ಜ್ಞಾನ – ವಿಜ್ಞಾನ

Share

ಪರಿಚಯ:

ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ. ಎ. ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ೩೦ ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗಿದ್ದರೂ ಅವರ ಮೊದಲ ಪುಸ್ತಕ ಬಿಡಿಗಡೆಯಾಗಿದ್ದು ೨೦೧೭ ರಲ್ಲಿ. ಇದುವರೆವಿಗೂ ೫ ಪುಸ್ತಕಗಳನ್ನು ಕನ್ನಡನಾಡಿಗೆ ನೀಡಿರುವ ಇವರ ಪುಸ್ತಕಗಳು ‘ಕಸಾಪ’ ದ ದತ್ತಿ ಮತ್ತು ‘ಕಲೇಸಂ’ ನ ದತ್ತಿ ಪ್ರಶಸ್ತಿಗಳಿಗೆ ಭಾಜನವಾಗಿವೆ. ಎಲ್ಲಾ ಪುಸ್ತಕಗಳೂ ಜನರಿಂದ ಅಪಾರ ಮೆಚ್ಚುಗೆ ಗಳಿಸಿವೆ.

ಜ್ಞಾನ – ವಿಜ್ಞಾನ

ಕಳೆದವಾರವಿರಬಹುದು ಯಾವುದೋ ಲಿಂಕ್ ನಲ್ಲಿ ಓದಿದೆ. ಒಂದು ಹುಡುಗಿ ಒಬ್ಬ ಹುಡುಗನನ್ನು ಪ್ರೇಮಿಸಿ ಮದುವೆಯಾಗುವ ವಿಷಯದಲ್ಲಿ ತನ್ನ ಅಣ್ಣ ಅಡ್ಡಿಪಡಿಸಿದ ಎಂದು ಪ್ರೇಮಿಯೊಡಗೂಡಿ ತನ್ನ ಒಡಹುಟ್ಟಿದ ಅಣ್ಣನ ಕೊಲೆಮಾಡಿ ಕಾರಿನಲ್ಲಿ ತುಂಡು ತುಂಡು ಮಾಡಿ ಎಸೆದ ಹೃದಯ ವಿದ್ರಾವಕ ಘಟನೆ.
ಇಂತದ್ದೇ ಇನ್ನೊಂದು ಅನ್ಯಧರ್ಮದ ಹುಡುಗನನ್ನು ಪ್ರೀತಿಸಿದ್ದ ತನ್ನ ತಂಗಿಯ ಪ್ರೇಮಕ್ಕೆ ಅಡ್ಡಿಪಡಿಸಿದ ಎಂಬ ಕಾರಣಕ್ಕೆ ಆ ಅನ್ಯ ಧರ್ಮದವನು ಪ್ರೇಯಸಿಯ ಅಣ್ಣನ ತಲೆಯನ್ನು ಹಾಡುಹಗಲೇ ನಡುರಸ್ತೆಯಲ್ಲಿ ಕತ್ತರಿಸಿದ ಅಮಾನವೀಯ ಘಟನೆ. ಇದನ್ನು ಓದಿದಾಗ ಎದೆ ನಡುಗಿ ಝಲ್ ಎಂದಿತು. ಇಂತಹ ಘಟನೆಗಳು ದಿನಕ್ಕೆ ಎಷ್ಟೋ ನಡೆಯುತ್ತಿರುತ್ತವೆ ನಿಜ.

ಆದರೆ ಮನುಷ್ಯ ಆಗ ಹೆಚ್ಚು ವಿದ್ಯಾಭ್ಯಾಸವಿರಲಿಲ್ಲ. ತಿಳಿದವನೂ ಆಗಿರಲಿಲ್ಲ. ಬದುಕು ಪ್ರಶಾಂತವಾಗಿತ್ತು. ಈಗ ಪದವಿಗಳ ಮೇಲೆ ಪದವಿ ಪಡೆದರೂ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಯಾಕೆ?

