ಮಾನವ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆತನಕ

Share

 

ಶ್ರಿ.ಡಾ.ಆರೂಢಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ:

ಮಾನವ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆತನಕ.

ಅವರಿವರು ನೆರವಾಗಬೇಕೆಂದು ಬಯಸುತ್ತೇವೆ,ಹಾತೊರೆಯುತ್ತೇವೆ.ಪಡೆಯಲು ಪುಸಲಾಯಿಸುತ್ತೇವೆ, ಹೊಗಳುತ್ತೇವೆ, ಸಲಾಂ ಹಾಕುತ್ತೇವೆ, ಅಂಗಲಾಚಿ ಬೇಡುತ್ತೇವೆ, ಹರಸಾಹಸ ಪಡುತ್ತೇವೆ! ಅವರಿವರು ಕೊಡುವುದೂ ಉಂಟು! ನೆರವು- ದಾನ-ಅನುದಾನ, ಅಗತ್ಯತೆ-ಲಭ್ಯತೆ-ಕೊಡುವವರ ಮನದಧೀನ. ಅವರು ಕೊಟ್ಟಷ್ಟು, ನಮಗೆ ಸಿಕ್ಕಷ್ಟು! ನೆರವು ನೀಡಿದವನ, ನೀಡಿಸಿದವನ ಹಂಗು! ನೆರವು ಪಡೆದರೆಂದು ಅವರಿವರ ಕೊಂಕು ನುಡಿ! ನೆರವಿನ ಭಾಗಾಂಶಕ್ಕಾಗಿ ಹಾತೊರೆಯುವವರ ಕಾಟ! ನೆರವು ಎಷ್ಟು ಸಿಕ್ಕರೂ ಅಷ್ಟು ಸಿಗಲಿಲ್ಲವೆಂಬ ದಾಹ! ನೆನಪಿರಲಿ :ನೆರವು ಸಾಂದರ್ಭಿಕ, ಉತ್ತೇಜಕ! ಊರುಗೋಲಿನಂತೆ ಆಸರೆ, ಅದು ಕಾಲಲ್ಲ, ನಡೆಯದು, ಕೊನೆಗಾಣಿಸದು! ಮಾನವ ನೀಡುವ ನೆರವು ಉಳಿಯುವುದು, ಮನೆತನಕ-ಮನೆ ತಲುಪುವವರೆಗೆ-ಮನೆ ಇರುವವರೆಗೆ-ಕ್ಷಣಹೊತ್ತು. ಕೊನೆತನಕ ಉಳಿಯುವುದು ದೇವರು ಕೊಟ್ಟ ನೆರವು! ಭೂಮಿ ಜಲ ಅಗ್ನಿ ಆಕಾಶ ಗಾಳಿ, ಹೃದಯ ಮೆದುಳು ಮನ ಕಣ್ಣು ಕಿವಿ ನಾಲಿಗೆ ಚರ್ಮ ಕೈ ಕಾಲು ಭಗವಂತನ ನೆರವು! ಬದುಕಿರುವವರೆಗೂ ಇವು ನಮ್ಮೊಂದಿಗೆ. ಇವನ್ನು ರಕ್ಷಿಸಿ, ಬಳಸಿ, ಶ್ರಮಪಟ್ಟುದುಡಿದು ಸಂಪಾದಿಸಿದ್ದು ನಮ್ಮದು, ಅದು ಭಗವಂತನ ಕೊಡುಗೆ! ಅದು ಚಿರಕಾಲ ನಮ್ಮೊಂದಿಗೆ. ಯಾರ ಹಂಗಿಲ್ಲ, ಕೊಂಕು ನುಡಿಯಿಲ್ಲ, ಕಾಟವಿಲ್ಲ! ನಾವು ಸಂತೃಪ್ತರಾಗಿ ಅನ್ಯರಿಗೂ ಕೊಡಬಲ್ಲೆವು! ಇಂಥ ಸ್ವಾವಲಂಬನೆಯ ಮಾರ್ಗವ ಬಿಟ್ಟು, ಆಶೆಗಣ್ಣಿನಿಂದ ಅನ್ಯರ ಮುಖ ನೋಡುತ್ತ ಕೈಯೊಡ್ಡುವುದು ತರವಲ್ಲ.

Girl in a jacket
error: Content is protected !!