ಇಂದು ಸಮಾಜವಾದಿ ಹೋರಾಟಗಾರ ಜಾರ್ಜ್ ಫೆರ್ನಾಂಡಿಸ್ ಅವರ ಜನ್ಮದಿನದ ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರು ಬರೆದ ಈ ಲೇಖನ ಅವರ ಹೋರಾಟದ ಕುರಿತು ಬೆಳಕು ಚೆಲ್ಲಿದ್ದಾರೆ.
ನಮ್ಮ ಊರು ಮತ್ತು ಸೋಷಿಯಲಿಸ್ಟ್ ಹೋರಾಟದ ಕರ್ಮ ಭೂಮಿ ಸಾಗರದಲ್ಲಿ ಅವರ ಹೆಸರು ಕೇಳಿದರೆ ನಮ್ಮ ಮನಸುಗಳಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು.೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮೊದಲು ಸಂಪೂರ್ಣ ಕ್ರಾಂತಿಯ ಕಹಳೆ ಮೊಳಗಿಸಲು ನಮ್ಮ ಊರಿಗೆ ಜಾರ್ಜ್ ಬಂದಿದ್ದರು.ರಾತ್ರಿ ಹನ್ನೆರಡರವರೆಗೂ ಸಾವಿರಾರು ಜನರು ಅವರ ಭಾಷಣಕ್ಕೆ ಕಾದು ನಿಂತಿದ್ದೆವು.ಭಾಷಣಕ್ಕೆ ಮೊದಲು ಅವರು ಸಾಗರ ಹೋಟೆಲ್ ಸರ್ಕಲ್ ನಲ್ಲಿ ರಸ್ತೆ ಬದಿಯಲ್ಲಿ ಎಳೆನೀರು ಕುಡಿದು ಬಂದಿದ್ದರು.ಅವರ ಸರಳತೆ ಬಗ್ಗೆ ಹಲವು ದಂತ ಕತೆಗಳಿದ್ದವು.ಹಲವು ಬಾರಿ ಅವರ ಬಹಿರಂಗ ಸಭೆ ಗಳಲ್ಲಿ ಅವರ ಭಾಷಣಗಳನ್ನು ಕೇಳಿದ್ದೇನೆ.ಆದರೆ ಅವರ ಒಂದು ಭಾಷಣವನ್ನು ನಾನು ಮರೆಯುವಂತೆಯೇ ಇಲ್ಲ.ಅದು ೧೯೮೭ನೇ ಇಸವಿ.ಮುಂಬೈನ ಞಛಿ ಕಾಲೇಜಿನಲ್ಲಿ ನಾನು ಪತ್ರಿಕೋದ್ಯಮದ ಡಿಪ್ಲೋಮ ವಿದ್ಯಾರ್ಥಿಯಾಗಿದ್ದೆ.
ಒಂದು ಸಂಜೆ ಆ ಕಾಲೇಜಿನ ಆಡಿಟೋರಿಯಂ ನಲ್ಲಿ ಅವರ ಭಾಷಣವಿತ್ತು.ಆಡಿಟೋರಿಯಂ ಕಿಕ್ಕಿರಿದು ತುಂಬಿತ್ತು .ನಾನು ಖುರ್ಚಿಗಳ ಎರಡು ಸಾಲಿನ ನಡುವೆ ಕುಕ್ಕರಗಾಲಲ್ಲಿ ಕುಳಿತು ಸುಮಾರು ಒಂದೂಮುಕ್ಕಾಲು ಗಂಟೆಯ ಅವರ ಅತ್ಯಂತ ಉದ್ವೇಗದ ಭಾಷಣ ಕೇಳಿದೆ.