ನನಗಿನ್ನೂ ನೆನಪಿದೆ. ಭಕ್ತ ಸಿರಿಯಾಳ ಚಲನಚಿತ್ರ ಮಾಲೂರಿನಲ್ಲಿ ಹಾಕಿದ್ದರು. ಅದರ ಪ್ರಚಾರಕ್ಕೆ ಒಂದು ವ್ಯಾನ್ ತರ ಗಾಡಿ ಸುತ್ತಲೂ ಚಿತ್ರದ ಬ್ಯಾನರ್ ಕಟ್ಟಿಕೊಂಡು ಮುಂದೆ ಒಬ್ಬರು ಮೈಕ್ ಹಿಡಿದು ಕೂಗುತ್ತಿದ್ದರು. “ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ.. ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಅದ್ಭುತ ನಟ ಲೋಕೇಶ್ ಮತ್ತು ಮಿನುಗುತಾರೆ ಆರತಿ, ಬೇಬಿ ರೇಖಾ ನಟಿಸಿರುವ ಭಕ್ತ ಸಿರಿಯಾಳ ಚಿತ್ರ ಬಂದಿದೆ. ಮನೆ ಮಂದಿಯೆಲ್ಲಾ ಬಂದು ನೋಡಲು ಮರೆಯದಿರಿ. ಮರೆತು ನಿರಾಶರಾಗದಿರಿ….” ಆಟದ ಬಯಲಿನಲ್ಲಿ ಆಟವಾಡುತ್ತಿದ್ದ ನಾವೆಲ್ಲಾ ನೊಣಗಳಂತೆ ಗಾಡಿಯ ಬಳಿಗೆ ಹಾರಿದೆವು. ಅವರು ಕೊಟ್ಟ/ಎಸೆದ ಭಿತ್ತಿಚಿತ್ರಗಳು ಹಿಡಿದು ಕುಣಿದಾಡಿದೆವು. ಕೆಲವರು ಮನೆಗಳಿಗೆ ಎತ್ತಿಕೊಂಡು ಒಯ್ದು ಕೊಟ್ಟರು. ಹಳ್ಳಿಯ ಬೀದಿ ಬೀದಿ ಹಂಚಿದ ಮೇಲೆ ಗಾಡಿ ಹೊರಟು ಹೋಗಿತ್ತು.


