ಲಸಿಕೆ ವಿಚಾರದಲ್ಲಿ ಎಚ್‌ಡಿಕೆ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ

Share

ಬೆಂಗಳೂರು.ಮೇ,೨೦: ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿಕೆ ನೀಡಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎಂದು ಆರೋಪಿಸುವ ಮೂಲಕ ಕುಮಾರಸ್ವಾಮಿ ತಮಗೆ ತಾವೇ ಗೋಲು ಹೊಡೆದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಚಾರ ನಂಬಿ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮಾರ್ಚ್ ೨೩ರ ವರೆಗೆ ಕಾದು ಕೂತಿದ್ದೇ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಸರ್ವರಿಗೂ ಉಚಿತ ವ್ಯಾಕ್ಸಿನ್ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೂಡಿ ಎಚ್.ಡಿ.ದೇವೆಗೌಡ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ಇಂತಹ ಬಾಲಿಷ ಹೇಳಿಕೆ ನೀಡುವ ಮೊದಲು ತಂದೆಯ ಸಲಹೆ ಪಡೆಯುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಲಸಿಕೆ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ – ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ,ಇದೇ ವೇಳೆ ಲಸಿಕೆ ವಿಚಾರವಾಗಿ ಬಿಜೆಪಿ ವಿರುದ್ಧವೂ ಹರಿಹಾಯ್ದಿರುವ ಸಿದ್ದರಾಮಯ್ಯ, ಜನರು ಕೊರೊನಾ ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎನ್ನುವ ಬಿಜೆಪಿಯ ಆರೋಪ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ನಡೆಸುತ್ತಿರುವ ಹತಾಶ ಪ್ರಯತ್ನ ಅಷ್ಟೆ. ವ್ಯಾಕ್ಸಿನ್ ಪಡೆಯಲು ಜನ ಕ್ಯೂನಲ್ಲಿದ್ದಾರೆ, ಮೊದಲು ಅವರಿಗೆ ಕೊಡಿ, ಆ ಮೇಲೆ ನಮ್ಮ ಕಡೆ ಬೊಟ್ಟು ಮಾಡಿ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ಹಂಚಿ ಎನ್ನುವುದೇ ನಮ್ಮ ಮೂಲ ಬೇಡಿಕೆ. ನಾವು ಲಸಿಕೆಯನ್ನು ಎಂದೂ ವಿರೋಧಿಸಿಲ್ಲ, ಅದರ ಸತ್ವಪರೀಕ್ಷೆಯ ಫಲಿತಾಂಶಕ್ಕಿಂತ ಮೊದಲು ಕೇವಲ ಪ್ರಚಾರಕ್ಕಾಗಿ ಬಳಕೆಗೆ ಬಿಡುಗಡೆ ಮಾಡಬಾರದೆಂಬ ತಜ್ಞರ ಅಭಿಪ್ರಾಯಕ್ಕೆ ಕಾಂಗ್ರೆಸ್ ಪಕ್ಷ ಸಹಮತ ವ್ಯಕ್ತಪಡಿಸಿತ್ತು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Girl in a jacket
error: Content is protected !!