ ಕವಿತೆ ಹೇಳಿದೆ.ಈ ನೆಲೆಯಲ್ಲಿ ಮಲೆನಾಡಿಗೆ ಮಳೆ ಪ್ರಳಯರೂಪಿಯಾದರೆ ಬಯಲಸೀಮೆಗೆ ಮಳೆ ಅಂಗಳಕ್ಕಿಳಿದು ಆಡುವ ಆನಂದ ರೂಪಕ.
ಗಾಳಿ ಮಳೆ, ಜಡಿ ಮಳೆ,ನರಿ ಮಳೆ,ಅಲಿ ಕಲ್ಲು ಮಳೆ,ದೆವ್ವ ಮಳೆ ಎಂದು ದುಡಿವ ರೈತಾಪಿ ಜನರು ಮಳೆಯನ್ನ ಬಿಸಿಲ ಮೂಲದಿಂದಲೇ ಗುರ್ತಿಸುತ್ತಾರೆ.ಕಟಿಂಗ್ ಶಾಪ್ ತರದ ಸ್ಪ್ರೇ ಮಳೆ,ಬೀಳಿಸಿ ನೋಡಲೆಂದೇ ಹನಿವ ಜಿನಿ ಜಿನಿ ಕೆಸರು ಮಳೆ,ಮನೆ ಹೊಲ,ಊರು ಕೇರಿ,ಕೆರೆ ಕಟ್ಟೆಗಳೆನ್ನದೇ ಕೊಚ್ಚುವ ಹುಚ್ಚು ಮಳೆ,ಮನೆಯೊಳಗೇ ಹಾಕಿ ಕೆಡವೋ ಕಿಲಾಡಿ ಮಳೆ… ಮಳೆಗೆ ಹಲವಾರು ರೂಪಗಳು.
ಮಳೆಯನ್ನ ಮುಂಗಾರು ಮಳೆ ಹಿಂಗಾರು ಮಳೆ ಎಂದು ಭಾರತೀಯ ಮಳೆಯ ಕ್ರಮ. ಇಲ್ಲಿ ಮಳೆ ನಕ್ಷತ್ರಗಳು ಏಪ್ರಿಲ್ ನಿಂದ ನವೆಂಬರ್ ತನಕವೂ ಕಂಡು ಬರುತ್ತವೆ.ಬ್ರಿಟೀಷ್ ಕಾಲ ಚರಿತ್ರೆಯ ಪ್ರಕಾರ ಮಳೆಗಾಲ ಜೂನ್ ತಿಂಗಳಿಂದ ಆರಂಭವಾಗಿ ಸೆಪ್ಟಂಬರ್ ತನಕ ಮಾತ್ರವಿದೆ.
ಮಳೆ ನೀರು ಹರಿದು ಕೆರೆ,ಹಳ್ಳ,ಹೊಳೆ,ನದಿ,ಸಮುದ್ರ ಎಂದಾದರೆ ಆಯಾ ನೀರೇ ಬಿಸಿಲಿಗೆ ಆವಿಯಾಗಿ ಮೋಡಗಟ್ಟಿ ಮತ್ತೆ ಮಳೆಯಾಗುವ ಕ್ರಿಯೆಯನ್ನ ಜಲಚಕ್ರವೆಂದು ಕರೆಯಲಾಗುತ್ತದೆ.
ಮಳೆ ಕುರಿತಾದಂತೆ ಜನಪದರಲ್ಲಿ ಹಲವು ನಂಬಿಕೆಗಳಿವೆ.ಸ್ಥೂಲವಾಗಿ ಬಯಲು ಸೀಮೆಯ ರೈತರ ಒಳಗಿನ ನಂಬಿಕೆಗಳಿವೆ.
” ನಾಯಿ ಆಕಾಶಕ್ಕೆ ಮುಖಮಾಡಿ ಊಳಿಟ್ಟರೆ ಮಳೆಯಾಗುತ್ತದೆ.”,
” ನೀರು ಹೊತ್ತು ತರುವಾಗ ಕೊಡ ಜಾರಿ ಬಿದ್ದು ಒಡೆದರೆ ಮಳೆಯಾಗುತ್ತದೆ.”
