ಮುಂದಿನ ಮುಖ್ಯಮಂತ್ರಿ ಯಾರೆಂಬ ಬಹಿರಂಗ ಹೇಳಿಕಾ ಸಮರ ಕಾಂಗ್ರೆಸ್ನಲ್ಲಿ ಮೇಲ್ನೋಟಕ್ಕೆ ತಣ್ಣಗಾಗಿದೆ. ಆದರೆ ಒಳಗೊಳಗೆ ಪರಸ್ಪರ ಇರಿಯುವ ಹುನ್ನಾರ ಸಾಗಿದೆ. ಪಕ್ಷವನ್ನು ಗೆಲ್ಲಿಸುವ ಸಾಮೂಹಿಕ ಯೋಚನೆಯಾಗಲೀ ಯೋಜನೆಯಾಗಲೀ ಕಾರ್ಯತಂತ್ರವಾಗಲೀ ಕಾಣಿಸುತ್ತಿಲ್ಲ. ಹೈಕಮಾಂಡ್ ಕೂಡಾ ಈ ವಿಚಾರದಲ್ಲಿ ಸ್ಪಷ್ಟ ನಿಲುವು ನಿರ್ಧಾರ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ.
ಸಿದ್ದು-ಡಿಕೆಶಿ ಹಾವು ಏಣಿ ಆಟ
ಹೈಕಮಾಂಡ್ ಸೂಚನೆಗೆ ಜಗ್ಗದಬಗ್ಗದ ರೀತಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಕರ್ನಾಟಕದಲ್ಲಿ ಮುಂದುವರಿದಿದೆ. ಕೆಲವರು ಬಹಿರಂಗದಲ್ಲಿ ತಮ್ಮ ಅಂತರಂಗವನ್ನು ಬಿಚ್ಚಿಡುತ್ತಿದ್ದರೆ ಹಲವರು ಅಂತರಂಗದಲ್ಲಿ ಗೊಣಗಾಟ ನಡೆಸಿದ್ದಾರೆ. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ಪಕ್ಷದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯ ಉಸ್ತುವಾರಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜಿವಾಲಾ ಎಚ್ಚರಿಕೆ ಧಾಟಿಯಲ್ಲಿ ಇಂಥ ಅಪದ್ಧ ಸಲ್ಲದೆಂದು ಗದರಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಗದರಿಸಿ ಬಾಯಿ ಮುಚ್ಚಿಸಿದಂತೆ. ಒಂದು ಮಗು ಬಾಯಿ ಮುಚ್ಚಿದರೆ ಪಕ್ಕದ ಮಕ್ಕಳು ಬಾಯಿ ತೆರೆಯುತ್ತಾರೆ. ಈಗ ಕರ್ನಾಟಕದ ಕಾಂಗ್ರೆಸ್ನಲ್ಲಿ ಇದೇ ನಡೆಯುತ್ತಿರುವುದು. ಆಗಿರುವ ಬೆಳವಣಿಗೆ ಎಂದರೆ ಪಕ್ಷದ ಆಂತರಿಕ ಶಿಸ್ತು ಸಮಿತಿ ಎನ್ನುವುದು ಗೊರಕೆ ಅವಸ್ಥೆಯಿಂದ ಎಚ್ಚರಗೊಂಡು ಮೈಕೈ ಮುರಿದುಕೊಳ್ಳಲು ಮುಂದಾಗಿರುವುದು.
ಕೆ. ರಹಮಾನ್ ಖಾನ್ ಅಧ್ಯಕ್ಷರಾಗಿರುವ ಶಿಸ್ತು ಸಮಿತಿ ಇರುವುದೇ ಜನರಿಗೆ ಗೊತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದೊಳಗೂ ಬಹಳ ಜನರಿಗೆ ಅದರ ಅಸ್ತಿತ್ವದ ಅರಿವಿಲ್ಲ. ಹಿರಿಯ ಮುಖಂಡರಿಗೆ ಒಂದಲ್ಲಾ ಒಂದು ಕುರ್ಚಿ ಕಲ್ಪಿಸುವ ಯೋಚನೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಸಮಿತಿ ಇದು. ಕಾಂಗ್ರೆಸ್ನಲ್ಲಿ ಶಿಸ್ತು ಎನ್ನುವ ಪದ ಅರ್ಥ ಕಳೆದುಕೊಂಡು ಎಷ್ಟು ವರ್ಷವಾದವೋ, ಸಂಶೋಧನೆಗೆ ಅರ್ಹ ವಸ್ತು. ಶಿಸ್ತುಗೇಡಿಗಳು ದೊಡ್ಡ ಮನುಷ್ಯರಾದರೆ ಅದಕ್ಕೆ ಒಂದು ಮದ್ದು. ಸಣ್ಣಪುಟ್ಟಚಿಳ್ಳೆಪಿಳ್ಳೆಗಳಾದರೆ ಕಥೆಯೇ ಬೇರೆ. ಕಾಲ್ಚೆಂಡಿನ ಮಾದರಿಯಲ್ಲಿ ಎಲ್ಲರೂ ಒದೆಯುತ್ತಾರೆ. ಜಮೀರ್ ಹಾಗೂ ಆ ರೀತಿ ಮಾತಾಡುವವರ ವಿರುದ್ಧ ಕೈಗೊಳ್ಳಬಹುದಾದ ಶಿಸ್ತು ಕ್ರಮ ಏನಾಗಿರಬಹುದೆನ್ನುವುದನ್ನು ಯೋಚಿಸುವ ಮೊದಲು ಏಳು ವರ್ಷದ ಹಿಂದಿನ ಘಟನೆಯೊಂದನ್ನು ಮೆಲುಕು ಹಾಕುವುದು ಸೂಕ್ತ.
