ಸಿದ್ದು ಡಿಕೆಶಿ ನಡುವೆ ನಿಲ್ಲದ ಕಾದಾಟ

Share

ಕರ್ನಾಟಕದಲ್ಲಿ ಹಾಲಿ ಸಿಎಂ ಯಡಿಯೂರಪ್ಪ ಪದಚ್ಯುತಿ ಯತ್ನ ಆಡಳಿತ ಪಕ್ಷದೊಳಗಡೆ ಗುದಮುರಗಿ ನಡೆಸಿದೆ. ಅದೇ ಕಾಲಕ್ಕೆ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನ ಅಜೆಂಡವಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನೆ ಭವಿಷ್ಯದ ಮುಖ್ಯಮಂತ್ರಿ ಎಂದು ಟಾಂಟಾಂ ಮಾಡುತ್ತಿದ್ದಾರೆ. ಡಿಕೆಶಿ ಬೆಂಬಲಿಗರು ಬಾಯಿ ಬಿಡುತ್ತಿಲ್ಲ ಹಾಗಂತ ಬಾಯಿಬಾಯಿ ಬಿಡುತ್ತಲೂ ಇಲ್ಲ. ಏತನ್ಮಧ್ಯೆ ಬಾಯಿ ಮುಚ್ಚಿ ಕೂರುವಂತೆ ಸಿದ್ದು ಬೆಂಬಲಿಗರನ್ನೂ ಒಳಗೊಂಡಂತೆ ಕಾಂಗ್ರೆಸ್ಸಿಗರಿಗೆ ಏಐಸಿಸಿ ತಾಕೀತು ಮಾಡಿದೆ. ಕೆಪಿಸಿಸಿ ಪುನಾರಚನೆಗೆ ಡಿಕೆಶಿ ಮುಂದಾಗಿದ್ದಾರೆ ಆದರೆ ಅದಕ್ಕೆ ಸಿದ್ದು ಸಹಕಾರ ಅಷ್ಟಕ್ಕಷ್ಟೆ.

ಸಿದ್ದು ಡಿಕೆಶಿ ನಡುವೆ ನಿಲ್ಲದ ಕಾದಾಟ

ಮೂಲ ಕಾಂಗ್ರೆಸ್ ಹಾಗೂ ವಲಸೆ ಕಾಂಗ್ರೆಸ್ ನಡುವಣ ಜಗಳ ಕರ್ನಾಟಕದಲ್ಲಿ ಮತ್ತೆ ಗರಿದೆರಿದೆ. ರಾಜ್ಯ ವಿಧಾನ ಸಭೆಗೆ (ಮಧ್ಯಂತರದಲ್ಲಿ ಅನೂಹ್ಯವಾದುದೇನೂ ಘಟಿಸದಿದ್ದಲ್ಲಿ) ಚುನಾವಣೆ ನಡೆಯುವುದು ೨೦೨೩ರಲ್ಲಿ; ಎರಡು ವರ್ಷದ ಬಳಿಕ. ಅಷ್ಟರೊಳಗೆ ಉತ್ತರ ಪ್ರದೇಶ, ಪಂಜಾಬ್ ಒಳಗೊಂಡಂತೆ ಕೆಲವು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸು ಅಲ್ಲೆಲ್ಲ ತನ್ನ ಬಲವನ್ನು ಪರೀಕ್ಷೆಗೆ ಒಡ್ಡಬೇಕಿದೆ. ದೇಶದಾದ್ಯಂತ ಪಕ್ಷ ನೆಲೆ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಅತ್ತ ಗಮನ ಹರಿಸುವ ಹೊಣೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಮೇಲೂ ಇದೆ. ಆದರೆ ಆ ವಿಚಾರದಲ್ಲಿ ಸ್ಥಳೀಯ ನಾಯಕತ್ವ ತಲೆ ಕೆಡಿಸಿಕೊಂಡಂತೆ ಕಾಣಿಸುವುದಿಲ್ಲ. ಬದಲಿಗೆ ಅದೇ ಹಳಸಲು ಸಂಗತಿ ಮೂಲ ಕಾಂಗ್ರೆಸ್ ಹಾಗೂ ವಲಸೆ ಕಾಂಗ್ರೆಸ್ ಎಂಬ ಗಬ್ಬು ವಾದ ರಾಡಿ ಎದ್ದು ನಾರತೊಡಗಿದೆ.
ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಿದ್ದರೆ ೨೦೧೩ರ ಚುನಾವಣೆಯಲ್ಲಿ ಕಾಂಗ್ರೆಸ್ಸು ೧೨೨ ಸ್ಥಾನ ಗೆಲ್ಲುವುದು ಕಷ್ಟದ್ದಾಗಿತ್ತು. ಪಕ್ಷದಿಂದ ಸಿಡಿದು ಹೊರ ಬಂದ ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿ ಚುನಾವಣೆಯಲ್ಲಿ ಬಿಜೆಪಿ ಭವಿಷ್ಯವನ್ನು ಮಂಕಾಗಿಸಿದ್ದು ಕಾಂಗ್ರೆಸ್ ಜಯದ ಹಿಂದಿರುವ ಅಸಲಿ ಕಾರಣ. ಹಾಗಂತ ಇದೊಂದೆ ಕಾರಣವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿಲ್ಲ. ಆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಸೋತಿದ್ದೂ (ಸೋಲಿಸಿದ್ದು?) ಮುಖ್ಯ ಕಾರಣವಾಯಿತು. ಚುನಾಯಿತ ಶಾಸಕಾಂಗ ಪಕ್ಷದಲ್ಲಿ ಸಿದ್ದರಾಮಯ್ಯನವರಿಗೆ ಬಹುಮತ ಇತ್ತೆನ್ನುವುದು ಅವರ ಪಾಲಿಗೆ ವರವಾಗಿ ಬಂದ ಇನ್ನೊಂದು ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ರೂಢಿಗತ ಪರಂಪರೆಯಾಗಿರುವ “ದೆಹಲಿಯಿಂದ ಬರುವ ಕವರ್‌ನಲ್ಲಿ ಸಿಎಂ ಹೆಸರಿರುತ್ತದೆ”ಎಂಬ ಮಾತಿಗೆ ಅಪವಾದವೂ ಆಗಿ ಅವರು ಸಿಎಂ ಆದರು.


ಪಕ್ಷದಲ್ಲಿ ಇತರರಿಗಿಂತ ಸಿದ್ದರಾಮಯ್ಯ ಅತಿ ವೇಗಗಾಮಿ. ಚಾಲಾಕಿ. ಅವರನ್ನು ಪಕ್ಷಕ್ಕೆ ಸೆಳೆಯುವಾಗ ಎಚ್.ಡಿ. ದೇವೇಗೌಡರನ್ನೂ ಅವರ ಪಕ್ಷ ಜೆಡಿಎಸ್ ಅನ್ನೂ ಮಣಿಸುವ ಅಜೆಂಡಾ ಕಾಂಗ್ರೆಸ್‌ನದಾಗಿತ್ತು. ಜೆಡಿಎಸ್‌ಗೆ ಮತ್ತು ಅದರಿಂದ ತಾವು ಆಯ್ಕೆಯಾಗಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ಬಿಸುಟಿ ಬಂದ ಸಿದ್ದರಾಮಯ್ಯ, ಸಹಜವಾಗಿಯೇ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿಗೆ ಡಾರ್ಲಿಂಗ್ ಆಗಿ ಕಂಡರು. ವರುಣಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದುದು ೨೧೬ ಮತಗಳ ಅಂತರದಿಂದ. ಬಹುಮತ ಚಿಕ್ಕದಾಗಿದ್ದರೂ ಗೆಲುವು ಸಣ್ಣದಾಗಿರಲಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ವಿರೋಧ ಪಕ್ಷದ ನಾಯಕರೂ ಆದರು. ಮುಂದೆ ಮುಖ್ಯಮಂತ್ರಿಯೂ ಆದರು. ಇವೆಲ್ಲವೂ ಆಗಿದ್ದು ಅವರು ಪಕ್ಷದೊಳಕ್ಕೆ ಕಾಲಿಟ್ಟ ಕೇವಲ ಒಂಭತ್ತು ವರ್ಷಾವಧಿಯಲ್ಲಿ ಎನ್ನುವುದು ದಶಕಗಳಿಂದ ಪಕ್ಷದಲ್ಲಿ ಮಣ್ಣು ಹೊರುತ್ತಿರುವವರ ಕಣ್ಣು ಕುಕ್ಕಲು ಸಾಲದೆ?
ಡೇರೆಯಲ್ಲಿ ಒಂಟೆ ನುಗ್ಗಿದಂತೆ


ಸಿದ್ದರಾಮಯ್ಯ ಕಾಂಗ್ರೆಸ್‌ನೊಳಕ್ಕೆ ಬಂದುದು ಮೂಲ ಕಾಂಗ್ರೆಸ್ಸಿಗರ ಪ್ರಕಾರ “ಒಂಟೆ ಡೇರೆಯಲ್ಲಿ ನುಗ್ಗಿದಂತಾದ” ಬೆಳವಣಿಗೆ. ಜೆಡಿಎಸ್‌ನಲ್ಲಿದ್ದಾಗ ಸಿದ್ದರಾಮಯ್ಯನವರನ್ನು ನಾಯಕ ಎಂದು ಭಾವಿಸಿದ್ದ ಅನೇಕರನ್ನು ಕಾಂಗ್ರೆಸ್‌ಗೆ ಕರೆತಂದ ಸಿದ್ದರಾಮಯ್ಯ ಅವರಿಗೆಲ್ಲ ಯಥೋಚಿತ ಮಾನಮರ್ಯಾದೆ, ಸ್ಥಾನಮಾನ ಸಿಗುವಂತೆ ನೋಡಿಕೊಂಡರು. ನಷ್ಟವಾದುದು ಮೂಲ ಕಾಂಗ್ರೆಸ್ಸಿಗರಿಗೆ ಎನ್ನುವುದು ನೊಂದವರ ಅಳಲು. ಆ ಸಮಯದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಒಂದು ನಾಯಕತ್ವ ಕೊಟ್ಟಿದ್ದು ಡಿಕೆಶಿ. ಅಂದು ಶುರುವಾದ ಅವರಿಬ್ಬರ ನಡುವಣ ಶೀತಲ ಸಮರ ಇನ್ನೂ ಯಥಾಸ್ಥಿತಿಯಲ್ಲೆ ಇದೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯನವರನ್ನು ಕೈಹಿಡಿದು ಕರೆತಂದ ಎಚ್.ವಿಶ್ವನಾಥ್, ಎಚ್.ಎಂ. ರೇವಣ್ಣ, ಎಚ್.ವೈ. ಮೇಟಿ ಕಾಲಕ್ರಮೇಣ ಅಪ್ರಸ್ತುತರಾದರು. ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಜನಾರ್ದನ ಪೂಜಾರಿ, ಜಿ.ಪರಮೇಶ್ವರ, ಡಿ.ಕೆ. ಶಿವಕುಮಾರ್… ಹೀಗೆ ಅನೇಕ ಮಂದಿ ಮೂಲ ಕಾಂಗ್ರೆಸ್ಸಿಗರು ಗಾಯ ನೆಕ್ಕುತ್ತ ಕೂರುವಂತಾಯಿತು.


