
ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ :
ಅಲ್ಪರ ಸಂಗ, ಅಭಿಮಾನ ಭಂಗ.
ಏಕಾಂಗಿ ಯಾವುದೂ ಇರದು. ಸಂಗ ಬಯಸುವುದು. ಅದಕ್ಕೇ ದೈವ ಲೀಲೆ.ಮರಕ್ಕೆ ಬೇಕು ಭೂಮಿ. ಒಬ್ಬರಿಗೊಬ್ಬರ ಎರವಿರಬೇಕು. ಒಳಿತ ಸಂಗ ಒಳಿತಿಗೆ, ಕೆಡುಕ ಸಂಗ ಕೆಡುಕಿಗೆ. ಬೆಂಕಿಯ ಸಂಗ ಭಸ್ಮ! ನೀರಿನ ಸಂಗ ತಂಪು! ಗಂಧದ ಸಂಗ ಪರಿಮಳ! ಹೇಸಿಗೆಯ ಸಂಗ ದುರ್ಗಂಧ! ದುಷ್ಟ ಸಂಗಮಾತ್ರವಲ್ಲ, ದುಷ್ಟ ದ್ವೇಷವೂ ಅಪಾಯ! ರೊಚ್ಚಿಗೆ ಸಿಟ್ಟೆದ್ದು ಕಲ್ಲೆಸೆದರೆ ಸಿಡಿಯುವುದು ಮುಖ ಬಾಯಿಗೆ! ಅರಿತೋ ಅರಿಯದೆಯೋ ದ್ವೇಷಕ್ಕೋ ಹರಿತ ಕತ್ತಿಯ ಅಲಗಿಗೆ ಕಾಲಿತ್ತರೆ ಕತ್ತರಿಸದಿರದೇ? ಸಂಸ್ಕಾರವಿಲ್ಲದ ಕೀಳು ನಡೆಯ ಜನಸಂಗ ಮಾನಕ್ಕೆ ಭಂಗ, ಸ್ಥಾನಕ್ಕೆ ಚ್ಯುತಿ, ಕೇಡಿಗೆ ದಾರಿ! ಕೌರವರ ಸಂಗದಿ ಕರ್ಣನಿಗೆ ಪಾಂಡವರ ಹಿರಿತನದ ನಷ್ಟ, ಅಧರ್ಮಪಕ್ಷದವನೆಂಬ ಪಟ್ಟ! ಅಲ್ಪ ತಾ ಮಾಡುವ ದುಷ್ಕೃತ್ಯದ ಹಣೆ ಪಟ್ಟಿ ಕಟ್ಟಿ ಪರರಿಗೆ ಆಗುವ ಪರಾರಿ! ಬೆಕ್ಕು ಬೆಣ್ಣೆಯ ತಿಂದು ತಾ ಮಂಗನ ಬಾಯಿಗೆ ಒರಸಿದಂತೆ!
ಸಿ. ಡಿ ಲೇಡಿಯ ಕಥೆಯಂತೆ!
ಶ್ರೀಗಂಧವನು ಧರಿಸೋಣ, ಮಾನದಿ ಪರಿಮಳ ಸವಿಯೋಣ!!
