ಹುಬ್ಬಳ್ಳಿ,ಮೇ,೨೬: ರಾಜ್ಯದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣವಿಫಲರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಪ್ರಯತ್ನಪಡುತ್ತಿದೆ ಆದರೆ ಅವರ ಸ್ಥಾನಕ್ಕೆ ಮತ್ತೊಬ್ಬ ಸಮರ್ಥನಾಯಕ ಆ ಪಕ್ಷದಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬೀದಿ ಕಾಳಗ ನಡೆಯುತ್ತಿದೆ. ಅವರ ಪಕ್ಷದ ಶಾಸಕರೇ ಯಡಿಯೂರಪ್ಪ ವಿರುದ್ಧವಾಗಿ ಮಾತನಾಡಿದ್ದಾರೆ.ನಾಯಕತ್ವ ಬದಲಾವಣೆಯಾದ ತಕ್ಷಣ ಸರ್ಕಾರ ಹೋಗುತ್ತದೆ ಎಂದು ಅಂದುಕೊಳ್ಳುವುದಿಲ್ಲ, ಅಲ್ಲಿ ಸಮರ್ಥ ಬದಲಿ ನಾಯಕರೇ ಇಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರನ್ನು ತೆಗೆದರೆ ಮತ್ತೊಬ್ಬ ಸಮರ್ಥ ನಾಯಕರು ಹೈಕಮಾಂಡ್ ಗೆ ಸಿಗುತ್ತಿಲ್ಲ, ಅಲ್ಲಿ ಯಾರೂ ಇಲ್ಲ, ಹೀಗಾಗಿ ಹೈಕಮಾಂಡ್ ಸುಮ್ಮನೆ ಕುಳಿತಿದೆ ಎಂದು ನನ್ನ ಭಾವನೆ ಎಂದರು.
ಬಿಜೆಪಿಗೆ ೨೦೧೮ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಬರಲಿಲ್ಲ, ೧೦೪ ಜನ ಶಾಸಕರಿದ್ದರು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರಿಗೆ ರಾಜೀನಾಮೆ ಕೊಡಿಸಿ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಅವರನ್ನು ಗೆಲ್ಲಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಹೀಗಾಗಿ ಈ ಅರ್ಥದಲ್ಲಿ ಸಚಿವ ಸಿ ಪಿ ಯೋಗೇಶ್ವರ್ ಇದು ಮೂರು ಪಕ್ಷದ ಸರ್ಕಾರ ಎಂದು ಹೇಳಿರಬಹುದು ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಈ ಸರ್ಕಾರ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಜನರಿಗೆ ಯಾವುದು ಅತ್ಯಗತ್ಯವೋ ಅದನ್ನು ಮಾಡುತ್ತಿಲ್ಲ ಕೊರೋನಾ ಎರಡನೇ ಅಲೆ ಬಂದ ಮೇಲೆ ಆಕ್ಸಿಜನ್ ಬೆಡ್, ಐಸಿಯು ಬೆಡ್ ಜನತೆಗೆ ಅವಶ್ಯಕವಾಗಿದ್ದು, ಅದು ಸಿಗುತ್ತಿಲ್ಲ. ಇವು ಸಿಗದೆ ಬಹಳ ಜನ ಸಾಯುತ್ತಿದ್ದಾರೆ, ಕೊರೋನಾದಿಂದ ಸಾಯುವವರ ಸಂಖ್ಯೆ ಈಗಲೂ ಕಡಿಮೆಯಾಗಿಲ್ಲ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೂಡ ರೋಗಿಗಳು ಆಕ್ಸಿಜನ್ ಇಲ್ಲದೆ ಸತ್ತುಹೋದರು, ಅವರಿಗೇನು ಸರ್ಕಾರ ಪರಿಹಾರ ಕೊಟ್ಟಿದೆ ಎಂದು ಪ್ರಶ್ನಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ಕೇಸು ಹಾಕಿ ಶಾಸಕ ರಮೇಶ್ ಜಾರಕಿಹೊಳಿಯವರಿಗೆ ಶಿಕ್ಷೆಯಾಗಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ರಮೇಶ್ ಜಾರಕಿಹೊಳಿಯವರಿಗೆ ರಕ್ಷಣೆ ನೀಡುತ್ತಿದ್ದು ಇದು ಅನೈತಿಕ, ಹೀಗಾಗಿ ಸಚಿವ ಬೊಮ್ಮಾಯಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ರಮೇಶ್ ಜಾರಕಿಹೊಳಿಯವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.