ಬೆಂಗಳೂರು,ಜೂ,೧೧:ದಿನೇ ದಿನೇ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ದೇಶಾದದ್ಯಂತ ಪ್ರತಿಭಟನೆ ನಡೆಸಿತು.
ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೋನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ದರ ಈ ರೀತಿ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಲಿ, ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ, ಪೆಟ್ರೋಲ್,ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗುತ್ತದೆ, ದೇಶ ಹಾಳು ಮಾಡಬೇಡಿ ಎಂದು ಪ್ರಧಾನಿ ಮೋದಿಯವರನ್ನು ನೇರವಾಗಿ ಉದ್ದೇಶಿಸಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ೨೦೨೧ರಲ್ಲಿ ಈವರೆಗೆ ಕೇಂದ್ರ ಸರ್ಕಾರ ೪೮ ಬಾರಿ ಪೆಟ್ರೋಲ್ ಬೆಲೆ ಏರಿಸಿದೆ. ಅಗತ್ಯ ವಸ್ತುಗಳ, ಇಂಧನ ಬೆಲೆ ಏರಿಕೆಯಾಗಿದೆ ಹೊರತು ಜನಸಾಮಾನ್ಯರ ಆದಾಯ ಏರಿಕೆಯಾಗಿಲ್ಲ, ಕೊರೋನಾದಿಂದಾಗಿ ಮತ್ತಷ್ಟು ಕಡಿಮೆಯಾಗಿದೆ. ಬಡವರ ಕನಿಷ್ಠ ವೇತನವನ್ನು ಸಹ ಏರಿಕೆ ಮಾಡಿಲ್ಲ, ಹೀಗಿರುವಾಗ ಸರ್ಕಾರದ ಕ್ರಮ ಎಷ್ಟು ಸರಿ, ಇದು ಬಿಜೆಪಿ ಸರ್ಕಾರದ ಹಗಲು ದರೋಡೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಇಂಧನ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷ ಇಂದು ಹೋರಾಟವನ್ನು ಹಮ್ಮಿಕೊಂಡಿದೆ.
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Share