ಧಾರವಾಡ,ಮೇ,೨೦: ಬಿಎಸ್ವೈ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದಲೂ ಒಂದಲ್ಲಾ ಒಂದು ಕಷ್ಟಗಳು ಬರುತ್ತಲೇ ಇವೆ ಆದರೆ ಅವೆಲ್ಲವನ್ನು ಅಷ್ಟೆ ಸಲೀಸಾಗಿ ಅವರು ನಿಭಾಯಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ವೃತಾ ಸರ್ಕಾರ ವಿಫಲವಾಗಿದೆ ಎಂದು ಧೂಷಣೆ ಮಾಡುತ್ತಲೆ ಇದ್ದಾರೆ ಆದರೆ ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ ಎಷ್ಟೆ ಕಷ್ಟಗಳಿದ್ದರೂ ಅದರ ಮಧ್ಯೆ ಸರ್ಕಾರ ಜನರಿಗೆ ಸ್ಪಂದಿಸುತ್ತಿದೆ ಎಂದ ಅವರು, ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿನಿಂದಲೇ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಪ್ರವಾಹ ಬಂತು, ಕೊರೊನಾ ಬಂತು. ಮತ್ತೇ ಪ್ರವಾಹ ಬಂತು ಕರೊನಾನೂ ಮತ್ತೇ ಬಂತು. ಎರಡು ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ ೬೦ ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದು ವಿವರಿಸಿದರು.
ನಿಗದಿತ ಆದಾಯವೂ ಬರುತ್ತಿಲ್ಲ. ಹೀಗಾಗಿ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಅದೇನು ಮುಚ್ಚುಮರೆ ಅನ್ನೋ ಪ್ರಶ್ನೆ ಇಲ್ಲ. ಆರ್ಥಿಕ ಸಂಕಷ್ಟದ ಮಧ್ಯೆಯೂ ನಿಭಾಯಿಸಿಕೊಂಡು ಹೊರಟಿದ್ದೇವೆ ಎಂದರು.
ಇದೆಲ್ಲದರ ಮಧ್ಯೆ ಜನರ ನೆರವಿಗೆ ಬರುವುದಕ್ಕಾಗಿ ೧೨೫೦ ಕೋಟಿ ಪ್ಯಾಕೇಜ್ ನೀಡಿದ್ದಾರೆ. ದುಡಿಯುವ ವರ್ಗಕ್ಕೆ ಇದು ವಿಶೇಷವಾದ ಪ್ಯಾಕೇಜ್. ಕಳೆದ ವರ್ಷ ೨,೨೦೦ ಕೋಟಿ ಕೊಟ್ಟಿದ್ವಿ. ಈ ಸಲ ಅರ್ಥಿಕ ಸಂಕಷ್ಟದ ನಡುವೆಯೂ ಕೊಟ್ಟಿದ್ದೇವೆ. ನಾವು ಹೆಚ್ಚು ಕೊಟ್ಟಿದ್ದೇವೆ ಅಂತಾ ಈಗ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಆದರೆ ಈ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಬಹಳ ವಿಶೇಷ ಎಂದರು.
ಲಾಕ್ಡೌನ್ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿತ್ಯದ ಸಾವು ನೋವಿನ ಸಂಖ್ಯೆ ನೋಡಿದಾಗ ಹಳ್ಳಿಗಳಿಗೆ ಕೊರೊನಾ ಹಬ್ಬಿದೆ. ಬಿಗಿಯಾದ ಲಾಕ್ಡೌನ್ ಅವಶ್ಯಕತೆ ಇದೆ ಎಂದು ತಿಳಿಸಿದರು.
ಬಿಎಸ್ವೈ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಕಷ್ಟಗಳು ಎದುರಾಗಿವೆ-ಕಾರಜೋಳ
Share