ಗ್ರಾಮೀಣ ಬದುಕು ಮತ್ತು ನಂಬಿಕೆ

Share

 

ಗ್ರಾಮೀಣ ಬದುಕು ಮತ್ತು ನಂಬಿಕೆ

ನನಗೆ ಚಿಕ್ಕಂದಿನಿಂದಲೂ ಪವಾಡಗಳೆಂದರೆ ಏನೋ ಒಂದು ವಿಧವಾದ ಆಸಕ್ತಿ. ಊರಲ್ಲಿ ಯಾರ ಮೈಮೇಲಾದರೂ ದೇವರು ಬಂದಿದೆ ಎಂದು ಕೇಳಿದ ಮರುಕ್ಷಣ ಅಲ್ಲಿಗೆ ಹಾಜರಾಗುತ್ತಿದ್ದೆ. ಹಾಗೆಯೇ ಭವಿಷ್ಯ ನುಡಿಯುವವರನ್ನು, ಕೋಲೆಬಸವದವರನ್ನು, ಗೊರಯ್ಯದವರನ್ನು, ಕಾರಣಿಕದವರನ್ನು, ಜೋಗತಿಯರನ್ನು ಅತಿಯಾಗಿ ನಂಬುತ್ತಿದ್ದೆ, ಅವರು ಹೇಳುವುದು ಖಂಡಿತವಾಗಿ ಜರುಗಿಯೆ ತೀರುತ್ತದೆ ಎಂದು ಬಲವಾಗಿ ನಂಬಿದ್ದೆ.

ಇಂತಹ ಒಂದು ನಂಬಿಕೆಯನ್ನು ಗಟ್ಟಿಮಾಡಿದ ಪ್ರಸಂಗವೊಂದು ನಾನು ನಾಲ್ಕನೇ ಕ್ಲಾಸಿನಲ್ಲಿ ಇರುವಾಗ ಸಂಭವಿಸಿದ್ದು ನನ್ನ ಮನಃಪಟಲದಲ್ಲಿ ಇನ್ನೂ ಹಸಿರಾಗಿದೆ. ಅದು ೧೯೭೬-೭೭ ಇಸವಿ ಇದ್ದಿರಬಹುದು. ನಮ್ಮ ಕಡೆ ಬಹಳ ದೊಡ್ಡ ಪ್ರಮಾಣದ ಬರಗಾಲ ವ್ಯಾಪಿಸಿದ ವರ್ಷವದು. ಇಂತಹ ಬರಗಾಲದಲ್ಲಿ ದನಗಳು ನೀರು ಮೇವಿಲ್ಲದೆ ಸಾಯುತ್ತವೆ ಎಂದು ಹೆದರಿದ ರೈತರು ತಮ್ಮ ರಾಸುಗಳಿಗೆ ಹುಲ್ಲು, ನೀರನ್ನು ಹುಡುಕುತ್ತಾ ಊರನ್ನು ತೊರೆದು ನೀರಾವರಿ ಸೌಲಭ್ಯ ಉಳ್ಳ ದಾವಣಗೆರೆಯ ಕಡೆಯೋ, ಬಳ್ಳಾರಿಯ ಕಡೆಯೋ ಅಥವಾ ಶಿವಮೊಗ್ಗೆಯ ಕಡೆಯೋ ಮುಖಮಾಡಿದ ದಿನಗಳು ಅವು. ಇದರ ಹಿಂದಿನ ವರ್ಷವಷ್ಟೇ ಬಂಪರ್ ಈರುಳ್ಳಿ ಬೆಳೆಯಾಗಿದ್ದು ತಮ್ಮ ಕನಸಿನಲ್ಲಿಯೂ ಊಹಿಸಿದಷ್ಟು ಹಣವನ್ನು ಕಂಡಿದ್ದ ಊರ ರೈತರಿಗೆ ಅದರ ಬೆನ್ನ ಹಿಂದೆಯೇ ಬಂದ ಈ ಭೀಕರ ಬರಗಾಲ ದಿಕ್ಕು ತೋಚದಂತೆ ಮಾಡಿತ್ತು. ದನಗಳ ಮೇವಿಗಾಗಿ ಭತ್ತ ಬೆಳೆಯುವ ಪ್ರದೇಶಗಳಿಂದ ಒಣಗಿದ ಭತ್ತದ ಹುಲ್ಲನ್ನು ತರುವ ಪರಿಪಾಠ ಮತ್ತು ನಮ್ಮ ಕಡೆಯ ಪ್ರಮುಖ ಆಹಾರವಾದ ಜೋಳದ ಬದಲಿಗೆ ಮೆಕ್ಕೆಜೋಳದ ಬಳಕೆ ಚಾಲ್ತಿಗೆ ಬಂದಿದ್ದು ಈ ಬರಗಾಲದ ದೆಸೆಯಿಂದಾಗಿಯೇ ಎಂದು ನೆನಪು.

ಈ ಭೀಕರ ಬರಗಾಲ ಕೇವಲ ಆರ್ಥಿಕ ಸಂಕಷ್ಟಗಳನ್ನಷ್ಟೇ ಹೊತ್ತುತರಲಿಲ್ಲ, ಅನೇಕ ಬಗೆಯ ಮಾನಸಿಕ ವ್ಯಥೆಯನ್ನೂ ತನ್ನೊಡಲಲ್ಲಿ ತುಂಬಿ ತಂದಿತ್ತು. ಅನೇಕ ಸಂಸಾರಗಳು ಶಾಶ್ವತವಾಗಿ ಊರನ್ನು ಬಿಟ್ಟು ಬೇರೆಡೆ ಒಲಸೆ ಹೋಗಿದ್ದರೆ, ಬರಗಾಲ ಮುಗಿದ ನಂತರ ಊರಿಗೆ ಮರಳಿದ ಈ ಪೈಕಿಯ ಹಲವಾರು ಸಂಸಾರಗಳಲ್ಲಿ ಬದುಕು ಮೊದಲ ರೀತಿ ಇರಲಿಲ್ಲ. ಗಂಡಸರು ದುರ್ವ್ಯಸನಗಳ ದಾಸರಾಗಿ ಸಂಸಾರಗಳು ಮೂರಾಬಟ್ಟೆಯಾದದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಒಟ್ಟಿನಲ್ಲಿ, ನನ್ನ ನೆನಪಿನಲ್ಲಿ ಇರುವ ಹಾಗೆ, ನನ್ನ ಬಾಲ್ಯದಲ್ಲಿಯೇ ಇದು ನಾನು ಕಂಡ ಅತ್ಯಂತ ಭೀಕರ ಕ್ಷಾಮ.

ಇನ್ನು ತುರುವನೂರಂತೂ ನೀರಿನ ಅಲಭ್ಯತೆಯ ವಿಷಯದಲ್ಲಿ ಒಂದು ದಂತಕತೆಯೇ ಸರಿ. ಕುಡಿಯುವ ಒಂದು ಕೊಡ ನೀರಿಗಾಗಿ ಊರ ಜನ ಪರಿತಪಿಸುತ್ತಿದ್ದ ಪರಿ ನನ್ನ ಕಣ್ಮುಂದೆ ಕಟ್ಟಿದೆ. ತುರುವನೂರಿಗೆ ಬೇರೆ ಊರವರು ಹೆಣ್ಣನ್ನು ಕೊಡುವುದಕ್ಕೂ ಹಿಂದೆ-ಮುಂದೆ ನೋಡುವಂತಹ ಪರಿಸ್ಥಿತಿ ನನ್ನೂರಿನಲ್ಲಿ ಸುಮಾರು ವರ್ಷಗಳ ಕಾಲ ಇತ್ತು ಎಂದರೆ ಈಗಿನವರು ನಂಬಲಿಕ್ಕಿಲ್ಲ. ಹೀಗಾಗಿ ಹೊಟ್ಟೆಯ ಹಿಟ್ಟಿನ ಸಮಸ್ಯೆಯೊಟ್ಟಿಗೆ ಜನ-ದನ ಕುಡಿಯುವ, ಬಳಸುವ ನೀರಿನ ಭೀಕರ ಕೊರತೆಯೂ ಸೇರಿ ನರಕಸದೃಶ್ಯ ಸ್ಥಿತಿಯನ್ನು ಉಂಟುಮಾಡಿತ್ತು ಎಂದು ಹೇಳಬಹುದು. ಊರಿನಲ್ಲಿ ಈ ಹೊತ್ತು ಹಿರಿಯರಾದ ಆ ತಲೆಮಾರಿನ ಮಂದಿ ಅಂದಿನ ಬರಗಾಲದ ಭೀಕರತೆಯನ್ನು ನನ್ನಷ್ಟೇ ಗಾಢಾಗಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದುಕೊಂಡಿದ್ದೇನೆ.