” ಹಲವಾರು ಕಪ್ಪೆಗಳು ಒಂದು ಕಡೆಯೇ ಸೇರಿ ವಟಗುಟ್ಟಿದರೆ ಮಳೆಯಾಗುತ್ತದೆ”
ಒಂದು ವೇಳೆ ಆಗಬೇಕಾದ ಮಳೆ ಆಗದಿದ್ದರೆ ಜನರು ಅನೇಕ ಆಚರಣೆಗಳನ್ನ ಮಳೆಗಾಗಿ ನೆರವೇರಿಸುತ್ತಾರೆ.ಇಲ್ಲೊಂದು ವಿಶಿಷ್ಟ ಏನೆಂದರೆ ಜನ ಮೋಡದೊಳಗಿನ ನೀರನ್ನ ಮಳೆರಾಯನೆಂದು ಗಂಡು ರೂಪದಲ್ಲಿ ಕಂಡು ಅದನ್ನ ನೆಲಕ್ಕೆ ತರಲು ಪ್ರಾರ್ಥಿಸಿದರೆ,ಅದೇ ನೀರು ನೆಲಕ್ಕೆ ಮಳೆಯಾಗಿ ಹರಿದು ನಿಂತರೆ ಅದನ್ನ ಗಂಗಮ್ಮನೆಂದು ಹೆಣ್ಣಾಗಿ ಭಾವಿಸಿ ಪೂಜಿಸುತ್ತಾರೆ.ಮಳೆರಾಯ ಬರದಿದ್ದಾಗ ಆತನನ್ನ ನೆಲಕ್ಕೆ ತರುವ ಆಚರಣೆಗಳು ಬಹುತೇಕ ಪುರುಷ ಪ್ರಧಾನವಾಗಿವೆ.ನೆಲಕ್ಕಿಳಿದ ಮಳೆ ಕೆರ ಹೊಳೆಯಾಗಿ ಹರಿವಾಗ ಅದಕ್ಕೆ ನೀಡುವ ಬಲಿದಾನ ಮತ್ತು ಪೂಜಾ ಕ್ರಿಯೆಗಳು ಬಹುತೇಕ ಹೆಣ್ಣು ಪ್ರಧಾನ.ಮಳೆ ಪೂರ್ವದ ಆಚರಣೆಗಳು ಶಿವ ಪ್ರಧಾನ್ಯತೆಯನ್ನ ಸೂಚಿಸಿದರೆ ಮಳೆ ನಂತರದ ಗಂಗೆಯ ಆಚರಣೆಗಳು ಶಕ್ತಿ ಪ್ರಧಾನವಾಗಿವೆ.
ಭಜನೆ:
ಬಯಲು ಸೀಮೆಯಲ್ಲಿ ಮಳೆ ಬಾರದಿದ್ದಾಗ ಶಿವನ ದೇಗುಲದಲ್ಲಿ ಕೂಡಿ ಅಹೋರಾತ್ರಿ ಏಳುದಿನಗಳ ಕಾಲ ಪಾಳೆ ಪ್ರಕಾರ ಭಜನೆ ಮಾಡುತ್ತಾರೆ.ಹೀಗೆ ಗುಡಿ ಸೇರುವ ಮೊದಲು ಅವರು ಊರ ದೇಗುಲಗಳಿಗೆಲ್ಲಾ ಗಂಡು ಹೆಣ್ಣು ದೈವಗಳೆನ್ನದೆ ಭೇಟಿ ನೀಡಿ ಪೂಜೆ ಸಲ್ಲಿಸಿ ಶಿವನ ಗುಡಿಗೆ ಬರುತ್ತಾರೆ.ಹೀಗೆ ಭಜನೆ ಮಾಡಿದ ನಂತರ ಊರಿನವರಿಗೆಲ್ಲಾ ಪ್ರಸಾದದ ಪರುವು ಮಾಡುತ್ತಾರೆ.ಇನ್ನೂ ಕೆಲವು ಕಡೆ ಮಳೆ ಮಲ್ಲಪ್ಪನ ಗುಡಿ ಮುಂದೆ ಡೊಳ್ಳು ಸೇವೆ ನೆರವೇರಿಸುತ್ತಾರೆ.ಮುಳ್ಳಾವಿಗೆ ಸಿದ್ದರು ಹಠದ ವ್ರತ ತೊಟ್ಟು ನಿಲ್ಲುತ್ತಾರೆ.
