ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು

Share

 

ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು

ಮಾನವ ಚರಿತ್ರೆಗಳನ್ನ ರಾಜಕೀಯ ನೆಲೆಯಲ್ಲಿ ನೋಡುವಂತೆಯೇ ಸಾಂಸ್ಕೃತಿಕ ನೆಲೆಯಲ್ಲಿಯೂ ನೋಡ ಬಹುದಾಗಿದೆ.ಭಾಷೆಯಲ್ಲಿ  ಅಂಕಿತ ನಾಮಗಳು ವ್ಯಕ್ತಿ ಗುರುತನ್ನ ಹೇಳಿದರೆ ಅನ್ವರ್ಥ ನಾಮಗಳು ಆ ವ್ಯಕ್ತಿಯ ಸಾಂಸ್ಕೃತಿಕ ವಿವರಗಳನ್ನ ಸಾರುವ ಜೀವ ದ್ರವ್ಯಗಳಂತೆ ಕಾಣುತ್ತವೆ.ಅನ್ವರ್ಥ ನಾಮವನ್ನ ಅಡ್ಡ ಹೆಸರೆಂದು ಕರೆವ ಜನರ ಆಸಕ್ತಿಗಳನ್ನ ಸೂಕ್ಷ್ಮವಾಗಿ ಕೆದಕಿದಾಗ ಈ ’ಅಡ’ ಎಂಬ ನೇರವಲ್ಲದ ಹೆಸರಿಗೆ ಗ್ರಾಮ,ಬದುಕು,ವೃತ್ತಿ ಮತ್ತು ಜಾತಿ ಬೇರುಗಳ ಬಿಳಲುಗಳಿರುವುದನ್ನ ಗುರುತಿಸಬಹುದಾಗಿದೆ.
ನಗರದಂತೆ ಹಳ್ಳಿಗಲ್ಲಿ ಇಣುಕುವ ಈ ಸಾಂಸ್ಕೃತಿಕ ಸಂಗತಿಗಳ ನೆನಪಿನ ಬುತ್ತಿಯೊಳಗೆ ಅಡ್ಡ ಹೆಸರುಗಳೆಂಬ ಪ್ರಾಕೃತಿಕ,ದೈವಿಕ,ಸಾಮುದಾಯಿಕ ಸಂಗತಿಗಳನ್ನ ಬಿಡಿಸುವಂತಿವೆ.ಹೆಸರುಗಳೇ ಇಲ್ಲಿ ಹಿಂದೆ ಪ್ರಾಕೃತಿಕ ಪರಿಸರವನ್ನ ಆವರಿಸಿವೆ.ಕಲ್ಲಪ್ಪ,ಗುಂಡಪ್ಪ,ಕರಿಯಪ್ಪ,ಕೆಂಪೀರಪ್ಪ,ಸಣ್ಣಪ್ಪ,ಗಿಡ್ಡಪ್ಪ,ಎಂದೆಲ್ಲಾ ಇರುವಂತೆಯೇ ದೈವಿಕವಾಗಿ ಕೊಟ್ರೇಶ,ಗೋಣಿ ಬಸಪ್ಪ,ಕೊತ್ಲಪ್ಪ,ವಿರುಪಣ್ಣ,ಹಂಪಮ್ಮ,ಗಾದಿಲಿಂಗ ,ಈರಭದ್ರಿ,ಮಲ್ಲಪ್ಪ,ಮರುಳುಸಿದ್ದಪ್ಪ,ಎರ್ರಪ್ಪ,ಹುಚ್ಚಪ್ಪ,ಗಾಳೆಮ್ಮ,ಚೌಡಮ್ಮ,ದುರುಗಮ್ಮ,ಮೈಲಮ್ಮ,ಪಕ್ಕೀರಪ್ಪ,ಹುಸೇನಪ್ಪ,ಪೀರಣ್ಣ,..ಇತ್ಯಾದಿ.ನಗರಗಳ ಪೌರಾಣಿಕ ಹೆಸರುಗಳಂತೆಯೇ ಸಿನಿಮಾ ವ್ಯಕ್ತಿಗಳ ,ಕ್ರಿಕೇಟ್ ಆಟಗಾರರ ಹೆಸರುಗಳೂ ಇಲ್ಲಿ ಇಣುಕಿ ಹಿಂದಿನ ಹಿರೀಕರ ಹೆಸರು ಇಡುವ ಕರುಳಿನ ಬೇರು ಕಳಚಿಕೊಂಡಂತೆ ಕಾಣುತ್ತವೆ.