ಹಿಂದೆಂದೂ ಕಾಣದ ಈ ಬರಗಾಲದ ಹೊತ್ತು ಊರ ಹಿರಿಯರು, ಪ್ರಮುಖರು ತಮಗೆ ಹೊಳೆದಂತಹ ಎಲ್ಲಾ ಉಪಾಯಗಳನ್ನೂ, ಪ್ರಯತ್ನಗಳನ್ನೂ ಮಾಡುವ ಮೂಲಕ ಮಳೆ ತರಿಸುವ ಸಾಹಸಕ್ಕೆ ಕೈಹಾಕಿದರು. ಊರದೇವತೆ ಮಾರಿಯಮ್ಮನ ಪೂಜೆ ಒಟ್ಟಿಗೆ ಕಪ್ಪೆಗಳ ಮದುವೆಯಂತಹ ಗ್ರಾಮೀಣ ಭಾಗದಲ್ಲಿ ಪ್ರಚಲಿತವಿದ್ದ ಆಚರಣೆಯ ಅನುಕರಣೆಯೂ ಈ ಪ್ರಯತ್ನಗಳ ಭಾಗವಾಗಿ ನೆರವೇರಿಸಲ್ಪಟ್ಟವು. ಊಹೂಂ, ಯಾವ ಮಂತ್ರಕ್ಕೂ ಮರದಿಂದ ಮಾವಿನಕಾಯಿ ಉದುರಲೇ ಇಲ್ಲ. ಮಳೆಹನಿಗಳ ಮಾತು ಒತ್ತೊಟ್ಟಿಗಿರಲಿ, ತುಂಡು ಮೋಡವೂ ಆಗಸದಲ್ಲಿ ಮೂಡದೇ ಇರುವಂತಹ ಬೇಸಗೆಯ ಎಂದೂ ಮುಗಿಯದ ದಿನಗಳಿಗೆ ನನ್ನೂರಿನ ರೈತರ ಕಣ್ಣುಗಳು ಸಾಕ್ಷಿಯಾದವು.