ಊರಿನ ಎಲ್ಲಾ ಜನರು ಒಂದೆಡೆ ಶಾಲೆಯ ಆವರಣದಲ್ಲಿ ಇದ್ದ ಧ್ವಜಸ್ತಂಭದ ಹತ್ತಿರ ಸೇರಿದರು. ಅಲ್ಲಿ ಎಲ್ಲರೂ ಮಾತನಾಡಿ ಚಲನಚಿತ್ರ ನೋಡಿಕೊಂಡು ಬರಲು ತೀರ್ಮಾನಿಸಿದ್ದರು. ಎಲ್ಲ ಮನೆಗಳಿಗೆ ಸುದ್ಧಿ ಹೋಯಿತು. ಒಂದು ದಿನ ಸಂಜೆ ೪ ಎತ್ತಿನ ಗಾಡಿಗಳಲ್ಲಿ ಊರಿನ ಮುದುಕರು ಕೆಲವರನ್ನು ಬಿಟ್ಟು ಎಲ್ಲರೂ ಚಿತ್ರ ನೋಡಲು ಹೊರಟರು. ಬೇಡರ ನಾರಾಯಣಪ್ಪ, ಗೌಡರ ಕೃಷ್ಣಪ್ಪ, ಹೊಲೆಯರ ಶಾಮಣ್ಣ, ಗೊಲ್ಲರ ರಾಮಣ್ಣ, ರಾಮಾಚಾರಿ, ಮಾದಿಗರ ಪಾಪಣ್ಣ, ತಿಗಳರ/ಪಳ್ಳಿಗರ ಕದಿರಪ್ಪ, ಫಯಾಸ ಖಾನ್, ಆಸ್ಪತ್ರೆಯ ಕಾಂಪೌಂಡರ್ ಜೇಕಬ್ ಹೀಗೆ ಹಲವಾರು ಕುಟುಂಬಗಳ ಪ್ರಯಾಣ ಪೇಟೆಯೆಡೆಗೆ ೪ ಗಾಡಿಗಳಲ್ಲಿ ಹೊರಟಿತ್ತು. ನಾವು ಪುಟ್ಟ ಪುಟ್ಟ ಮಕ್ಕಳೆಲ್ಲಾ ಯಾರ ಯಾರ ತೊಡೆಯ ಮೇಲೆ ಕುಳಿತಿದ್ದೆವೋ ಗೊತ್ತಿಲ್ಲ. ಚಲನಚಿತ್ರ ನೋಡುವಾಗ ನಮಗೆಲ್ಲಾ ಯಾವುದೊ ಲೋಕಕ್ಕೆ ಹೋದ ಅನುಭವ. ಚಲನಚಿತ್ರ ನೋಡಿ ಎಲ್ಲರೂ ಅತ್ತಿದ್ದರು. ಭಕ್ತಿ ಪರವಶರಾಗಿದ್ದರು. ಚಿತ್ರ ನೋಡಿ ಬರುವಾಗ ಹಳ್ಳಿಯ ದಾರಿಯಲ್ಲಿ ಎತ್ತಿನ ಗಾಡಿಗಳು ಸಾಲು ಸಾಲು ಹೊರಟಿದ್ದವು. ಹಿಂದಿನ ಗಾಡಿಯಲ್ಲಿ ಕುಳಿತಿದ್ದ ಶಾಮಣ್ಣನ ಹಾಡು ಜೋರಾಗಿತ್ತು. ಮತ್ತೊಂದು ಗಾಡಿಯಲ್ಲಿ ನಗೆ ಚಟಾಕಿಗಳು… ನಾವು ಕುಳಿತಿದ್ದ ಗಾಡಿಯಲ್ಲಿ ಹಿರಿಯರು ತಾವು ಯಾವಾಗಲೋ ಕತ್ತಲೆಯಲ್ಲಿ ಪಯಣಿಸಿದಾಗ ದೆವ್ವಗಳನ್ನು ಕಂಡಿದ್ದರೆಂದೂ.. ಅವುಗಳ ತಮ್ಮ ತಮ್ಮ ಅನುಭವಗಳನ್ನು ಒಬ್ಬರಿಗಿಂತ ಒಬ್ಬರು ರೋಚಕವಾಗಿ ಹಂಚಿಕೊಳ್ಳುತ್ತಿದ್ದರು. ಒಬ್ಬರು ‘ನಾನು ಕತ್ತಲೆಯಲ್ಲಿ ಬರುವಾಗ ಮರದ ಮೇಲೆ ಕಾಲು ಇಳಿ ಬಿಟ್ಟು ಕುಳಿತಿದ್ದ’ ಪಿಶಾಚಿಯ ಬಗ್ಗೆ ಹೇಳಿದರೆ, ಇನ್ನೊಬ್ಬರು ತಾನು ಮಧ್ಯರಾತ್ರಿ ಊರಿಂದ ಬರುವಾಗ ತನ್ನ “ಸಹ ಪ್ರಯಾಣಿಕನಂತೆ ಬಂದು ಇದ್ದಕ್ಕಿದ್ದಂತೆ ಮಾಯವಾದ” ಬಗ್ಗೆ, ಮತ್ತೊಬ್ಬರು ಒಂದು ಹೆಣ್ಣು “ಅಣ್ಣಾ ಸೌದೆ ಹೊರೆ ಹೊರೆಸು ಬಾ ತುಂಬಾ ಭಾರವಾಗಿದೆ” ಎಂದು ಕರೆದುಕೊಂಡು ಹೋಗಿ ಮಾಯವಾದ ಬಗ್ಗೆ ಹೇಳುತ್ತಿದ್ದರೆ… ನಾನು ನನ್ನ ತಂಗಿ ಅಣ್ಣ, ತಮ್ಮ, ಭಯದಿಂದ ಮುದುರಿ ಮಲಗಿದ್ದೆವು. ನಾನೆಂಬ ಹಮ್ಮಿಲ್ಲದ, ನೀನೆಂಬ ಕೀಳಿಲ್ಲದವರು. ಊರಿಗೂರೇ ಹೊರಗೆ ಹೋದರೂ ಕಳ್ಳತನದ ಭಯವಿರಲಿಲ್ಲ. ಎಲ್ಲರೂ ಅವರವರ ಮನೆತನಕ್ಕೆ ಬಂದ ಕಸುಬುಗಳನ್ನು ಶ್ರದ್ಧೆಯಿಂದ ಪರಸ್ಪರ ಗೌರವಿಸುತ್ತಾ ಸಾಗುತ್ತಿದ್ದ ಆ ಹೃದಯವಂತರು ಎತ್ತ ಹೋದರು?

ನನಗೆ ಸೈಕಲ್ ತುಳಿಯಲು ಸಹೋದರತೆಯಿಂದ ಕಲಿಸಿದ ಇಲಿಯಾಸ್ ಮುಸ್ಲಿಮ್ ಆಗಿದ್ದ. ನನಗೆ ಬಟ್ಟೆ ತೊಳೆಯಲು ಕಲಿಸಿದ ಮುನ ಹೊಲಗೇರಿಯ ಹುಡುಗಿಯಾಗಿದ್ದಳು. ಅವಳು ಬಟ್ಟೆ ತೊಳೆಯಲು ಕೆರೆಗೆ ಹೋದಾಗ ನನ್ನನ್ನೂ ಒಣಹಾಕಲು ಕರೆದುಕೊಂಡು ಹೋಗುತ್ತಿದ್ದಳು. ಕೆಲಸ ಆದ ನಂತರ ಬಟ್ಟೆ ಒಣಗುವವರೆಗೂ ಕೆರೆಯ ಏರಿಯ ಮೇಲೆ ನನ್ನನ್ನು ಬೆನ್ನ ಮೇಲೆ ಉಪ್ಪು ಕೂಸು ಮಾಡಿಕೊಂಡು ಓಡುತ್ತಾ ನನಗೆ ಭಯ ಪಡಿಸಿ ತಾನು ನಗುತ್ತಿದ್ದಳು. ರಜೆಯಿದ್ದಾಗ ಎಮ್ಮೆ ಕಾಯಲು ಅವಳೊಡನೆ ನನ್ನನ್ನು ಕರೆದುಕೊಂಡು ಹೋಗಿ ಎಮ್ಮೆಯ ಮೇಲೆ ಕೂಡಿಸಿಕೊಂಡು ಸವಾರಿ ಮಾಡಿಸುತ್ತಿದ್ದಳು. ಡಾ. ರಾಜ್ ಕುಮಾರ್ ಹಾಡು ‘ಯಾರೇ ಕೂಗಾಡಲು… ಊರೇ ಹೋರಾಡಲಿ’ ಎಂದು ಜೋರಾಗಿ ಹಾಡಿತೋರಿಸಿ “ನಿಂಗ್ ಈ ಹಾಡು ಗೊತ್ತಾ”? ಅಂತ ಕೇಳುತ್ತಿದ್ದಳು. ನನ್ನ ಪಾಲಿಗೆ ಅವಳೇ ಹೀರೋಯಿನ್ ಆಗಿದ್ದಳು. ಟೆಂಟ್ ನಲ್ಲಿ ಸಿನೇಮಾ ನೋಡಿಕೊಂಡು ಬಂದು ಪೂರ ಕಥೆ ಹೇಳುತ್ತಿದ್ದಳು. ಮನೆಯಲ್ಲಿ ನಾವೆಲ್ಲರೂ ಅವಳು ಹೇಳುವ ಸ್ಟೋರಿ ಆಸಕ್ತಿಯಿಂದ ಕೇಳುತ್ತಿದ್ದೆವು. ಪೇಟೆಯಿಂದ ಹೊಸ ಬಳೆ, ಕಿವಿಓಲೆ ತಂದು ಹಾಕಿಕೊಂಡು ತೋರಿಸುತ್ತಿದ್ದಳು. ಮನೆಯಲ್ಲಿ ಮಾತು ಮಾತಿಗೂ ಮುನ ಮುನ ಅಂತ ಕರೆಯುತ್ತಾ ಆಕೆ ಮನೆ ಮಗಳಂತೆ ಹೊಂದಿಕೊಂಡಿದ್ದಳು.