ಗುರ್ಚಿ ಮೆರವಣಿಗೆ:
ಕೊರವರು,ಬೇಡರು,ಹೊಲೆಯರು, ಹೀಗೇ ಒಂದೊಂದು ಕಡೆಗೆ ಒಂದೊಂದು ಜನಾಂಗದ ಎಂಟರಿಂದ ಹತ್ತು ವರ್ಷದ ಹುಡುಗನನ್ನ ಬೆತ್ತಲೆ ಅಥವಾ ಅರೆ ಬೆತ್ತಲೆ ಗೊಳಿಸಿ ಆತನ ತಲೆಯ ಮೇಲೆ ರೊಟ್ಟಿ ಹಂಚನ್ನ ಬೋರಲಾಗಿ ಹಾಕಿ ಅದರ ಮೇಲೆ ಹಸುವಿನ ಸಗಣಿಯೊಳಗೆ ಮಾಡಿದ ಗುರ್ಚಿಯನ್ನ ಗುಂಡಗೆ ಇಟ್ಟು ಅದಕ್ಕೆ ಗರುಕೆ ಹೊನ್ನಾರಿಕೆ ಹೂಗಳನಿಟ್ಟು ಪೂಜೆ ಮಾಡಿ ಮನೆ ಮನೆಗೆ
” ಗುರ್ಚಿ ಗುರ್ಚಿ ಎಲ್ಯಾಡಿ ಬಂದೆ
ಹಳ್ಳಾ ಕೊಳ್ಳ ಸುತ್ತಾಡಿ ಬಂದೆ
ಸುಯ್ಯೋ ಸುಯ್ಯೋ ಮಳಿರಾಯ”
ಎಂದು ಹಾಡುತ್ತಾ ಬರುತ್ತಾರೆ. ಮನೆಯ ಹೆಣ್ಣು ಮಕ್ಕಳು ಬಂದು ಗುರ್ಚಿ ಹೊತ್ತ ಹುಡುಗನಿಗೆ ನೀರು ಹಾಕಿ ಪೂಜೆ ಮಾಡಿ ಮನೆಯೊಳಗಿನ ಧಾನ್ಯವನ್ನ ಮೊರದಲ್ಲಿ ತಂದು ನೀಡುತ್ತಾರೆ.ಕೆಲವರು ದಕ್ಷಿಣೆಯನ್ನೂ ನೀಡುತ್ತಾರೆ.ಹಿಂಡು ಹುಡುಗರು ಹಿಂದಿರುಗುವಾಗ ..
” ಕಾರ ಮಳೆಯೇ ಕಪಾಟಿ ಮಳೆಯೇ
ಬಣ್ಣ ಕೊಡುತಿನಿ ಬಾರಲೆ ಮಳೆಯೇ
ಸುಣ್ಣಾ ಕೊಡುತಿನಿ ಬಾರಲೆ ಮಳಿಯೇ..” ಎಂದು ಹಾಡುತ್ತಾ ಹೋಗುತ್ತಾರೆ.ಇಲ್ಲಿಯ ಗುರ್ಚಿ ಎಂಬ ಪದ ಮೂಲವು ಬಹುಶಃ ಗುರುಸಿದ್ಧ ಎಂಬ ಪದದ ಅಪಭ್ರಂಶವಾಗಿರಬೇಕು.
ಜೋಕುಮಾರನ ಪೂಜೆ:
ಮಾತೃ ಮೂಲದ ಗಣೇಶ ಹಬ್ಬದ ನಂತರ ಬರುವ ಮಳೆ ದೈವ ಜೋಕುಮಾರ ಸ್ವಾಮಿ ಮೂಲತಹ ಪಿತೃ ಮೂಲದವನು.ಫಟಿಂಗ,ಉಡಾಳ ಎಂಬ ಕೀರ್ತಿ ಹೊತ್ತ ಈ ದೈವವನ್ನ ಕೆಲ ಕೆಲವು ಕಡೆಗೆ ಭಿನ್ನ ಭಿನ್ನ ಸಮುದಾಯಗಳಾದ ಬೇಡರು,ಅಂಬಿಗರು,ಬಾರಕೇರು ಹೊತ್ತು ತರುತ್ತಾರೆ.ಗಣೇಶ ಅಮವಾಸೆಯ ಮೂಲದವನಾದರೆ,ಜೋಕುಮಾರ ಹುಣ್ಣಿಮೆ ಮೂಲದವ.ಮಳೆ ಮತ್ತು ಫಲವಂತಿಕೆಯ ದೈವವಾದ ಈತ ಶಿವನ ಅನುಗ್ರಹದಿಂದಲೇ ಇಳೆಗೆ ಮಳೆ ತರುತ್ತಾನೆ ಎನ್ನುತ್ತಾರೆ.