ಹೀಗೆಯೇ ಅನಿಶ್ಚತೆಯ ಮಧ್ಯೆ ದಿನಗಳನ್ನು ದೂಡುವಾಗ ಒಂದು ದಿನ ನಾನು ಮಧ್ಯಾಹ್ನದ ಊಟಕ್ಕಾಗಿ ಶಾಲೆಯಿಂದ ನಡೆದು ಬರುತ್ತಿದ್ದಾಗ ದಾರಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಎಂದೂ ಇಲ್ಲದ ಜನಜಂಗುಳಿಯನ್ನು ನೋಡಿದೆ. ದೇವಸ್ಥಾನವು ಊರಿನ ಮುಖ್ಯ ರಸ್ತೆಯಲ್ಲಿದ್ದು ಅಂದಿನ ಊರ ಅಂಚೆಕಚೇರಿಯ ಪಕ್ಕವೇ ಇತ್ತು. ದೇವಸ್ಥಾನದಲ್ಲಿ ಸೇರಿದ ಜನರ ಜನಸಂದಣಿ ಸಹಜವಾಗಿಯೇ ನನ್ನ ಆಕರ್ಷಣೆಯನ್ನು ಸೆಳೆದಿತ್ತು. ಬಹಳ ಕಷ್ಟಪಟ್ಟು ಬೆನ್ನಿಗೆ ನೇತಾಡುತ್ತಿದ್ದ ಬ್ಯಾಗಿನೊಟ್ಟಿಗೆ ಹೇಗೋ ಗುಂಪಿನಲ್ಲಿ ತೂರಿ ಒಳಹೋಗಿ ನೋಡಿದವನಿಗೆ ದೇವಸ್ಥಾನದ ಹೊರಪ್ರಾಂಗಣದಲ್ಲಿ ಹಾಕಿದ ಟೆಂಟ್ ಒಂದರಲ್ಲಿ ಕಣ್ಮುಚ್ಚಿ ತಪಸ್ಸಿನ ಭಂಗಿಯಲ್ಲಿ ಕುಳಿತ ಒಬ್ಬ ವ್ಯಕ್ತಿ ಕಾಣಿಸಿದರು. ಮೈತುಂಬಾ ವಿಭೂತಿ ಬಳಿದುಕೊಂಡು ಧ್ಯಾನಾಸಕ್ತರಾಗಿದ್ದ ಈ ವ್ಯಕ್ತಿ ಯಾರೆಂದು ಊಹಿಸಲು ಕೆಲ ನಿಮಿಷಗಳೇ ಬೇಕಾದವು. ಹೌದು, ಅಂದು ದೇವಸ್ಥಾನದಲ್ಲಿ ತಪೋಭಂಗಿಯಲ್ಲಿ ಕುಳಿತಿದ್ದ ಆ ಹಿರಿಯ ವ್ಯಕ್ತಿ ಬೇರಾರೂ ಆಗಿರದೆ ನಮ್ಮ ಊರಿನವರೇ ಆದ ಮುದ್ದೆಬಸಣ್ಣ ಎನ್ನುವವರಾಗಿದ್ದರು. ಮುದ್ದೆಬಸಣ್ಣ ಎಂದರೆ ಈ ತಲೆಮಾರಿನ ಅನೇಕರಿಗೆ ತಿಳಿಯಲಾರದು. ಆದರೆ ನಾವು ಚಿಕ್ಕವರಿದ್ದ ಆ ದಿನಮಾನಗಳಲ್ಲಿ ಮುದ್ದೆಬಸಣ್ಣ ಎಂದರೆ ನಮ್ಮೂರಿನ ಒಬ್ಬ ವಿಲಕ್ಷಣ ವ್ಯಕ್ತಿ ಎಂದೇ ಪರಿಚಿತವಾಗಿದ್ದವರು. ಅಬಾಲ ವೃದ್ದರಾಗಿಯಾಗಿ ಎಲ್ಲರಿಗೂ ಚಿರಪರಿಚಿತರಾದ ಈ ವ್ಯಕ್ತಿ ತಮ್ಮ ಚಿತ್ರ- ವಿಚಿತ್ರ ನಡೆನುಡಿಗಳಿಂದ ಊರಜನರಿಗೆ ಸದಾ ಮನೋರಂಜನೆಯ ವಸ್ತುವಾಗಿದ್ದವರು. ವಸ್ತ್ರಗಳ ವಿಚಾರದಲ್ಲಿ ಪಕ್ಕಾ ಗಾಂಧಿವಾದಿಯಂತೆ ತೋರುತ್ತಿದ್ದ ಮುದ್ದೇಬಸಣ್ಣನ ಮೈಮೇಲೆ ನಾನು ಎಂದೂ ಅಂಗಿಯ ಸಮೇತ ಒಂದು ತುಂಡು ಬಟ್ಟೆಯನ್ನು ಕಂಡವನಲ್ಲ. ಮೊಣಕಾಲು ಮೇಲೆ ಧರಿಸುತ್ತಿದ್ದ ತುಂಡು ಕಚ್ಚೆಪಂಚೆ ಅವರ ದಿನನಿತ್ಯದ, ಸರ್ವ ಋತುಮಾನದ ದಿರಿಸುಗಳಾಗಿದ್ದವು. ಮುದ್ದೆಬಸಣ್ಣನವರೊಂದಿಗೆ ಸದಾ ವಿನೋದ ಮಾಡುತ್ತಾ ಕಾಲ ಕಳೆಯುತ್ತಿದ್ದ ನನ್ನೂರ ಮಂದಿಗೆ ಏನೂ ಕಡಿಮೆ ಇರಲಿಲ್ಲ. ಮಾತಿನಲ್ಲಿ ಬಸಣ್ಣನವರ ಕಾಲನ್ನು ಹೇಗಾದರೂ ಮಾಡಿ ಎಳೆದು ಅಂದಿನ ಟೀವಿಗಳಿಲ್ಲದ ದಿನಗಳ ಪುಕ್ಕಟೆ ಮನೋರಂಜನೆಯನ್ನ ಪಡೆಯಲಿಕ್ಕೆ ಸದಾ ಹಾತೊರೆಯುತ್ತಿದ್ದರು ನನ್ನೂರ ಹೈಕಳು. ಹೀಗಾಗಿ ಮುದ್ದೇಬಸಣ್ಣ ಇದ್ದಕಡೆ ಹತ್ತಾರು ಜನರ ಗುಂಪೇ ನೆರೆಯುತ್ತಿದ್ದುದು ಸರ್ವೇಸಾಮಾನ್ಯ ಸಂಗತಿ.

