ಬೆಂಗಳೂರು,ಮೇ,22: ಪಾರಂಪರಿಕ ಜ್ಞಾನದ ಜೊತೆಗೆ ವಿಜ್ಞಾನ ಮೇಳೈಸಿದಾಗ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಲು ಸಹಕಾರಿಯಾಗಬಲ್ಲದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದೀಯ ಪಾರಂಪರಿಕ ಜ್ಞಾನವನ್ನು ವಿಜ್ಞಾನದಲ್ಲಿ ಬಳಸಿಕೊಳ್ಳಬಹುದಾಗಿದೆ. ನಮ್ಮ ಪೂರ್ವಿಕರು ಆರೋಗ್ಯ ರಕ್ಷಣೆಗಾಗಿ ಪಾರಂಪರಿಕವಾಗಿ ಬಳಸುತ್ತಿದ್ದ ಗಿಡಮೂಲಿಕೆಗಳು ಇಂದಿಗೂ ನಮಗೆ ಸಂಜೀವಿನಿಯಾಗಿ ಕಾಣ ಸಿಗುತ್ತವೆ ಎಂದು ಹೇಳಿದರು.
ನಮ್ಮೆಲ್ಲರ ಆಲೋಚನೆಗಳು ಮನುಕುಲದ ಅಭಿವೃದ್ಧಿಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಅದೇ ರೀತಿ ರೋಗಿಗಳ ರಕ್ಷಣೆಯಲ್ಲಿ ತೊಡಗುವ ವೈದ್ಯರು ನಮ್ಮ ಕಣ್ಣಿಗೆ ಕಾಣುವ ದೇವರುಗಳಾಗಿದ್ದಾರೆ. ಅಂತಹ ಉತ್ತಮ ಜವಾಬ್ದಾರಿ ಕೆಲಸಕ್ಕೆ ಅಣಿಗೊಳಿಸುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾದದ್ದು ಎಂದು ಸ್ಮರಿಸಿದರು.
ಭಾಷೆ ಕೇವಲ ಸಂವಹನ ಅಷ್ಟೇ ಅಲ್ಲ; ಅದು ಜ್ಞಾನವನ್ನು ಕೂಡ ಸಮೃದ್ಧಿಯಾಗಿಸುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣವು ಪ್ರಾದೇಶಿಕ ಭಾಷೆಯಲ್ಲಿ ದೊರೆಯುವಂತಾದರೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಜೊತೆಗೆ ಜನಸಾಮಾನ್ಯರೊಂದಿಗೆ ಹೃದಯಸ್ಪರ್ಶಿಯಾಗಿ ಸ್ಪಂದಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದ ನಾಗಾಭರಣ ಅವರು, ಭಾಷೆಗಳ ಮಹತ್ವ ಕಂಡುಕೊಂಡವನು ಮನುಷ್ಯನಾದ; ಲೇಖನದ ಮಹತ್ವ ಕಂಡುಕೊಂಡವನು ನಾಗರಿಕರಾದ ಎಂಬ ಕವಿಯೊಬ್ಬರ ಮಹತ್ವಪೂರ್ಣ ಸಾಲುಗಳನ್ನು ಉಲ್ಲೇಖಿಸಿದರು.
ವೈದ್ಯರು ಸ್ಥಳೀಯ ಭಾಷೆಯಲ್ಲಿ ರೋಗಿಗಳೊಂದಿಗೆ ಮಾತನಾಡಿ ಆತ್ಮವಿಶ್ವಾಸ ತುಂಬಿದರೆ ಯಾವುದೇ ಔಷಧಿ, ಚಿಕಿತ್ಸೆ ನೀಡದೆ ಅರ್ಧ ಕಾಯಿಲೆ ಗುಣಮುಖವಾಗುತ್ತದೆ. ಇನ್ನುಳಿದ ಅರ್ಧಕಷ್ಟೇ ಚಿಕಿತ್ಸೆ ನೀಡಿದರೆ ರೋಗಿ ಪೂರ್ತಿ ಗುಣಮುಖನಾಗುತ್ತಾನೆ. ಇದೆಲ್ಲಾ ಸಾಧ್ಯವಾಗಬೇಕಾದರೆ ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಯಾಗಬೇಕು ಎಂದರು.
ಕನ್ನಡ ವೈದ್ಯ ಲೇಖಕರಿಗೆ, ಕನ್ನಡ ಜನತೆಗೆ ವೈದ್ಯ ಪದಕೋಶವನ್ನು ನೀಡಿದ ಶಬ್ದಬ್ರಹ್ಮ ಡಾ. ಡಿಎಸ್ ಶಿವಪ್ಪನವರ ಪದಕೋಶಕ್ಕೆ ಮತ್ತಷ್ಟು ಹೊಸ ಪದಗಳನ್ನು ಸೇರ್ಪಡೆಗೊಳಿಸಿ ಉತ್ತಮವಾದ ವೈದ್ಯಕೀಯ ಕನ್ನಡ ನಿಘಂಟು ಪ್ರಕಟಿಸುವಂತೆ ಮನವಿ ಮಾಡಿದ ಅವರು, ಕೋವಿಡ್ -19ಗೆ ಸಂಬಂಧಿಸಿದಂತೆ ಪಠ್ಯವನ್ನುಸಿದ್ಧಪಡಿಸಿದರೆ ಮುಂದಿನ ದಿನಗಳಲ್ಲಿ ಇದು ಉಪಯೋಗಕ್ಕೆ ಬರಲಿದೆ ಎಂದು ಸಲಹೆ ನೀಡಿದರು.
ವಿವಿ ಕುಲಪತಿ ಸಚ್ಚಿದಾನಂದ ಅವರು ಅಧ್ಯಕ್ಷತೆ ವಹಿಸಿದ್ದರು. ಕಲಬುರ್ಗಿಯ ಕೆಪಿಎಂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಎಮೆರಿಟಸ್ ಪ್ರೊಫೆಸರ್ ಆದ ನಾಡೋಜ ಪಿಎಸ್ ಶಂಕರ್ ಅವರು ಪಾಲ್ಗೊಂಡಿದ್ದರು.