ಬೆಂಗಳೂರು, ಮೇ. ೨೫: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಈಗ ಬೆಡ್‌ಬ್ಲಾಕ್ ದಂಧೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಜೊತೆಯಲ್ಲೆ ಸುದ್ದಿಗೋಷ್ಠಿ ನಡೆಸಿದ್‌ದ ಶಾಸಕ ಸತೀಶ್ ರೆಡ್ಡಿಗೆ ಈಗ ತೀವ್ರ ಮುಖಭಂಗವಾದಂತಾಗಿದೆ.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಿಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಹಿರಂಗ ಪಡಿಸಿದ್ದರು. ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಅಂತಿಮವಾಗಿ ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಹಲವರನ್ನು ಬಂಧಿಸಿದ್ದರು. ದಕ್ಷಿಣ ವಿಭಾಗ ಹಾಗೂ ಬೊಮ್ಮನಹಳ್ಳಿ ವಲಯದ ಕೋವಿಡ್ ವಾರ್ ರೂಮ್‌ನಲ್ಲಿ ಸಿಬ್ಬಂದಿಗೆ ಬೆದರಿಸಿ ಬೆಡ್ ಹಂಚಿಕೆ ಮಾಡಿದ್ದ ಆರೋಪ ಬಾಬು ಮೇಲೆ ಕೇಳಿ ಬಂದಿತ್ತು. ಈ ಕುರಿತ ಕೆಲವು ಸಿಸಿಟಿವಿ ದೃಶ್ಯಗಳು ಹೊರಗೆ ಬಂದಿದ್ದವು. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಬಾಬುಗೆ ನೋಟಿಸ್ ನೀಡಿದ್ದರು. ಆದರೂ ಬಂದಿರಲಿಲ್ಲ. ಇದೀಗ ಕೋವಿಡ್‌ನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ಬಾಬುನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಕೋವಿಡ್ ವಾರ್ ರೂಮ್ ಸಿಬ್ಬಂದಿಯನ್ನು ಹೆದರಿಸಿ ತನಗೆ ಬೇಕಾದವರಿಗೆ ಐಸಿಯು ಬೆಡ್ ಕೊಡಿಸಿದ್ದನ್ನು ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಸಿಸಿಟಿವಿ ದೃಶ್ಯಗಳನ್ನು ಸಾಕ್ಷಿಗಳನ್ನಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಯನ್ನು ಸಹ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಪೋಷಕರಿಗೆ ಕೋವಿಡ್ ಬೆಡ್ ಪಡೆಯಲು ಸರ್ಕಾರ ರೂಪಿಸಿದ್ದ ನಿಯಮಗಳನ್ನು ಗಾಳಿಗೆ ತೂರಿ ತನಗೆ ಬೇಕಾದವರಿಗೆ ಶಾಸಕರು ಬೆಡ್ ಕೊಡಿಸಿದ್ದರು. ಈ ಕೃತ್ಯಕ್ಕೆ ಬಾಬುನನ್ನು ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಹೀಗಾಗಿ ಇದು ಶಾಸಕರಿಗೆ ಮುಳುವಾಗುವ ಲಕ್ಷಣ ಗೋಚರಿಸುತ್ತಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಅನ್ಯ ಕೋಮಿನ ಹುಡುಗರು ಶಾಮೀಲಾಗಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಇದೀಗ ಸ್ವತಃ ಶಾಸಕರ ಆಪ್ತನೇ ಬೆಡ್ ಬ್ಲಾಕಿಂಗ್ ನಲ್ಲಿ ಸಿಕ್ಕಿಬಿದ್ದಿರುವುದು ಭಾರೀ ಮುಜಗರಕ್ಕೀಡಾಗುವಂತಾಗಿದೆ.