ಶಿವಮೊಗ್ಗ,ಜೂ,೧೨:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತಂತೆ ಯಾರು ಮಾತನಾಡಬಾರದು ಒಂದು ವೇಳೆ ಅಂತ ಕೇಸಲ ಮಾಡಿದರೆ ತಮ್ಮ ಮೇಲೆ ಕಲ್ಲು ಎತ್ತಿ ಹಕಿಕೊಂಡಂತೆ ಎಂದು ಬೆಕ್ಕಿನ ಕಲ್ಮಠದ ಮುರುಘಾ ರಾಜೇಂದ್ರ ಸ್ವಾಮೀಜಿ ಎಚ್ಚರಿಸಿದ್ದಾರೆ.
ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಗಳು ಯಡಿಯೂರಪ್ಪ ಉತ್ತಮ ಆಡಳಿತಗಾರ, ಹೋರಾಟದ ಹಿನ್ನೆಲೆಯಿಂದ ಬಂದವರು ಜನಪರ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಈ ರೀತಿ ಹೇಳಿಕೆಗಳು ನೀಡುವ ಮೂಲಕ ಗೊಂದಲಗಳನ್ನು ಸೃಷ್ಠಿಸುತ್ತಿದ್ದಾರೆ ಅದು ಆಗಬಾರದು ಎಂದಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ ಒಂದು ರೀತಿ ಕೊರೊನಾಕ್ಕಿಂತಲೂ ಅಪಾಯಕಾರಿ ಎಂದ ಅವರು,ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರವಾಹ ಎದುರಾಯಿತು. ಈ ಪ್ರವಾಹವನ್ನು ಒಬ್ಬರೇ ಎದುರಿಸಿದರು. ಪ್ರವಾಹ ಮುಗಿಯಿತು ಎನ್ನುವಷ್ಟರಲ್ಲಿ ಕೊರೊನಾ ಎದುರಾಗಿದೆ ಎಂದರು.
ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಬೇರೆ ಯಾರಾದರೂ ಆಗಿದ್ದರೆ ಧೃತಿಗೆಟ್ಟು ಹೋಗುತ್ತಿದ್ದರು. ಬೇರೆ ಯಾರಿಂದಲೂ ಇಂತಹ ಸಂಕಷ್ಟ ಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು ಈಗಾಗಿಯೇ ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದಿದ್ದಾರೆ.
ರಾಜ್ಯದ ರೈತರಿಗೆ, ಮಠ ಮಾನ್ಯಗಳಿಗೆ ದೇಣಿಗೆ ನೀಡಿದ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಕೆಲಸ ಮಾಡದಿದ್ದರೆ ಯಾರು ನೆನಪಿಸಿಕೊಳ್ಳುತ್ತಾರೆ, ಅವರ ಮುಂದೆ ಏನು ಹೇಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.