‘ಓಂ’ಕಾರ ಸಾಧನೆಯೇ ಪ್ರಣವೋಪಾಸನೆ

Share

ಶ್ರೀ ಆರೂಢಭಾರತೀ ಸ್ವಾಮೀಜಿ ಸಂಸ್ಕೃತ ಪಾಂಡಿತ್ಯ ಪಡೆದಿದ್ದು ಧಾರ್ಮಿಕತೆಯ ಲೌಕಿಕ-ಅಲೌಕಿಕ ಬದುಕಿನ ತರ್ಕಗಳೊಂದಿಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ, ಹಾಗೆಯೇ ಈ ವಾರ ಶ್ರೀಗಳು ಬಾಲಕ ಸಿದ್ಧ ಪಡೆದ ‘ಓಂಕಾರದ ಸಾಧನೆಯನಿಜಸ್ವೂರಪ ಕುರಿತು ವಿವರಿಸಿದ್ದಾರೆ ಈ ವಾರದ ಜ್ಞಾನ ದೀಪ್ತಿ ಅಂಕಣದಲ್ಲಿ.

ಶ್ರೀ ಆರೂಢಭಾರತೀ ಸ್ವಾಮೀಜಿ
ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ

ಆರೂಢದರ್ಶನ-೨
‘ಓಂ’ಕಾರ ಸಾಧನೆಯೇ ಪ್ರಣವೋಪಾಸನೆ

ತಂದೆ ಗುರುಶಾಂತಪ್ಪನು ಪುತ್ರನಾದ ಸಿದ್ಧಬಾಲಕನನ್ನು ಶಾಲೆಗೆ ಕರೆದು ತಂದನು.‘ಸಿದ್ಧನಿಗೆ ಐದು ವರ್ಷಗಳಾಗಿರುವುದುರಿಂದ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕು ಎಂದು ಗುರುಗಳಲ್ಲಿ ವಿನಂತಿಸಿ, ಅವರಿಗೆ ಒಪ್ಪಿಸಿ ಮನೆಗೆ ನಡೆದನು. ಗುರುಗಳು ಸಹಜವಾಗಿ ಎಲ್ಲಾ ಹುಡುಗರಿಗೂ ಹೇಳಿಕೊಡುವಂತೆ ಬಳಪಿನಿಂದ ಹಲಗೆಯಲ್ಲಿ ‘ಓಂ ಕಾರವನ್ನು ಬರೆದುಕೊಟ್ಟರು,ಇದನ್ನು ಮೇಲಿಂದ ಮೇಲೆ ತೀಡಬೇಕು ಎಂದರು.ಸಿದ್ಧ ಅದಕ್ಕೊಪ್ಪಲಿಲ್ಲ.  ಅದರ ಅರ್ಥ ತಿಳಿಸಿಕೊಟ್ಟ ಬಳಿಕ ತಿದ್ದುವೆನು ಎಂದು ಹಠಹಿಡಿದನು. ಅ+ಉ+ಮ್=ಓಂ ಎಂದು ವ್ಯಾಕರಣವನ್ನು ಹೇಳಿದರು ಗುರುಗಳು. ನಾನು ಕೇಳಿದ್ದು ‘ಓಂ ಕಾರದ ಅರ್ಥವನ್ನು ಹೊರತು ವ್ಯಾಕರಣವನ್ನಲ್ಲ ಎಂದನು ಸಿದ್ಧ.ಗುರುಗಳು ತಬ್ಬಿಬ್ಬಾದರು. ನಿನಗೆ ಗೊತ್ತಿರುವಂತಿದೆ ‘ ನೀನೇ ಹೇಳು ಎಂದರು. ಸಿದ್ಧನು ಹೇಳಲಾರಂಭಿಸಿದ:
ನಮ್ಮ ಭಾರತೀಯ ಪ್ರಾಚೀನ ವೇದಗಳು ಮೂರು. ಅವು ಋಗ್ವೇದ,ಯಜರ್ವೇದ ಮತ್ತು ಸಾಮವೇದ.ತಪಸ್ವಿಗಳಾದ ಬ್ರಹ್ಮರ್ಷಿಗಳ ಮುಖದಿಂದ ಹೊರಹೊಮ್ಮಿದವು ಇವು. ಸೃಷ್ಟಿ,ಸ್ಥಿತಿ,ಲಯ, ಜೀವಾತ್ಮ ಪರಮಾತ್ಮ ಜಗತ್ತುಗಳ ವಿಚಾರ ವಿಮರ್ಶೆ ಇಲ್ಲಿದೆ, ‘ಓಂ ಎಂಬಲ್ಲಿರುವ ಒಂದೊಂದು  ಅಕ್ಷರ  ಒಂದೊಂದು ವೇದದ ಸಂಕೇತ .  ಹೀಗಾಗಿ ಒಂದೊಂದು ವೇದದ ತತ್ತ್ವಸಾರವೇ ಒಂದೊಂದು ಅಕ್ಷರದ ಗೂಢಾರ್ಥ ಸತ್‌ಚಿತ್  ಆನಂದ ನಿತ್ಯ ಪರಿಪೂರ್ಣವಾದ, ನಿರ್ಗುಣ-ನಿಷ್ಟ್ರಿಯವಾದ, ನಾಮರೂಪ ರಹಿತವಾದ,ಪರಬ್ರಹ್ಮ ಪರಮಾತ್ಮನ ವಿವರ್ತ ವಿಕಾಸವೇ ಇದೆಲ್ಲವಾಗಿದೆ ಎಂಬುದು ವೇದಗಳ ಗೂಢಾರ್ಥ . ಓಂಕಾರದ
ಅರ್ಥವೂ ಇದೇ ಆಗಿದೆ.ಆದ್ದರಿಂದ ‘ಓಂ ಎಂದರೆ ಪರಮಾತ್ಮ.ಇಲ್ಲಿನ ಅ ಉಮ್ ಎಂಬ ಮೂರು ಅಕ್ಷರಗಳು ಸೃಷ್ಟಿಕರ್ತನಾದ ಬ್ರಹ್ಮನ, ಸ್ಥಿತಿಕರ್ತನಾದ ವಿಷ್ಣುವಿನ,ಲಯಕರ್ತನಾದ ಮಹೇಶ್ವರನ ಸಂಕೇತಗಳೂ ಹೌದು. ಓಂ ಎಂದರೆ ತ್ರಿಮೂರ್ತಿಗಳು ಎಂದರ್ಥ. ಇವು ಸೃಷ್ಟಿ,ಸ್ಥಿತಿ, ಲಯಗಳ ಪ್ರತೀಕವೂ ಹೌದು. ಅಕಾರದಿಂದ ಪ್ರಾರಂಭ ನಡುವೆ ಉಕಾರದ ಇರುವಿಕೆ,ಮ್‌ಕಾರದಿಂದ ಅಂತ್ಯ.‘ಓಂ ಇದು ಸೃಷ್ಟಿಯ ಆರಂಭದ ನಾದ.ವಾದ ಎಂದರೆ ಧ್ವನಿ-ಶಬ್ದ. ಬಿಂದು ಎಂದರೆ ಪ್ರಕಾಶ. ಕಲೆ ಎಂದರೆ ರೂಪ. ವಾದ ಬಿಂದು  ಕಲೆಗಳಿಂದ ಜಗದ ರಚನೆ.ಓಂಕಾರ ನಾದ ರೂಪ.ನಾದ ಬಿಂದು ಕಲೆಗಳ ಪ್ರತೀಕ ಪ್ರಕೃತಿಯ ಎಲ್ಲೆಡೆ ‘ಓಂ ಕಾರ ನಾದ ಬಿಂದು ಕಲೆಗಳ ಪ್ರತೀಕ ಪ್ರಕೃತಿಯ ಎಲ್ಲೆಡೆ ‘ಓಂ ಕಾರ ನಾದ ತುಂಬಿದೆ.ನಮ್ಮ ಎಲ್ಲಾ ಇಂದ್ರಿಯಗಳನ್ನು ಸ್ತಬ್ಧಗೊಳಿಸಿ, ಕಿವಿಯ ಮೇಲೆ ಬೆರಳಿಟ್ಟು ಮುಚ್ಚಿಕೊಂಡು ಗಮನವಿಟ್ಟು ಆಲಿಸಿ! ಭೂಮಿಗೆ ಕಿವಿಗೊಟ್ಟು ಕೇಳಿ! ಅವ್ಯಕ್ತವಾದ ಧ್ವನಿ ತರಂಗಗಳು ಗುಂಯ್‌ಗುಡುತ್ತವೆ. ಇದನ್ನೇ ನಮ್ಮ ಹಿರಿಯರು ‘ಓಂ ಎಂದು ಸಂಬೋಧಿಸಿದ್ದು! ಇದೇ ಆದಿನಾದ! ಈನಾದವೇ ನಾಮವಾಯಿತು.ಛಾಂದೋಗ್ಯ ಉಪನಿಷತ್ತಿನ ಆರನೇ ಆಧ್ಯಾಯದ ಮೂರನೇಯ ಖಂಡದ ಎರಡನೆಯ ಮಂತ್ರವು ಇದನ್ನು ಹೀಗೆ ವಿವರಿಸಿದೆ:
ಸೇಯಂ ದೇವತೈಕ್ಷತ ಹಂತಾಹಮಿಮಾಸ್ತಿಸ್ರೋ
