ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ

Share

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ

ಮುಂದುವರಿದ ಭಾಗ. . . . .
ಅದೇ ರೀತಿ ಸರಕುಗಳನ್ನು ಕುರಿತು ಹೇಳುವ ಡೊಮಿಂಗೋ ಪಾಯೇಸ್, ದವಸ-ಧಾನ್ಯಗಳನ್ನು ಹೇರಿಕೊಂಡು ಬಂದ ಲೆಕ್ಕವಿಲ್ಲದಷ್ಟು ಎತ್ತಿನಗಾಡಿಗಳು ಬೀದಿಯಲ್ಲಿ ಕಿಕ್ಕಿರಿದು ಹೋಗಿರುತ್ತವೆ ಎಂದರೆ; ನ್ಯೂನಿಜ್, ಪ್ರತಿದಿನ ಎರಡು ಸಾವಿರ ಹೇರೆತ್ತುಗಳು ವಿಜಯನಗರಕ್ಕೆ ಪ್ರವೇಶಿಸುತ್ತವೆ. ಪ್ರತಿಯೊಂದು ಎತ್ತಿಗೂ ಮೂರು ವಿಂತೆಂ ಸುಂಕ ಎಂದಿದ್ದಾನೆ. ಬಾರ್ಬೊಸಾ, ಮೆಣಸನ್ನು ಎತ್ತು ಮತ್ತು ಕತ್ತೆಗಳ ಮೇಲೆ ಹೇರಿಕೊಂಡು ವಿಜಯನಗರಕ್ಕೆ ಬರುತ್ತಾರೆ ಎಂದಿದ್ದರೆ; ನ್ಯೂನಿಜ್, ಹೇರುಗಳ ಸಾಗಾಟಕ್ಕೆ ಎತ್ತು-ಕತ್ತೆಗಳಲ್ಲದೆ, ಕುದುರೆ, ಕೋಣ, ಆನೆಗಳನ್ನೂ ಬಳಸುತ್ತಿದ್ದರು. ಎತ್ತಿನ ಗಾಡಿಗಳಿಗೆ ಮೂರು ವಿಂತೆಂ ಸುಂಕವನ್ನು ಹಾಕುತ್ತಿದ್ದರು ಎಂದಿರುವುದು ವಿಜಯನಗರಕ್ಕೆ ಬರುತ್ತಿದ್ದ ಯಥೇಚ್ಚ ಸರಕು-ಸಾಮಗ್ರಿ, ಸರಕನ್ನು ಹೊತ್ತು ತರುತ್ತಿದ್ದ ಬಂಡಿಗಳಿಂದ ಅಂದಿನ ಸಂತೆ ಮತ್ತು ಮಾರಾಟ ವ್ಯವಸ್ಥೆಯನ್ನು ಕಣ್ಮುಂದೆ ಬರುತ್ತದೆ. ಹಾಗೆಯೇ ಇಲ್ಲಿನ ಜನರ ಅಭಿರುಚಿಗಳನ್ನು ಹೇಳುತ್ತಾ ರಜಾಕ್, ಬೀದಿಗಳಲ್ಲೆಲ್ಲಾ ಗುಲಾಬಿ ಹೂವಿನ ವಾಸನೆಯೋ ವಾಸನೆ, ಈ ಜನಗಳು ಗುಲಾಬಿ ಹೂಗಳು ಇಲ್ಲದಿದ್ದರೆ ಬದುಕುವಂತೆಯೇ ಕಾಣುವುದಿಲ್ಲ, ಹೊಟ್ಟೆಗೆ ಹಿಟ್ಟು ಎಷ್ಟು ಅವಶ್ಯಕವೋ, ಜುಟ್ಟಿಗೆ ಗುಲಾಬಿಯೂ ಅಷ್ಟೇ ಅವಶ್ಯಕವೆಂದು ಭಾವಿಸುತ್ತಾರೆ.