ಮಳೆ ತರುವ ಗುರ್ಚಿ ಆಚರಣೆಯನ್ನ ಬಾಲಕರು ಹೊತ್ತು ನೆರವೇರಿಸಿದರೆ ಫಲವಂತಿಕೆಯ ಜೋಕಪ್ಪನನ್ನ ಮಹಿಳೆಯರು ಹೊತ್ತು ಮೆರವಣಿಗೆ ಸುತ್ತುತ್ತಾರೆ.ಇವರು ದಾನ ನೀಡಿದವರಿಗೆ ಜೋಕುಮಾರನ ಬುಟ್ಟಿಯೊಳಗಿನ ಬೇವಿನ ಎಲೆಗಳನ್ನ ನೀಡುತ್ತಾರೆ ಅದು ರೈತರಿಗೆ ಪ್ರಸಾದವೆಂದೂ ಕೊನೆದಿನದ ಮನೆಯ ಅಂಬಲಿಯ ಜೊತೆಗೆ ಅದನ್ನ ಹೊಲಗಳಿಗೆ ಚರಗ ನೀಡಿ ಫಸಲಿನ ನಿರೀಕ್ಷೆ ಮಾಡುತ್ತಾರೆ.ಮಕ್ಕಳಾಗದವರು ಜೋಕಪ್ಪನ ತೆರೆದ ಬಾಯಿಗೆ ಬೆಣ್ಣೆ ನೀಡಿದರೆ ಮಕ್ಕಳಾಗುವುದೆಂಬ ಪ್ರತೀಯೂ ಇಲ್ಲಿದೆ.ಜೋಕಪ್ಪನ ಅಳಲಿನಲ್ಲಿ ಮನೆ ಮನೆಗಳಲ್ಲಿ ಮಾಡುವ ಸೆಜ್ಜೆಯ ಕಡುಬು ತಯಾರಿಯ ಆಕಾರ ರೀತಿಗಳು ಯೋನಿ ಮತ್ತು ಶಿಶ್ನ ರೂಪಿಯಾಗಿರುತ್ತವೆ.
” ಅಡ್ಡಡ್ಡ ಮಳಿ ಬಂದು ದೊಡ್ಡ ದೊಡ್ಡ ಕೆರಿ ತುಂಬಿ
ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ,
ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ
ಮುಡುತುಂಬ ಹೂವ ಮುಡಿವಂತೆ ಚಲುವಿ ಮಡದಿಯಾಕಿಗೆಂದ ಸುಕುಮಾರ”
ಹೀಗೆ ಮಡಿವಾಳರ ಹುಡುಗಿಯ ಕೆಣಕಲು ಹೋದ ಅಂಬಿಗರ ಹುಡುಗ ಜೋಕಪ್ಪನ ಕೊಲೆ ನೀರ ಆಚೆ ಆಗುತ್ತದೆ ಹೊಲೆಯರು ಧಪನು ಮಾಡಿದ ನಂತರ ಹಬ್ಬ ಮುಗಿಯುತ್ತದೆ.ಜೋಕಪ್ಪನ ಆಚರಣೆ ಊರು ಹುಟ್ಟಿಕೊಂಡ ಒಕ್ಕಲುತನ ಕಾಲದ್ದಾಗಿರಬೇಕು ” ಆರಂಭ ಸ್ಥಿತಿಯಲ್ಲಿ ಮನುಷ್ಯನಿಗೆ ಆಕರ್ಷಕ ವಸ್ತು ಸುಲಿದುಕೊಂಡು, ಎತ್ತಿಕೊಂಡು ಒಯ್ಯ ಬೇಕೆನಿಸುವಂತಹ ವಸ್ತುವೆಂದರೆ ಮುಖ್ಯವಾಗಿ ಹೆಣ್ಣು .ಏಕೆಂದರೆ ಆಗ ಮಾನವನಲ್ಲಿ ಧನ ಸಂಚಯವೆಂಬುದೇ ಇದ್ದಿಲ್ಲ.