ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಅತ್ತೆಯಾದವಳು ನಾಳೆ ಹತ್ತೆಯಾಗುವಳು, ಮನೆಯ ಮೂಲೆ ಸೇರುವಳು. ಸೊಸೆ ನಾಳೆ ಅತ್ತೆಯಾಗುವಳು, ಮನೆಯ ಅಧಿಕಾರ ಹಿಡಿಯುವಳು. ಯಾವುದೂ ಯಾರಿಗೂ ಸ್ಥಿರವಲ್ಲ. ಇಂದು ನಮ್ಮದಾಗಿರಬಹುದು. ನಾಳೆ ಯಾರದೆಂದು ತಿಳಿದಿಲ್ಲ. ಪರಿವರ್ತನೆ ನಿರಂತರ ಪ್ರಕ್ರಿಯೆ. ಸ್ಥಾನದಲ್ಲಿದ್ದವರು ನಶ್ವರತೆ ಮರೆಯದೇ ಮಾಡುವ ಕರ್ತವ್ಯ ಮಾಡಲೇಬೇಕು. ವೈಯಕ್ತಿಕ ದ್ವೇಷ ಸೇಡು ಪ್ರತೀಕಾರ ನಿರ್ಲಕ್ಷ್ಯ ಅಸ್ತ್ರ ಬಳಸಿದರೆ ನಾಳೆ ಅವೇ ತದ್ವಿರುದ್ಧ ಕೈಸೇರಿ ಎರಗುವವು ನಮಗೇ. ಅತ್ತೆ ಸೊಸೆಯನು ಮಗಳೆಂದು ತಿಳಿದು ತಿದ್ದಿ ತೀಡಿ ಮುದ್ದು ತೋರದಿರೆ, ಹಾಸಿಗೆ ಹಿಡಿದ ಅತ್ತೆಯನು ಸೊಸೆ ತಾಯಿ ಎಂದು ತಿಳಿದು ಆರೈಕೆ ಮಾಡಲಾರಳು!ಹಿರಿಯರು ಕಿರಿಯರಿಗೆ ಮುದ್ದು ತೋರಿ ಉತ್ತಮ ಸಂಸ್ಕಾರ ನೀಡದಿರೆ, ನಾಳೆ ಅವರೇ ಮುಳ್ಳು! ನಾವು ನಮ್ಮ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸದಿರೆ ನಮ್ಮಯ ಮಕ್ಕಳು ಮೊಮ್ಮಕ್ಕಳು ಮುಂದಿನವರು ನಮ್ಮನ್ನು ಗೌರವಿಸಲಾರರು! ಎಲ್ಲರನು ನಾವು ಚೆನ್ನ ನೋಡೋಣ, ಎಲ್ಲರು ನಮ್ಮನು ಚೆನ್ನದಿ ಕಾಣಲಿ!!