ಇದು ೨೦೧೩ರರ ಮಾತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಮನಮೋಹನ್ ಸಿಂಗ್ ಪ್ರಧಾನಿ. ಕೋರ್ಟ್ನಲ್ಲಿ ಕ್ರಿಮಿನಲ್ ಆರೋಪ ಸಾಬೀತಾಗಿ ಕನಿಷ್ಟ ಎರಡು ವರ್ಷ ಜೈಲು ಅನುಭವಿಸಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವಿರಲಿಲ್ಲ (ಈಗಲೂ ಇಲ್ಲ). ಕೋರ್ಟ್ನ ಆದೇಶವನ್ನು ಅನೂರ್ಜಿತಗೊಳಿಸಲು ಸಿಂಗ್ ಸರ್ಕಾರ ಒಂದು ಸುಗ್ರೀವಾಜ್ಞೆ ತರಲು ಮುಂದಾಗಿತ್ತು. ಮೇವು ಹಗರಣದಲ್ಲಿ ಆಪರಾಧ ಸಾಬೀತಾಗಿ ಜೈಲಿನಲ್ಲಿದ್ದ ಲಾಲೂ ಪ್ರಸಾದ ಯಾದವ್ ಮತ್ತು ಅಂಥವರಿಗೆ ಅನುಕೂಲ ಮಾಡಿಕೊಡುವ ಅಜೆಂಡಾ ಸುಗ್ರೀವಾಜ್ಞೆಯದಾಗಿತ್ತು. ಉದ್ದೇಶಿತ ಸುಗ್ರೀವಾಜ್ಞೆಯ ಕರಡನ್ನು ಕಾಂಗ್ರೆಸ್ನ ಹಿರಿಯ ನಾಯಕರಾದ ಪಿ.ಚಿದಂಬರಂ, ಕಪಿಲ್ ಸಿಬಲ್ ಸಿದ್ಧಪಡಿಸಿದ್ದರು.
ರಾಹುಲ್ ಗಾಂಧಿ ರಮಾರಂಪ
ಅದರ ವಿವರ ನೀಡಲು ಪಕ್ಷದ ವಕ್ತಾರರು ದೆಹಲಿ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಗೋಷ್ಟಿ ಕರೆದಿದ್ದರು. ಅಲ್ಲಿ ದಿಢೀರ್ ಪ್ರತ್ಯಕ್ಷರಾದ ರಾಹುಲ್ ಗಾಂಧಿ, ಈ ಸುಗ್ರೀವಾಜ್ಞೆ ಶುದ್ಧ ಅವಿವೇಕತನದ್ದು ಎಂದು ಝಾಡಿಸಿದರು. ಹರಿದು ಬಿಸಾಕಲು ಯೋಗ್ಯವಾದ ಮೂರ್ಖ ತೀರ್ಮಾನವೆಂದು ಜರಿದರು. ತನ್ನದೇ ಪಕ್ಷದ ಸರ್ಕಾರದ ವಿರುದ್ಧ ಏಐಸಿಸಿ ಉಪಾಧ್ಯಕ್ಷರೂ ಆಗಿದ್ದ ರಾಹುಲ್ ರಮಾರಂಪ ಮಾಡಿದ್ದರು.
