ನವದೆಹಲಿ, ಮೇ ೨೩: ಯಾಸ್ ಚಂಟಮಾರುತದಿಂದಾಗಿ ಅಪಾಯ ಉಂಟಾಗಬಹುದಾದ ಸ್ಥಳದಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಯಾಸ್ ಚಂಡಮಾರುತ ಎದುರಿಸುವ ಸಂಬಂಧ ನಡೆದ ಪೂರ್ವಸಿದ್ದತಾ ಪರಿಶೀಲನಾ ಸಭೆಯಲ್ಲಿ ಅವರು ಹೆಚ್ಚಿನ ಅಪಾಯಹೊಂದುವ ಸ್ಥಳದಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕು , ಹೀಗೆ ಸ್ಥಳಾಂತರ ಮಾಡಿಕೊಳ್ಳುವುದನ್ನು ರಾಜ್ಯ ಸರ್ಕಾರಗಳೊಂದಿಗೆ ಸೂಕ್ತರೀತಿಯಲ್ಲಿ ಸಮನ್ವಯ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ
ಇನ್ನು ವಿದ್ಯುತ್ ಸಂಪರ್ಕದ ಕಡಿತದ ಅವಧಿಯ ಅಗತ್ಯದ ಬಗ್ಗೆಯೂ ಪ್ರಧಾನಿ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಜೊತೆಗೆ ಸಂವಹನ ಜಾಲದ ಮರುಸ್ಥಾಪನೆಗೆ ತ್ವರಿತ ಕಾರ್ಯಕೈಗೊಳ್ಳುವ ಬಗ್ಗೆಯೂ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಮತ್ತು ಲಸಿಕೆಗೆ ಯಾವುದೇ ಅಡೆತಡೆಗಳು ಉಂಟಾಗದಂತೆ ರಾಜ್ಯ ಸರ್ಕಾರಗಳೊಂದಿಗೆ ಸರಿಯಾದ ಸಮನ್ವಯ ಸಾಧಿಸಿ ಯೋಜನೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಈ ಸಭೆಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ “ಯಾಸ್ ಚಂಡಮಾರುತವನ್ನು ಎದುರಿಸಲು ಸಿದ್ಧತೆಯ ಪರಿಶೀಲನೆ ನಡೆಸಲಾಗಿದೆ. ತೊಂದರೆಗೊಳಗಾಗಬಹುದಾದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹಕಾರಿಯಾಗುವಂತೆ ವಿವಿಧ ಅಗತ್ಯ ಕ್ರಮಗಳ ಬಗ್ಗೆ ವಿವರಿಸಲಾಯಿತು” ಎಂದಿದ್ದಾರೆ.
ಇನ್ನು ಯಾಸ್ ಚಂಡಮಾರುತವನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ೫ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ದೋಣಿಗಳು, ಮರ ಕತ್ತರಿಸುವವರು, ಟೆಲಿಕಾಂ ಉಪಕರಣಗಳನ್ನು ಹೊಂದಿದ ೪೬ ತಂಡಗಳನ್ನು ಎನ್ಡಿಆರ್ಎಫ್ ಈಗಾಗಲೇ ನಿಯೋಜಿಸಿದೆ. ಅಲ್ಲದೆ ೧೩ ತಂಡಗಳನ್ನು ಇಂದು(ಭಾನುವಾರ) ವಿಮಾನದಲ್ಲಿ ಕಳುಹಿಸಲಾಗುತ್ತದೆ. ೧೦ ತಂಡಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಎನ್ಡಿಆರ್ಎಫ್ ಮೀಸಲಿರಿಸಿಕೊಂಡಿದೆ.
ಯಾಸ್ ಚಂಡಮಾರುತ-ಅಪಾಯಕಾರಿ ಪ್ರದೇಶದ ಜನರ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ
Share