ಈ ನೆಲೆಯಲ್ಲಿ ಹೆಸರಿನಂತೆಯೇ ಆಚರಣೆಗಳೂ ಈಗೀಗ ಕಾಂಕ್ರೀಟ್ ಕಾಡಿನೊಳಗೆ ಮುಳುಗಿಹೋಗುತ್ತಿವೆ.
ಹೆಸರುಗಳಂತೆಯೇ ಅಡ್ಡ ಹೆಸರುಗಳೂ ಕೇವಲ ಸಂವಹನ ಸಾಧನ ಮಾತ್ರವಾಗಿ ಕಾಣದೆ ಹಲವು ಸಾಂಸ್ಕೃತಿಕ ಒಳದಾರಿಗಳನ್ನ ಹೊತ್ತ ಪುಟ್ಟ ತೊರೆಗಳಂತೆ ಕಾಣುತ್ತವೆ.ಇವು ಆಳದೊಳಗೆ ಜಾತಿ ತಾರತಮ್ಯವನ್ನೂ,ಶ್ರೇಷ್ಠ ಮತ್ತು ಕನಿಷ್ಟ ಎಂಬ ಸಂಘರ್ಷದ ರೂಪಗಳನ್ನೂ ವೃತ್ತಿ ಸೂಚಕಗಳನ್ನೂ ತೋರುವಂತಿವೆ.ಪ್ರಾಕೃತಿಕ ರೂಪವಾಗಿ ಬೇವಿನ ಕಟ್ಟಿ,ಜಿಟ್ಟನಕಟ್ಟಿ,ಜೋಳದ ಕೂಡ್ಲೀಗಿ,ಮೊದಲಾದ ಸ್ಥಳನಾಮದಂತೆಯೇ..ಎತ್ತಿನವರು,ಕುರಿಯವರು,ವಾರ ಬಡ್ಡಿ,ರಾಟಿ,ಕೋರಿ,ಗವಳಿ,ಅಂಗಡಿ,ದಲ್ಲಾಳಿ,ಮೊದಲಾದ ವೃತ್ತಿಸೂಚಕಗಳೂ ಕಾಣುತ್ತವೆ.
ಇಲ್ಲಿ ಸೂರ್ಯ ಎಂಬುದು ಹೆಸರಾದರೆ ಬಾರೋ ಮನಿ ಬೆಳಗೋ ಸೂರ್ಯ ಎಂಬುದು ವ್ಯಂಗ್ಯಾರ್ಥವಾಗುತ್ತದೆ.ಇದೇ ಅರ್ಥದಲ್ಲಿ ಸಾವಕಾರ,ಧಣಿ,ಹುಲಿ,ಸಿಂಹ,ಟಗರು ಮೊದಲಾದ ಅಡ್ಡ ಹೆಸರುಗಳು ವ್ಯಂಗಾರ್ಥವನ್ನೇ ಹೊರುತ್ತವೆ.ಅಡ್ಡ ಹೆಸರುಗಳು ಗುಪ್ತ ನಾಮವಾಗಿಯೂ ಖಾಸಗೀ ಸಂವಹನ ಮಾಧ್ಯಮವಾಗಿಯೂ ಇರುವಂತೆಯೇ ಖಾಸಗೀ ಚರಿತ್ರೆಗಳ ಸುಳಿಯನ್ನ ಬಿಚ್ಚುವಂತಿವೆ.ಇವು ಕಥನಗಳಲ್ಲ ಉಪ ಕಥನಗಳ ಕಟ್ಟಿನಂತಿವೆ.