ಇಂತಹ ಮುದ್ದೆಬಸಣ್ಣನವರು ಅಂದು ಮಳೆಗಾಗಿ ದೇವರ ಮೊರೆಹೋಗಿ ಒಂದು ದಿನದ ತಪಸ್ಸಿಗೆ ಕುಳಿತಿದ್ದರು. ಬೆಳಿಗ್ಗೆ ಒಂಬತ್ತರ ವೇಳೆಗೆ ಚಂದ್ರಮೌಳೇಶ್ವರಸ್ವಾಮಿಯ ಮಹಾ ಮಂಗಳಾರತಿಯ ನಂತರದಲ್ಲಿ ಪ್ರಾರಂಭವಾದ ತಪಸ್ಸು ನಾನು ಮಧ್ಯಾಹ್ನ ಶಾಲೆಯಿಂದ ಊಟಕ್ಕಾಗಿ ಬರುವವರೆಗೂ ಸಾಂಗವಾಗಿ ಜರುಗಿತ್ತು. ಸುಮಾರು ಹದಿನೈದು ದಿನಗಳಿಂದ ತಾನು ಇಂತಹ ಒಂದು ತಪಸ್ಸನ್ನು ಮಾಡಿದಲ್ಲಿ ಊರಿಗೆ ಮಳೆ ಬರುತ್ತದೆ ಎಂದು ಮುದ್ದೆಬಸಣ್ಣನವರು ಊರಿನ ಜನಗಳ ಬಳಿ ಹೇಳಿಕೊಳ್ಳುತ್ತಾ ತಿರುಗುತ್ತಿದ್ದರಂತೆ. ಶುರುವಿನಲ್ಲಿ ಇವರ ಬಗ್ಗೆ ಗೊತ್ತಿದ್ದ ಊರಿನವರು ಈ ಮಾತನ್ನು ಹಗುರವಾಗಿ ತೆಗೆದುಕೊಂಡು ಬಸಣ್ಣನವರ ಮಾತನ್ನು ಕೇಳಿ ನಕ್ಕಿದ್ದರಂತೆ, ಲೇವಡಿ ಮಾಡಿದ್ದರಂತೆ. ಆದರೆ ತಪಸ್ಸು ಮಾಡುವ ವಿಷಯದಲ್ಲಿ ತಮ್ಮ ಪಟ್ಟನ್ನು ಸಡಲಿಸದ ಮುದ್ದೆಬಸಣ್ಣನವರು ಚಂದ್ರಮೌಳೇಶ್ವರ ದೇವಸ್ಥಾನದ ಭಕ್ತರಾಗಿದ್ದ ಮತ್ತು ಒಂದು ದಿನವೂ ತಪ್ಪದ ಹಾಗೆ ದೇವಸ್ಥಾನದ ಬೆಳಗಿನ ಪೂಜೆಗೆ ಹಾಜರಾಗುತ್ತಿದ್ದ ನನ್ನ ತಾತ ಮತ್ತು ಅಂದಿನ ಊರಗೌಡರಾಗಿದ್ದ ಶ್ರೀ ವಿರೂಪಣ್ಣಗೌಡರನ್ನು ಒಂದು ದಿನ ದೇವಸ್ಥಾನದಲ್ಲಿ ಭೇಟಿಯಾಗಿ ತಪಸ್ಸಿನ ವಿಷಯದಲ್ಲಿ ಬಿನ್ನಹ ಮಾಡಲಾಗಿ, ಮಳೆಗಾಗಿ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗಿದೆ, ಇನ್ನು ಈ ಒಂದು ಪ್ರಯತ್ನವನ್ನೂ ಮಾಡಿ ಬಿಡೋಣ, ಕಳೆದುಕೊಳ್ಳುವುದು ಏನಿದೆ? ಎಂದು ನನ್ನ ತಾತನವರು ಊರಿನ ಉಳಿದ ಪ್ರಮುಖರು ಮತ್ತು ಹಿರಿಯರೊಟ್ಟಿಗೆ ಸಮಾಲೋಚಿಸಿ ಮುದ್ದೆಬಸವಣ್ಣನವರ ಒಂದು ದಿನದ ತಪಸ್ಸಿಗೆ ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಟ್ಟರು ಎಂದು ಆನಂತರದಲ್ಲಿ ನನಗೆ ತಿಳಿಯಿತು.

ಮಧ್ಯಾಹ್ನ ಒಂದೂವರೆ ವೇಳೆಯಾಗಿದ್ದರೂ ಆಕಾಶ ತನ್ನ ಎಂದಿನ ನೀಲಿ ಬಣ್ಣವನ್ನೇ ಮೆತ್ತಿಕೊಂಡಿತ್ತು. ಆಕಾಶದಲ್ಲಿ ಅಂಗೈ ಅಗಲ ಮೋಡದ ಸುಳಿವೂ ಇರಲಿಲ್ಲ. ದೇವಸ್ಥಾನದಲ್ಲಿ ಕುತೂಹಲಕ್ಕಾಗಿ ಸೇರಿದ್ದ ಊರ ಜನ ಆಗೊಮ್ಮೆ ಈಗೊಮ್ಮೆ ಆಕಾಶಕ್ಕೆ ಮುಖಮಾಡಿ ಕಟ್ಟಿಲ್ಲದ ಮೋಡಗಳನ್ನು ಅರಸುತ್ತಾ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದರು. ಅದರಲ್ಲಿ ಕೆಲ ಯುವಕರಂತೂ ಮುದ್ದೆಬಸಣ್ಣ ಅವರ ತಪಸ್ಸಿನಿಂದ ಮಳೆ ಬರಲಿಕ್ಕೆ ಶಕ್ಯವೇ? ಎನ್ನುವ ಸಂಶಯವನ್ನು ಹೊರಹಾಕುತ್ತಿದ್ದರೆ ಮತ್ತೆ ಹಲವರು ಇಂತಹ ಪ್ರಯತ್ನದ ಬಗ್ಗೆಯೇ ಕುಹಕವಾಡುತ್ತಿದ್ದರು. ಅಲ್ಲಿ ಸೇರಿದ್ದ ಕೆಲ ಊರ ಹಿರಿಯ ಪುರುಷರಲ್ಲಿ ಮತ್ತು ನೆರೆದ ಬೆರಳೆಣಿಕೆಯಷ್ಟು ಮಹಿಳೆಯರಲ್ಲಿ ಮಾತ್ರವೇ ನಾನು ಒಂದು ತೆರನಾದ ನಂಬಿಕೆಯ ಪ್ರತಿಫಲನವನ್ನು ಗಮನಿಸಿದೆ. ದೇವರ ಇಚ್ಛೆ ಹೇಗಿದೆಯೋ, ಮುದ್ದೆ ಬಸಣ್ಣನವರ ತಪಸ್ಸು ಊರಿಗೆ ಮಳೆಯನ್ನು ತಂದರೂ ತರಬಹುದು ಎಂದು ಪಿಸುಮಾತಿನಲ್ಲಿ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಲ್ಲಿ ಸೇರಿದ ಪ್ರತಿಯೊಬ್ಬರೂ ತಮಗೆ ತೋಚಿದ ಹಾಗೆ ಅಭಿಪ್ರಾಯಗಳನ್ನು ನಿರ್ಭೀಡೆಯಿಂದ ಹೊರಹಾಕುತ್ತಿದ್ದರು.

