ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹಾಸಿಗೆ ಇದ್ದಷ್ಟು ಕಾಲು ಚಾಚು.
ಹಾಸಿಗೆ =ಆದಾಯ, ಸಂಪತ್ತು, ಶಕ್ತಿ, ಸಾಮರ್ಥ್ಯ. ಚಿಕ್ಕ ಹಾಸಿಗೆಯಲ್ಲಿ ಎತ್ತೆಂದರತ್ತ ಕಾಲು ಚಾಚಿದರೆ ಹಾಸಿಗೆ ಸಾಲದು. ಹಾಸಿಗೆ ದೊಡ್ಡದಿರಬಾರದೆಂದಿಲ್ಲ! ಆದರೆ ಮನ ಬಂದಂತೆ ಕಾಲು ಚಾಚಿದೆಡೆಯಲ್ಲೆಲ್ಲ ಹಾಸಿಗೆ ಇರಲಾದೀತೇ? ಎಲ್ಲೆಂದರಲ್ಲಿ, ನಮ್ಮದಲ್ಲದರಲ್ಲೂ, ಕಾಲು ಚಾಚುವ, ಮೂಗು ತೂರಿಸುವ, ಕಣ್ಣು ಇಣುಕಿಸುವ, ನಾಲಿಗೆ ಹರಿಬಿಡುವ, ಕಿವಿ ಕೊಡುವ, ಕೈ ತೂರಿಸುವ, ಚಪಲ! ಚಪಲ ಚನ್ನಿಗರಾಯರಿಗೆ ಎಂದಿಗೂ ಇಲ್ಲ ತೃಪ್ತಿ! ಹಿಂದಿನ ಕಾಲದಲ್ಲಿ ಸೌಕರ್ಯ ಕಡಿಮೆ, ತೃಪ್ತಿ ಹೆಚ್ಚು! ಇಂದು ಏನೆಲ್ಲ ಸೌಕರ್ಯ, ವಿಶ್ವವೇ ಅಂಗೈಯಲ್ಲಿ. ತೃಪ್ತಿಯ ಕೊರತೆ! ಇನ್ನಷ್ಟು ಮತ್ತಷ್ಟು ಬೇಕೆಂಬ ದಾಹ ಅತೃಪ್ತಿಯ ಮೂಲ. ತೃಪ್ತಿ ಖರೀದಿಯ ಸರಕಲ್ಲ. ಅದು ಹೆಚ್ಚಿನ ಸೌಕರ್ಯ – ಶ್ರೀಮಂತಿಕೆಯಲ್ಲಿದೆ ಎಂಬುದು ಹುಸಿ ಕಲ್ಪನೆ! ಸೌಕರ್ಯ ಶ್ರೀಮಂತಿಕೆ ಬೇಡವೆಂದಲ್ಲ, ಅದೇ ನೆಮ್ಮದಿಯ ಗೂಡಲ್ಲ! ಮುಟ್ಟಿದ್ದೆಲ್ಲ ಬಂಗಾರವಾಗುವ ವರ ಪಡೆದವ ಮುಟ್ಟಿದ ಅನ್ನ ನೀರು ಮಡದಿ ಎಲ್ಲಾ ಬಂಗಾರವಾಗಿ ಕಂಗಾಲಾದನಂತೆ! ನೆಮ್ಮದಿ ಭಾವನಾತ್ಮಕ! ವಿಚಾರ ವೈರಾಗ್ಯ ಧ್ಯಾನ ಅಂತರ್ಮುಖವೃತ್ತಿಗಳು ನೆಮ್ಮದಿಯ ತಾಣ ಸಾಧನಗಳು. ಆದಾಯ ಸಂಪತ್ತಿಗಿಂತ ಖರ್ಚು ಕಡಿಮೆ ಇರಲಿ. ಖರ್ಚೇ ಹೆಚ್ಚಾದರೆ, ಸಾಲದ ಶೂಲ – ಮೃತ್ಯುವಿಗೆ ಆಹ್ವಾನ! ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತು ಬಾಳಬೇಕು.ಹಕ್ಕಿ ಹಾರುವುದೆಂದು ಆಮೆ ಹಾರಲಾದೀತೇ? ಶ್ರೀಮಂತ ಮದುವೆಗೆ ಕೋಟಿ ಸುರಿಯುವನೆಂದು ಬಡವ ಸಾಲ ಮಾಡಿದರೆ ಗತಿ ಏನಾಗಬೇಡ? ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ.