ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಈಸಬೇಕು, ಇದ್ದು ಜಯಿಸಬೇಕು.
ಹಳ್ಳ ನದಿ ಕೆರೆ ನೀರ ದಾಟಲು ಈಸಬೇಕು. ಈಜು ಬಾರದವರು ನೀರಲಿ ಬಿದ್ದರೆ ಕಷ್ಟ.ಮುಳುಗಿದರೆ ಮುಗಿದಂತೆ! ಈಸಿ ದಾಟಿದರೆ ಮುಂದೆ ಸುಂದರದ ಬದುಕು! ಪ್ರಪಂಚ ಸಾಗರ! ದಾಟಲು ಈಸಬೇಕು, ನಿರಂತರ ಹೋರಾಡಬೇಕು! ಆಗಲೇ ಗೆಲುವು! ಗೆದ್ದವರಿಗಿದೆ ನೀರಾಚೆಯ ಸುಖ ಸಾಗರ! ಸವಿಯಲು ಇರಬೇಕು, ಇದ್ದು ಜಯಿಸಬೇಕು! ಇಲ್ಲದವರಿಗೆ ಏನಿಲ್ಲ. ಬದುಕುವಾಶೆಯುಂಟು! ಎದುರಾಗುವ ರೋಗ ಬಡತನ ಸಾಲ ಹಗೆ ಧಗೆ ಕಾಲೆಳೆತ ವಿಷಸಂಕೋಲೆಗೆ ಸುಸ್ತಾಗಿ ಕೊನೆಯಾಗುವರು ಕೆಲರು! ಮಾಂಸದಾಶೆಗೆ ಮತ್ಸ್ಯ ಬಲೆಬೀಳುವ ರೀತಿ, ಅಲ್ಲಲ್ಲಿ ಸಿಗುವ ಅಷ್ಟಿಷ್ಟು ಸುಖಕೆ ಮರುಳಾಗಿ ಅಲ್ಲಿಯೇ ಕೊಳೆಯುವರು ಹಲವರು! ಇದ್ದು ಇಲ್ಲದಂತಿದ್ದು ಆಶೆ ಮೀರಿ ದಾಟಿದವರಿಗನಂತ ಸುಖ! ಅರಿವಿಲ್ಲದೇ ಬಾಗಿಲೆಳೆದಾಗ ತಳದಲಿ ಸಿಲುಕಿದ ಹಾವು, ಘಂಟೆಪ್ರಯಾಸದ ಯತ್ನದಿ ಬಿಡಿಸಿಕೊಂಡು ಪಾರಾದುದ ಕಂಡೆ! ಬದುಕುವಾಶೆ ಅದರ ಧೈರ್ಯ ಸಾಹಸವ ಕಂಡು ನಾ ನಿಬ್ಬೆರಗಾದೆ!
ಧೈರ್ಯದಿ ಬಾಳೋಣ, ಜಗ ಸಾಹಸದಿ ಗೆಲ್ಲೋಣ!!