ಹೀಗೆಯೇ ದೇವಸ್ಥಾನದಲ್ಲಿ ಒಂದರ್ಧ ಘಂಟೆ ಕಳೆದ ನನಗೆ ತಟ್ಟನೇ ಸ್ಕೂಲಿನ ನೆನಪಾಯಿತು. ಶಾಲೆಗೆ ಲೇಟಾಗಿ ಹೋದರೆ ಸಿಗಬಹುದಾಗಿದ್ದ ರಾಮಪ್ಪ ಮೇಷ್ಟ್ರ ಬೆತ್ತದ ಸವಿ ನನ್ನನ್ನು ಮನೆಯ ಕಡೆಗೆ ದೌಡಾಯಿಸುವಂತೆ ಮಾಡಿತ್ತು.

ಗಬಗಬನೆ ಊಟ ಮುಗಿಸಿ ಮತ್ತದೇ ದಾರಿಯಲ್ಲಿ ಶಾಲೆಗೆ ಹೊರಟವನಿಗೆ ದೇವಸ್ಥಾನದ ಮುಂದಿದ್ದ ಸ್ವಲ್ಪ ಕರಗಿದಂತಿದ್ದ ಜನಗಳ ಗುಂಪು ಕಂಡರೂ ಅಲ್ಲಿ ನಿಲ್ಲುವ ಸಮಯ ಮತ್ತು ವ್ಯವಧಾನ ನನ್ನಲ್ಲಿ ಇಲ್ಲವಾದ ಕಾರಣ ಬಿರಬಿರನೆ ನಡೆದು ಶಾಲೆ ಸೇರಿಕೊಂಡೆ.

ಮಧ್ಯಾಹ್ನ ಮೂರು ಘಂಟೆಗಳಾಗಿರಬೇಕು ಅಂದುಕೊಂಡವನಿಗೆ , ಜವಾನ ತಮ್ಮಣ್ಣ ಹೊಡೆದ ಘಂಟೆಯ ಧ್ವನಿಗಳ ಮುಖೇನ ದೃಢೀಕರಣ ಸಿಕ್ಕಿತ್ತು. ಇನ್ನೂ ಎರಡು ಘಂಟೆಗಳ ಶಾಲಾವಧಿ ಬಾಕಿ ಇತ್ತು. ಶಾಲೆಯ ಮುರುಕು ಹಂಚುಗಳ ಮೂಲಕ ಆಗಸವನ್ನು ನೋಡಿದವನು ಆಶ್ಚರ್ಯಚಕಿತನಾದೆ. ಹಂಚುಗಳ ಮಧ್ಯೆ ಮೂಡಿದ ಆಕಾಶ ಎಂದಿಗಿಂತ ಇಂದು ತುಸು ಕಪ್ಪಾಗಿದ್ದು ಕಾಣಿಸಿತು. ಮಧ್ಯಾಹ್ನ ನೋಡಿದ ದೇವಸ್ಥಾನದಲ್ಲಿ ನಡೆದಿರುವ ಮುದ್ದೆಬಸಣ್ಣನವರ ತಪಸ್ಸಿನ ಫಲಶೃತಿಯೇ ಇದು? ನನ್ನ ಬಳಿ ಉತ್ತರವಿರಲಿಲ್ಲ.