ಕೆರಿ ನಾಗಜ್ಜ: ಊರು ಸಣ್ಣದು, ಊರತುಂಬಾ ಆರಂಭದ್ದೇ ಬಿರುಸು.ಹೊಲವಿದ್ದೋರು ಕಾಲು ಪಾಲು;ಕೂಲಿ ನಾಲಿ ಮಾಡೋರೇ ಮುಕ್ಕಾಲು ಪಾಲು.ವಿಭೂತಿ ಲಿಂಗಪ್ಪಗಳ ಹೊತ್ತ ಗೌಡರ ದರಬಾರುಗಳ ನಡುವೆ ಆಡು ಕುರಿಗಳಂತೆಯೇ ಕಾಣುವ ,ನಾಯಿ,ಬೆಕ್ಕು ಕೋಳಿಗಳಂತೆಯೇ ಬಾಳುವ ಕಪ್ಪಾಳುಗಳು ಅವರ ಮೀಸೆಯ ಅಣತಿಗನುಗುಣವಾಗಿ ದಿನ ನೂಕುತ್ತವೆ.ಕೇರಿ ಹೊರ ಕೇರಿಗಳೆಂದು ತುಂಡಾದ ಈ ನೆಲದೊಳಗೆ ನೀರೂ ಕೂಡ ಜಾತಿಯ ಭಿನ್ನ ಬೇಧ ಮಾಡುತ್ತದೆ.ಊರಿಗೊಂದೇ ಕೆರೆಯಾದರೂ ನಾಲ್ಕೂ ದಿಕ್ಕಿನೊಳಗೆ ಕೆರಿಯ ಉಪಯೋಗವೇ ಐಚೋಜಿಗ ಎನ್ನುವಂತಿದೆ.ಈಜುವರು,ಎಮ್ಮೆ,ಎತ್ತುತೊಳೆಯೋರು,ಬಟ್ಟೆ ಬರಿ ಒಗೆಯೋರು,ಮುಸುರಿ ತೊಳೆಯೋರು,ನೀರು ನಿಡಿ ಅಂತ ಬರೋರು,ಅದಕೂ ಇದಕೂ ಬಳಸೋರ ನಡುವೆ ಬಂಡೆಗಳಿಗೆ ಅಂಡು ಆನಿಸಿಕೊಂಡು ಗಾಣ ಹಾಕಿ ಮೀನು ಹಿಡಿಯೋರು,ಇವರೆಲ್ಲರ ಜೊತೆಗೆ ಹೋಳಿ ಹುಣ್ಣಿಮೆಯೊಳಗೆ ನೀರಾಟವಾಡುವ ದೋಣಿ ಕೆಂಚಮ್ಮ,ಮೊಹರಂ ಕಡೇ ದಿನ ಮೈತೊಳೆವ ಅಲೇ ದೇವರು,ಯುಗಾದಿ ಆಗಿ ಹನ್ನೊಂದು ದಿನಕ್ಕೆ ಗಂಗಮ್ಮಗೆ ಬರುವ ಮದ್ಲೇರ ಚೌಡಮ್ಮ ಹಾದಿ ಉದ್ದಕ್ಕೂ ಮಲಗಿದ ದೊಡ್ಡ ದೊಡ್ಡ ಜಾತಿಯವರ ಬೆನ್ನುತುಳಿಯುತ್ತಾ ಬಂದು ಅಗ್ನಿ ದಾಟುವ ರೀತಿಯೇ ವಿಶೇಷ.ಈ ಕೆರೆ ದೊಡ್ಡ ಮಳಿ ಬಂದಾಗ ಕೋಡಿ ಒಡೆದು ಎಲ್ಲರನ್ನೂ ಎಲ್ಲವನ್ನೂ ಸಂಬಾಳಿಸಲು ತಯಾರುಗುವ ಜೊತೆಗೆ ಈಜೆಂಬ ಓನಾಮ ಕಲಿಸುವ ಮಕ್ಕಳಿಗೆ ಆಡಂಬೋಲವಾಗಿದೆ.ಚಂದದ ಕಥನದೊಳಗೆ ವರ್ಷಕ್ಕೆ ನಾಲ್ಕಾದರೂ ಮಕ್ಕಳನ್ನ ತನ್ನೊಡಲೊಳಗೆ ತುಂಬಿಕೊಳ್ಳುವ ಈ ಕೆರೆ ತಾಯಂದಿರ ಕಣ್ಣೀರಿನಂತೆಯೇ ಕೆಂಪಾಗಿದೆ.