ಅವರು ಆಗ ತಾನೆ ಬಿಹಾರದ ಬಂಕಾ ಲೋಕಸಭೆ ಉಪ ಚುನಾವಣೆಯಲ್ಲಿ ಕೇಂದ್ರದ ಕಾರ್ಮಿಕ ಸಚಿವ ಬಿಂದೇಶ್ವರಿ ದುಬೆ ಎದುರು ಕೇವಲ ೩೨ ಸಾವಿರ ಮತಗಳ ಅಂತರದಿಂದ ಸೋತು ಬಂದಿದ್ದರು.ಅವರಿಗೆ ಆ ಸೋಲಿಗಿಂತಲೂ ಹೆಚ್ಚು ಘಾಸಿ ಮಾಡಿದ್ದು ಲಾಲೂ ಪ್ರಸಾದ್ ಮುಂತಾದ ನಾಯಕರ ವರ್ತನೆ.”ಅವನೊಬ್ಬ ಅಲೆಮಾರಿ.ಅವನಿಗೆ ಅವನ ಅಪ್ಪ ಯಾರು ಎಂಬುದೇ ಗೊತ್ತಿಲ್ಲ.ಹರಕಲು ಜುಬ್ಬಾ ಹಾಕಿಕೊಂಡು ನಿಮ್ಮೆದರು ನಾಟಕ ಮಾಡುತ್ತಿದ್ದಾನೆ.”ಎಂದು ಲಾಲು ಪ್ರಸಾದ್ ಹೀಯಾಳಿಸಿದ್ದರು.ಇದರಿಂದಾಗಿ ಅವರು ಕೆರಳಿ ಕೆಂಡವಾಗಿದ್ದರು.ಅದಕ್ಕೆ ಉತ್ತರ ಎಂಬಂತೆ ತಮ್ಮ ಹೋರಾಟದ ಬದುಕಿನ ವೃತಾಂತವನ್ನು ಜಾರ್ಜ್ ತಮ್ಮ ಭಾಷಣದಲ್ಲಿ ವಿವರಿಸಿದರು.
.ಒಂದು ಕಾಲದಲ್ಲಿ ಮುಂಬೈನಲ್ಲಿ ಬಹುತೇಕ ಕಾರ್ಮಿಕ ಯೂನಿಯನ್ ಗಳ ಮೇಲೆ ಹಿಡಿತ ಸಾಧಿಸಿದ್ದ ಜಾರ್ಜ್ ಕೇವಲ ತಮ್ಮ ಒಂದು ಕಿರು ಬೆರಳು ಎತ್ತಿ ತೋರಿಸಿದರೆ ಇಡೀ ಮುಂಬೈ ನಗರ ಸ್ತಬ್ದ ವಾಗುತ್ತಿತ್ತು.ಆಗ ಕಾರ್ಮಿಕ ಸಂಘಗಳ ರಾಜಕಾರಣದಲ್ಲಿ ಮರಾಠಿ ಅಸ್ಮಿತೆ ವ್ಯವಸ್ಥಿತವಾಗಿ ನುಸುಳುವಂತೆ ಮಾಡಲಾಯಿತು.ಆಗ ದತ್ತಾ ಸಾಮಂತ್ ಅವರಂತಹ ನಾಯಕರು ಹುಟ್ಟಿಕೊಂಡರು.ನಂತರ ಬಿಹಾರದಲ್ಲೂ ಜಾರ್ಜ್ ಅವರಿಗೆ ಭಾರೀ ಜನಮನ್ನಣೆ ದೊರೆಯಿತು.ಲಾಲೂ ಅಂತವರಿಗೆ ಇದನ್ನು ಸಹಿಸಲು ಆಗಲಿಲ್ಲ.ಅನಿವಾರ್ಯವಾಗಿ ಜಾರ್ಜ್ ಸಮತಾ ಪಕ್ಷದ ಮೂಲಕ ಎನ್‌ಡಿಎತೆಕ್ಕೆಗೆ ಜಾರಬೇಕಾಯಿತು.ಒಂದು ಕಾಲದಲ್ಲಿ ಜನ ಸಂಘದ ಕಡು ವಿರೋಧಿಯಾಗಿದ್ದ ಜಾರ್ಜ್ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದು ಪರಿಸ್ಥಿತಿಯ ಪಿತೂರಿಯೇ ಸರಿ.
ಜಾರ್ಜ್ ನಿಧನರಾದಾಗ ಕರ್ನಾಟಕದಲ್ಲಿ ಒಂದು ರಾಜ್ಯ ಮಟ್ಟದ ಶ್ರದ್ದಂಜಲಿ ಸಭೆ ನಡೆಯಲಿಲ್ಲ ಎಂಬ ಕೊರಗು ಇದ್ದೇಇದೆ.