ಅಪ್ಪ ಎಂದರೆ ಊರಿನ ಎಲ್ಲರೂ ಗೌರವಿಸುತ್ತಿದ್ದರು. ಶಾಲೆಯ ಎಲ್ಲಾ ಮಾಸ್ಟರಗಳೂ ಊರಿಗೆ ಅಚ್ಚುಮೆಚ್ಚಾಗಿದ್ದರು. “ಅನೇಕತಾ ಮೆ ಏಕತಾ” ಎಂಬಂತೆ ಊರಿನ ಮನಸ್ಸುಗಳಿದ್ದವು. ನಮ್ಮ ಊರೊಂದೇ ಅಲ್ಲ ಎಲ್ಲ ಹಳ್ಳಿಗಳೂ ಒಂದೇ ಪರಸರವನ್ನು ಹೊಂದಿದ್ದವು. ರಾಜಕೀಯವಾಗಿ ಎರಡೆ ಪಕ್ಷಗಳಿದ್ದವು. ಒಂದು ಜನತಾ ಮತ್ತೊಂದು ಕಾಂಗ್ರೆಸ್. ಅಷ್ಟೇ. ಎರಡೂ ಪಕ್ಷಗಳು ಭ್ರಾತೃಗಳಂತಿದ್ದವು. ಕಚ್ಚಾಟವಿಲ್ಲ, ಹೊಡೆದಾಟವಿಲ್ಲ, ಓಲೈಕೆಯಿಲ್ಲ, ಒಬ್ಬರಿಗೊಬ್ಬರು ಬೆನ್ನು ತಟ್ಟುತ್ತಾ ಪರಸ್ಪರ ಪ್ರೋತ್ಸಾಹಿಸೋ ಗುಣಗಳಿದ್ದವು.

