ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹಿತ್ತಲ ಗಿಡ ಮದ್ದಲ್ಲ.
ಮನೆಯ ಹಿಂಭಾಗದ ಖಾಲಿ ಜಾಗ ಹಿತ್ತಲ. ಹಿಂದಿನ ಕಾಲದಲ್ಲಿ ವಿಶಾಲ ಹಿತ್ತಲ. ಅಲ್ಲಿ ಹೀರೆ, ತಿಪ್ಪರೆ, ಅವರೆ, ಸೌತೆ, ಕುಂಬಳದಂಥ ತರಕಾರಿ ಬಳ್ಳಿ. ಅರಿಷಿಣ, ಶುಂಠಿ, ಪುದಿನ, ಕರಿಬೇವು, ಲಿಂಬೆ, ತುಳಸಿ, ಅಮೃತಬಳ್ಳಿಯಂಥ ಔಷಧೀಯ ಗಿಡಬಳ್ಳಿ! ಅನೇಕ ಕಾಯಿಲೆಗಳಿಗೆ ಮನೆ ಮದ್ದೇ ರಾಮಬಾಣ! ಪಾಶ್ಚಾತ್ಯ ವಿಜ್ಞಾನ ಬೆಳೆದಂತೆ ಭಾರತೀಯ ಆಯುರ್ವೇದ, ಹಿತ್ತಲ ಗಿಡ ಕಡೆಗಣಿಸಲ್ಪಟ್ಟಿತು. ಕೊರೊನಾ ವಕ್ಕರಿಸಿದ್ದೇ ತಡ! ಆಯುರ್ವೇದಕ್ಕೆ, ಹಿತ್ತಲ ಗಿಡಕ್ಕೆ ಬಂತು ದಿಢೀರ್ ಬೆಲೆ! ಅಲ್ಲಿ ಇಲ್ಲಿ ಎಲ್ಲೆಲ್ಲೂ ಕಷಾಯ! ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಹೇಳಿದ ಮಾತು, “ನಾಸ್ತಿ ಮೂಲಮನೌಷಧಮ್ = ಔಷಧವಾಗದ ಗಿಡಮೂಲಿಕೆ ಇಲ್ಲ!” ಹಾಗೆಂದು ಎಲ್ಲ ಎಲ್ಲಕ್ಕೂ ಮದ್ದಲ್ಲ. ಯಾವುದಕ್ಕೆ ಯಾವುದು ಮದ್ದೆಂದು ಚೆನ್ನಾಗಿ ತಿಳಿದಿರಲಿ. ಪ್ರತಿಯೊಂದಕ್ಕೂ ಹಿತ್ತಲಗಿಡವೇ ಮದ್ದಲ್ಲ! ಹೀಗೆಂದು ನಿರ್ಲಕ್ಷ್ಯವೂ ಸಲ್ಲ! ಸಂದರ್ಭ ಒದಗಿದರೆ ಅದು ಮದ್ದು. ಇಲ್ಲಿದ್ದು, ಇಲ್ಲಿನದನ್ನು ಮರೆತು, ಯಾರನ್ನೋ ಯಾವುದನ್ನೋ ಬಯಸುತ್ತೇವೆ! ನಮ್ಮಲ್ಲಿರುವುದನ್ನು, ನಮ್ಮವರನ್ನು, ನಮ್ಮ ಸುತ್ತ ಮುತ್ತಲಿನವರನ್ನು ಕಡೆಗಣಿಸದಿರೋಣ.ರೂಪ ಹಣ ನೋಡುವ ಹೊರ ಹೆಣ್ಣು ಗಂಡು ನಿಧಾನ ದೂರ! ಕೈ ಹಿಡಿದ ಗುಣದ ಗಂಡು ಹೆಣ್ಣು ಇಳಿ ವಯಸ್ಸಿನಲ್ಲಿ, ಕಾಯಿಲೆಗೀಡಾದಾಗಲೂ ದೂರ ಸರಿಯರು!