ಬೆಂಗಳೂರು, ಜೂ,17: ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಅಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾದ ವಿದ್ಯಸರ್ಥಿಗಳ ಶುಲ್ಕವನ್ನು ಮರುಪಾವತಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ ಅನ್ಬುಕುಮಾರ್ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12 (1) ಸಿ ಅಡಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2012-13ನೇ ಸಾಲಿನಿಂದ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಹಂಚಿಕೆ ಮಾಡಿ, ಆರ್ ಟಿ ಇ ಕಾಯ್ದೆ 2009ರ ಸೆಕ್ಷನ್ 12(2)ರಡಿಯಲ್ಲಿ ಸರ್ಕಾರದಿಂದ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಯನ್ನು ಮಾಡಲಾಗುತ್ತಿದೆ.
2021-22ನೇ ಸಾಲಿನಲ್ಲಿ ಆರ್ ಟಿ ಇ ಶುಲ್ಕ ಮರುಪಾವತಿಗೆ ಅಯವ್ಯಯದಲ್ಲಿ ರೂ.700 ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ಮೊದಲನೇ ತ್ರೈಮಾಸಿಕ ಅನುದಾನ ರೂ.175 ಕೋಟಿಗಳನ್ನು ದಿನಾಂಕ 27-04-2021ರಂದು ಸರ್ಕಾರದಿಂದ ಬಿಡುಗಡೆಯಾಗಿದ್ದು ದಿನಾಂಕ 09-06-2021ರಂದು ಈಗಾಗಲೇ ಜಿಲ್ಲೆಗಳಿಗೆ ಬೇಡಿಕೆಗನುಗುಣವಾಗಿ ಹಂಚಿಕೆ ಮಾಡಿ, ಕೂಡಲೇ ಅರ್ಹ ಅನುದಾನರಹಿತ ಶಾಲೆಗಳಿಗೆ 2020-21ನೇ ಸಾಲಿನ ಮೂರನೇ ಕಂತು, 2020-21ರ ಹಿಂದಿನ ಸಾಲುಗಳು ಬಾಕಿ ಮೊಬಲಗನ್ನು ಪಾವತಿಸಿ, ನಂತ್ರ ಉಳಿಕೆಯಾಗುವ ಅನುದಾನಲ್ಲಿ 2020-21ನೇ ಸಾಲಿನ 2ನೇ ಕಂತಿನ ಶುಲ್ಕ ಮರುಪಾವತಿಸುವಂತೆ ಎಲ್ಲಾ ಜಿಲ್ಲಾ ಉಪ ನಿರ್ದೇಶಕರುಗಳಿಗೆ ಸೂಚಿಸಿದ್ದಾರೆ.