Jo
ತಾಯಂದಿರ ಕಣ್ಣೀರು ಹರಿಯ ಬಾರದೆಂದೇ ತಯಾರಾಗಿ ನಿಂತ ಕರಿನಾಗಜ್ಜ ಉರುಫ್ ದೊಡ್ಡ ನಾಗಜ್ಜ ಬೆಳಗಾದರೆ ಶಿವ ಪೂಜೆ ಮಾಡಿಕೊಂಡು ಕರೆದಂಡೆಯ ಕಣದ ದಂಡೆಗೆ ಬಂದು ಕೋಲಿಡಿದು ನಿಂತು ಬಿಟ್ಟನೆಂದರೆ ಮುಗೀತು.ಈಜಲು ಬರುವ ಮಕ್ಕಳ ಬೆನ್ನುಗಳಲ್ಲಿ ಬಾಸುಂಡೆಗಳು ನಿಂತವೆಂದೇ ಅರ್ಥ.ಈಜಿಗಿಳಿದವರ  ಬಟ್ಟೆ ಬರೆ ಹೊತ್ತು ತಂದು ಕಣದೊಳಗೆ ಹಾಕುವುದಲ್ಲದೇ ನುಗ್ಗಿ ಜುಳುಕಿ ಬೀಸುತಿದ್ದ ಆ ಏಟು ಒಮ್ಮೆ ಕಂಡವರು ಎದ್ದೋ ಬಿದ್ದೋ ಬೆತ್ತಲಾಗಿಯೋ ಮನೆ ಸೇರಿಕೊಳ್ಳುವುದರ ಜೊತೆಗೆ ಜನ್ಮದಲ್ಲಿ ಕೆರೆಗಿಳಿಯಲು ಯೋಚಿಸುತಿದ್ದರು.”ಬಂದ್ನಲೇ ಕೆರಿ ನಾಗಜ್ಜ” ಎಂಬ ಸೌಂಡು ಕಂಡರೆ ಸಾಕು ಕರೆಯ ನಾಲ್ಕೂ ದಿಕ್ಕಿನ ಮಕ್ಕಳು ಓಟ ಕೀಳುತಿದ್ದವು.” ಬೈದವರು ಬುದ್ದಿ ಹೇಳಿದರು,ಒದ್ದವರು ಒಳ್ಳೇ ದಾರಿ ತೋರಿದರು ” ಎಂಬ ತತ್ವ ಸಾರುವ ನಾಗಜ್ಜನಿಗೆ ಈ ಕಾಯಕದಿಂದ ಯಾವ ಲಾಭವಿರದಿದ್ದರೂ ತನ್ನ ಉಸಿರಿರುವ ತನಕ ಆತ ಬೆಳಗಿನಿಂದ ಸಂಜೆಯ ತನಕ ಈ ಕಾಯಕವನ್ನ ನಿಷ್ಟೆಯಿಂದ ಮಾಡುತಿದ್ದ.ಆತನ ಏಟಿಗೆ ಗೌಡಪ್ಪನ ಮಕ್ಕಳಿರಲಿ,ಕೇರಿಗಳ ಮಕ್ಕಳಿರಲಿ ತಾರತಮ್ಯಗಳಿರಿಲಿಲ್ಲ.ಆತನಿರುವ ತನಕ ಕರೆ ತುಂಬಿದ ದಿನಗಳಲ್ಲೂ ಮಕ್ಕಳ ಸಾವಿನ ಸುದ್ಧಿಗಳಿರಲಿಲ್ಲ.ಕಾಲ ಬದಲಾದಂತೆ ಊರು ಬದಲಾದಂತೆ ನಾಗಜ್ಜನ್ನೂ ಕಾಲವಶವಾದ ಈಗೀಗ ಈ ಕಾಯಕ ಮಾಡುವರಿಲ್ಲದೆ ಅಲ್ಲಲ್ಲಿ ಹುದುಳು ತುಂಬಿಕೊಂಡ ಕೆರೆಯಲ್ಲಿ ಮಕ್ಕಳು ಸಿಕ್ಕು ಸಾಯುತ್ತಿವೆ.ಪೋನಾಯಿಸಿದಾಗಲೆಲ್ಲಾ ಅಮಾಯಕ ಮಕ್ಕಳ ಸಾವುಗಳು ತಾಯಂದಿರ ಕಣ್ಣೀರುಗಳು ಬಡಿದು ನಾಗಜ್ಜ ಕಣ್ಣು ಮುಂದೆ ನಿಲ್ಲುತ್ತಾನೆ.ನೀರಿಗಿಳಿವಾಗ ರಾಕ್ಷಸನಂತೆ ಎರಗುತಿದ್ದ ಕೆರಿ ನಾಗಜ್ಜ ಈಗ ದೇವರಂತೆ ನೆನಪಿಗೆ ಎದುರಾಗುತ್ತಿದ್ದಾನೆ.
