ಮಂಡ್ಯ ದಲ್ಲಿ ಕೋವಿಡ್ ಸೋಂಕಿತರ ಜೊತೆ ಸಂವಾದ ನಡೆಸಿದ ಡಿಸಿಎಂ

Share

ಮಂಡ್ಯಮೇ,20: ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಗುರುವಾರ ಮಂಡ್ಯ ಜಿಲ್ಲೆಯಲ್ಲಿ ಬೆಳಗಿನಿಂದ ಮಧ್ಯಾಹ್ನದವರೆಗೆ ಕೋವಿಡ್‌ ವ್ಯವಸ್ಥೆ ವೀಕ್ಷಿಸಲು ಬಿರುಸಿನ ಪ್ರವಾಸ ನಡೆಸಿದರಲ್ಲದೆ ಮದ್ದೂರು, ಬೂದನೂರು ಹಾಗೂ ಮಂಡ್ಯ ಆಸ್ಪತ್ರೆಗಳಿಗೆ ಭೇಟಿ ವ್ಯಾಪಕ ಪರಿಶೀಲನೆ ನಡೆಸಿದರು.
ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ವಾರ್ಡ್‌ಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರಲ್ಲದೆ, ಸೋಂಕಿತರ ಯೋಗ ಕ್ಷೇಮ ವಿಚಾರಿಸಿ ಅವರಿಗೆ ಸಿಗುತ್ತಿರುವ ಚಿಕಿತ್ಸೆ-ಆರೈಕೆಯ ಮಾಹಿತಿ ಪಡೆದುಕೊಂಡರು.
ವಾರ್ಡ್‌ನಲ್ಲಿ ಆಮ್ಲಜನಕದ ವ್ಯವಸ್ಥೆ, ಚಿಕಿತ್ಸೆ ವಿಧಾನ, ಮೂಲಸೌಕರ್ಯ ಮುಂತಾದವುಗಳನ್ನು ವೀಕ್ಷಿಸಿದರು. ವಾರ್ಡ್‌ನಲ್ಲಿ ಸೋಂಕಿತರ ಅಟೆಂಡರ್‌ಗಳು ಇದ್ದಿದ್ದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ, ಯಾವುದೇ ಕಾರಣಕ್ಕೂ ಸೋಂಕಿತರಲ್ಲದವರನ್ನು ವಾರ್ಡ್‌ಗೆ ಬಿಟ್ಟುಕೊಳ್ಳಬಾರದು ಎಂದು ಜಿಲ್ಲಾ ವೈದಾಧಿಕಾರಿಗೆ ತಾಕೀತು ಮಾಡಿದರು.
ಜತೆಗೆ, ಸೋಂಕಿತರ ಕೇಸ್ ಶೀಟ್‌ಗಳನ್ನೂ ಗಮನಿಸಿದರಲ್ಲದೆ ಅವರಿಗೆ ಸಿಗುತ್ತಿರುವ ಔಷಧೋಪಚಾರದ ಬಗ್ಗೆಯೂ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸೋಂಕಿತರನ್ನು ಮಾತನಾಡಿಸಿದ ಅವರು, “ಧೈರ್ಯದಿಂದ ಇರಿ, ಬೇಗ ಗುಣಮುಖರಾಗುತ್ತೀರಿ. ವೈದ್ಯರು ಹೇಳಿದಂತೆ ಕೇಳಿ” ಎಂದು ಸ್ಥೈರ್ಯ ತುಂಬಿದರು.

ಮದ್ದೂರಿನಲ್ಲಿ ವಿಶೇಷ ದೃಶ್ಯ:

ಮದ್ದೂರಿನಿಂದ ತಮ್ಮ ಪ್ರವಾಸವನ್ನು ಆರಂಭಿಸಿದ ಡಿಸಿಎಂ ಅವರು, ಇನ್ನೂ ಆಸ್ಪತ್ರೆಗೆ ಬರುತ್ತಿದ್ದಂತೆಯೇ, ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು ಕಿಟಕಿಗಳ ಮೂಲಕವೇ ಕಾಣಿಸಿಕೊಂಡು ಡಿಸಿಎಂಗೆ ಅಭಿವಂದನೆ ಸಲ್ಲಿಸಿದರು. “ನಮಸ್ಕಾರ ಅಶ್ವತ್ಥನಾರಾಯಣ್‌ ಸರ್‌” ಎಂದು ಕೂಗಿದರು. ಈ ವೇಳೆ ಕೊಂಚ ಹತ್ತಿರಕ್ಕೆ ಹೋದ ಡಿಸಿಎಂ, “ಎಲ್ಲರೂ ಕ್ಷೇಮವಾಗಿದ್ದೀರಾ? ಒಳ್ಳೆಯ ಚಿಕಿತ್ಸೆ, ಆಹಾರ, ಆರೈಕೆ ಸಿಗುತ್ತಿದೆಯಾ?” ಎಂದು ಆಪ್ತವಾಗಿ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಸೋಂಕಿತರು, “ಇಲ್ಲಿ ನಮಗೆ ಎಲ್ಲವೂ ಚೆನ್ನಾಗಿದೆ” ಎಂದು ಉತ್ತರಿಸಿದರು. ಅಲ್ಲಿಯೂ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರಲ್ಲದೆ, ಸೋಂಕಿತರಿಗೆ ಯಾವುದೇ ಕೊರತೆ ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಬೂದನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಡಿಸಿಎಂ ಭೇಟಿ ಪರಿಶೀಲನೆ ನಡೆಸಿದರು. ಅಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಕಂಡ ಡಿಸಿಎಂ ಅವರು, ಕೂಡಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಇರುವ ಎಲ್ಲ ಸಿಬ್ಬಂದಿಯನ್ನೂ ತಕ್ಷಣವೇ ನೇಮಕ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಸೂಚನೆ ಕೊಟ್ಟರು.

ಐಸಿಯು ಬೆಡ್‌ಗಳ ಹೆಚ್ಚಳ:

ಪ್ರವಾಸದ ಕೊನೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಳಿ ಮಾಧ್ಯಮಗಳ ಜತೆ ಮಾತನಾಡಿ ಡಾ.ಅಶ್ವತ್ಥನಾರಾಯಣ ಅವರು, “ಐಸಿಯು ಹಾಸಿಗೆಗಳನ್ನು ಗಣನೀಯವಾಗಿ  ಹೆಚ್ಚಿಸಲಾಗುವುದು. ದಿನಕ್ಕೆ 18 ಕೆಎಲ್ ಆಮ್ಲಜನಕವನ್ನು ಒದಗಿಸುವ ಉದ್ದೇಶದಿಂದ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಮತ್ತು ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ʼಮನ್ಮುಲ್ʼ ಸಂಸ್ಥೆ ಮುಂದೆ ಬಂದಿದೆ” ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಅಶ್ವಥಿ ಮೊದಲಾದವರು ಜೊತಗಿದ್ದರು.

Girl in a jacket
error: Content is protected !!