ಶಿಸ್ತು ಉಲ್ಲಂಘನೆಯ ದಿವ್ಯ ದರ್ಶನ ಎಂದು ಈಗಲೂ ಅದಕ್ಕೆ ಹೆಸರಿದೆ. ಆದರೆ ರಾಹುಲ್ ವಿರುದ್ಧ ಯಾವ ಶಿಸ್ತು ಕ್ರಮವೂ ಜರುಗಲಿಲ್ಲ. ಅವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದೂ ಗೊತ್ತಾಗಲಿಲ್ಲ. ಇಂದಲ್ಲ ಪಕ್ಷದ ಕೋಳು ಕಂಭವಾಗಿರುವ ನೆಹರೂ-ಗಾಂಧಿ ಸಂತತಿಯ ಕುಡಿ, ಇಂದಲ್ಲ ನಾಳೆ ಪ್ರಧಾನಿಯಾಗುವ ಮನುಷ್ಯ ಎಂಬ ಕಾರಣಕ್ಕೆ ಪಕ್ಷದ ಹಿರಿಕಿರಿಯರೆಲ್ಲರೂ ಮೌನವೃತಕ್ಕೆ ಶರಣಾದರು. ಎಲ್ಲಕ್ಕಿಂತ ಹೆಚ್ಚಾಗಿ ಏಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ, ಮಗನ ಘನಂದಾರಿ ಕಾರ್ಯಕ್ಕೆ ತುಟಿಪಿಟಿಕ್ ಎನ್ನಲಿಲ್ಲ.
ವಾಸ್ತವದಲ್ಲಿ ರಾಹುಲ್ ತೆಗೆದುಕೊಂಡ ತೀರ್ಮಾನ ಸರಿಯಾಗೇ ಇತ್ತು. ಹಾಗಿಲ್ಲವಾದರೆ ಅದೆಷ್ಟು ಘೋಷಿತ ಕ್ರಿಮಿನಲ್ಗಳು ಶಾಸನ ಸಭೆ, ಲೋಕಸಭೆಯೊಳಗೆ ಬರುತ್ತಿದ್ದರೊ ಹೇಳಲಾಗದು. ಹಾಗಂತ ಈಗ ಯಾರೂ ಇಲ್ಲ ಎಂದಲ್ಲ ಆದರೆ ಅವರ ಮೇಲಿನ ಆರೋಪಗಳು ಸಾಬೀತಾಗಬೇಕಿದೆ. ಪ್ರಸ್ತುತ ಸುಗ್ರೀವಾಜ್ಞೆಯ ಕರಡನ್ನು ಕಾಂಗ್ರೆಸ್ನ ಕೋರ್ ಸಮಿತಿ ಒಪ್ಪಿತ್ತು. ನಂತರವೇ ಸಿಂಗ್ ಸಂಪುಟ ಅದನ್ನು ರಾಷ್ಟ್ರಪತಿ ಪ್ರಣವ್ಕುಮಾರ ಮುಖರ್ಜಿ ಸಹಿಗೆ ಕಳಿಸಿತ್ತು. ಇತ್ತ ದೆಹಲಿಯಲ್ಲಿ ರಾಹುಲ್ ರಮಾರಂಪ ಮಾಡಿದ ಎರಡೇ ತಾಸಿನಲ್ಲಿ ಅತ್ತ ವಾಷಿಂಗ್ಟನ್ನಲ್ಲಿ ಪ್ರಧಾನಿ ಸಿಂಗ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿ ಮಾಡುವುದಿತ್ತು. ಅಲ್ಲಿಯ ಮಾಧ್ಯಮದಲ್ಲಿ ಇದೇ ದೊಡ್ಡ ಸುದ್ದಿಯಾಗಿ ಸಿಂಗ್ ತೀವ್ರ ಮುಜುಗರಕ್ಕೆ ಒಳಗಾದರು. ಮುಂದೆ ಆ ಸುಗ್ರೀವಾಜ್ಞೆ ಕಸದ ಬುಟ್ಟಿ ಸೇರಿತು. ಅದರ ಜೊತೆಗೆ ಪಕ್ಷಕ್ಕೆ ಸರ್ಕಾರಕ್ಕೆ ಪ್ರಧಾನಿಗೆ ಮೂಖ ಎತ್ತಲಾಗದಂತೆ ಮಾಡಿದ ರಾಹುಲ್ರ ಶಿಸ್ತುಗೇಡಿತನವೂ ಹಳ್ಳ ಹಿಡಿದು ಹೋಯಿತು.