ದನಗಾರ ರಾಮಜ್ಜ:ನೆಲವೇ ಹಾಸಿಗೆ ಆಕಾಶವೇ ಹೊದಿಕೆ ಎಂಬಂತೆ ದೊಡ್ಡ ಸಾಹುಕಾರನಾದರೂ ರಾಮಜ್ಜ ಕಾಣುತಿದ್ದುದೇ ದನಗಳ ನಡುವೆ.ಚಳಿ ಬಿಸಿಲೆಂಬ ಉಸಿರೆತ್ತದೆ ದನಗಳನ್ನ ಚೆಂಜೆ ಮುಂಜಾನೆ ಕರೆ ಅಂಗಳದಲ್ಲಿ ಕಲೆಸಿಕೊಂಡು ಹೆಬ್ಬಂಡೆಯ ಮೇಲೆ ಕೂರುತ್ತ ಭಜನೆ ತತ್ವ ಪದಗಳನ್ನ ಹಾಡುತ್ತ ರೀತಿಯೇ ಜನಕ್ಕೆ ಮೂಡುವ ಮುಳುಗುವ ಹೊತ್ತು ಸೂಚಿಸುವಂತಿತ್ತು.ತನ್ನ ಯಜಮಾನಿಕೆಯನ್ನ ಮಕ್ಕಳು ಮೊಮ್ಮಕ್ಕಳಿಗೆ ವಹಿಸಿ ಸುಮಾರು ಮುನ್ನೂರು ಹಸುಗಳೊಂದಿಗೆ ನಗುತ್ತ ಕಾಲಕಳೆಯುತಿದ್ದ.ಎಲ್ಲವಕ್ಕೂ ಹೆಸರಿಟ್ಟು ಒಂದೊಂದನ್ನೂ ಪ್ರೀತಿಯಿಂದ ಕರೆಯುತಿದ್ದ.ಎಂದಿಗೂ ಈ ಅಜ್ಜ ಚಂದದ ಬಣ್ಣದ ಬಟ್ಟೆಗಳನ್ನ ಉಟ್ಟದ್ದು ಯಾರೂ ನೋಡಿಲ್ಲ.ತಾನಾಯಿತು ತನ್ನ ಹಸುಗಳಾಯಿತು ಎಂದು ಇರುತಿದ್ದ ಆತನ ಬಳಿಗೆ ಕೂಲಿಕಾರರು ಬಂದರೆ ಹಿಂಡುವ ಹಸುಗಳ ಕರೆದು ಹಾಲು ಕರೆದು ನೀಡುತಿದ್ದ.ಎಂದಿಗೂ ಯಾರ ಬಳಿಯೂ ಹಣ ಕೇಳಲಿಲ್ಲ.” ನೋಡ್ರೋ ಬದುಕು ಹಾಲು ನೀರಿನ ನಡುವಿನ ಕರೆ ಅಂಗಳ,ಇದೇ ಸತ್ಯ ಎಲ್ಲಾ ಸುಳ್ಳು,ಕಾಯೋ ಹಾಲೂ ತಾಯಿ ಹಾಲು ಒಂದೇ ತಮ್ಮಾ ಮಾರಬಾರದು ” ಎನ್ನುತಿದ್ದ.ಅಶುಭ ಎಂದು ಸಾರುತಿದ್ದ.ಅದು ಆ ಕಾಲ ಕೂಲಿ ಕಾರರು ಯಾರ ಅಂಗಳದಲ್ಲಿ ನಿಂತರೂ ಹಾಲು ಮಜ್ಜಿಗೆಗೆ ಬರವಿರಲಿಲ್ಲ.ಅಂತಹ ದೊಡ್ಡ ಮನೆತನವೆಂಬ ಸ್ಯಾವಕಾಳೇರು ಎಂಬ ಲಿಂಗಾಯಿತ ರಾಮಜ್ಜ ಊರಿಗೇ ಸದ್ದಿರದ ಸಂತನಂತೆ ಕಾಣುತಿದ್ದ.
ಹೆಂಡದ ದುರುಗವ್ವ: ಹೆಂಡ ಮಾರುವ ಕಾಯಕದಿಂದ ಸರಾಯಿ ಮಾರುವ ಕಾಯಕಕ್ಕಿಳಿದ ದುರುಗವ್ವ ಉರುಫ್ ಈಡಿಗರ ದುರುಗವ್ವ .ಅಷ್ಟೇ ಚಂದದ ಅಷ್ಟೇ ಕಠೋರ ನಡೆಯ ಗಟ್ಟಿಗಿತ್ತಿ.ಕುರಿದವನು ತಾರು ಮೇರು ಮಾಡಿದರೆ ಮುಖ ಮೂತಿ ನೋಡದೆ ಕೊಳ್ಳ ಪಟ್ಟಿ ಹಿಡಿದು ತನ್ನ ಪುಟ್ಟ ಗುಡಿಸಲಿನಿಂದ ಹೊರಕ್ಕೆಳೆದು ಹಳೆಯ ಚಪ್ಪಲಿ ಸೇವೆ ಮಾಡುತಿದ್ದಳು.ಆಕೆಯ ಬೈಗುಳ ಕೇಳಿದವ ಕನಸಿನಲ್ಲೂ ನಿಟ್ಟಿ ಬೀಳುತಿದ್ದ.