ಸಿದ್ದರಾಮಯ್ಯ ಸರ್ಕಾರ ಎಷ್ಟೋ ಒಳ್ಳೆಯ ಕಾರ್ಯಕ್ರಮ ಜಾರಿಗೆ ತಂದಿತು. ಆದರೆ ತೆಗೆದುಕೊಂಡ ಕೆಲವು ತೀರ್ಮಾನಗಳು ಮಾತ್ರ ೨೦೧೮ರ ಚುನಾವಣೆಯಲ್ಲಿ ಮುಳುವಾದವು. ಅದರಲ್ಲಿ ಮುಖ್ಯವಾದುದು ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಿಸುವ ನಿರ್ಣಯ. ಲಿಂಗಾಯತ ಬೇರೆ ವೀರಶೈವ ಬೇರೆ ಎಂಬ ಆ ಸಮುದಾಯದ ಒಳ ಜಗಳದಲ್ಲಿ ಸರ್ಕಾರವನ್ನು ಶಾಮೀಲು ಮಾಡಿದ ಸಿದ್ದರಾಮಯ್ಯ ನಡೆ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಗ್ಗರಿಸಿ ಹಳ್ಳ ಹಿಡಿಯುವಂತೆ ಮಾಡಿತು. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು, ಸಿದ್ದರಾಮಯ್ಯ ನಿಲುವಿಗೆ ತದ್ವಿರುದ್ಧ ತೀರ್ಮಾನ ತೆಗೆದುಕೊಂಡ ಕಾಂಗ್ರೆಸ್ ನಾಯಕತ್ವ, ಜೆಡಿಎಸ್ ಮುಂದೆ ಮಂಡಿಯೂರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಗಾದಿಯಲ್ಲಿ ಕುಳ್ಳಿರಿಸಿತು. ಕಾಂಗ್ರೆಸ್‌ಗೆ ಬಂದ ನಂತರದಲ್ಲಿ ಸಿದ್ದರಾಮಯ್ಯ ಕಂಡ ಬಹುದೊಡ್ಡ ಹಿನ್ನಡೆ ಇದು.


ಜಮೀರ್, ಹಿಟ್ನಾಳ್ ಟಾಂಟಾಂ
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂದ ದಿವಸದಿಂದಲೇ ಅದರ ವಿರುದ್ಧ ಸಿದ್ದರಾಮಯ್ಯ ಕುದಿಯಲಾರಂಭಿಸಿದರು. ಈ ಸರ್ಕಾರ ಲೋಕಸಭಾ ಚುನಾವಣೆ ನಂತರದಲ್ಲಿ ಇರಕೂಡದು ಎಂಬ ಅವರ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ಆಪ್ತರೊಂದಿಗೆ ಆಡಿದ ಮಾತು ಮತ್ತೆ ಮೂಲ ವಲಸೆ ವಾದಕ್ಕೆ ತಿದಿ ಒತ್ತಿತು. ಸಮ್ಮಿಶ್ರ ಸರ್ಕಾರ ರಚನೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಣಯ. ಅಂಥ ಸರ್ಕಾರವೇ ಇರಕೂಡದು ಎಂಬ ಸಿದ್ದು ಹೇಳಿಕೆಯಲ್ಲಿ ಹೈಕಮಾಂಡ್ ವಿರೋಧಿ ನಿಲುವನ್ನು ಮೂಲ ಕಾಂಗ್ರೆಸ್ಸಿಗರು ಕಂಡರು. ದೂರುಗಳು ಟನ್‌ಗಟ್ಟಳೆ ಹೈಕಮಾಂಡ್‌ಗೆ ಹೋಯಿತು. ಆದರೆ ಎಲ್ಲವೂ ಹೊಳೆಯಲ್ಲಿ ಹೋಮ ಮಾಡಿದಂತೆ. ಈ ಒಂದೂವರೆ ದಶಕಾವಧಿಯಲ್ಲಿ ಮೂಲ ಕಾಂಗ್ರೆಸ್ಸಿಗರು ಎಷ್ಟೇ ಜಗ್ಗಾಡಿದರೂ ಸಿದ್ದರಾಮಯ್ಯನವರನ್ನು ಅಲುಗಾಡಿಸುವುದು ಸಾಧ್ಯವಾಗಿಲ್ಲ. ಪಕ್ಷದಲ್ಲಿ ಸದ್ಯಕ್ಕಂತೂ ಅವರು ಬಿಗ್ಗರ್ ದ್ಯಾನ್ ದ ಕಟೌಟ್ ಎಂಬಂತೆ ಬೆಳೆದುನಿಂತಿದ್ದಾರೆ.