ಕರ್ನಾಟಕದಲ್ಲೂ ಅಂಥದೆ ಕಥೆ
ಈಗ ಕರ್ನಾಟಕದ ಒಂದು ಉದಾಹರಣೆ. ೨೦೧೪ರ ಲೋಕಸಭಾ ಚುನಾವಣೆ ಹೊತ್ತಿಗೆ ಕಲಬುರ್ಗಿ ಮೀಸಲು ಕ್ಷೇತ್ರವಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿ ಅದೇ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದರು. ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದ ಇಕ್ಬಾಲ್ ಅಹಮದ್ ಸರಡಗಿಯವರಿಗೆ ರಾಜಕೀಯ ನೆಲೆ ಕಲ್ಪಿಸಲು ಬಯಸಿದ ಕಾಂಗ್ರೆಸ್ಸು ಅವರನ್ನು ವಿಧಾನ ಸಭೆಯಿಂದ ಆಯ್ಕೆ ಮಾಡಿ ವಿಧಾನ ಪರಿಷತ್ಗೆ ಕಳಿಸಲು ತೀರ್ಮಾನಿಸಿತು. ಆಗ ಸಿದ್ದರಾಮಯ್ಯ ನೇತೃತ್ವದ ನಿಚ್ಚಳ ಬಹುಮತದ ಕಾಂಗ್ರೆಸ್ ಸರ್ಕಾರ. ಸರಡಗಿ ಆಯ್ಕೆ ವಿಚಾರದಲ್ಲಿ ಎಳ್ಳಷ್ಟೂ ಅನುಮಾನವಿರಲಿಲ್ಲ. ಆದರೆ ಆಗಿದ್ದೇ ಬೇರೆ. ಕಾಂಗ್ರೆಸ್ನ ಕೆಲವು ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ಸರಡಗಿ ಸೋತು ಅವರ ವಿರುದ್ಧ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಭೈರತಿ ಸುರೇಶ್ ಗೆದ್ದರು. ಪಕ್ಷದಲ್ಲಿ ಅಲ್ಲೋಲಕಲ್ಲೋಲ. ಸೋಲಬಾರದ ಸನ್ನಿವೇಶದಲ್ಲಿ ಸೋತಿದ್ದಕ್ಕೆ ಕಾರಣ ಹುಡುಕಬೇಕಲ್ಲ. ವಿ.ಆರ್. ಸುದರ್ಶನ್ ನೇತೃತ್ವದಲ್ಲಿ ಸತ್ಯ ಶೋಧಕ ಸಮಿತಿ ರಚನೆಯಾಯಿತು. ಅದೇನು ವರದಿ ಕೊಟ್ಟಿತೋ ಈ ಹೊತ್ತಿನವರೆಗೂ ಬಯಲಿಗೆ ಬರಲಿಲ್ಲ. ವಿಧಾನ ಪರಿಷತ್ಗೆ ಸರಾಗ ಆಯ್ಕೆಯಾದ ಭೈರತಿ ಸುರೇಶ್, ಸಿದ್ದರಾಮಯ್ಯ ಆಪ್ತರಲ್ಲಿ ಒಬ್ಬರಾಗಿದ್ದರು. ಮುಂದೆ ೨೦೧೯ರಲ್ಲಿ ಸಿದ್ದರಾಮಯ್ಯ ಕಾರಣವಾಗಿ ಅವರಿಗೆ ವಿಧಾನ ಸಭೆ ಕಾಂಗ್ರೆಸ್ ಟಿಕೆಟ್ಟೂ ಸಿಕ್ಕು ಈಗ ಎಂಎಲ್ಎ. ವರದಿ ಕಥೆ…? ಗೋವಿಂದ!