ಉರಿವ ಕೆಂಪು ಮುಖದ ದುರುಗವ್ವನೊಳಗೆ ಸೊಗಸಾದ ತಾಯಿ,ಸಖಿ ಇದ್ದಳು.ಕಣ್ಣ ಹನಿಗಳ ಅವಳದೇ ಸಣ್ಣ ಕಥನವೂ ಇತ್ತು.ನೀರಾವರಿ ಸೀಮೆಯಿಂದ ಈ ಹಳ್ಳಿಗಿಳಿದ ಆಕೆ ನಾಟಕದ ಮೇಷ್ಟ್ರು ಬಡಮ್ಮನರು ಹನುಮಂತಪ್ಪನಿಗೆ ಮೆಚ್ಚಿ ಆ ಕಾಲಕ್ಕೇ ಮನೆಯವರನ್ನೂ ಮನೆತನವನ್ನೂ ದಿಕ್ಕರಿಸಿ ಪ್ರಿಯತಮನ ಹಾರ್ಮೋನಿಯಂ ಪೆಟ್ಟಿಗೆಯನ್ನು ತಾನೇ ಹಾಕಿಕೊಂಡು ಬೆನ್ನಟ್ಟಿ ಬಂದವರ ದಿಕ್ಕು ತಪ್ಪಿಸಿ ದೊಡ್ಡ ಕಾಲುವೆ ಜಿಗಿದು ಕಬ್ಬಿನ ಹೊಲದೊಳಗೆ ರಾತ್ರಿ ಕಳೆದು ನಸಿಕಿನೊಳಗೆ ಲಾರಿ ಹತ್ತಿ ಊರು ಬಿಟ್ಟ ಕಥನವನ್ನ ಆಕೆಯ ಬಾಯಲ್ಲಿ ಕೇಳುವುದೇ ಚಂದ.ಮನೆಗೆ ಬಂದ ನಲ್ಲ ಎರಡು ಮಕ್ಕಳನ್ನ ನೀಡಿ ದುಡಿಯುವುದನ್ನ ಬಿಟ್ಟು ಕುಡಿಯುವುದನ್ನೇ ಕಾಯಕ ಮಾಡಿಕೊಂಡಿದ್ದನ್ನ ಕಂಡು ಹೇಳುವಷ್ಟು ಹೇಳಿ ಹೇಳಿಸಿ ನೋಡಿ ಕೊನಗೆ ರೋಸಿ ಹೋಗಿ ಆತನನ್ನೂ ಅಂಗಳಕ್ಕೆಳೆದು ಚಪ್ಪಲಿ ಸೇವೆ ಮಾಡಿ ತಾಳಿ ಹರಿದು ಕೈಗೆ ಇಟ್ಟು ” ನಡಿಯೋ ಬಾಡ್ಕೋ ..” ಅಂದು ಮಕ್ಕಳಿಗಾಗಿ ತನ್ನ ಸುಖವನ್ನೇ ಹರಿದುಕೊಂಡಳು.ಗಂಡು ಹೆಣ್ಣು ಎರಡೂ ಆಗಿ ಕಾಣುವ ಆಕೆ ” ಬೆಳ್ಳನ ಬಟ್ಟಿಯವರೆಲ್ಲಾ ಒಳ್ಳೇರಲ್ಲೋ ತಮ್ಮಾ…ನೋಡ್ತಿಯಲ್ಲ ನಮ್ಮೋನ್ನ ,ಬಿಡು ನೀನು ಅಂದ್ರ ನಿಮ್ಮಪ್ಪ ಅಂದೋರಿಗೇ ಕಾಲ,ಬದುಕೋಕೆ ಭಂಡರಾಗಬೇಕಪ್ಪೋ” ಎನ್ನುವಾಗ ಓಣಿಯ ಚಳ್ಳಿ ಮರದ ದುರುಗಮ್ಮನನ್ನೇ ಹೋಲುವಂತೆ ಕಾಣುತಿದ್ದಳು.