ಅಚ್ಯುತ ಬಜಾರು: ವಿರೂಪಾಕ್ಷ ಬಜಾರದ ಪೂರ್ವಕ್ಕೆ ಮೆಟ್ಟಿಲುಗಳಿಂದ ಕೂಡಿದ ದಾರಿಯನ್ನು ಅನುಸರಿಸಿ ಮುಂದೆ ನಡೆದರೆ ತಿರುವೇಂಗಳನಾಥ ದೇವಾಲಯ ಕಾಣಸಿಗುವುದು. ಈ ದೇವಾಲಯದ ಮುಂಭಾಗದಲ್ಲಿ ತುಂಗಭದ್ರಾ ನದಿಯ ದಂಡೆಯವರೆಗೆ ಹರಡಿರುವ ವಿಶಾಲವಾದ ಬೀದಿಯೇ ಅಚ್ಯುತ ಬಜಾರು. ಇದನ್ನು ಅಚ್ಯುತರಾಯನ ಆಳ್ವಿಕೆಯಲ್ಲಿ ನಿರ್ಮಾಣವಾದ ಕಾರಣ ಶಾಸನದಲ್ಲಿ ಅಚ್ಯುತಾಪೇಟೆ ಎಂದೇ ಕರೆಯಲಾಗಿದೆ. ಇದನ್ನು ತಿರುವೇಂಗಳನಾಥ ತೇರುಬೀದಿ, ಸೂಳೆ ಬಜಾರು ಎಂದು ಕರೆಯಲಾಗಿದೆ.
ಅಚ್ಯುತ ಬಜಾರನ್ನು ಅನೇಕರು ಸೂಳೆ ಬಜಾರು ಎಂದು ಕರೆದಿದ್ದಾರೆ ಮತ್ತು ಇಂದಿಗೂ ಅದೇ ಹೆಸರನ್ನು ನಮೂದಿಸುತ್ತಿದ್ದಾರೆ. ಇದಕ್ಕೆ ಅಬ್ದುಲ್ ರಜಾಕ್ ಹೇಳಿಕೆ ಕಾರಣವಿರಬಹುದು.

ಅವನು, ಅರಬ್‌ಖಾನೆಯ ಹಿಂಭಾಗದಲ್ಲಿ ಮುನ್ನೂರು ಗಜಕ್ಕಿಂತಲೂ ಹೆಚ್ಚು ಉದ್ಧವಾದ, ಇಪ್ಪತ್ತು ಗಜಕ್ಕಿಂತಲೂ ಅಗಲವಾದ ಒಂದು ತರಹ ಅಂಗಡಿ ಬೀದಿಯಿದೆ. . . .ಯಾರು ಬೇಕಾದರೂ ಈ ಬೀದಿಗೆ ಬಂದು ತನಗೆ ಮೆಚ್ಚಿಗೆಯಾದ ವೇಶ್ಯೆಯನ್ನು ಆರಿಸಿಕೊಂಡು ಅವಳೊಡನೆ ಕಾಲ ಕಳೆಯಬಹುದು. ಆದರೆ ಇಲ್ಲಿ ಹೇಳಿರುವ ಬೀದಿ ಅಚ್ಯುತ ಬಜಾರಂತೂ ಅಲ್ಲ. ಅಚ್ಯುತ ಬಜಾರ್ ನಿರ್ಮಾಣವಾದದ್ದು ಅಚ್ಯುತರಾಯನ ಕಾಲದಲ್ಲಿ, ಆದರೆ ರಜಾಕ್ ಭೇಟಿ ನೀಡಿದ್ದುದು ಪ್ರೌಢದೇವರಾಯನ ಕಾಲದಲ್ಲಿ. ಅಂದರೆ ಒಂದು ನೂರು ವರ್ಷಗಳ ಅಂತರವಿದೆ. ಅವನು ಹೇಳಿರುವ ದರಬ್‌ಖಾನೆಯ ಹತ್ತಿರ ಎಂದಿರುವುದು ಅರಮನೆ ಮತ್ತಿತರರ ವಸತಿ ನೆಲೆಯಾದ ಪಾನ್‌ಸುಪಾರಿ ಬಜಾರದ ಪರಿಸರದಲ್ಲಿ. ಆದ್ದರಿಂದ ಅಚ್ಯುತಾಪೇಟೆಯು ಸೂಳೆ ಬಜಾರು ಆಗಿರಲಿಲ್ಲ ಎಂಬುದನ್ನು ಅರಿಯಬೇಕು.

ಕೃಷ್ಣ ಬಜಾರು: ಕೃಷ್ಣದೇವರಾಯನು ಕ್ರಿ.ಶ.೧೫೧೩ರಲ್ಲಿ ಒರಿಸ್ಸಾದ ಮೇಲೆ ದಂಡೆತ್ತಿ ಹೋಗಿ ಗಜಪತಿಯನ್ನು ಸೋಲಿಸಿ, ಉದಯಗಿರಿಯಿಂದ ವಿಜಯದ ನೆನಪಿಗೆ ಬಾಲಕೃಷ್ಣನನ್ನು ತಂದನಲ್ಲದೆ, ಅದನ್ನು ರಾಜಧಾನಿಯಲ್ಲಿ ಪ್ರತಿಷ್ಠಾಪಿಸಲು ಕಟ್ಟಿಸಿದ ಬೃಹತ್ ದೇವಾಲಯವೇ ಬಾಲಕೃಷ್ಣ ದೇವಾಲಯ. ಇದರ ಮುಂಭಾಗದಲ್ಲಿರುವುದೇ ಕೃಷ್ಣಾಪುರ. ಇದನ್ನು ಶಾಸನಗಳಲ್ಲಿ ಕೃಷ್ಣಾಪುರ ಪೇಟೆ, ಕೃಷ್ಣಾಪುರದ ದವಸದಂಗಡಿ ಪೇಟೆ, ಬಾಲಕೃಷ್ಣದೇವರ ತೇರುಬೀದಿಯೆಂದು ಕರೆಯಲಾಗಿದೆ.