ಒಮ್ಮೆ ಮುನ್ನ ಅವರ ಮನೆಯ ಹಿತ್ತಲಿನಲ್ಲಿ ಸೊಪ್ಪು ಬೆಳೆದಿರುವ ವಿಷಯ ಮುನ್ನಾಳ ಅಮ್ಮನಿಂದ ನಮ್ಮಮ್ಮನಿಗೆ ಗೊತ್ತಿತ್ತು ನನಗೆ ದುಡ್ಡು ಕೊಟ್ಟು ಸೊಪ್ಪು ತರಲು ಕಳಿಸುತ್ತಿದ್ದಳು. ಸೊಪ್ಪು ತರಲು ಅವರ ಮನೆಯ ಹತ್ತಿರ ಹೋದೆನು. ಮನೆಯ ಬಾಗಿಲಲ್ಲಿ ನಿಂತು ಒಳಗೆ ಇಣುಕಿದೆ. ಮುನ್ನಾ ಎಂದೆ.. ಯಾರದೂ.. ಎಂದಳು ಒಳಗಿನಿಂದ. ‘ನಾನು’ ಎಂದೆ. ಕಣಜದ ಪಕ್ಕದಿಂದ ಬಾಗಿಲೆಡೆ ಇಣುಕಿದ ಅವಳು ‘ಏನು ಅಮ್ಮಣ್ಣಿ’ ಎಂದಳು. ನಾನು ‘ಸೊಪ್ಪು ಬೇಕು’ ಅಂದೆನು. ‘ಇರು ನಮ್ಮಮ್ಮನು ಎಲ್ಲೋ ಹೋಗವ್ಳೆ ಬತ್ತಾಳೆ’ ಎಂದಳು. ‘ನೀನು ಏನ್ ಮಾಡ್ತಿದೀಯ’ ಎಂದು ಒಳಗೆ ನಡೆದೆ. ಅವಳು ನಿಲ್ಲು… ಬರಬೇಡ ಎಂದಳು. ನಾನು ಕಾಲು ತಡೆದೆ ಸುತ್ತಮುತ್ತನೋಡಿದೆ. ಯಾಕೆ ಎಂದೆ. ‘ಹುಹೂ ಬರಕೂಡದು’ ಎಂದಳು. ನಾನೂ ಹೋಗಿಯೇ ಹೋದೆ ಅವಳ ಬಳಿಗೆ. ಅವಳು ಊಟ ಮಾಡುತ್ತಿದ್ದಳು ಬಿಸಿ ಬಿಸಿ ಮುದ್ದೆ ಮತ್ತು ಮಸ್ಸೊಪ್ಪು.. ನಾನು ಯಾಕೆ ಬರಕೂಡದೇ ಎಂದೆ. ಅವಳು ಊಟ ಮಾಡಿದ ಕೈ ನೆಕ್ಕುತ್ತಾ ಗೊತ್ತಿಲ್ಲ ಬರಕೂಡದಷ್ಟೇ.. ನಮ್ಮಮ್ಮ ಯಾರನ್ನೂ ಸೇರಸಲ್ಲ. ಎಂದಳು. ನನಗೆ ಹಸಿವಾಗಿತ್ತು ‘ನಾನೂ ಊಟ ಮಾಡಲೇನೇ ಮುನ್ನ’ ಎಂದೆ… ಅಷ್ಟರಲ್ಲಿ ಅವರ ಅಮ್ಮ ಬರುವ ಸದ್ದಾಗಿತ್ತು. ‘ನೀ ಆಚೆ ಹೋಗು ಹೋಗು’ ಎಂದಳು ನಾನು ಬೇಸರ ಮತ್ತು ಅನುಮಾನದಿಂದ ನಿಧಾನವಾಗಿ ಹೊರಗಡೆ ಬರುವುದಕ್ಕೂ ಅವರ ಅಮ್ಮ ಎದುರು ಬರುವುದಕ್ಕೂ ಸರಿಯಾಗಿತ್ತು. ನನ್ನನ್ನು ಕಂಡು ಅವರ ಅಮ್ಮ ಬಾಯಿಬಡಿದುಕೊಂಡು ‘ಲೇ ಮುನ್ನಾ ಎಲ್ಲಿದ್ದೀಯೇ? ಅಂದು ‘ಅಮ್ಮಣ್ಣಿ ಯಾಕ್ ಒಳಕ್ ಬಂದಿದ್ದು? ಅಯ್ಯೋ ಕರ್ಮ’ಎಂದಳು. ನಾನು ಏನೂ ಅರಿಯದೆ ‘ಯಾಕೆ ಚಿನ್ನಮ್ಮಾ..ಏನಾಯಿತು’ ಅಂದು ‘ಸೊಪ್ಪು ಬೇಕು ಅಮ್ಮ ಹೇಳಿದ್ದಾಳೆ’ ಎಂದೆ. ‘ಬಾ ತಾಯಿ’ ಎಂದು ಕರೆದು ಕೈತೋಟಕ್ಕೆ ನಡೆದಳು. ನಾನೂ ಅವಳ ಹಿಂದೆ ನಡೆದೆ. ಸೊಪ್ಪಿನ ಮಡಿಗಳ ಬಳಿ ಕೂತು ಕುಡಗೋಲಿನಿಂದ ಸೊಪ್ಪು ಎಡಗೈಲಿಡಿದು ಬಲಗೈಯ್ಯಲ್ಲಿ ಕುಂಯ್ಯುತ್ತಾ … ‘ನಾವೂ ಹಾಳೂ ಮೂಳು ತಿನ್ನವ್ರೂ ನೀವು ಒಳಗಡೀಕೆ ಬರಬಾರದು.. ನಮಗೂ ಒಳ್ಳೇದಲ್ಲಾ ನಿಮಗೂ ಒಳ್ಳೇದಲ್ಲಾ’ ಎಂದಳು. ನನಗೇ ಅರ್ಥವಾಗದೆ “ನಾವೂ ಸೊಪ್ಪು ತಿಂತೀವಲ್ಲಾ ಅಂದೆ” ಆಕೆ ತಲೆ ಚಚ್ಚಿಕೊಂಡಳು. ಸೊಪ್ಪನ್ನು ಕುಯ್ದು ತನ್ನ ಸೆರಗಿನ ಮಡಿಲಿಗೆ ಹಾಕಿಕೊಳ್ಳುತ್ತಿದ್ದಳು. ತುಂಬಾ ಕುಯ್ದನಂತರ ‘ನಡೀ ನಾನೂ ಬತ್ತೀನಿ’ ಎಂದು ನನ್ನೊಡನೆ ಮನೆಗೆ ಬಂದಳು.

