ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹಾಲಿಂದು ಹಾಲಿಗೆ, ನೀರಿಂದು ನೀರಿಗೆ.
ಹೆಚ್ಚಿನ ಹಣದಾಶೆಗೆ ಹಾಲಿಗೆ ನೀರು ಬೆರೆಸುವುದುಂಟು! ಅಕ್ಕಿ ಬೇಳೆ ಎಣ್ಣೆ, ತುಪ್ಪ ಜೇನು ಔಷಧಿ, ಹಣ ಬಂಗಾರ ಕಟ್ಟಿಗೆ, ಬಣ್ಣ ಇಂಧನ ಸಿಮೆಂಟ್, ವಿಭೂತಿ ರುದ್ರಾಕ್ಷಿ ಕುಂಕುಮ ಮಂತ್ರ ದೇವರು ಧರ್ಮ, ಶ್ಲೋಕ ಸಾಹಿತ್ಯ, ಸಂನ್ಯಾಸ ರಾಜಕಾರಣ ಅಧಿಕಾರ, ಕೃಷಿ ವ್ಯಾಪಾರ, ಎಲ್ಲೆಲ್ಲೂ ಇದೆ ಕಲಬೆರಕೆಯ ಹಾವಳಿ! ನೆನಪಿರಲಿ :ಕಲಬೆರಕೆ ಕೈ ಹಿಡಿಯದು! ಹಾಲಿನ ವ್ಯಾಪಾರಿಯ ಹಣದ ಚೀಲ ಕದ್ದ ಮಂಗ, ಒಂದು ನಾಣ್ಯವ ನದಿಗೆ, ಮತ್ತೊಂದು ನಾಣ್ಯವ ದಡಕ್ಕೆ ಎಸೆಯಿತಂತೆ. ವ್ಯಾಪಾರಿಗೆ ಅರಿವಾಯಿತು, ಹಾಲಿಂದು ಹಾಲಿಗೆ ನೀರಿಂದು ನೀರಿಗೆ! ಅಸಲಿ ಯಾವತ್ತೂ ಅಸಲಿ,ನಕಲಿ ಯಾವತ್ತೂ ನಕಲಿ! ಅಸಲಿಯ ಹೆಸರಿನಲ್ಲಿ ನಕಲಿಯ ವ್ಯವಹಾರ, ಬಯಲಾಗುವುದು ಬೇಗ! ಕಳೆಯುವುದು ನಂಬಿಗೆ ಮರ್ಯಾದೆ! ಅಡಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು! ಜನ ಸರಿಯುವರು ದೂರ,ಮತ್ತೆ ಸುಳಿಯರು ಬಹುತೇಕ.ಅನಿವಾರ್ಯದಿ ಮತ್ತೆ ಸುಳಿದು ವ್ಯವಹರಿಸಿದರೂ, ಒಳಗೊಳಗೆ ಹಾಕುವರು ಹಿಡಿ ಶಾಪ! ಸಮಯಕ್ಕೆ ಕಾಯುವರು ಶೇಡಿಗೆ! ಶೋಷಿತರ ಶೇಡು ದ್ವೇಷಗಳ ಬಿರುಗಾಳಿ ಬೀಸಲು, ಮಣ್ಣು ಮುಕ್ಕುವರು! ಹೆಚ್ಚಿನ ಲಾಭದ ಆಶೆ ತೋರಿಸಿ, ಕೋಟಿ ಕೋಟಿ ಲೂಟಿ ಮಾಡಿದ ಧನ-ಭೂಪತಿಗಳು- ದುರಾಶೆಗೊಳಗಾಗಿ ಹಣ ಸುರಿದವರು, ಇಂದು ತಲೆ ಮರೆಸಿಕೊಂಡಿಹರು, ಜೈಲು ಸೇರಿಹರು, ತಮ್ಮ ತಾವೇ ಹತ್ಯೆ ಮಾಡಿಕೊಂಡಿಹರು! ಹೆಚ್ಚಿನ ಆಶೆಯ ತೊರೆಯೋಣ, ಪ್ರಾಮಾಣಿಕ ಜೀವನ ನಡೆಸೋಣ!!