ಹೆಣ್ಣೇ ಆತನ ಒಂದು ಸಂಪತ್ತು.ಸಂಸ್ಕೃತ ’ಭಗ’ ಶಬ್ದದಲ್ಲಿ ಇವೆರೆಡೂ ಅರ್ಥ ಪ್ರತೀತಿ ಯಾಗುವುದಕ್ಕೆ ಇದೇ ಕಾರಣವು.ಶೌರ್ಯ ಸಾಹಸಾದಿಗಳು ಹೆಚ್ಚಿರುವಲ್ಲಿ ಬಹು ತರವಾಗಿ ಹೆಣ್ಣಿನ ಹುಚ್ಚು ಅಳತೆ ಮೀರಿರುವುದನ್ನ ಕಾಣ ಬಹುದು” ಎಂಬ ಡಾ.ಶಂ.ಬಾ.ಜೋಶಿಯವರ ಮಾತುಗಳು ಇಲ್ಲಿ ಗಮನಾರ್ಹ.ಇಂದಿಗೂ ನೀರು ಕೇಂದ್ರಿತವಾದ ಈ ಆಚರಣೆಗಳಲ್ಲಿ ಪಾರ್ವತಿ ಮೂಲದ ಗಣೇಶ ನೀರಿಗೆ ಬಲಿಯಾದರೆ ಶಿವನ ಮೂಲದ ಜೋಕಪ್ಪ ನೀರಿನಾಚೆಗೆ ಕೊಲೆಯಾಗುತ್ತಾನೆ.ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡೂ ಕಥನಗಳ ಆಳ ಶೀಲ ಕೇಂದ್ರಿತವಾಗಿಯೇ ಇವೆ.
ಕಾಡು ಸೋಸುವುದು:
ಮಳೆ ಬಾರದಿದ್ದರೆ ಹಳ್ಳಿಗಳಲ್ಲಿ ಇಂದಿಗೂ ಕೊನೆಯ ಅಸ್ತ್ರವೆಂಬಂತೆ ಕಾಡು ಸೋಸಲು ಹೊರಡುತ್ತಾರೆ.ಈಗಾಗಲೇ ಹೂತ ಸ್ಮಶಾನದ ಹೆಣಗಳನ್ನ ಹೊರ ತೆಗೆದು ಅಲ್ಲಿ ಬಿಳಿ ತೊನ್ನಿನ ಹೆಣವನ್ನೇನಾದರೂ ಹೂಳಲಾಗಿದೆಯಾ ಹುಡುಕುತ್ತಾರೆ ಹೀಗೆ ಸತ್ತವರ ಗುದ್ದು ಬಗೆವಾಗ (ಸಮಾದಿ) ತೊನ್ನಿನ ಹೆಣ ಸಿಕ್ಕರೆ ಅದನ್ನ ಸುಡುತ್ತಾರೆ ಆಗ ಮಳೆ ಬರುವುದೆಂಬ ನಂಬಿಕೆ ಜನಪದ ಕೃಷಿಕರದು.ಈ ಕ್ರಿಯಾದಿಗಳನ್ನ ಹೊಲೆ ಮಾದಿಗರು ಮಾಡುತ್ತಾರೆ ಇವರು ಹಿಂದೆ ಹೊಲದ ನಂಟಿದ್ದವರು ಹೊಲ/ಹೊಲಸು ಎಂದು ಎಸ್.ಎಸ್.ಹಿರೇಮಠರು ವಿಭಜಿಸಿ ಹೇಳುವು ಈ ಜನಾಂಗಗಳು ಹೊಲದ ಒಡೆತನ ಕಳಕೊಳ್ಳುತ್ತಾ ಹೊಲಗಳ ಕೂಲಿ ಆಳುಗಳಾಗಿ ಜೀತಗಾರರಾಗಿ ಮಾರ್ಪಟ್ಟವರು. ಇವರು ಬ್ರಿಟೀಷ್ ಕಾಲಾ ನಂತರ ಕೀಳುಕುಲ,ಕ್ಷುದ್ರರು,ಕಳ್ಳರು ಎಂದೂ ಕರೆಸಿಕೊಳ್ಳುವಾಂತಾದವರು.