ತಾಂಬೂಲ ಮೆಲ್ಲುತ್ತಿದ್ದ ಚಿನ್ನಮ್ಮನ ಸುತ್ತಾ ಅದರದೇ ಘಮಲು. ಈಗಲೂ ತಂಬೂಲದ ವಾಸನೆ ಬಂದರೆ ಅವಳೇ ನೆನಪಾಗುತ್ತಾಳೆ. ಮನೆಯ ಅಂಗಳದಲ್ಲಿ ಕೂತು ‘ಹೋಗು ಮೊರ ತತ್ತ.. ಎಂದಳು. ಮೊರ ತಂದು ಆಕೆಯ ಮುಂದೆ ಹಿಡಿದೆ. ಅಮ್ಮ ಹೊರಗೆ ಬಂದು ಸೊಪ್ಪು ಮುಟ್ಟಿ ‘ಎಷ್ಟು ಚೆನ್ನಾಗಿದೆ ಚಿನ್ನಿ ಸೊಪ್ಪು’ ಎಂದು ಮೆಚ್ಚುಗೆ ಸೂಚಿಸಿದಳು. ಚಿನ್ನಮ್ಮ ಆಕಡೆ ಈಕಡೆ ನೋಡಿ ಯಾರೂ ಇಲ್ಲದ್ದು ನೋಡಿ ‘ಅಗಳೀ..ಅಮ್ಮ ನಿಮ್ಮ ಮಗಳು ನಮ್ಮ ಮನೆ ಒಳೀಕೆ ಬಂದುಬುಟ್ಟಿತ್ತು.. ಮುನ್ನಾ ಒಳಗಿದ್ದಳು ಅದಕ್ಕೂ ಗೊತ್ತಿಲ್ಲ.. ಇದಕ್ಕೂ ಗೊತ್ತಿಲ್ಲ ನಂದೇನೂ ತಪ್ಪಿಲ್ಲ ನಾನೂ ಇರನಿಲ್ಲಾ’ ಎಂದಳು. ಅಮ್ಮ ನಕ್ಕು ‘ಹೋಗಲಿ ಬಿಡೇ ಚಿನ್ನಮ್ಮ.. ಏನಾಗೊಲ್ಲ.. ಇವೆಲ್ಲಾ ಜನರು ಮಾಡಿರೋದು’ ಎಂದರು. ಎಲ್ಲೂ ಹೇಳಬೇಡ ಅಯ್ಯನವರ ಎದುರು ಹೇಳಬೇಡ ಅಷ್ಟೇ..ಅಂತಹೇಳಿ ‘ಕಸ ಕಡ್ಡಿ ಇದ್ದರೆ ಆರಿಸಿ ಕೊಡು ಚಿನ್ನಮ್ಮ ..’ ಎಂದಿದ್ದರು.