ಇಂಥ ನೂರು ಪ್ರಕರಣಗಳನ್ನು ಉಲ್ಲೇಖಿಸಬಹುದು. ಶಿಸ್ತು ಎನ್ನುವುದು ಆ ಪಕ್ಷದಲ್ಲಿ ಮರೀಚಿಕೆಯೇ ವಿನಾ ನಿಜವಲ್ಲ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬ ವಿಚಾರದಲ್ಲೂ ಶಿಸ್ತಿನ ಬೇಲಿ ಕೆಲಸ ಮಾಡುವುದಿಲ್ಲ. ತಥಾಕಥಿತ ಶಿಸ್ತುಕ್ರಮಕ್ಕೆ ಒಳಗಾಗುವವರು ಬಹಿರಂಗ ಹೇಳಿಕೆ ಕೊಡದೇ ಇರಬಹುದು. ಆದರೆ ಆಪ್ತ ವಲಯದಲ್ಲಿ ಚರ್ಚೆ ಮಾಡದೆ ಇರುತ್ತಾರೆಯೇ…? ತಮಗೆ ಬೇಕಾದವರನ್ನು ಗೆಲ್ಲಿಸುವ, ಬೇಡವಾದವರನ್ನು ಸೋಲಿಸುವ ಕೆಲಸ ಮಾಡದೇ ಇರುತ್ತಾರೆಯೇ…? ೨೦೧೩ರರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ೧೨೨ ಸೀಟು ಗೆದ್ದುದು ನಿಜ. ಆದರೆ ಗೆಲ್ಲುವ ಸಂಭಾವ್ಯವಿದ್ದೂ ಪಕ್ಷ ರಾಜಕೀಯಕ್ಕೆ ಬಲಿಯಾಗಿ ಸೋತ ಅಭ್ಯರ್ಥಿಗಳೆಷ್ಟಿಲ್ಲ…? ಸೋಲಿಗೆ ಯಾರು ಕಾರಣ ಏನು ಕಾರಣ ಎನ್ನುವುದರ ಚರ್ಚೆ ನಡೆದು ಪಟ್ಟಿ ಮಾಡಿದರೂ ಯಾರ ವಿರುದ್ಧವೂ ಏನೂ ಶಿಸ್ತಿನ ಕ್ರಮ ಜಾರಿಯಾಗದೇ ಇರುವುದಕ್ಕೆ ಕಾರಣವಾದರೂ ಏನು..? ಹಾಗೆಂದೇ ಇಂಥ ಯತ್ನಗಳನ್ನು ತೌಡು ಕುಟ್ಟುವ ಕೆಲಸ ಎಂದು ಮೂದಲಿಸುವುದು.
ಬಿರುಕು ಬೂದಿ ಮುಚ್ಚಿದ ಕೆಂಡ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬೆಂಬಲಿಗರು ಮೇಲ್ನೋಟಕ್ಕೆ ಮೌನವಾಗಿದ್ದಾರೆ. ನಾಯಕರು ಕ್ಯಾಮೆರಾಗಳ ಮುಂದೆ ಮುಗುಳ್ನಗೆಯ ಪೋಸು ಕೊಡುತ್ತಾರೆ. ಪಕ್ಷದ ಸಭೆ ಸಮಾರಂಭಗಳಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಅಕ್ಕಪಕ್ಕ ಕೂರುತ್ತಾರೆ. ಎದುರು ಬದುರು ಇರದ ಸಂದರ್ಭದಲ್ಲಿ ಪರಸ್ಪರ ಟಾಂಗ್ ಕೊಡುವ ಹೇಳಿಕೆಯನ್ನು ಮಾಧ್ಯಮಗಳಿಗೆ ಆಹಾರವಾಗಿ ತೇಲಿಬಿಡುತ್ತಾರೆ. ಕಳೆದ ಸಂಚಿಕೆಯ ಈ ಅಂಕಣದಲ್ಲಿ ಪ್ರಸ್ತಾಪವಾದ ಮೂಲ ಮತ್ತು ವಲಸೆ ಕಾಂಗ್ರೆಸ್ ವಿವಾದವೂ ಇದರಲ್ಲಿ ಸೇರಿದೆ. ಅಸಲಿಗೆ ಸಿದ್ದು,ಡಿಕೆಶಿ ಒಬ್ಬರಲ್ಲೊಬ್ಬರು ವಿಶ್ವಾಸ ಕಳೆದುಕೊಂಡಿದ್ದಾರೆ. ಅನುಮಾನ ಅವರಿಬ್ಬರಲ್ಲೂ ಮನೆ ಮಾಡಿದೆ. ತಾವು ಪುನಃ ಸಿಎಂ ಆಗಲೇಬೇಕೆಂದು ತೀರ್ಮಾನಿಸಿರುವ ಸಿದ್ದು ಆ ದಿಸೆಯಲ್ಲಿ ಅಹಿಂದ ಸಂಘಟನೆಯನ್ನು ಮತ್ತೆ ಚುರುಕುಗೊಳಿಸುವ ಕೆಲಸವನ್ನು ಬೆಂಬಲಿಗರಿಗೆ ವಹಿಸಿದ್ದಾರೆ. ಅದೊಂದು ಕಾಲದಲ್ಲಿ ಸಿದ್ದರಾಮಯ್ಯನವರಿಗೆ ಸಾವಿರ ಆನೆ ಬಲ ತಂದಿತ್ತ ಸಂಘಟನೆ ಇದು.