ದೇವತಾ ಅನೇನ ಜೀವೇನಾತ್ಮನಾನುಪ್ರವಿಶ್ಯ
ನಾಮರೂಪೇ ವ್ಯಾಕರವಾಣೀತಿ||
ಆ ದೇವತೆಯು ಹೀಗೆ ಆಲೋಚಸಿತು: ಅಹೋ ನಾನು ಈ ಅಗ್ನಿ ನೀರು ಪೃಥ್ವಿಗಳಲ್ಲಿ ಚೈತನ್ಯಾಂಶದಿಂದ ಬೆರೆತು ನಾಮರೂಪಗಳನ್ನು ರಚಿಸುತ್ತೇನೆ ಎಂದು ಮೊದಲು ನಾಮ,ಅನಂತರ ಅದಕ್ಕನುಗುಣವಾದ ಆಕೃತಿ ಆ ಕಾರ . ಇದು ಸೃಷ್ಟಿಯ ಪ್ರಕ್ರಿಯೆ .ನಾಮದ  ಹಿಂದಿನ ಸೂಕ್ಷ್ಮ ಸ್ವರೂಪವೇ ನಾದ. ಅದುವೇ ‘ಓಂಕಾರ. ಇದೇ ಪ್ರಣವ, ಇದಕ್ಕೆ ನೂರಾರು ಹೆಸರು ಸಾವಿರಾರು ಅರ್ಥಗಳು. ಇದು ಅತ್ಯಂತ ಪವಿತ್ರ. ಪ್ರತಿ ಮಂತ್ರದ ಪ್ರಾರಂಭದಲ್ಲಿಯೂ ಇದನ್ನು ಬಳಸಲಾಗುವುದು. ಆದ್ದರಿಂದಲೇ ಇದಕ್ಕೆ ಸಕಲ ಮಂತ್ರಗಳ ಬೀಜಾಕ್ಷರ ಎನ್ನುತ್ತೇವೆ. ಹಿಂದು -ಸಿಖ್ಖ-ಬೌದ್ಧ-ಜೈನರೆಲ್ಲರೂ ಈ ಮಂತ್ರವನ್ನು ಬಳಸುತ್ತೇವೆ. ಇದರ ಮಾನಸಿಕ ಜಪದಿಂದ ಅಂತರಂಗದ ಶುದ್ಧಿಯಾಗುವುದು. ಒಳ ಹೊರ ಉಸಿರಾಟದ ಜೊತೆಗೆ ಇದರ ಅನುಸಂಧಾನ ಮಾಡಿದರೆ ಅದು ಶ್ರೇಷ್ಠ ಪ್ರಣಾಯಾಮವಾಗುವುದು. ಇದು ದೀರ್ಘವಾದ ಆರೋಗ್ಯಯುತ ಆಯುಷ್ಯಕ್ಕೆ ಸೋಪಾನ! ಈ ಓಂಕಾರ ಸಾಧನೆಯೇ ಪ್ರಣವೋಪಾಸನೆ ಈ ಉಪಾಸನೆಯನ್ನು ಯಾರು ಬೇಕಾದರೂ ಮಾಡಬಹುದು.ಇದಕ್ಕೆಮಡಿ-ಮೈಲಿಗೆ ಸ್ತ್ರೀ-ಪುರುಷಲಿಂಗ,ಆ ಜಾತಿ ಈ ಜಾತಿ,ಆ ಧರ್ಮ ಈ ಧರ್ಮಗಳ ಯಾವ ಭೇದವೂ ಇಲ್ಲ-ಹೀಗೆ ಸಾಗಿತ್ತು ಸಿದ್ಧಬಾಲಕನ ಓಂಕಾರಾರ್ಥ  ನಿರೂಪಣೆಯ ಕ್ರಮ,ಶಾಲೆಯ ಗುರುಗಳು,ಅಲ್ಲಿನ ವಿದ್ಯಾರ್ಥಿಗಳು,ಆಶ್ಚರ್ಯಚಿಕಿತರಾದರು. ಶಿಕ್ಷಕನು ಸಿದ್ಧನಿಗೆ ತೆಲೆಬಾಗಿದನು! ನಾನಲ್ಲ ನಿನಗೆ ಗುರು ನೀನೇ ನಿನಗೆ ಗುರು, ನೀನಿಲ್ಲಿ ಕಲಿಯುವುದು ಏನೂ ಇಲ್ಲಎಂದನು.ಸಿದ್ಧ ಮನೆಗೆ ಹೋರಟನು ಮತ್ತೇ ಶಾಲೆಗೆ ಬರಲಿಲ್ಲ! ಒಂದೇ ದಿನದಲ್ಲಿ ಸಿದ್ಧನ ಶಾಲೆಯ ಶಿಕ್ಷಣಮುಗಿದಿತ್ತು!
( ಮುಂದುವರೆಯುವುದು)

Girl in a jacket
error: Content is protected !!