ಮನೆಕಟ್ಟಿ ನೋಡು ,ಮದುವೆ ಮಾಡಿ ನೋಡು

Share

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ

ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ.

ಸಿದ್ಧಸೂಕ್ತಿ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

ವಾಸಕ್ಕೆ ಮನೆ, ಆಸರೆಗೆ ಮದುವೆ, ಎಲ್ಲರಿಗೂ ಬೇಕು. ಎಲ್ಲರೂ ಮನೆ ಕಟ್ಟಲಾಗದು. ಬಾಡಿಗೆ ಮನೆಯಲ್ಲಿ, ಅಲ್ಲಿಲ್ಲಿ ಜೀವ ಅಂತ್ಯ!ಕೆಲವರಿಗೆ ಮದುವೆ ಮಾಡಲಾಗದು. ಕನ್ಯೆ ವರ ಸಿಗರು, ಸಿಕ್ಕರೂ ಒಪ್ಪರು. ಒದ್ದಾಟದ ಬದುಕಿಗಂಜಿ ಮದುವೆ ಬೇಡೆಂಬುವರು ಕೆಲರು. ಮದುವೆ ಸ್ವಾತಂತ್ರ್ಯದ ತಡೆ, ಅಡ್ಡದಾರಿಗನ ಸರಿ ದಾರಿಗೆ ತಳ್ಳುವ ಕೋಲು, ದನಗಳ ಕೊರಳಲಿ ಕಟ್ಟುವ ಗುದಿ ! ಅದಕ್ಕೇ ಹೇಳುವುದು “ಮಾಡ್ತಿನಿ ಮದುವೆ”!ಮನೆ ಮಾಡಲು ಬೇಕು ನಿವೇಶನ ಹಣ ಸಾಮಗ್ರಿ,ಬಡಗಿ ಬೋವಿ ವಿದ್ಯುತ್ ಕರ್ಮಿ ಬಣ್ಣಗಾರಾದಿ ಕಾರ್ಮಿಕರು. ಅವನಿಲ್ಲದಿರೆ ಇಲ್ಲ ಇವನ ಕೆಲಸ, ಇವನಿಲ್ಲದಿರೆ ಇಲ್ಲ ಅವನ ಕೆಲಸ. ಅವ ಸಿಕ್ಕರೆ ಇವ ಸಿಗಲಾರ, ಇವ ಸಿಕ್ಕರೆ ಅವ ಸಿಗಲಾರ. ಜನ ಹೊಂದಿಸಿ ಮಾಡುವ ಕಾರ್ಯ ಬಲು ಕಷ್ಟ! ಬದುಕಿಗೆ ಜನ ಬೇಕೆಂಬ ಅರಿವಾಗುವುದು ಮನೆ ಮದುವೆ ಮಾಡುವಾಗ! ಸಾಲ ಮಾಡಿ ಬೆವರ ಹರಿಸಿ ಮನೆ ಕಟ್ಟಿ ಬಳಿಕ ಪ್ರತಿಷ್ಠೆ ಜನತೃಪ್ತಿಗೆ ಅದ್ದೂರಿ ಗೃಹಪ್ರವೇಶ! ವರ ಕನ್ಯೆಯ ಶೋಧಿಸಿ ಒಪ್ಪಿಸಿ ಸಾಲ ಮಾಡಿ ಅದ್ದೂರಿ ಮದುವೆ! ಝಗ ಝಗಿಸುವ ಅಲಂಕಾರ! ವೇಷಭೂಷಣ! ಭೂರಿ ಭೋಜನ! ಇಷ್ಟಾದರೂ ತಪ್ಪದು ಅತೃಪ್ತರ ಕೊಂಕು ನುಡಿ! “ಜೀವನ ಇಷ್ಟೇ, ಇದು ನಿಸ್ಸಾರ! ಯಾರಿಗಾರೂ ಇಲ್ಲ, ಜನ ಸ್ವಾರ್ಥಿಗಳು, ನಮ್ಮ ಒಳಿತು ಕೆಡುಕುಗಳಷ್ಟೇ ನಮ್ಮವು” ಎಂಬ ವೇದಾಂತದ ಅನುಭವದ ರಸಪಾಕ ಹೊರಹೊಮ್ಮುವುದು ಆಗ! ನೆನಪಿರಲಿ, ಮನೆ ಕಟ್ಟೋಣ, ಮದುವೆ ಮಾಡೋಣ. ನಮ್ಮ ಅಗತ್ಯ, ನಮ್ಮ ತೃಪ್ತಿ! ಇತರತೃಪ್ತಿಗೆ ಸಾಲ ಕೂಡದು!
ಬೆವರನು ಸುರಿಸೋಣ, ನಮ್ಮಯ ನೆಲೆಯನು ಕಾಣೋಣ!

Girl in a jacket
error: Content is protected !!