ಒಕ್ಕಲಿಗನೊಬ್ಬ ಸಿಎಂ ಆಗುವುದನ್ನು ತಪ್ಪಿಸುವ ಕೆಲಸ ಸಿದ್ದು ಬೆಂಬಲಿಗರಿಂದ ನಡೆಯುತ್ತಿದೆಯೆಂದು ಡಿಕೆಶಿ ಬೆಂಬಲಿಗರು ತೋಳೇರಿಸಿ ಶತಾಯ ಗತಾಯ ಆ ಹುದ್ದೆ ಪಡೆಯುವ ಛಲದಲ್ಲಿ ಮೈದಾನಕ್ಕೆ ಇಳಿದಿದ್ದಾರೆ. ಒಕ್ಕಲಿಗ ಮಠಗಳೂ ಧ್ವನಿಗೂಡಿಸಿವೆ. ಯಡಿಯೂರಪ್ಪ ಪರವಾಗಿ ಲಿಂಗಾಯತ ಮಠಗಳು ಕಹಳೆ ಊದುತ್ತಿರುವ ಧಾಟಿಯಲ್ಲೇ ಈ ಕಹಳೆಯೂ ಕೇಳಿಬರುತ್ತಿದೆ. ಇತ್ತ ತಾವೇನೂ ಕಡ್ಲೆಪುರಿ ತಿನ್ನುತ್ತ ಕೂತಿಲ್ಲ ಎಂದು ದಲಿತ ಸಮುದಾಯ ಕೆರಳಿದೆ. ಈವರೆಗೆ ದಲಿತ ಸಮುದಾಯಕ್ಕೆ ಸೇರಿದ ಯಾರೊಬ್ಬರೂ ರಾಜ್ಯದಲ್ಲಿ ಸಿಎಂ ಆಗಿಲ್ಲ. ಈಗ ಆ ಅವಕಾಶವನ್ನು ಕಳೆದುಕೊಳ್ಳಬಾರದೆಂಬ ನಿಟ್ಟಿನಲ್ಲಿ ದಲಿತ ಸಂಘಟನೆಗಳ/ ಸಮುದಾಯದ ಸಮಾವೇಶ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಡಾ.ಜಿ.ಪರಮೇಶ್ವರ, ಖರ್ಗೆ ಮುಂತಾದವರ ಹೆಸರನ್ನು ಕೆ.ಎಚ್. ಮುನಿಯಪ್ಪ ತೇಳಿಬಿಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಅಂದರೆ ಕೋವಿಡ್ ಸ್ಥಿತಿ ಸುಧಾರಿಸಿದರೆ ಹೈಕಮಾಂಡ್ ಒಪ್ಪಿಗೆ ಪಡೆದೇ ಮೂರ್ನಾಲ್ಕು ದಲಿತ ಸಮಾವೇಶಗಳನ್ನು ರಾಜ್ಯದ ಅಲ್ಲಲ್ಲಿ ನಡೆಸಲು ತೀರ್ಮಾನವಾಗಿದೆ. ಅನುಮತಿ ಸಿಗಲಿಲ್ಲ ಎಂದಾದರೆ ಕಾಂಗ್ರೆಸ್ ಬ್ಯಾನರ್ ಇಲ್ಲದೆಯೇ ಅವು ನಡೆಯುತ್ತವೆ. ಈ ಮಾತು ಅಹಿಂದ ಸಂಘಟನೆಗೂ ಸಮಾನವಾಗಿ ಅನ್ವಯವಾಗುತ್ತದೆ.
ಬ್ರೇಕ್ ಹಾಕಿದವರು ಯಾರ್ಯಾರೊ?
ಏತನ್ಮಧ್ಯೆ ಕೆಪಿಸಿಸಿಯನ್ನು ತರಾತುರಿಯಲ್ಲಿ ಪುನಾರಚಿಸಿ ಹೊಸ ಪದಾಧಿಕಾರಿಗಳನ್ನು ನೇಮಿಸುವ ಡಿಕೆಶಿ ಕನಸು ಮುಗ್ಗರಿಸಿದೆ. ಏಕಾಏಕಿಯಾಗಿ ಪಟ್ಟಿ ತಯಾರಿಸಿ ಹೈಕಮಾಂಡ್ ಅನುಮತಿ ಪಡೆದು ಪ್ರಕಟಿಸುವುದು ಅವರ ಕನಸಾಗಿತ್ತು. ಅದು ಮುಗ್ಗರಿಸಲು ಕಾರಣ ಹಲವು ನಾಯಕರ ಅಸಹಕಾರ. ತಮಗೆ ಬೇಕಾದವರನ್ನು ಮಾತ್ರವೇ ಪದಾಧಿಕಾರಿಗಳನ್ನಾಗಿ ನೇಮಿಸಿ ಸಂಘಟನೆ ಮೇಲಿನ ಸಂಪೂರ್ಣ ಹಿಡಿತವನ್ನು ಕೈಗೆ ತೆಗೆದುಕೊಳ್ಳುವ “ಧೂರ್ತ” ಉದ್ದೇಶ ಅವರದು ಎಂಬ ಹಿನ್ನೆಲೆಯಲ್ಲಿ ಸಿದ್ದು ಮತ್ತವರ ಬೆಂಬಲಿಗರು ಸಿಡಿದೆದ್ದಿದ್ದಾರೆ. ಪಕ್ಷದ ಹಿರಿಯ ನಾಯಕ ಖರ್ಗೆ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಬೀದರ್ನ ಈಶ್ವರ ಖಂಡ್ರೆ ಒಪ್ಪಿಗೆಯಿಲ್ಲದೆ ಹೈದರಾಬಾದ್ ಕರ್ನಾಟಕದಲ್ಲಿ ಪಕ್ಷದ ಯಾವ ನೇಮಕವೂ ಆಗದು. ಮುಂಬೈ ಕರ್ನಾಟಕದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಹಿರಿಯ ಮುಖಂಡ ಕೆ.ಎಚ್.ಪಾಟೀಲ, ಸಿಎಂ ಸ್ಥಾನ ಬಯಸಿ ಟವೆಲ್ ಹಾಕಿರುವ ಬಬಲೇಶ್ವರದ ಶಾಸಕ ಎಂ.ಬಿ.ಪಾಟೀಲ ಮತ್ತು ಪಕ್ಷದೊಳಗೆ ಅವರ ಪ್ರತಿಸ್ಪರ್ಧಿ ಶಾಸಕ ಶಿವಾನಂದ ಪಾಟೀಲರ ಸಮ್ಮತಿ ಇಲ್ಲದೆ ಕೆಲಸ ನಡೆಯದು. ಉತ್ತರ ಕನ್ನಡದಲ್ಲಿ ಆರ್.ವಿ. ದೇಶಪಾಂಡೆ ಬಿಟ್ಟು ಪಟ್ಟಿ ತಯಾರಿ ಸಾಧ್ಯವೇ…? ಮಧ್ಯ ಕರ್ನಾಟಕದಲ್ಲಿ ಶ್ಯಾಮನೂರು ಶಿವಶಂಕರಪ್ಪ ಸದ್ದು ಮಾಡದೇ ಇರುತ್ತಾರೆಯೇ…? ತುಮಕೂರು ದೊರೆ ಪರಮೇಶ್ವರ ಪಟ್ಟಿ ಕೊಡೋಲ್ಲವೆ..? ಇಂಥ ಹತ್ತು ಹಲವು ಗೋಜಲುಗಳು ಪಟ್ಟಿ ತಯಾರಿಕೆ ನೆನೆಗುದಿಗೆ ಬೀಳುವಂತೆ ಮಾಡಿದೆ.
ಇಷ್ಟೆಲ್ಲ ರಾಜಕೀಯ ಬಹಿರಂಗದಲ್ಲಿ ನಡೆಯುತ್ತಿರುವಾಗಲೇ ಸಿದ್ದು ಬೆಂಬಲಿಗ ಶಾಸಕರ, ಡಿಕೆಶಿ ಬೆಂಬಲಿಗ ಶಾಸಕರ ಯಾದಿ ತಯಾರಾಗುತ್ತಿದೆ ಎಂಬ ಸುದ್ದಿ ಹರಡಿದೆ. ಯಾರ್ಯಾರ ನಡಿಗೆ ಯಾರ ಕಡೆಗೆ ಎನ್ನುವುದನ್ನು ಸೂಕ್ಷ್ಮದರ್ಶಕ ಹಿಡಿದು ನೋಡುವ ಯತ್ನ ಎರಡೂ ಗುಂಪಿನ ಕಡೆಯಿಂದ ಸಾಗಿದೆ. ಡಿಕೆಶಿ ಬೆಂಬಲಿಗರಲ್ಲಿ ಎಷ್ಟು ಜನರಿಗೆ ಟಿಕೆಟ್ ಸಿಗದಂತೆ ಮಾಡಬೇಕು ಎನ್ನುವುದು ಸಿದ್ದು ಯೋಚನೆಯಾದರೆ ಸಿದ್ದು ಗ್ಯಾಂಗ್ಗೆ ಕೈಕೊಡುವ ಬಗೆ ಬಗ್ಗೆ ಡಿಕೆಶಿ ಯೋಚನೆ ಸಾಗಿದೆ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ನೋಡಿದಾಗ ಡಿಕೆಶಿಗೇ ಬಿಟ್ಟರೆ ಜಮೀರ್ ಅಹಮದ್, ಅಂಖಡ ಶ್ರೀನಿವಾಸ ಮೂರ್ತಿ, ಎಚ್.ಸಿ. ಮಹದೇವಪ್ಪ, ಬೈರತಿ ಸುರೇಶ ಮುಂತಾದ ಹಲವು ಮಂದಿಗೆ ಟಿಕೆಟ್ ಸಿಗುವುದು ಅನುಮಾನ.