ಮುಂದಿನ ಎರಡು ತಾಸುಗಳನ್ನು ನಾನು ಬಹಳ ನಿರೀಕ್ಷೆಯೊಂದಿಗೆ ಕಳೆದ ನೆನಪು. ತರಗತಿಯ ಬಾಗಿಲಿಂದ ಕಾಣುತ್ತಿದ್ದ ಸ್ಕೂಲ ಮೈದಾನದತ್ತವೇ ನನ್ನ ಚಿತ್ತ ನೆಟ್ಟಿತ್ತು. ಹೆಚ್ಚು ಕಪ್ಪಾಗುತ್ತಲೇ ಸಾಗಿದ್ದ ಮೋಡಗಳು ಮಳೆ ಹನಿ ಸುರಿಸಿಯಾವೇ ಎಂದು ಜಾತಕಪಕ್ಷಿಯಂತೆ ಕಾಯುತ್ತಿದ್ದೆ.

ತಮ್ಮಣ್ಣನ ನಾಲ್ಕನೇ ಘಂಟೆಯ ಸದ್ದು ನನ್ನ ಕಿವಿಯನ್ನಪ್ಪಳಿಸುವುದೂ, ನನ್ನ ಮೈಮೇಲೆ ಹಂಚೊಂದರ ರಂಧ್ರದಿಂದ ತೂರಿ ಬಂದ ಮಳೆಗಾಲದ ಮೊದಲ ಹನಿಯೊಂದು ಬೀಳುವದೂ ಕಾಕತಾಳೀಯ ಎನ್ನುವಂತೆ ಸಂಭವಿಸಿತು. ನಮಗೆ ಗಣಿತಪಾಠ ಮಾಡುತ್ತಿದ್ದ ರಾಮಪ್ಪ ಮೇಷ್ಟ್ರು ಸಹಾ ಅಷ್ಟೂ ಹೊತ್ತಿನಿಂದ ಪದೇಪದೇ ಹೊರಗೆ ನೋಡುತ್ತಿದ್ದುದ್ದನ್ನು ನಾನು ಗಮನಿಸಿದ್ದೆ. ಮಳೆಯ ಪ್ರಾರಂಭ ಅವರ ಮುಖದಲ್ಲೂ ಹರುಷವನ್ನು ತಂದಂತಿತ್ತು. ಮೇಷ್ಟ್ರ ಐದು ಎಕರೆ ಹೊಲ ದೊಡಘಟ್ಟದ ಹಾದಿಯಲ್ಲಿದ್ದದ್ದು ಆ ಹೊತ್ತು ನನ್ನ ನೆನಪಿಗೆ ಬಂತು. ಪಾಠವನ್ನು ನಿಲ್ಲಿಸಿ ಜೋರಾಗುತ್ತಿದ್ದ ಮಳೆಯನ್ನು ವೀಕ್ಷಿಸಲು ತರಗತಿಯ ಬಾಗಿಲಿಗೆ ಗುರುಗಳು ನಡೆದ ಹಾಗೆ ತರಗತಿಯ ಕಿಟಕಿಗಳನ್ನು ವಿದ್ಯಾರ್ಥಿಗಳಾದ ನಾವು ಆಕ್ರಮಿಸಿದೆವು. ಹನಿಹನಿಯಾಗಿ ಶುರುವಾದ ಮಳೆ ಈಗ ಒಂದು ಹಂತದ ತೀವ್ರತೆಯನ್ನ ಪಡೆದಿತ್ತು. ನೀರು ಕಾಣದೇ ಬರಡಾಗಿದ್ದ ಆಟದ ಮೈದಾನದ ಮೇಲೆ ಸಣ್ಣದಾಗಿ ಮಳೆ ನೀರು ಹರಿಯತೊಡಗಿತ್ತು. ಧೂಳುಮಯವಾಗಿದ್ದ ಮರಗಿಡಗಳ ಪಾಲಿನ ವರ್ಷದ ಮೊದಲನೇ ಮಳೆಗಾಲದ ಸ್ನಾನ ಮೊದಲಾಗಿತ್ತು. ಕೆಲವೇ ಹೊತ್ತಿನಲ್ಲಿ ನಮ್ಮ ಕಡೆ ಹೇಳುವ ಹಾಗಿನ “ದೋಣಿನೀರಿ”ನ ಮಳೆ ಹೊಯ್ಯತೊಡಗಿತ್ತು.

