ಬೆಂಗಳೂರು,ಜೂ,೧೨: ನಿನ್ನೆ ನಿಧನರಾದ ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಕಲಾ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ಇದಕ್ಕೂ ಮುನ್ನ ಸಾರ್ವಜಿನಕರ ದರ್ಶನಕ್ಕೆ ಕೆಲ ಕಾಲ ಅವಕಾಶ ಮಾಡಿಕೊಡಲಾಗಿತ್ತು.ಅಂತ್ಯಕ್ರಿಯೆ ವೇಳೆ ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ, ಚೀಫ್ ಕಮಿಷನರ್ ಗೌರವ್ ಗುಪ್ತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮತ್ತಿತರ ಗಣ್ಯರು ಭಾಗಿಯಾಗಿದ್ದರು.
ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಲಿಂಗಯ್ಯ ಅವರು ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದರು. ಇಂದು ಮಣಿಪಾಲ್ ಆಸ್ಪತ್ರೆಯಿಂದ ಡಾ. ಸಿದ್ದಲಿಂಗಯ್ಯ ಪಾರ್ಥಿವ ಶರೀರ ರವಾನೆಯಾಗಿ, ಆರ್.ಆರ್ ನಗರದ ಸ್ವಗೃಹ ಬನವಾಸಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜ್ಞಾನಭಾರತಿ ಸಂಶೋಧನಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಕೆಲಕಾಲ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಕಲಾ ಗ್ರಾಮದಲ್ಲಿ ಅಂತಿಮ ಸಂಸ್ಕಾರಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ದಿವಂಗತ ಡಾ. ಶಿವರುದ್ರಪ್ಪ, ಅನಂತ ಮೂರ್ತಿರವರ ಸ್ಮಾರಕದ ಪಕ್ಕದಲ್ಲಿಯೇ ಕೋವಿಡ್ ನಿಯಮಗಳಾನುಸರವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ
ಬೌದ್ಧ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲು ಕುಟುಂಬ ತೀರ್ಮಾನನಿಸಿತ್ತು. ಅದರಂತೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೇರವೇರಿತು.
ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಇತರರು ಭಾಗಿಯಾಗಿದ್ದರು. ಮೂರು ಸುತ್ತಿನ ಕುಶಲ ತೋಪು ಸಿಡಿಸಿ ಪೊಲೀಸರು ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಗೌರವ ಸಲ್ಲಿಸಿದರು. ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚಾರಣೆ ಮಾಡಲಾಯಿತು. ಬಳಿಕ ಗೌರವ ಸೂಚಕವಾಗಿ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ಬಾವುಟವನ್ನು ಕುಟುಂಬದ ಸದಸ್ಯರಿಗೆ ಅಶ್ವತ್ ನಾರಾಯಣ್ ಹಸ್ತಾಂತರ ಮಾಡಿದರು. ದಲಿತ ಸಂಘಟನೆಯಿಂದ ಓ ನನ್ನ ಚೇತನ ಹಾಡು ಹೇಳುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ಬೌದ್ಧ ಬಿಕ್ಕುಗಳಿಂದ ಅಂತಿಮ ವಿಧಿವಿದಾನ ನೆರವೇರಿತು.
ಈ ಮೊದಲು ಕಂದಾಯ ಸಚಿವ ಆರ್ ಅಶೋಕ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಸದಾನಂದಗೌಡ, ಆರ್.ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ, ನಟ ದುನಿಯಾ ವಿಜಯ್, ಡಾಲಿ ಧನುಂಜಯ್ ಸೇರಿದಂತೆ ಹಲವಾರು ಮಂದಿ ಸಿದ್ದಲಿಂಗಯ್ಯ ಅವರ ಅಂತಿಮ ದರ್ಶನ ಪಡೆದರು.