ಮತ್ತೆ ಆ ದಿನಗಳು ಬಂದಾವೇ?
ಆಗ ನಮ್ಮ ಮನೆಯಲ್ಲಿ ಹಿತ್ತಾಳೆ, ತಾಮ್ರ, ಮತ್ತು ಅಲ್ಯೂಮಿನಿಯಂ ಪಾತ್ರೆಗಳೇ ಹೆಚ್ಚು. ಮನೆಯಲ್ಲಿ ಸಹ ಅಮ್ಮ ಮಾಡುತ್ತಿದ್ದ ಮುದ್ದೆ ಪಾತ್ರೆ ತಾಮ್ರದ್ದು, ಸಿಹಿ ನೀರು ತುಂಬುವ ಕೊಳಗ ತಾಮ್ರದ್ದೇ. ಕೆರೆಯ ಕಟ್ಟೆಯ ಮೇಲಿದ್ದ ಬಾವಿಯಿಂದ ಸಿಹಿನೀರು ತರುತ್ತಿದ್ದ ಅಕ್ಕಂದಿರು ತಲೆಯ ಮೇಲೆ ಹೊರುತ್ತಿದ್ದ ಗುಂಡಿ ಮತ್ತು ಕಂಕುಳಲ್ಲೊಂದು ಹೊತ್ತು ತರುತಿದ್ದ ಬಿಂದಿಗೆ ಹಿತ್ತಾಳೆಯವು. ಇವು ಖಾಲಿ ಇದ್ದರೂ ಹೊರಲು ಸ್ವಲ್ಪ ತೂಕವೇ ಇರುತ್ತವೆ. ನನ್ನ ಅಕ್ಕಂದಿರೊಡನೆ ನಾನು ಮತ್ತು ತಂಗಿ ನೀರು ಸೇದುವ ಹಗ್ಗವನ್ನು ಹೊತ್ತುಕೊಂಡು ಹೋಗುತ್ತಿದ್ದೆವು. ಮೊದಲು ಬಾವಿಯ ಗಾಲಿಯನ್ನೂ ಸಹ ನಾವೇ ತೆಗೆದುಕೊಂಡು ಹೋಗಬೇಕಿತ್ತು. ನಂತರ ಯಾರೋ ಮರದ ಗಾಲಿಗಳನ್ನು ಗಟ್ಟಿಯಾಗಿ ಮಾಡಿಸಿದ್ದರು. ನೀರಿಗೆಂದು ಬರುವವರು ಬಿಂದಿಗೆಗಳಲ್ಲಿ ಹುಣಸೆಹಣ್ಣು ಸ್ವಲ್ಪ ಹಾಕಿಕೊಂಡೇ ಬಂದು ಕೊಡಗಳನ್ನು ಬಾವಿಯ ಪಕ್ಕದಲ್ಲೇ ಹರಟುತ್ತಾ ಉಜ್ಜಿ ಬೆಳಗುತ್ತಿದ್ದರು. ಆಗ ಹಿತ್ತಾಳೆ ಬಿಂದಿಗೆಗಳು ಬಂಗಾರದಂತೆ ಫಳಫಳ ಹೊಳೆಯುತ್ತಿದ್ದವು.ಅವಸರದಲ್ಲಿ ಬರುವ ಹೆಣ್ಣು ಮಕ್ಕಳು ಮನೆಯಲ್ಲೇ ಬಿಂದಿಗೆಗಳನ್ನು ಬೆಳಗಿಗೊಂಡು ಬರುತ್ತಿದ್ದರು. ನಾನು ಆಗ ಬಹುಶಃ ಹತ್ತು- ಹನ್ನೊಂದು ವರ್ಷ ಇರಬಹುದು. ಅದಕ್ಕೇ ಈ ನೆನಪು ಸದಾ ಕಾಡುತ್ತದೆ.