ಈಗ ನನ್ನ ಮಟ್ಟಿಗೊಂದು ಹೊಸ ಸಮಸ್ಯೆ ಶುರುವಿಟ್ಟುಕೊಂಡಿತ್ತು. ಹೊಸ ಬಸ್ ಸ್ಟ್ಯಾಂಡ್ ನಲ್ಲಿರುವ ಶಾಲೆಯಿಂದ ನನ್ನ ಮನೆಯಿರುವ ಹಳೇ ಬಸ್ ಸ್ಟಾಂಡಿಗೆ ಮಳೆಯಲ್ಲಿ ಹೇಗೆ ಹೋಗುವುದು? ಎನ್ನುವ ಸಮಸ್ಯೆ ಶುರುವಾಗಿತ್ತು. ಸಾಕಷ್ಟು ದೂರದ ಫಾಸಲೆ ಇದು. ಮೇಲಾಗಿ ನಮ್ಮಲ್ಲಿ ಆಗಿನ್ನೂ “ಕೊಡೆಸಂಸ್ಕೃತಿ” ಇರಲಿಲ್ಲ. ಮಳೆಯೇ ಬೀಳದ ನಾಡಿನಲ್ಲಿ ಮಕ್ಕಳಿಗೆ ಚಡ್ಡಿ ಹೊಂದಿಸುವುದೇ ಪೋಷಕರಿಗೆ ಸಮಸ್ಯೆ ಎನಿಸಿದರೆ ಇನ್ನು ಚಿಣ್ಣರ ಕೈಗೆ ಕೊಡೆ ಎಲ್ಲಿಂದ ಕೊಡುವುದು?

ಸುಮಾರು ಎರಡು ತಾಸುಗಳವರೆಗೆ ಚೆನ್ನಾಗಿ ಹೊಯ್ದ ಮಳೆ ಬರಗಾಲದ ಬವಣೆಯನ್ನು ತಾತ್ಕಾಲಿಕವಾಗಿಯಾದರೂ ನೀಗಿಸಿತ್ತು. ಶಿಕ್ಷಕವೃಂದ ಮತ್ತು ಸಹಪಾಠಿಗಳ ಮುಖದಲ್ಲಿ ಹರ್ಷ ಹೊನಲಾಗಿತ್ತು. ಮಳೆ ನಿಂತ ಕೂಡಲೇ ಹಿಂದು- ಮುಂದೆ ನೋಡದೆ ಬ್ಯಾಗನ್ನು ಹೆಗಲೇರಿಸಿ ಕಂಡವನು ಮನೆಕಡೆಗೆ ಒಂದೇಸಮನೆ ಓಡತೊಡಗಿದ್ದೆ.

ಇನ್ನೂ ಶಾಲೆಯನ್ನು ಬಿಟ್ಟು ಸ್ವಲ್ಪ ದೂರ ನಡೆದಿದ್ದೆ, ಕೆನರಾಬ್ಯಾಂಕಿನ ಬಳಿ ತಲುಪಿದ್ದೆ ಎನಿಸುತ್ತದೆ, ಮತ್ತೆ ಮಳೆ ಪ್ರಾರಂಭವಾಯಿತು. ಮತ್ತೊಮ್ಮೆ ಸಣ್ಣಗೆ ಸುರಿಯಲು ತೊಡಗಿದ ಮಳೆಯನ್ನು ಲೆಕ್ಕಿಸದೆ ವರ್ಷದ ಮೊದಲ ಮಳೆಯ ಮಜಾವನ್ನು ಅನುಭವಿಸುತ್ತಲೇ ಒದ್ದೆಯಾದೇನು, ಮನೆಯಲ್ಲಿ ಅಜ್ಜಿ ಮಂಗಳಾರತಿ ಮಾಡುತ್ತಾರೆ ಎನ್ನುವುದನ್ನೂ ಯೋಚಿಸದೆ, ಮನೆಯ ಕಡೆಗೆ ಓಡುವ ತೀವ್ರತೆ ಹೆಚ್ಚಿಸಿದೆ.

ದಾರಿಯಲ್ಲಿ ದೇವಸ್ಥಾನದ ಬಳಿ ಬಂದವನಿಗೆ ಮಧ್ಯಾಹ್ನದ ಜನಜಂಗುಳಿ ಕಾಣಿಸಲಿಲ್ಲ. ಆವರಣದ ಟೆಂಟಿನಲ್ಲಿ ಮಾತ್ರ ಮುದ್ದೆಬಸಣ್ಣನ ಇನ್ನೂ ತಪಸ್ಸಿನಲ್ಲಿ ಕುಳಿತ ಭಂಗಿ ಗೋಚರಿಸಿತು. ಇದನ್ನು ನೋಡಿದವನು ಇಂದು ರಾತ್ರಿಯಿಡೀ ಮಳೆಗೆ ಮುಕ್ತಿಯಿಲ್ಲ ಎಂದುಕೊಂಡು ನನ್ನ ಓಟದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Girl in a jacket
error: Content is protected !!