ಪಾನ್‌ಸುಪಾರಿ ಬಜಾರು: ವಿಜಯನಗರ ಅರಸರ ಅರಮನೆ, ರಾಜಮಾನ್ಯರು ಮತ್ತಿತರರ ವಸತಿ ಸಮುಚ್ಚಯವುಳ್ಳ ಪ್ರದೇಶದಲ್ಲ್ಲಿ ಹಜಾರರಾಮ ದೇವಾಲಯದಿಂದ ಶೃಂಗಾರದ ಹೆಬ್ಬಾಗಿಲವರೆಗೂ ಹರಡಿದ್ದ ಬೀದಿಯಾಗಿದೆ. ಇದು ಹಂಪೆಯ ಪ್ರಮುಖ ಮಾರುಕಟ್ಟೆಯಾಗಿತ್ತು. ಕಾರಣ ಎಲ್ಲ ಬಗೆಯ ಜನರ ಪ್ರಮುಖ ತಾಣವಿದು. ಪಾನ್‌ಸುಪಾರಿ ಎಂಬುದು ಕ್ರಿ.ಶ.೧೪೨೬ರ ಶಾಸನದಲ್ಲಿ ಹೇಳಿರುವ ಕ್ರಮುಕ ಪರ್ಣಾಪಣ (ಕ್ರಮುಕ=ಅಡಕೆ, ಪರ್ಣ=ಎಲೆ, ಆಪಣ=ಅಂಗಡಿ) ಅಥವಾ ಪರ್ಣಪೂಗಿ ಫಲಾಪಣ (ಪರ್ಣ=ಎಲೆ, ಪೂಗಿ=ಅಡಕೆ)ದ ಹಿಂದಿ ರೂಪಾಂತರ. ಶಾಸನ ಅನುವಾದದ ಪಾನ್‌ಸುಪಾರಿ ಬಜಾರ್ ಇಂದು ಹೆಚ್ಚು ಪ್ರಚುರಗೊಂಡಿರುವುದು ಗಮನಾರ್ಹ. ಇದನ್ನು ನಂತರದ ಶಾಸನಗಳಲ್ಲಿ ಪೆದ್ದಂಗಡಿ ಅಥವಾ ದೊಡ್ಡ ಅಂಗಡಿಬೀದಿ ಹಾಗೂ ರಾಜಬೀದಿ ಎಂತಲೂ ಕರೆಯಲಾಗಿದೆ.

