ನಾಯಕತ್ವ ಬದಲಿಸಲು ದೆಹಲಿ ನಾಯಕರಲ್ಲಿ ಯೋಗೇಶ್ವರ್ ಒತ್ತಡ

Share

ನವದೆಹಲಿ,ಜೂ,27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿ ನಾಯಕರನ್ನು ಬೇಟಿ ಮಾಡಿ ಒತ್ತಡ ಹೇರಿದ್ದಾರೆ.
‘ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಪರೀಕ್ಷೆಯ ಫಲಿತಾಂಶ ಶೀಘ್ರವೇ ಹೊರಬೀಳಲಿದೆ’ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ದೆಹಲಿಗೆ ದೌಡಾಯಿಸಿದ್ದ ಅವರು ಶನಿವಾರ ಪಕ್ಷದ ಕೆಲವು ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಶನಿವಾರ ಬೆಳಗಿನಜಾವ ಕೆಲವರನ್ನು ಭೇಟಿಯಾಗಿ ನಾಯಕತ್ವ ಬದಲಾವಣೆಗಾಗಿ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸುವಂತೆಯೂ ಅವರು ಕೆಲವರಲ್ಲಿ ಮನವಿ ಮಾಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದರೂ, ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ಇಂಧನ ಖಾತೆ ನೀಡದಿರುವುದರ ಬಗ್ಗೆ ಹಾಗೂ ರಾಮನಗರ ಜಿಲ್ಲೆಯ ಉಸ್ತುವಾರಿ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ತೋಡಿಕೊಂಡಿರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ, ನಾನು ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ದೆಹಲಿ ಭೇಟಿ ನೀಡಿದ್ದು ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.

ಪ್ರತಿ ಬಾರಿಯೂ ನನ್ನ ದೆಹಲಿ ಭೇಟಿಗೆ ರಾಜಕೀಯ ಸ್ಪರ್ಶ ನೀಡಲಾಗುತ್ತದೆ. ಈ ಬಾರಿ ವೈಯಕ್ತಿಕ ಕೆಲಸದ ನಿಮಿತ್ಯ ಬಂದಿದ್ದು, ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ನಿನ್ನೆ ತಡ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.

Girl in a jacket
error: Content is protected !!