ಕೆಬ್ಬುಣ ಪುಟ್ಟಿ ಅರ್ಜುನ: ಹುಟ್ಟಿನಿಂದಲೂ ’ಅ’ ಅಂಬೋ ಅಕ್ಷರ ಕಾಣದ ಅರ್ಜುನ ಜನರ ಜೊತೆಗಿಂತ ಕುರಿಗಳ ಜೊತೆಗೇ ಬದುಕಿದ್ದು ಹೆಚ್ಚು.ಅಡವಿ,ಹೊಲ ಅಂತ ಊರಿನಿಂದ ದೂರವೇ ಉಳಿದಿದ್ದ ಆತ ಹಬ್ಬ,ತೇರು,ಜಾತ್ರೆಗಳಂತಹ ದಿನಗಳಲ್ಲಿ ಕಾಣಿಸಿಕೊಳ್ಳುತಿದ್ದ.ಕಪ್ಪು ಹಬ್ಬಂಡಿಯಂತೆ ಕಾಣುತಿದ್ದ.ಹಾವು ಗಣ್ಣಿನ ಅರ್ಜುನನಿಗೆ ಗೊತ್ತಿದ್ದ ವಿದ್ಯೆ ಎರಡೇ ಒಂದು ಕುಸ್ತಿ,ಎರಡು ಕುರಿ ಸಾಕಾಣಿಕೆ.ದೊಡ್ಡ ಪಾತ್ರೆಯ ತುಂಬಾ ಹಾಲು ಹಿಂಡಿಕೊಂಡು ಒಂದು ಬೆಲ್ಲದ ಅಚ್ಚನ್ನ ಕಲಸಿಕೊಂಡು ಹದಿನೈದರಿಂದ ಇಪ್ಪತ್ತು ರೊಟ್ಟಿಗಳನ್ನ ಕಲಸಿ ಕುಡಿದು ” ಕೇ..ಹುಹ್” ಎಂದು ನಗುವುದೇ ಒಂದು ಸೊಗಸು.ಸೀಗಿ ಹುಣ್ಣಿಮೆಯ ಹಬ್ಬದಂದು ಕಬ್ಬಿಣ ಪುಟ್ಟಿ ಹುರುಳಿ ಹುಣ್ಣವನ್ನ ಹಾಲಿನೊಳಗೆ ಕಲಸಿ ತಿಂದಾಗಿನಿಂದ ಆತನಿಗೆ ಈ ಹೆಸರೇ ಅಂಟಿಕೊಂಡು ಬಿಟ್ಟಿತ್ತು. ಪಂಚಮಿ ಹಬ್ಬ ಬಂತೆಂದರೆ ದೊಡ್ಡ ಉಗ್ಗಣ ಬಳ್ಳಿಯ ರಾಶಿತಂದು,ಹುಡುಗರನ್ನ ಜಡೆ ಹೆಣೆದು ಜೂಕಾಲಿ ಕಟ್ಟಿ ಆಕಾಶಕ್ಕೆ ನಗೆಯುವಂತ ಆತ ಜೀಕುತಿದ್ದ ರೀತಿ ಕಣ್ಣಗಲದೊಳಗೆ ಇನ್ನೂ ನಿಂತಂತಿದೆ.ತೆಂಗಿನ ಕಾಯಿಗಳನ್ನ ಮೊಳಕೈ ಮತ್ತು ತಲೆಗಳಿಂದ ಹೊಡೆದು ಹಾಕುತ್ತ ಕೇಕೆ ಹಾಕುತಿದ್ದ ಅರ್ಜುನ ಬಂದರೆ ಎಂತಹ ಜೂಜಾಡುವವರೂ ಅಳುಕಿಬಿಡುತಿದ್ದರು.ಸೋಲಪ್ಪದಿದ್ದರೆ ಎತ್ತಿ ಹಾಗೇ ತಿಪ್ಪೆಗೋ ಬೇಲಿಗೋ ಎಸೆದು ಬಿಡುತಿದ್ದ ಅರ್ಜುನನ ತಂಟೆಗೆ ಅವನ ಮನೆಯವರೂ ಹೋಗುತ್ತಿರಲಿಲ್ಲ.ಬಂಡಿಯ ಚಕ್ರವನ್ನೇ ಹೊತ್ತು ಬೀಸಿ ಬಿಡುತಿದ್ದ ಅತನ ರೋಷ ಕಂಡು ಎಂಥವರೂ ನಡುಗಿ ಬಿಡುತಿದ್ದರು.