ಇದು ಪ್ರೌಢದೇವರಾಯನ ಕಾಲದಲ್ಲಿ ಕ್ರಮುಕಪರ್ಣಾಪಣ ಬೀದಿಯಾಗಿ, ಕ್ರಿ.ಶ.೧೫೫೭ರ ಸದಾಶಿವರಾಯನ ಕಾಲದ ಹೊತ್ತಿಗೆ ಪೆದ್ದಂಗಡಿ ಬೀದಿ, ರಾಜಬೀದಿಯಾಗಿ ಬೆಳೆದ ಪರಿಯನ್ನು ಗಮನಿಸಬೇಕು. ಡೊಮಿಂಗೋ ಪಾಯೇಸನು, ಕೋಟೆಯನ್ನು ಪ್ರವೇಶಿಸಿದರೆ ಹೆಬ್ಬಾಗಿಲು ಸಿಕ್ಕುತ್ತದೆ. ಇಲ್ಲಿಂದ ಒಳಗೆ ಹೋದರೆ ರಾಜನ ಅರಮನೆಯವರೆಗೂ ದಳವಾಯಿಗಳ, ಶ್ರೀಮಂತರ ಮತ್ತು ವರ್ತಕರ ಸುಂದರವಾದ ಬೀದಿಗಳೋ ಬೀದಿಗಳು, ಮನೆಗಳೋ ಮನೆಗಳು ಎಂದಿದ್ದಾನೆ; ಅಬ್ದುಲ್ ರಜಾಕ್, ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ ಎದುರು ಬದಿರಾಗಿ ನಾಲ್ಕು ಅಂಗಡಿ ಬೀದಿಗಳಿವೆ. …ಪ್ರತಿಯೊಂದು ಅಂಗಡಿಯ ಸಾಲಿನ ಮೇಲುಗಡೆ ಭವ್ಯವಾದ ಉಪ್ಪರಿಗೆಯುಳ್ಳ ಕಮಾನು ಹಾದಿ ಇದೆ. …ಅಂಗಡಿ ಬೀದಿಗಳು ಬಹು ಉದ್ಧವಾಗಿಯೂ, ಅಗಲವಾಗಿಯೂ ಇವೆ ಎಂದಿದ್ದಾನೆ. ಇಲ್ಲಿಯ ಬೀದಿಗಳಲ್ಲಿ ಒಂದು ಸೋಮವಾರದ ಬಾಗಿಲ ಕಡೆಗೂ, ಎರಡನೆಯದು ರಾಣಿಯ ಜನಾನಾದ ಕಡೆಗೂ ಇದ್ದುವೆಂಬುದು ತಿಳಿದುಬರುತ್ತದೆ. ಮೂರನೆಯದು ಬಿsಮಾ ಬಾಗಿಲವರೆಗಿದ್ದ ಮಣಿಕುಟ್ಟಿಮ ಬೀದಿ. ಇದರಿಂದ ಈ ಬಜಾರು ಇತರೆ ಎಲ್ಲ ಪೇಟೆಗಳಿಗಿಂತ ಪ್ರಮುಖವಾದದ್ದಾಗಿದೆ. ಕಾರಣವೆಂದರೆ ಪಾಯೇಸ್ ಹೇಳಿಕೆಯಂತೆ: ಪ್ರತಿ ಶುಕ್ರವಾರ ಇಲ್ಲಿ ಸಂತೆಯಾಗುತ್ತದೆ. ಸಂತೆಯಲ್ಲಿ ಅನೇಕಾನೇಕ ಹಂದಿ, ಕೋಳಿ, ಸಮುದ್ರದಿಂದ ತಂದ ಒಣ ಮೀನು, ಇನ್ನೂ ಇತರ ಈ ದೇಶದ ನನಗೆ ಗೊತ್ತಿಲ್ಲದ ಸಾಮಾನುಗಳನ್ನು ಮಾರುತ್ತಾರೆ.

ಇದೇ ರೀತಿ ನಗರದ ನಾನಾ ಭಾಗಗಳಲ್ಲಿ ದಿನಕ್ಕೊಂದು ಕಡೆ ವಾರವೆಲ್ಲಾ ಸಂತೆ ನಡೆಯುತ್ತದೆ. ಇದು ವಿಜಯನಗರದ ಮಧ್ಯರಂಗದಲ್ಲಿ ಹಾಗೂ ವಸತಿ ಪ್ರದೇಶದಲ್ಲಿ ಇದ್ದುದರಿಂದ ಪ್ರತಿದಿನದ ಸಂಜೆಯೂ ಇಲ್ಲಿ ಸಂತೆ ಸೇರುತ್ತಿದ್ದುದನ್ನು ಪಾಯೇಸ್ ಸ್ಪಷ್ಟಪಡಿಸುತ್ತಾನೆ. ವರದರಾಜಮ್ಮನ ಪಟ್ಟಣವು ಕಮಲಾಪುರದ ಉತ್ತರಕ್ಕೆ ಇರುವ ಪಟ್ಟಾಭಿರಾಮ ದೇವಾಲಯದಿಂದ ಆರಂಭವಾಗಿ ಪೆನುಗೊಂಡ ಬಾಗಿಲವರೆಗೂ ಹಬ್ಬಿದೆ. ಇದು ಅಚ್ಯುತರಾಯನ ರಾಣಿಯಾದ ವರದಾದೇವಿಯ ನೆನಪಿಗಾಗಿ ಕಟ್ಟಲಾದ ಉಪಪಟ್ಟಣವಾಗಿದೆ. ಇದೇ ರೀತಿ ಇಂದಿನ ಹೊಸಪೇಟೆಯಲ್ಲಿ ಕೃಷ್ಣದೇವರಾಯ ತನ್ನ ಪ್ರೀತಿಯ ಪತ್ನಿ ತಿರುಮಲಾದೇವಿಯ ಹೆಸರಿನಲ್ಲಿ ತಿರುಮಲಾದೇವಿ ಅಮ್ಮನವರ ಪಟ್ಟಣವನ್ನೂ ನಿರ್ಮಿಸಿದ್ದನು.
ಒಟ್ಟಿನಲ್ಲಿ ಹಂಪೆಯ ಬಜಾರುಗಳು ವಿಜಯನಗರ ಸಾಮ್ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಮುಖ ಕೇಂದ್ರಗಳೆಂಬುದನ್ನು ಮರೆಯುವಂತಿಲ್ಲ.

Girl in a jacket
error: Content is protected !!