ಬೆಂಗಳೂರು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್, ವೃತ್ತಿಯಲ್ಲಿ ಬಸ್ ಆಪರೇಟರ್. ಜನ ಬಲ್ಲಂತೆ ಅದೇ ಅವರ ಮುಖ್ಯ ಉದ್ಯೋಗ, ಅವರ ಅಗಣಿತ ಆದಾಯ, ಸಂಪತ್ತಿನ ಮೂಲವೂ ಅದೇ ಎಂದು ಅನೇಕರು ನಂಬಿದ್ದಾರೆ. ಜೆಡಿಎಸ್‌ನಿಂದ ಗೆದ್ದು ಬಂದ ಅವರು ಮೊದಲಿಗೆ ಉಕ್ಕಿ ಹರಿಯುವ ಪ್ರೀತಿ ವಿಶ್ವಾಸ ತೋರಿದ್ದು ಕುಮಾರಸ್ವಾಮಿ ಅವರಲ್ಲಿ. ಜೆಡಿಎಸ್‌ಗೆ ಕೈಕೊಟ್ಟು ಕಾಂಗ್ರೆಸ್‌ಗೆ ಜಿಗಿದ ನಂತರದಲ್ಲಿ ಸಿದ್ದರಾಮಯ್ಯನವರಲ್ಲಿ ಅವರಿಗೆ ಅಪಾರ ಪ್ರೀತಿ, ಭಕ್ತಿ, ವಿಶ್ವಾಸ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುವುದು ಅವರ ಇರಾದೆ. ಹೋದಲ್ಲಿ ಬಂದಲ್ಲಿ ಅವರು ಆಡುವ ಮಾತೆಂದರೆ “ಸಿದ್ದರಾಮಯ್ಯ ಈಗಲೂ ನನ್ನ ಪಾಲಿಗೆ ಮುಖ್ಯಮಂತ್ರಿಯೇ. ಅವರನ್ನು ಮಾಜಿ ಸಿಎಂ ಎಂದೊಪ್ಪಲು ನನ್ನ ಮನಸ್ಸು ತಯಾರಿಲ್ಲ. ಭವಿಷ್ಯದಲ್ಲಿ ಅವರೇ ಸಿಎಂ ಆಗಬೇಕೆನ್ನುವುದು ರಾಜ್ಯದ ಜನರ ಆಶಯ. ಜನರ ಬೇಡಿಕೆಯನ್ನು ಹೈಕಮಾಂಡ್ ಒಪ್ಪಬೇಕಾಗುತ್ತದೆ”. ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಸಿದ್ದರಾಮಯ್ಯ ಪಾಲ್ಗೊಳ್ಳುವಂತೆ ಜಮೀರ್ ನೋಡಿಕೊಳ್ಳುತ್ತಾರೆ. ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಲ್ಲಿ ಇರದಂತೆಯೂ ನೋಡಿಕೊಳ್ಳುತ್ತಾರೆ. ಅಂಥ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಘೋಷ ಮೊಳಗುತ್ತದೆ. ಜಮೀರ್ ಬೆಂಬಲಿಗರು ಕೇಕೆ ಹಾಕಿ ಶಿಳ್ಳೆ ಹೊಡೆದು ಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
ಒಳಗೊಳಗೇ ಸಿದ್ದರಾಮಯ್ಯ ಕುಮ್ಮಕ್ಕುದಶಕಗಳಿಂದ ಶಕ್ತಿ ರಾಜಕೀಯಕ್ಕೆ ಮುಖಾಮುಖಿ ಆಗಿರುವ ಸಿದ್ದರಾಮಯ್ಯನವರಿಗೆ ತಮ್ಮ ಬೆಂಬಲಿಗರ ವರ್ತನೆ ತಪ್ಪೆನಿಸಿಲ್ಲ. ತಮ್ಮ ಎಂದಿನ ಏಕವಚನದ ಶೈಲಿಯಲ್ಲಿ “ಜಮೀರ್, ಬಾಯಿ ಮುಚ್ಚಿಕೊಂಡಿರಯ್ಯ” ಎಂದು ಹೇಳಿದ್ದು ಎಲ್ಲಿಯೂ ವರದಿಯಾಗಿಲ್ಲ. ೨೦೧೮ರ ಚುನಾವಣೆಯಲ್ಲಿ ಬೀದರ್‌ನಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದ ನಾರಾಯಣರಾವ್ ಅಸು ನೀಗುವವರೆಗೂ “ಸಿದ್ದರಾಮಯ್ಯನವರೇ ನನ್ನ ಪಾಲಿನ ಮುಖ್ಯಮಂತ್ರಿ” ಎನ್ನುತ್ತಿದ್ದರು. ಅವರ ನಿಧನ ಬಳಿಕ ಹೈದರಾಬಾದ್ ಕರ್ನಾಟಕದ ಇನ್ನೊಬ್ಬ ಶಾಸಕ ರಾಘವೇಂದ್ರ ಹಿಟ್ನಾಳ್, ಆ ಜಾಗವನ್ನು ಆಕ್ರಮಿಸಿರುವಂತಿದೆ. ಕೊಪ್ಪಳದಲ್ಲಿ ಮೊನ್ನೆ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರನ್ನು ಕೂರಿಸಿಕೊಂಡು ಜಮೀರ್ ಬೆಂಗಳೂರಲ್ಲಿ ಆಡಿದ ಮಾತುಗಳನ್ನೇ ಅವರು ಒಪ್ಪಿಸಿದ್ದಾರೆ. ಕಾಂಗ್ರೆಸ್‌ನ ಇತರ ಮುಂಚೂಣಿ ನಾಯಕರಿಗೆ ಹೋಲಿಸಿದರೆ ಹೆಚ್ಚು ಜನ ಬೆಂಬಲವಿರುವುದು ಸಿದ್ದರಾಮಯ್ಯನವರಿಗೇ. ಆದರೆ ಅವರು ಇರುವುದು ಕಾಂಗ್ರೆಸ್‌ನಲ್ಲಿ. ಅಲ್ಲಿ ಹೈಕಮಾಂಡ್ ಏನು ಹೇಳುತ್ತದೋ ಅದೇ ವೇದವಾಕ್ಯ, ಅದೊಂದೇ ವೇದವಾಕ್ಯ.
ಡಿಕೆಶಿ, ಬಯಸಿ ಬಯಸಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಿದ್ದಾರೆ. ಅವರಿಗೆ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಅದಮ್ಯ ಉಮೇದು ಇರುವುದು ನಿಜ. ಹಾಗೆ ಅಧಿಕಾರಕ್ಕೆ ಬರುವ ಸರ್ಕಾರದ ಸಾರಥ್ಯವನ್ನು ತಾನೇ ಹಿಡಿಯಬೇಕೆಂಬ ಅದಮ್ಯ ಆಸೆ ಇರುವುದೂ ಅಷ್ಟೇ ನಿಜ. ಕಾಂಗ್ರೆಸ್‌ನಲ್ಲಿ ಸಿಎಂ ಗಾದಿ ಮೇಲೆ ಕಣ್ಣಿಟ್ಟು ಟವೆಲ್ ಹಾಸಿರುವವರ ದಂಡೇ ಇದೆ. ಅದರಲ್ಲಿ ಡಿಕೆಶಿ ಪ್ರಮುಖರಾಗಿರುವುದಕ್ಕೆ ಕಾರಣ ಅವರು ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ. ಹಿಂದೆ ವೀರೇಂದ್ರ ಪಾಟೀಲ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಸ್ಥಾನಕ್ಕೆ ಜಿಗಿದುದು ಕೆಪಿಸಿಸಿ ಕುರ್ಚಿಯಿಂದಲೇ. ೨೦೧೩ರಲ್ಲಿ ಸ್ವತಃ ಸೋತ ಜಿ.ಪರಮೇಶ್ವರ ಸ್ಥಾನ ವಂಚಿತರಾದರು. ಅವರ ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷಸ್ಥಾನ ಸುಪ್ರೀಂ ಎಂದು ಯಾರೂ ಹೇಳಲಿಲ್ಲ. ಈಗ ಪರಮೇಶ್ವರ್ ಅದನ್ನು ಹೇಳುತ್ತಿದ್ದಾರೆ.


ಏನಕೇನ ಪ್ರಕಾರೇಣ ಒದಗಿ ಬಂದಿರುವ ಅವಕಾಶವನ್ನು ಕಳೆದುಕೊಳ್ಳಲು ಡಿಕೆಶಿ ಸುತರಾಂ ತಯಾರಿಲ್ಲ. ಇತ್ತ ಸಿದ್ದರಾಮಯ್ಯ ಕೂಡಾ ಸುಮ್ಮನಿಲ್ಲ. ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗುವುದಕ್ಕೆ ವಿರೋಧ ಸೂಚಿಸಿದ್ದ ಅವರು ಇದೀಗ ಕೆಪಿಸಿಸಿ ಪದಾಧಿಕಾರಿಗಳ ಪುನರ್ರಚನೆಗೆ ತೊಡರುಗಾಲಾಗಿದ್ದಾರೆಂಬ ಸುದ್ದಿ ಹರಡಿದೆ. ಕೆಲವು ಜಿಲ್ಲಾ ಅಧ್ಯಕ್ಷರೂ ಸೇರಿದಂತೆ ಕೆಲಸ ಮಾಡದ ಪದಾಧಿಕಾರಿಗಳನ್ನು ಬದಲಾಯಿಸಲು ಹೈಕಮಾಂಡ್ ಅನುಮತಿ ಪಡೆಯಲು ಡಿಕೆಶಿ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಕ್ಷದ ಉನ್ನತ ನಾಯಕರಿಂದ ಅವರ ಆಯ್ಕೆಯ ಪಟ್ಟಿಯನ್ನು ಡಿಕೆಶಿ ಕೋರಿದ್ದಾರೆಂದು ಹೇಳಲಾಗಿದೆ. ಆದರೆ ತಮ್ಮ ಆಯ್ಕೆಯ ಪಟ್ಟಿಯನ್ನು ಡಿಕೆಶಿಗೆ ಕೊಡುವುದಿಲ್ಲ ಎಂಬ ನಿಲುವಿಗೆ ಸಿದ್ದರಾಮಯ್ಯ ಬಂದಿದ್ದಾರೆ. ನೇರವಾಗಿ ಹೈಕಮಾಂಡಿಗೇ ತಮ್ಮ ಪಟ್ಟಿಯನ್ನು ಕೊಡುವ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆನ್ನಲಾಗಿದೆ. ಇದು ಡಿಕೆಶಿಗೆ ಅನಿರೀಕ್ಷಿತವೇನೂ ಅಲ್ಲ ಆದರೆ ಸಿದ್ದರಾಮಯ್ಯ ತೋರಿಸುವ ಧೈರ್ಯ ಡಿಕೆಶಿ ಪಾಲಿನ ಸರಳ ನಡೆಗೆ ಅಡ್ಡ ನಿಂತಿರುವ ದೊಡ್ಡ ಬಂಡೆಯಾಗಿದೆ ಎನ್ನುವುದಂತೂ ಸತ್ಯ.

Girl in a jacket
error: Content is protected !!