ದಿನಗಳು ಕಳೆದಂತೆ ನಮ್ಮ ಹಳ್ಳಿಯ ಕೆಲವರು ಬೆಳ್ಳಿಯನ್ನು ಮೀರಿಸಿ ಹೊಳೆಯುವ ಸ್ಟೀಲ್ ಬಿಂದಿಗೆ, ಗುಂಡಿಗಳನ್ನು ಬಾವಿ ನೀರಿಗೆ ಬಂದಾಗ ತರುತ್ತಿದ್ದರು. ಹಗುರವಾಗಿರುವ ಬಿಂದಿಗೆಗಳು ಎಲ್ಲರಿಗೂ ಹೊಸತೇ ಸ್ಟೀಲ್ ಅನುಭವ. ನಾನು ಮತ್ತು ತಂಗಿ ಬೆರಗಿನಿಂದ ನೋಡುತ್ತಿದ್ದೆವು. ಸಿಹಿನೀರ ಬಾವಿಯ ಬಳಿ ಹೆಚ್ಚು ಜನ ಇದ್ದರೆ ಪಾಳಿ ಹಚ್ಚುತ್ತಿದ್ದರು. ಸ್ಟೀಲ್ ಬಿಂದಿಗೆಯವರ ಪಾಳಿ ದೂರ ಇದ್ದರೆ ನಾನು ಅವರ ಬಿಂದಿಗೆ ಬಳಿ ಹೋಗಿ ನನ್ನ ಪ್ರತಿಬಿಂಬ ಅದರಲ್ಲಿ ನೋಡುತ್ತಾ ನಗುತ್ತಿದ್ದೆ, ಬಾಯಲ್ಲಿ ಗಾಳಿ ತುಂಬಿ ಕೆನ್ನೆ ಉಬ್ಬಿಸುತ್ತಿದ್ದೆ, ನಾಲಿಗೆ ಹೊರಚಾಚಿ, ಕಣ್ಣು ಅಗಲಿಸಿ, ಕತ್ತು ಪಕ್ಕಕ್ಕೆ ತಿರುಗಿ, ಹಲ್ಲು ಗಿಂಚುತ್ತಾ ಚೇಷ್ಟೆ ಮಾಡುತ್ತಿದ್ದರೆ ಅಕ್ಕ ನನ್ನ ನೋಡಿ “ಕೋತಿ.. ಬಾರೇ ಈಕಡೆ” ಎಂದು ಗದರಿಸುತ್ತಿದ್ದಳು.
ವಾರಕ್ಕೋ ಹದಿನೈದು ದಿನಕ್ಕೋ ಒಂದು ಮಕ್ಕರಿಯಲ್ಲಿ ಸ್ಟೀಲ್ ಪಾತ್ರೆಗಳನ್ನು ಹೊತ್ತು ಹಳ್ಳಿಗೆ ಬರುತ್ತಿದ್ದ ಸರಸಮ್ಮನ ಕೂಗು “ಸ್ಟೀ…..ಲ್ ಪಾ…ತ್ರೇ…ಸಾ….ಮಾ…ನೇ…ಯ್…” ಕೇಳಿದೊಡನೆ ರಸ್ತೆಯಲ್ಲಿ ನನ್ನೊಡನೆ ಆಟವಾಡುತ್ತಿದ್ದ ನಾಗು, ಮೈಥಿಲಿ, ಗಿರಿಜಾ, ಜಯಲಕ್ಷ್ಮೀ,, ಅವರನ್ನು ತೊರೆದು ಸರಸಮ್ಮನನ್ನು ‘ನಮ್ಮ ಮನೆಗೆ ಬಾ’ ಎಂದು ಕರೆದುಕೊಂಡು ಬಂದಿದ್ದೆ. ಮಕ್ಕರಿ ಹೊತ್ತು ಬಂದ ಆಕೆಯನ್ನು ಕಂಡು ಅಮ್ಮ ಅಪ್ಪ ‘ಏನು?’ ಎನ್ನುವಂತೆ ನೋಡುತ್ತಿದ್ದರೆ ನಾನು ದೀನಳಾಗಿ ಅಮ್ಮನನ್ನು ಅಮ್ಮ ‘ಏನಾದರೂ ತಗೋಮ್ಮ’ ಎಂದು ಮೌನವಾಗಿ ಕೇಳುತ್ತಿದ್ದದ್ದು ಅಮ್ಮನಿಗೆ ಅರ್ಥವಾಗಿರಬೇಕು. ‘ತುಂಬಾ ಬಿಸಿಲಿದೆ ನೀರೇನಾದರು ಕುಡಿಯಲು ಕೊಡಲೇ?’ ಎಂದು ಅಮ್ಮ ಸರಸಮ್ಮನನ್ನು ಕೇಳಿದಳು. ಆಕೆಯೂ ಹೊತ್ತಿದ್ದ ಭಾರದ ಮಕ್ಕರಿ ಇಳಿಸಿ ಅಮ್ಮ ಕೊಟ್ಟ ನೀರು ಕುಡಿದು ಸುಧಾರಿಸಿಕೊಳ್ಳತೊಡಗಿದಾಗ ಅಪ್ಪ ಆ ಕಡೆ ಸರಿದುಹೋದರು.
