ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ೧೪೯೨.೯೭ ಕೋಟಿ ರೂ. ಅನುಮೋದನೆ

Share

ಬೆಂಗಳೂರು,ಜೂ,೨೫: ಕಲ್ಯಾಣ ಕರ್ನಾಟಕದ ಜನತೆಗೆ ಇದೊಂದು ಸಂತಸದ ಸುದ್ದಿ, ರಾಜ್ಯಪಾಲರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕ್ರಿಯಾಯೋಜನೆ ರೂಪಿಸಲು ೧೪೯೨.೯೭ ಕೋಟಿ ರೂ.ಗೆ ಅನುಮೋದನೆ ನೀಡಿದ್ದಾರೆ
ಗಿರಿಜನ ಉಪಯೋಜನೆಗೆ ೧೦೦ ಕೋಟಿ ರೂ., ವಿಶೇಷ ಘಟಕ (ಎಸ್‌ಸಿಪಿ) ೩೦೦ ಕೋಟಿ ರೂ. ಹಾಗೂ ಸಾಮಾನ್ಯ ಯೋಜನೆಗೆ ೧೦೯೨.೯೭ ರೂ. ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಂತೆ ಕ್ರಿಯಾಯೋಜನೆ ರೂಪಿಸಲು ರಾಜ್ಯಪಾಲರಿಂದ ಗ್ರೀನ್‌ಸಿಗ್ನಲ್ ದೊರೆತಿದೆ.
೨೦೨೧-೨೨ ನೇ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಲಾಗಿರುವ ರೂ. ೧೪೯೨.೯೭ ಕೋಟಿ ಅನುದಾನಕ್ಕೆ ಮಂಡಳಿ ವ್ಯಾಪ್ತಿಯ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ನಂಜುಂಡಪ್ಪ ವರದಿ ಆದರಿಸಿ ಅನುದಾನ ಹಂಚಿಕೆ ಮಾಡಲಾಗಿದೆ.
ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಡಿ ಮಂಡಳಿಯ ಒಟ್ಟು ಅನುದಾನದ ಶೇ. ೮೪ ರಷ್ಟು ಅನುದಾನದಲ್ಲಿ ಮೈಕ್ರೋ ಯೋಜನೆಗೆ ಶೇ. ೭೦ ರಷ್ಟು ಅನುದಾನವನ್ನು ತಾಲ್ಲೂಕುವಾರು ಹಂಚಿಕೆ ಮಾಡುವುದು, ಮ್ಯಾಕ್ರೋ ಯೋಜನೆಗೆ ಶೇ. ೩೦ ರಷ್ಟು ಅನುದಾನವನ್ನು ಸಾಮಾಜಿಕ ಹಾಗೂ ಸಾಮಾಜಿಕೇತರ ಬದಲು ಜಿಲ್ಲೆಯ ಅಭಿವೃದ್ಧಿಗಾಗಿ ಅಗತ್ಯವಿರುವ ಬೃಹತ್ ಮೊತ್ತದ ೩ ರಿಂದ ೪ ಯೋಜನೆಗಳಿಗೆ ಮಾತ್ರ ಹಂಚಿಕೆ ಮಾಡತಕ್ಕದ್ದು ಎಂದು ಹೇಳಲಾಗಿದೆ.
ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಗಳು, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಆದ್ಯತೆಗಳನುಗುಣವಾಗಿ ಯೋಜನೆ ಅನುಷ್ಠಾನಗೊಳಿಸತಕ್ಕದ್ದು, ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪಯೋಜನೆ (ಟಿಎಸ್‌ಪಿ) ಯಡಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಗೆ ಕ್ರಿಯಾಯೋಜನೆಯನ್ನು ಪ್ರತ್ಯೇಕವಾಗಿ ರೂಪಿಸಿ ಅನುಷ್ಟಾನಗೊಳಿಸಬೇಕಿದೆ ಎಂದು ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಅನುದಾನ ವಿನಿಯೋಗಿಸಲಾಗುವುದು. ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಕಳಪೆ ಕಾಮಗಾರಿ ನಡೆದು ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕಣ್ಣಿಗೆ ಕಾಣುವಂತಹ ಬಹು ಜನೋಪಯೋಗಿ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಅಂಕಿ ಅಂಶ ಖಾತೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

Girl in a jacket
error: Content is protected !!