ಮಳೆಯ ಕುರಿತ ಪ್ರಾರ್ಥನೆ,ಮಳೆಗಾಗಿ ಭಜನೆ ಮುಗಿದ ನಂತರ ಸುರಿದ ಮಳೆಗೆ ನೆಲೆಗೊಂಡ ಕೆರೆ, ಹೊಳೆಗಳಿಗೆ ಬಲಿದಾನಗಳಾಗಿ ಅವುಗಳನ್ನ ಗಟ್ಟಿಗೊಳಿಸಿದವರು ಮಹಿಳೆಯರು.ಪ್ರಭುಗಳು,ಊರ ಗೌಡರು,ಪ್ರತಿಷ್ಟಿತರು ಕಟ್ಟಿಸಿದ ಕೆರೆಗಳು ನಿಲ್ಲಲು ಆಯಾ ಮನೆಗಳ ಕಿರಿಯ ಸೊಸೆಯರು ಬಲಿದಾನಗಳಾದ ಕಥನ ಕಾವ್ಯಗಳು ಶಾಸನೋಕ್ತ ಉಲ್ಲೇಖಗಳು ಅನೇಕ.ತಳ ಸಮುದಾಯಗಳ ಶ್ರಮದಿಂದ ಸುರಿದ ಮಳೆ ಕೆರೆ ಗಳಾಗಿ ನಿಂತರೂ ಅವರಿಗೆ ಸಾಮಾಜಿಕ ತಾರತಮ್ಯವನ್ನ ಸೃಷ್ಟಿಸಿದ್ದೂ ಈ ನೀರೇ ಎಂಬುದು ಬಹು ದೊಡ್ಡ ವ್ಯಂಗ್ಯ.ಚರಿತ್ರೆ ಮತ್ತು ಧರ್ಮವ್ಯವಸ್ಥೆಗಳು ಹಾಡಿ ಹೊಗಳುವ ಪ್ರಭುಸಮುದಾಯಗಳು,ಸಂತರು ಕಟ್ಟಿದ ಕೆರೆಗಳಾದರೂ ತಳಸಮುದಾಯಗಳಿಗೆ ಯಾಕೆ ನೀರನ್ನ ಮುಟ್ಟಲೂ ಬಿಡಲಿಲ್ಲ? ಎಂಬುದೊಂದು ಸಂಕಟವೂ ನೀರಿಗೇ ತಾಕಿಕೊಂಡಿದೆ.
ನೀರೊಳಗೆ ಮುಳುಗಿ ಸಾಯುತಿದ್ದರೂ ಹೊಲೆಯರ ಹುಡುಗನೆಂಬ ಜಾತಿಯ ಕಾರಣಕ್ಕೆ ಮೇಲೆತ್ತಲಾರದೆ ಸಾಯಲು ಬಿಡುವ ಶಿವರಾಮ ಕಾರಂತರ ಚೋಮನದುಡಿಯ ನೀಲ ಒಂದು ದಿಕ್ಕಾಗಿ ,ದೇವದಾಸಿ ಆಚರಣೆ ದೇವರ ಕೆಲಸವಲ್ಲ ಅದು ವೇಶ್ಯವಾಟಿಕೆಯೇ ಎಂದು ವಿವರಿಸಿದ್ದಕ್ಕಾಗಿ ಬಾವಿಯೊಳಗೆ ತೇಲುವ ಆನಂದರ ನಾನು ಕೊಂದ ಹುಡುಗಿ ಮತ್ತೊಂದು ದಿಕ್ಕಾಗಿ ನಮ್ಮ ನೀರ ಪರಂಪರೆಯನ್ನ ಬಗೆದು ತೋರುವಂತೆಯೇ ಕಾಣುತ್ತಾರೆ.
ಇಂದಿಗೂ ಗಂಗೆ ಪೂಜೆ,ಅಥವಾ ಹೊಳೆಗೆ ಹೊರಡಿಸುವ ಹೆಣ್ಣು ದೈವಗಳ ಆಚರಣೆಗಳಲ್ಲಿ ನೀಡುವ ಪಶು ಬಲಿಯಲ್ಲಿಯೂ ಹೆಣ್ಣು ಕುರಿ ಕೆಲವು ಸಂದರ್ಭಗಳಲ್ಲಿ ಗರ್ಭದರಿಸಿದ ಕುರಿ ಮೇಕೆಗಳನ್ನೇ ಬಲಿಯಾಗಿಸುತ್ತಾರೆ.