ಹಬ್ಬಕ್ಕೆ ಬಂದವ ನೆಂಟರ ಮನೆಗಳಲ್ಲೆಲ್ಲಾ ತಿಂದು ಅಡ್ಡಾಡುತಿದ್ದ ಅರ್ಜುನನ ರೀತಿ ನೋಡಿ ಜನರು” ಹೊಡ್ಳೊಳಗ ದೆವ್ವವನ್ನ ಇಕ್ಕ್ಯಾಂಡಾನ ” ಅನ್ನುತ್ತಿದ್ದರು.ಕಾಡು ಸುತ್ತುತಿದ್ದ ಆತ ಕುರಿ ಮಂದೆಗಳ ನಡುವೆ ದೇವರಿಗೆ ಬಿಟ್ಟ ಟಗರಿನಂತೆ  ಕಾಣುತಿದ್ದ.ಇಪ್ಪತ್ತು ಕೊಡ ತೂಗುವ ಹಂಡೆ ಹೊತ್ತು ಮದುವೆ ಸಮಾರಂಭಗಳಲ್ಲಿ ನೀರು ತರುತಿದ್ದ ಆತನ ರೀತಿ ಕಂಡು ” ಹೌದ್ದಲೇ ಭೂಪ” ಎನ್ನುತಿದ್ದರು.ಆತನ ತಿನ್ನುವ ಸುದ್ದಿಗೇ ಜನ ಹೆಣ್ಣು ನೀಡದಾದರು.ದೊಡ್ಡ ಕುರಿ ಮಂದೆ ಇದ್ದ ಅರ್ಜುನನ ಬಹುತೇಕ ಕುರಿಗಳು ದೊಡ್ಡ ಹಳ್ಳದ ಪ್ರವಾಹಕ್ಕೆ ಸಿಕ್ಕು ಸತ್ತಾಗ ಅಬ್ಬರಿಸಿ ಅಳತೊಡಗಿದ. ರೀತಿ ಇಡೀ ಊರನ್ನೇ ಕಣ್ಣೀರು ಗರೆಸಿತ್ತು.ಹರಪನ ಹಳ್ಳಿ ಸಂತೆಯೊಳಗೆ ಸುತ್ತುವಾಗ ದಿಡಗ್ಗನೇ ಎದುರಾದ ಅರ್ಜುನ ” ಲೇ ಕುಮಾರ ಹೆಂಗದಿ ಪಾ” ಎಂದಾಗ ದಂಗಾಗಿ ಹೋಗಿದ್ದೆ. ” ಹೋದವಲೇ ಹುಡುಗಾ ಆದಿನಗಳು ಅಂತ ಕುಂತವನೇ ಕಣ್ಣೀರು ಗರೆಯತೊಡಗಿದ, ಸಾವರಿಸಿಕೊಂಡ ನನಗೆ ಆತನನ್ನ ಹೋಟಲ್ಲಿಗೆ ಕರೆದೊಯ್ಯಲೇ? ಎಂಬ ಪ್ರಶ್ನೆ ಮೂಡಿದೊಡನೆ ಎಷ್ಟು ಪ್ಲೇಟು ತಿಂದಾನು? ಎಂದು ಜೇಬು ಮುಟ್ಟಿಕೊಳ್ಳುವಂತಾಯಿತು. ಅರ್ಜುನ ನಕ್ಕು ” ನನಗ ಐದು ರುಪಾ ಕೊಡಾ ತಮ್ಮಾ ಚಾ ಕುಡಿತಿನಿ ಅಂದ” ಕೊಟ್ಟೆ ನಗುತ್ತ ಸಂತೆಯೊಳಗೆ ಮಾಯವಾದ.ಬಾಲ್ಯದ ಗೆಳೆಯ ನಾಗರಾಜನನ್ನ ಕೇಳಲು ” ಯಣ್ಣಾ ಅರ್ಜುನನಿಗೆ ಯಾರೂ ಹೆಣ್ಣು ಕೊಡಲಾರದ್ದ ಹುಚ್ಚಾಗನಂತಪ್ಪಾ…” ಅಂದ ಮಾತುಗಳು ಯಾಕೋ ಏನೋ ಗುಯ್ ಗುಡತೊಡಗಿದವು

Girl in a jacket
error: Content is protected !!