ಮಕ್ಕರಿಯಲ್ಲಿ ತರತರದ ಪುಟ್ಟಪುಟ್ಟ ಪಾತ್ರೆಗಳು. ಅದೂ ಎಲ್ಲವೂ ಸ್ಟೀಲಿನವು. ಮಕ್ಕರಿಯ ಅಂಚಿನ ಸುತ್ತಲೂ ಉದ್ದುದ್ದ ಜೋಡಿಸಿದ್ದ ಸೌಟು, ಕುರುಪಿ, ಅನ್ನದಹಿಡಿಗಳು ಅವುಗಳ ಆಸರೆಯಲ್ಲಿ ಹೊರಗೆ ಬೀಳದೆ ಒಳಗಡೆ ಭದ್ರವಾಗಿ ಕೂತ ಪಾತ್ರೆಗಳು ಅಕ್ಕ ಅಮ್ಮನಿಗೂ ಅವನ್ನು ನೋಡುವುದು ಖುಷಿಕೊಟ್ಟಿತು. ಅಂತೂ ನಾಲ್ಕು ಚಿಕ್ಕ ಚಿಕ್ಕ ಕಾಫಿ ಕಪ್ ಗಳು ಮತ್ತು ಒಂದು ತಟ್ಟೆ ತೆಗೆದುಕೊಂಡಳು ಅಮ್ಮ. ನನಗೋ ಖುಷಿಯೋ ಖುಷಿ. ತಟ್ಟೆಯಲ್ಲಿ ನನ್ನ ಮುಖ ಕಾಣುತ್ತದೆ! ಆಗ ಮನೆಯಲ್ಲಿ ನಾವು ಚಿಕ್ಕ ಮಕ್ಕಳೂ ಕನ್ನಡಿ ಹೊಡೆದು ಹಾಕುವೆವು ಎಂದು ಒಂದು ಕನ್ನಡಿಯನ್ನು ಗೋಡಿಗೇ ಅಂಟಿಸಿ ಫಿಕ್ಸ್ ಮಾಡಿದ್ದರು. ಅಕ್ಕಂದಿರೇನೋ ಎತ್ತರ ಬೆಳೆದಿದ್ದರು ಕಾಣುತ್ತಿತ್ತು. ನನಗೆ ಮತ್ತು ನನಗಿಂತ ಚಿಕ್ಕ ತಂಗಿ ತಮ್ಮಂದಿರುಗಳಿಗೆ ಕಾಣುತ್ತಿರಲಿಲ್ಲ. ಒಂದು ಯಾವುದಾದರೂ ಡಬ್ಬವೋ, ದಿಂಬುಗಳನ್ನು ತಂದು ಅದರ ಮೇಲೆ ನಿಂತು ಎಟುಕಿಸಿಕೊಂಡು ನೋಡಬೇಕಾಗುತ್ತಿತ್ತು. ಅಕ್ಕಂದಿರೇ ನಮಗೆ ತಲೆಬಾಚಿ ಮುಖಕ್ಕೆ ಬೊಟ್ಟು ಇಡುತ್ತಿದ್ದ ಕಾರಣ ನಮಗೆ ಕನ್ನಡಿಯ ಅವಶ್ಯಕತೆ ಇರಲಿಲ್ಲ. ಆದರೂ ನಮ್ಮ ರೂಪ ಹೇಗಿದೆ ಎಂದು ಸ್ಟೀಲ್ ಪಾತ್ರೆಗಳು ಬೇಗ ನಮಗೆ ಎಟುಕಿಸಿದ್ದವು.
ತೂಕವಾಗಿದ್ದ ತಾಮ್ರ ಹಿತ್ತಾಳೆ ಕಂಚು ಹೋದವು, ಹಗುರವಾದ ಸ್ಟೀಲ್ ಬಂತು. ಸ್ಟೀಲ್ ನಂತರ ಅದಕ್ಕೂ ಹಗುರವಾದ ಪ್ಲಾಸ್ಟಿಕ್ ಬಂದಿತು. ಆಗಿದ್ದ ಲೋಹದ ಪಾತ್ರೆಗಳಂತೆಯೇ ಜೀವನ ಮತ್ತು ಮನುಷ್ಯರೂ ತೂಕವಿದ್ದರು. ಬರಬರುತ್ತಾ ಹಗುರಾಗಿ ಸ್ಟೀಲ್ ನಂತೆ ಮನುಷ್ಯರೂ ಬದಲಾದರು. ಮತ್ತೂ ಮುಂದುವರೆದು ಪ್ಲಾಸ್ಟಿಕ್ ಜೀವನ ಬಂದುಬಿಟ್ಟಿತು. ಈಗ ಮತ್ತೆ ತಾಮ್ರದ, ಹಿತ್ತಾಳೆಯ, ಕಂಚಿನ ಪಾತ್ರೆಗಳು ಬರಬೇಕಿದೆ ಬರುತ್ತಿವೆ. ಆದರೆ ಮತ್ತೆ ಆ ದಿನಗಳು ಬಂದಾವೇ?