ಆಂಜನೇಯ ಗುಡಿಯ ಹತ್ತಿರ ಆಟವಾಡಲು ಹೋದರೆ ಹುಸೇನ್ ಸಾಬ್ “ದೇವಸ್ಥಾನದ ಬಳಿ ಗಲೀಜು ಮಾಡಬೇಡಿ, ಹೋಗಿ ಬೇರೆಡೆ ಆಡಿಕೊಳ್ಳಿ” ಎಂದು ನಮ್ಮನ್ನು ಅಟ್ಟುತ್ತಿದ್ದರು. ಸಂಜೆ ಮಸೀದಿಯಲ್ಲಿ ಅಜಾನ್ ಕರೆಯುವ ಹೊತ್ತಿಗೆ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮಸೀಸಿಯ ವರಾಂಡದ ಗೋಡೆಗೆ ಒರಗಿನಿಂತು “ಚೂ…ವ್ ಚೂ..ವ್” ಎಂದು ಅವರ ಉಸಿರು ತಾಗಿದರೆ ಯಾವುದೇ ದೆವ್ವ, ಕಾಯಿಲೆ ಬರದು ಎಂಬ ನಂಬಿಕೆಯಿಂದ ಮಂತ್ರ ಹಾಕಿಸಿಕೊಂಡು ಬರುತ್ತಿದ್ದೆವು. ನೋಡು ನೋಡುತ್ತಿದ್ದಂತೆ ಜನರಲ್ಲಿ ಏನಾಯಿತು? ಯಾರು ಬಿತ್ತಿದರು ಮೇಲು-ಕೀಳಿನ, ದಲಿತ-ಬಲಿತ,ಧರ್ಮ-ಅಧರ್ಮಗಳೆಂಬ ಧ್ವೇಷದ ವಿಷದ ಬೀಜಗಳನ್ನು? ಆಗಲೂ ಉತ್ತಮ ಚಲನೆಯಿತ್ತು. ಮತ್ಯಾವ ಪ್ರಗತಿ ಸಾಧಿಸಲು ಜನ ಬದಲಾದರು? ಅಂದು ಇದ್ದವರೂ ಮನುಷ್ಯರೇ ಈಗಲೂ ಅದೇ ಮನುಷ್ಯರೇ … ಆದರೆ ಭಾವಗಳೇಕೆ ಭಿನ್ನವಾದವು, ವ್ಯಘ್ರವಾದವು, ಮನಸ್ಸಿನಲ್ಲೇಕೆ ಗೋಡೆಗಳೆದ್ದವು? ಎಲ್ಲಿ ಹೋಯಿತು ಮನದ ಸೇತುವೆ? ಯಾರ ಸ್ವಾರ್ಥದ ಕೊಡಲಿ ಕಡಿಯಿತು ಸೌಹಾರ್ಧತೆಯ ಸೇತುವೆಯನ್ನು? ಅಂದಿನ ಜ್ಞಾನ ಏನಾಯಿತು? ಬೆಳೆಸಿದ ವಿಜ್ಞಾನ ಜ್ಞಾನವನ್ನು ನುಂಗಿ ಹಾಕಿತೇ?.

 

Girl in a jacket
error: Content is protected !!