ಸಿದ್ದು ಪಟ್ಟಿಯಲ್ಲೂ ಡಿಕೆಶಿ ಬೆಂಬಲಿಗರ ಹೆಸರು ಹಲವಿವೆ. ಹಾಗಂತ ಜಮೀರ್ ಅಹಮದ್ಗೆ ಟಿಕೆಟ್ ಕೊಡದೆ ಇರಲು ಡಿಕೆಶಿಗೆ ಸಾಧ್ಯವಿಲ್ಲ. ಜಾಫರ್ ಷರೀಫ್ ನಿಧನಾನಂತರದಲ್ಲಿ ರಾಜ್ಯದಲ್ಲಿ ತೆರವಾಗಿದ್ದ ಮುಸ್ಲಿಂ ನಾಯಕತ್ವ ಈ ಹೊತ್ತು ಜಮೀರ್ ಕೈಗೆ ಬಂದಿದೆ. ಮುಸ್ಲಿಂ ಮತಗಳನ್ನು ವಾಲಿಸುವ ಶಕ್ತಿ ಮತ್ತು ಜನ-ಧನ ಸಂಪನ್ಮೂಲ ಎರಡೂ ಇರುವ ಜಮೀರ್ಗೆ ತಮ್ಮ ಶಕ್ತಿಯ ವಿಚಾರದಲ್ಲಿ ಅಪಾರ ವಿಶ್ವಾಸವೂ ಇದೆ. ಎಂದೇ ಅವರು ತಾವೀಗ ಪ್ರತಿನಿಧಿಸಿರುವ ಚಾಮರಾಜಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯನವರನ್ನು ಕಣಕ್ಕಿಳಿಸಿ ತಮಗಾಗಿ ಬೇರೆ ಕ್ಷೇತ್ರ ಹುಡುಕುವ ಯತ್ನ ನಡೆಸಿದ್ದಾರೆ. ಮುಸ್ಲಿಂ ಮತದಾರರು ನಿರ್ಣಾಯಕವಾಗಿರುವ ಒಂದು ಕ್ಷೇತ್ರದ ಹುಡುಕಾಟದಲ್ಲಿ ಅವರ ಬೆಂಬಲಿಗರಿದ್ದಾರೆ.
ವೃಕ್ಷವೊಂದು ಮುದಿಯಾದರೆ, ಅದರ ಬುಡಕ್ಕೆ ನೀರನ್ನೆರೆಯದೆ, ಗೊಬ್ಬರ ಹಾಕದೆ ಕೇವಲ ಅದು ಕೊಡುವುದನ್ನೇ ಸದಾಕಾಲಕ್ಕೂ ಪಡೆಯುತ್ತ ಹೋದರೆ ಏನಾಗಬಹುದೋ ಅದೇ ಸ್ಥಿತಿ ಕಾಂಗ್ರೆಸ್ನದು. ೧೩೦ ವರ್ಷ ದಾಟಿರುವ ಪಕ್ಷಕ್ಕೆ ಈಗಂತೂ ನಿರ್ದಿಷ್ಟ ಮಾರ್ಗಸೂಚಿಯೇ ಇಲ್ಲವಾದ ಅವಸ್ಥೆಗೆ ಒಳಗಾಗಿದೆ. ಒಂದೊಂದಾಗಿ ರಾಜ್ಯಗಳನ್ನೂ, ಕೇಂದ್ರ ಸರ್ಕಾರವನ್ನೂ ಕಳೆದುಕೊಂಡಿರುವ ಅದಕ್ಕೆ ನಾಯಕತ್ವದ ಕುರುಡು ಕಾಡುತ್ತಿದೆ. ಕಾಂಗ್ರೆಸ್ಸು ಅತ್ಯಂತ ಬಲಿಷ್ಟವಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಮುಖ್ಯವಾದುದು. ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಅಂಥ ಇಂದಿರಾ ವಿರೋಧಿ ಅಲೆಯಲ್ಲೂ ಇಲ್ಲಿ ಜನ ಆಯ್ಕೆ ಮಾಡಿದ್ದು ದೇವರಾಜ ಅರಸರನ್ನು. ಈ ಹೊತ್ತು ಅಂಥ ಮುಖವೂ ಇಲ್ಲ ಮುತ್ಸದ್ದಿತನವೂ ಇಲ್ಲ.